ADVERTISEMENT

ಬಾಲನೆರೆ ಸಮಸ್ಯೆಗೆ ಮನೆಯಲ್ಲೇ ಇದೆ ಪರಿಹಾರ

ಮನೆಮದ್ದು

ಮನಸ್ವಿ
Published 19 ಮಾರ್ಚ್ 2021, 19:30 IST
Last Updated 19 ಮಾರ್ಚ್ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹೆಣ್ಣುಮಕ್ಕಳು ತಮ್ಮ ಮುಖದ ಸೌಂದರ್ಯಕ್ಕೆ ಎಷ್ಟು ಪ್ರಾಮುಖ್ಯ ನೀಡುತ್ತಾರೋ ಕೂದಲಿನ ಅಂದಕ್ಕೂ ಅಷ್ಟೇ ಕಾಳಜಿ ವಹಿಸುವುದು ಸಹಜವೇ. ಆದರೆ ಇತ್ತೀಚೆಗೆ ಕಲುಷಿತ ನೀರು ಹಾಗೂ ವಾತಾವರಣದ ಕಾರಣದಿಂದ ಹಲವು ರೀತಿಯ ಕೂದಲಿನ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಬಾಲನೆರೆ ಅಥವಾ ಅಕಾಲಿಕವಾಗಿ ಕೂದಲು ಬಿಳಿಯಾಗುವ ಸಮಸ್ಯೆಯಂತೂ ಸಾಮಾನ್ಯ ಎಂಬಂತಾಗಿದೆ. ಇದು ಕೆಲವರಲ್ಲಿ ಅನುವಂಶೀಯವಾಗಿಯೂ ಇರಬಹುದು. ಆದರೆ ಬಾಲನೆರೆಗೆ ಪ್ರಮುಖ ಕಾರಣ ಅಸಮರ್ಪಕ ಡಯೆಟ್. ಫಾಸ್ಟ್‌ಫುಡ್‌, ಮೈದಾಹಿಟ್ಟಿನ ತಿನಿಸುಗಳು, ಹೆಚ್ಚು ಸಕ್ಕರೆ ಅಂಶ ಇರುವ ಪಾನೀಯ ಹಾಗೂ ತಿನಿಸುಗಳ ಅತಿಯಾದ ಸೇವನೆಯಿಂದಲೂ ಬಾಲನೆರೆ ಕಾಣಿಸಿಕೊಳ್ಳಬಹುದು.

ಬಾಲನೆರೆ ತಡೆಯಲು ಮನೆ ಮದ್ದು ಮಾಡಿಕೊಳ್ಳಬಹುದು. ಅವುಗಳನ್ನು ಸಮರ್ಪಕ ರೀತಿಯಲ್ಲಿ ಬಳಸಿದರೆ ಈ ಸಮಸ್ಯೆಗೆ ಪರಿಹಾರ ಸಿಗುವುದಲ್ಲದೇ ಕೂದಲಿನ ಅಂದವೂ ಹೆಚ್ಚುವುದು.

ನೆಲ್ಲಿಕಾಯಿ ಪುಡಿ: ಒಂದು ಕಬ್ಬಿಣದ ಪಾತ್ರೆಯಲ್ಲಿ ನೆಲ್ಲಿಕಾಯಿಪುಡಿಯನ್ನು ಬೂದಿಯಾಗುವಂತೆ ಹುರಿಯಿರಿ. ಅದಕ್ಕೆ ಅರ್ಧ ಲೀಟರ್ ತೆಂಗಿನೆಣ್ಣೆ ಸೇರಿಸಿ ಸಣ್ಣ ಉರಿಯಲ್ಲಿ ಚೆನ್ನಾಗಿ ಕುದಿಸಿ. ನಂತರ ತಣ್ಣಗಾಗಿಸಿ ಒಂದು ದಿನ ಹಾಗೇ ಇಡಿ. ಅದನ್ನು ಸೋಸಿ ಬಾಟಲಿಯಲ್ಲಿ ತುಂಬಿಟ್ಟುಕೊಂಡು ವಾರದಲ್ಲಿ ಎರಡು ಬಾರಿ ತಲೆಗೆ ಹಚ್ಚಿ ಮಸಾಜ್ ಮಾಡಿಕೊಳ್ಳಿ. ಇದರಿಂದ ಕೂದಲು ಬೇಗ ಬಿಳಿಯಾಗುವುದನ್ನು ತಪ್ಪಿಸಬಹುದು.

ADVERTISEMENT

ಕರಿಬೇವು: ಒಂದು ಕಪ್‌ ಕರಿಬೇವಿನ ಎಲೆಯೊಂದಿಗೆ 2 ಚಮಚ ನೆಲ್ಲಿಕಾಯಿ ಪುಡಿ ಹಾಗೂ 2 ಚಮಚ ಬ್ರಾಹ್ಮಿ ಪುಡಿ ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ. ಈ ಮಿಶ್ರಣವನ್ನು ಕೂದಲಿಗೆ ಹಚ್ಚಿ. ಇದು ಕೂದಲಿನ ಬುಡಕ್ಕೂ ಹಿಡಿಯುವಂತೆ ನೋಡಿಕೊಳ್ಳಿ. ಒಂದು ಗಂಟೆ ಕಾಲ ಹಾಗೇ ಬಿಟ್ಟು ಶ್ಯಾಂಪೂವಿನಿಂದ ತಲೆಸ್ನಾನ ಮಾಡಿ.

ತೆಂಗಿನೆಣ್ಣೆ: ತೆಂಗಿನೆಣ್ಣೆ ಹಾಗೂ ನಿಂಬೆರಸದ ಮಿಶ್ರಣವು ಕೂದಲನ್ನು ಕಪ್ಪಗಾಗಿಸುತ್ತದೆ. ಈ ಎರಡರ ಮಿಶ್ರಣವನ್ನು ಬಳಸುವುದರಿಂದ ಕಾಲ ಕಳೆದಂತೆ ಕೂದಲು ಕಪ್ಪಾಗಿ ಸದೃಢವಾಗುತ್ತದೆ.

ಬ್ಲ್ಯಾಕ್ ಟೀ: ಬಾಲನೆರೆ ತಡೆಯಲು ಬ್ಲ್ಯಾಕ್ ಟೀ ಒಂದು ಉತ್ತಮ ಔಷಧಿ. ಬ್ಲ್ಯಾಕ್ ಟೀ ಎಲೆಯನ್ನು ಬಿಸಿನೀರಿನಲ್ಲಿ ಎರಡು ಗಂಟೆಗಳ ಕಾಲ ನೆನೆಸಿ, ನುಣ್ಣಗೆ ರುಬ್ಬಿ ಪೇಸ್ಟ್ ತಯಾರಿಸಿಕೊಳ್ಳಿ. ಅದನ್ನು ನಿಂಬೆರಸದೊಂದಿಗೆ ಮಿಶ್ರಣ ಮಾಡಿ ಸಂಪೂರ್ಣ ಕೂದಲಿಗೆ ಹಚ್ಚಿ. 40 ನಿಮಿಷಗಳ ನಂತರ ಸ್ನಾನ ಮಾಡಿ.

ಎಳ್ಳೆಣ್ಣೆ: ಎಳ್ಳೆಣ್ಣೆಯಲ್ಲಿ ಆ್ಯಂಟಿ ಆಕ್ಸಿಡೆಂಟ್ ಹಾಗೂ ವಿಟಮಿನ್ ಅಂಶ ಅಧಿಕವಿದೆ. ಹಾಗಾಗಿ ನಿಯಮಿತವಾಗಿ ಇದನ್ನು ಬಳಸುವುದರಿಂದ ಬಾಲನೆರೆಯನ್ನು ತಪ್ಪಿಸಬಹುದು. ಎಳ್ಳೆಣ್ಣೆಯೊಂದಿಗೆ ಆಲಿವ್ ಎಣ್ಣೆ, ಸಾಸಿವೆ ಎಣ್ಣೆ ಹಾಗೂ ಬಾದಾಮಿ ಎಣ್ಣೆಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಕೂದಲಿಗೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ. ಉಗುರು ಬೆಚ್ಚಗಿನ ನೀರಿನಿಂದ ತಲೆಸ್ನಾನ ಮಾಡಿ. ಇದು ತಲೆಹೊಟ್ಟು ನಿವಾರಣೆಗೂ ಸಹಕಾರಿ.

ದಾಸವಾಳ: ದಾಸವಾಳದ ಸೊಪ್ಪು ಹಾಗೂ ಹೂಗಳನ್ನು ಒಂದು ರಾತ್ರಿ ನೀರಿನಲ್ಲಿ ನೆನೆಸಬೇಕು. ನಂತರ ಆ ನೀರಿನಿಂದ ಕೂದಲನ್ನು ತೊಳೆಯಬೇಕು. ದಾಸವಾಳದಲ್ಲಿರುವ ಪೋಷಕಾಂಶವು ಕೂದಲು ಬಿಳಿಯಾಗುವುದನ್ನು ತಪ್ಪಿಸುತ್ತದೆ. ಅಲ್ಲದೇ ಇದು ಕೂದಲು ನಯವಾಗಿಸುತ್ತದೆ.

ಬಾದಾಮಿ ಎಣ್ಣೆ: ಬಾದಾಮಿ ಎಣ್ಣೆ ಹಾಗೂ ನಿಂಬೆರಸವನ್ನು ಮಿಶ್ರಣ ಮಾಡಿ ಕೂದಲ ಬುಡಕ್ಕೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ. ಅರ್ಧ ಗಂಟೆ ಬಿಟ್ಟು ತಲೆಸ್ನಾನ ಮಾಡಿ. ಬಾದಾಮಿ ಎಣ್ಣೆಯಲ್ಲಿ ವಿಟಮಿನ್ ಇ ಅಂಶ ಅಧಿಕವಿದ್ದು ಕೂದಲಿಗೆ ಹಲವು ರೀತಿಯಲ್ಲಿ ಸಹಾಯ ಮಾಡುತ್ತದೆ. ಕೂದಲ ಬುಡವನ್ನು ಸದೃಢವಾಗಿಸಿ ಬಾಲನೆರೆಯನ್ನು ತಡೆಯುತ್ತದೆ.

ಸೀಗೆಕಾಯಿ: ಸೀಗೆಕಾಯಿ ಪುಡಿಗೆ ಮೊಸರು ಮಿಶ್ರಣ ಮಾಡಿ ಕೂದಲು ಹಾಗೂ ಕೂದಲಿನ ಬುಡಕ್ಕೆ ಹಚ್ಚಿ. ಅರ್ಧ ಗಂಟೆ ಬಿಟ್ಟು ತಲೆಸ್ನಾನ ಮಾಡಿ.

ಈರುಳ್ಳಿ ರಸ: ಈರುಳ್ಳಿ ರಸಕ್ಕೆ ನಿಂಬೆರಸ ಹಾಗೂ ಆಲಿವ್ ಎಣ್ಣೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಅದನ್ನು ಕೂದ‌‌ಲು ಹಾಗೂ ಕೂದಲಿನ ಬುಡಕ್ಕೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ ಅರ್ಧ ಗಂಟೆ ಬಿಟ್ಟು ತಲೆಸ್ನಾನ ಮಾಡಿ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.