ADVERTISEMENT

ಹಿನ್ನೋಟ-2020: ಆನ್‌ಲೈನ್‌ನಲ್ಲಿ ಚಿಗುರಿದ ಫ್ಯಾಷನ್‌ ಮಾರುಕಟ್ಟೆ

ರೇಷ್ಮಾ
Published 30 ಡಿಸೆಂಬರ್ 2020, 19:30 IST
Last Updated 30 ಡಿಸೆಂಬರ್ 2020, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

2020ನೇ ವರ್ಷವು ಪ್ರತಿ ಕ್ಷೇತ್ರಕ್ಕೂ ಒಂದಲ್ಲ ಒಂದು ರೀತಿಯ ಸಮಸ್ಯೆ ತಂದಿರಿಸಿದ್ದು ಸುಳ್ಳಲ್ಲ. ಅದಕ್ಕೆ ಫ್ಯಾಷನ್ ಕ್ಷೇತ್ರವೂ ಹೊರತಲ್ಲ. ಈ ವರ್ಷದ ಮಾರ್ಚ್‌ನಿಂದ ಮನೆಯೊಳಗೇ ಇದ್ದ ಜನರು ಫ್ಯಾಷನ್‌ ಮಾರುಕಟ್ಟೆಯ ಮೇಲೆ ಅಷ್ಟೊಂದು ಒಲವು ತೋರಿರಲಿಲ್ಲ. ಜೊತೆಗೆ ಮಾಲ್‌ ಸಂಸ್ಕೃತಿಗೂ ಬ್ರೇಕ್ ಬಿತ್ತು. ಹಾಗಂತ ಫ್ಯಾಷನ್ ಉದ್ಯಮ ಸುಮ್ಮನೆ ಕುಳಿತಿರಲಿಲ್ಲ. ಪರ್ಯಾಯ ಮಾರ್ಗಗಳ ಮೂಲಕ ಜನರನ್ನು ತಲುಪಲು ಪ್ರಯತ್ನ ಮಾಡಿತು.

ಹೆಚ್ಚಿದ ಆನ್‌ಲೈನ್‌ ಶಾಪಿಂಗ್ ಟ್ರೆಂಡ್‌

ಈ ವರ್ಷ ಫ್ಯಾಷನ್ ಕ್ಷೇತ್ರದಲ್ಲಾದ ಪ್ರಮುಖ ಬದಲಾವಣೆ ಎಂದರೆ ಆನ್‌ಲೈನ್ ಶಾಪಿಂಗ್‌. ಹಿಂದೆಲ್ಲಾ ಆನ್‌ಲೈನ್‌ ಶಾಪಿಂಗ್‌ಗಿಂತ ಆಫ್‌ಲೈನ್‌ ಶಾಪಿಂಗ್‌ ಮೇಲೆ ಜನ ಹೆಚ್ಚು ಒಲವು ತೋರುತ್ತಿದ್ದರು. ಆದರೆ ಈ ಬಾರಿ ಕೊರೊನಾ ಸೋಂಕಿನ ಭಯದಿಂದ ಮನೆಯಿಂದ ಹೊರಗೆ ಅಡಿಯಿಡಲು ಹೆದರಿ ಆನ್‌ಲೈನ್‌ ಶಾಪಿಂಗ್‌ ಅನ್ನೇ ನೆಚ್ಚಿಕೊಂಡಿದ್ದರು. ಬಟ್ಟೆಗಳ ಮಾರಾಟಕ್ಕಾಗಿ ಅನೇಕ ಹೊಸ ಹೊಸ ಆನ್‌ಲೈನ್‌ ಶಾಪಿಂಗ್ ಜಾಲತಾಣಗಳು ಹುಟ್ಟಿಕೊಂಡಿದ್ದವು. ಆನ್‌ಲೈನ್‌ ಮಾರುಕಟ್ಟೆಗಳು ವಿಶೇಷ ಆಫರ್‌ಗಳನ್ನು ನೀಡುವ ಮೂಲಕ ಜನರನ್ನು ಸೆಳೆದವು. ಜನರು ಕೂಡ ಮನೆಯಿಂದಲೇ ಕಚೇರಿ ಕೆಲಸ ಇರುವುದರಿಂದ ಮಾಸ್ಕ್, ಟೀ, ಶರ್ಟ್‌, ಪೈಜಾಮ, ನೈಟಿಯಂತಹ ಉಡುಪುಗಳ ಖರೀದಿಗೆ ಆಸಕ್ತಿ ತೋರಿದರು.

ADVERTISEMENT

ಮರುಬಳಕೆ ಬಟ್ಟೆಗಳು

ಈ ವರ್ಷ ಎಲ್ಲರಿಗೂ ಆರ್ಥಿಕ ಸದೃಢತೆಯ ಪಾಠ ಕಲಿಸಿದ ವರ್ಷವೂ ಹೌದು. ಇದರಿಂದಾಗಿ ಫ್ಯಾಷನ್ ಕ್ಷೇತ್ರದಲ್ಲಿ ಮರುಬಳಕೆಯ ಬಟ್ಟೆಗಳ ಬಳಕೆ ಹಾಗೂ ಸ್ಥಳೀಯ ವಸ್ತುಗಳ ಖರೀದಿಗೆ ಹೆಚ್ಚು ಪ್ರಾಮುಖ್ಯ ಸಿಕ್ಕಿತು. ವಿದೇಶಗಳಿಂದ ಆಮದು ಮಾಡಿಕೊಳ್ಳಲು ಸಾಧ್ಯವಾಗದ ಕಾರಣ ಸ್ಥಳೀಯ ಉತ್ಪನ್ನಗಳನ್ನೇ ಬಳಸಿ ಫ್ಯಾಷನ್ ಮಾರುಕಟ್ಟೆಯನ್ನು ವಿಸ್ತರಿಸಲಾಯಿತು. ಇದರೊಂದಿಗೆ ಸುಸ್ಥಿರತೆಗೂ ಹೆಚ್ಚಿನ ಆದ್ಯತೆ ದೊರಕಿತು ಎನ್ನಬಹುದು.

ಸಾಮಾಜಿಕ ಜಾಲತಾಣಗಳ ಪಾಲು

ಸಾಮಾಜಿಕ ಜಾಲತಾಣಗಳು ಈ ವರ್ಷ ಫ್ಯಾಷನ್ ಕ್ಷೇತ್ರಕ್ಕೆ ವರವಾದವು ಎನ್ನಬಹುದು. ಫೇಸ್‌ಬುಕ್‌, ವಾಟ್ಸ್‌ಆ್ಯಪ್‌, ಇನ್‌ಸ್ಟಾಗ್ರಾಂ, ವಿ–ಚಾಟ್‌ನಂತಹ ವೇದಿಕೆಗಳು ಮಾರಾಟಕ್ಕೆ ಅವಕಾಶ ಒದಗಿಸಿವೆ. ‍ಪ್ರಭಾವಿ ಬ್ರ್ಯಾಂಡ್‌ಗಳು ಕೂಡ ತಮ್ಮ ಮಾರುಕಟ್ಟೆಯನ್ನು ಸಾಮಾಜಿಕ ಜಾಲತಾಣದವರೆಗೆ ವಿಸ್ತರಿಸಿದ್ದು ಈ ವರ್ಷದ ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.