ADVERTISEMENT

PV Web Exclusive: ಸೀರೆಗಳ ಮೋಡಿ ಸೃಷ್ಟಿಸಿದ ‘ಸತ್ಯ ಪಾಲ್‌’

ಸ್ಮಿತಾ ಶಿರೂರ
Published 19 ಜನವರಿ 2021, 8:15 IST
Last Updated 19 ಜನವರಿ 2021, 8:15 IST
ಕೋಲ್ಕತ್ತದಲ್ಲಿ 2009ರಲ್ಲಿ ನಡೆದ ಫ್ಯಾಷನ್‌ ವೀಕ್‌ನಲ್ಲಿ ಸತ್ಯ ಪಾಲ್‌ ಅವರ ಬ್ರ್ಯಾಂಡ್‌ನ ಸೀರೆಗಳ ಪ್ರದರ್ಶನ. (ಸಂಗ್ರಹ– ಎಎಫ್‌ಪಿ ಚಿತ್ರ).
ಕೋಲ್ಕತ್ತದಲ್ಲಿ 2009ರಲ್ಲಿ ನಡೆದ ಫ್ಯಾಷನ್‌ ವೀಕ್‌ನಲ್ಲಿ ಸತ್ಯ ಪಾಲ್‌ ಅವರ ಬ್ರ್ಯಾಂಡ್‌ನ ಸೀರೆಗಳ ಪ್ರದರ್ಶನ. (ಸಂಗ್ರಹ– ಎಎಫ್‌ಪಿ ಚಿತ್ರ).   

ಅದು 80ರ ದಶಕ. ಆಗ ದೇಶದಲ್ಲಿ ಫ್ಯಾಶನ್‌ ಎನ್ನುವುದು ಇನ್ನೂ ಬ್ರ್ಯಾಂಡ್‌ ಮುದ್ರೆ ಪಡೆಯಲು ಅಂಬೆಗಾಲಿಕ್ಕುತ್ತಿದ್ದ ಕಾಲ. ಸಿನಿಮಾಗಳಲ್ಲಿ ಮಾತ್ರ ವಸ್ತ್ರವಿನ್ಯಾಸದ ಅಲೆ ಎದ್ದಿತ್ತು. ಆಗಲೇ ದೇಶದಲ್ಲಿ ನವೀನ ವಿನ್ಯಾಸಗಳಿರುವ ಸೀರೆಗಳ ಬ್ರ್ಯಾಂಡ್‌ ‘ಲಫ್ಫೇರ್‌’ ಶುರುವಾಯಿತು. ಇದು ಭಾರತದ ಪ್ರಥಮ ಸೀರೆಗಳ ಬುಟಿಕ್‌.

ಇದರೊಂದಿಗೆ ಸೀರೆಗಿದ್ದ ಸಾಂಪ್ರದಾಯಿಕ ಚೌಕಟ್ಟು ಮುರಿಯಿತು. ದಪ್ಪ, ದೊರಗಿನ ಸೀರೆಗಳ ಬದಲು ನಯವಾದ ಮೈಗಪ್ಪುವ ಸೀರೆಗಳ ಮಾದರಿಯನ್ನು ಈ ಬುಟಿಕ್‌ ಪರಿಚಯಿಸಿತು. ಅದರ ಮೇಲೆ ಏನನ್ನೋ ಹೇಳಬಯಸುವಂತೆ ತೋರುವ ಅಮೂರ್ತ ಕಲಾಕೃತಿಗಳ ಗುಚ್ಛಗಳು ಅರಳಿ ನಿಂತಿದ್ದವು. ಗಾಢ ವರ್ಣ ಸಂಯೋಜನೆಗಳು ಮೋಡಿ ಮಾಡಿದವು.

ಈಚೆಗೆ ನಿಧನರಾದ ಪ್ರಖ್ಯಾತ ವಸ್ತ್ರ ವಿನ್ಯಾಸಕ ಸತ್ಯ ಪಾಲ್‌ ಅವರು ವಸ್ತ್ರ ವಿನ್ಯಾಸದ ಉದ್ಯಮದಲ್ಲಿ ಮೂಡಿಸಿದ ಪ್ರಥಮ ಹೆಜ್ಜೆ ಗುರುತುಗಳಿವು. ವಸ್ತ್ರ ವಿನ್ಯಾಸ ಕ್ಷೇತ್ರಕ್ಕೆ ಸಮಕಾಲೀನ ಸ್ಪರ್ಶ ಹಾಗೂ ಶ್ರೀಮಂತಿಕೆ ಒದಗಿಸಿದ ಅವರು ಸೀರೆಗಳನ್ನೆ ತಮ್ಮ ಕಲ್ಪನಾವಿಲಾಸದ ಕ್ಯಾನ್ವಾಸ್‌ ಆಗಿಸಿಕೊಂಡರು.

ADVERTISEMENT

ಸತ್ಯ ಪಾಲ್‌ ಅವರ ಕಲ್ಪನೆಗಳ ವರ್ಣ ವಿನ್ಯಾಸಗಳು ಸೀರೆಗಳ ಮೇಲೆ ಮೂಡುತ್ತ ಹೋದಂತೆ ಅದಕ್ಕೆ ಮಾರುಹೋಗದ ನಾರಿಯರಿಲ್ಲ. ಮೊದಲೇ ಸೀರೆಗಳೆಂದರೆ ಜೀವ ಬಿಡುವ ಮಹಿಳೆಯರಿಗೆ, ಈ ಹೊಚ್ಚ ಹೊಸ ಮಾದರಿ, ಚಿತ್ತಾರಗಳು ಮನಸೂರೆಗೊಂಡವು. ‘ಸತ್ಯ ಪಾಲ್‌ ಸೀರೆ’ಗಳು ಪ್ರಖ್ಯಾತ ಬ್ರ್ಯಾಂಡ್‌ ಆಗಲು ಬಹಳ ದಿನಗಳು ಹಿಡಿಯಲಿಲ್ಲ. ಸೀರೆಗಳಿಗಿದ್ದ ಸಾಂಪ್ರದಾಯಿಕ ಚೌಕಟ್ಟನ್ನು ಈ ಬ್ರ್ಯಾಂಡ್‌ ಪುಡಿಗಟ್ಟಿತು. ಇಂಗ್ಲೆಂಡ್‌, ಫ್ರಾನ್ಸ್‌, ಜಪಾನ್‌ಗಳಲ್ಲೂ ಈ ವಿನ್ಯಾಸಗಳಿಗೆ ಮನ್ನಣೆ ಲಭಿಸಿದ್ದನ್ನು ವಸ್ತ್ರ ವಿನ್ಯಾಸಕರು ನೆನಪಿಸಿಕೊಳ್ಳುತ್ತಾರೆ.

ನವದೆಹಲಿಯಲ್ಲಿ ನಡೆದ ಫ್ಯಾಷನ್‌ ಪ್ರದರ್ಶನವೊಂದರಲ್ಲಿ ಮಾಡೆಲ್‌ ಒಬ್ಬರು ಸತ್ಯ ಪಾಲ್‌ ಸೀರೆ ಧರಿಸಿ ಮಿಂಚಿದರು. (ಸಂಗ್ರಹ – ಎಎಫ್‌ಪಿ ಚಿತ್ರ).

1942 ಫೆಬ್ರುವರಿ 2ರಂದು ಪಾಕಿಸ್ತಾನದ ಲಾಯ್ಯಾದಲ್ಲಿ ಜನಿಸಿದ ಪಾಲ್‌ ಅವರ ಕುಟುಂಬ ಸ್ವಾತಂತ್ರ್ಯಾನಂತರ ಭಾರತಕ್ಕೆ ಬಂದು ನೆಲೆಸಿತು. 1960ರಲ್ಲೇ ಅವರು ವಸ್ತ್ರೋದ್ಯಮ ಆರಂಭಿಸಿದ್ದರಾದರೂ, 1980ರಲ್ಲಿ ಬ್ರ್ಯಾಂಡ್‌ ಆಗಿ ವಿದೇಶಗಳಿಗೂ ರಫ್ತು ಆರಂಭವಾಯಿತು. 1985ರಲ್ಲಿ ಸ್ವಂತ ಹೆಸರಿನ ಫ್ಯಾಶನ್‌ ಬಟ್ಟೆಗಳ ಮಳಿಗೆಯನ್ನು ದೆಹಲಿಯಲ್ಲಿ ಆರಂಭಿಸಿದರು. ಅವರ ಪುತ್ರ ಪುನೀತ್‌ ನಂದಾ ಹಾಗೂ ಉದ್ಯಮಿ ಸಂಜಯ್ ಕಪೂರ್‌ ಅವರೊಂದಿಗೆ ಸೇರಿ ಮಾಡಿದ ಈ ಬ್ರ್ಯಾಂಡ್‌ ದೇಶದಲ್ಲಿ ಪ್ರಸಿದ್ಧವಾಯಿತು. ಪೋಲ್ಕಾ ಡಾಟ್‌, ಝೀಬ್ರಾ ಪ್ರಿಂಟ್‌, ಅಮೂರ್ತ ಆಕೃತಿಗಳು, ವರ್ಣ ಸಂಯೋಜನೆಗಳು ಸೀರೆಗಳನ್ನೇ ಕಲಾಕೃತಿಗಳನ್ನಾಗಿಸಿದವು. ಸೀರೆಗಳ ಪ್ರಿಂಟ್‌, ನೈಸರ್ಗಿಕ ಬಣ್ಣಗಳ ಸಂಯೋಜನೆ ವಸ್ತ್ರ ವಿನ್ಯಾಸಕರನ್ನೂ ಮೋಡಿ ಮಾಡಿದವು. ಈಗಲೂ ಸತ್ಯ ಪಾಲ್‌ ಬ್ರ್ಯಾಂಡ್‌ನ ಸೀರೆಗಳು ನಯವಾದ ಸೀರೆಗಳಿಗೆ ಹೆಸರುವಾಸಿ.

ನಡುನಡುವೆ ಹಲವು ವೈಶಿಷ್ಟ್ಯಗಳನ್ನು ಈ ಬ್ರ್ಯಾಂಡ್‌ ಮೆರೆಯಿತು. ವನ್ಯಜೀವಿ, ಕಲೆ ಹಾಗೂ ಸಂಗೀತ ಆಧಾರಿತವಾಗಿಯೂ ಸೀರೆಗಳ ಸಂಗ್ರಹ ಬಂತು. ಕಟ್ಟಡಗಳು, ಬೃಹತ್‌ ಹೂಗಳು, ದಪ್ಪ ಗೆರೆಗಳು, ಸಮಾನ ಮಾದರಿಗಳು, ಬಣ್ಣ ವೈವಿಧ್ಯ, ವ್ಯತಿರಿಕ್ತ ಆಕೃತಿಗಳು... ಹೀಗೆ ಭಿನ್ನ ಆಯಾಮಗಳನ್ನು ಸೀರೆಗಳು ಹೊತ್ತು ತಂದವು. ಕುರ್ತಿ, ಸಿದ್ಧ ಉಡುಪುಗಳು, ಸ್ಕಾರ್ಫ್‌, ಬ್ಯಾಗ್‌, ಟೈ ಹೀಗೆ ವಸ್ತು ವೈವಿಧ್ಯದ ಕಡೆಯೂ ಇವರ ಉದ್ಯಮ ಹೊರಳಿತು. 261 ವಜ್ರ ಖಚಿತ ರೇಷ್ಮೆ ಟೈ ವಿನ್ಯಾಸ ಮಾಡಿದ್ದು ಸಹ ಈ ಕಂಪನಿಯ ಹೆಗ್ಗಳಿಕೆ.

ಬ್ರೆಸ್ಟ್‌ ಕ್ಯಾನ್ಸರ್‌ ಪೀಡಿತರ ಸಹಾಯಾರ್ಥ ಮುಂಬಯಿಯ ಟಾಟಾ ಮೆಮೊರಿಯಲ್‌ ಸೆಂಟರ್‌ ಹಾಸ್ಪಿಟಲ್‌ ಜೊತೆ ಆಯೋಜಿಸಿದ ಕಾರ್ಯಕ್ರಮಕ್ಕಾಗಿ ಅವರು ‘ರೇ ಆಫ್‌ ಹೋಪ್‌’ ಎಂಬ ಸೀರೆಗಳ ಸಂಗ್ರಹವನ್ನು ತಂದರು. 2003ರಲ್ಲಿ ಎಸ್‌.ಎಚ್‌. ರಾಝಾ ಅವರ ಚಿತ್ರಕಲೆಗಳನ್ನು ರೇಷ್ಮೆ ಸೀರೆಗಳ ಮೇಲೆ ಮುದ್ರಿಸಿ ದಾಖಲೆ ಬರೆದರು. ಅಪಾಯದ ಅಂಚಿನಲ್ಲಿರುವ ಪ್ರಭೇದಗಳ ವಿಶೇಷ ಸಂಗ್ರಹ 2006ರಲ್ಲಿ ಬಂದಿತು.

ಅವರ ಪುತ್ರ ಪುನೀತ್‌ ನಂದಾ ಹೇಳುವಂತೆ ಸತ್ಯ ಪಾಲ್‌ ಅವರು ವಸ್ತ್ರ ವಿನ್ಯಾಸಕರಿಗಿಂತ ಹೆಚ್ಚಾಗಿ ಅನ್ವೇಷಕರಾಗಿದ್ದರು. ಹೊಸತನದ ಅನ್ವೇಷಣೆಗೆ ತುಡಿಯುತ್ತಿದ್ದರು. ಉತ್ಸಾಹ ಹಾಗೂ ಕಾರ್ಯ ಮಗ್ನತೆಗೆ ಪಾಲ್‌ ಅವರು ಒಂದು ಮಾದರಿ ಎಂದು ಸದ್ಗುರು ಜಗ್ಗಿ ವಾಸುದೇವ್‌ ಸಹ ಪ್ರಶಂಸಿಸಿದ್ದಾರೆ. 2000ನೇ ಇಸ್ವಿಯ ನಂತರ ಉದ್ಯಮವನ್ನು ಮಗನಿಗೆ ಹಸ್ತಾಂತರಿಸಿದ ಸತ್ಯ ಪಾಲ್‌ ಪೂರ್ಣವಾಗಿ ಅಧ್ಯಾತ್ಮ ಸಾಧನೆಯತ್ತ ಹೊರಳಿದರು.

ಸತ್ಯ ಪಾಲ್‌ (ಇನ್‌ಸ್ಟಾಗ್ರಾಂ ಫೋಟೊ)

ವಸ್ತ್ರ ವಿನ್ಯಾಸ ಕಲಿಯುವ ವಿದ್ಯಾರ್ಥಿಗಳಿಗೆ ಸತ್ಯ ಪಾಲ್‌ ಅವರ ಕಾರ್ಯ ಚಟುವಟಿಕೆಗಳ ಅಧ್ಯಯನ ಅಗತ್ಯ. ಕಲೆಯನ್ನು ಉದ್ಯಮದಲ್ಲಿ ಯಶಸ್ವಿಯಾಗಿ ತೊಡಗಿಸಿದ ಮಾದರಿಯೂ ಅನುಕರಣೀಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.