ADVERTISEMENT

ಬ್ಯೂಟಿ ಟಿಪ್ಸ್: ತ್ವಚೆಗೂ ಬೇಕು ವಿರಾಮ

ಮನಸ್ವಿ
Published 3 ನವೆಂಬರ್ 2020, 19:30 IST
Last Updated 3 ನವೆಂಬರ್ 2020, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮುದ್ದಾದ ಮುಖ, ಸದಾ ಕಾಂತಿ ಸೂಸುವ ಚರ್ಮ ಯಾರಿಗೆ ಇಷ್ಟವಾಗುವುದಿಲ್ಲ ಹೇಳಿ. ಈಗಂತೂ ಬಹುತೇಕರು ತಮ್ಮ ಚರ್ಮದ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಾರೆ.ಅದರ ಸಲುವಾಗಿ ಸಾಕಷ್ಟು ಹಣ ಹಾಗೂ ಸಮಯ ವ್ಯಯಿಸುತ್ತಾರೆ. ಆದರೆ ಕೆಲವೊಮ್ಮೆ ನಾವು ಚರ್ಮದ ಬಗ್ಗೆ ಎಷ್ಟೇ ಕಾಳಜಿ ಮಾಡಿದರೂ ಅದರ ಫಲಿತಾಂಶ ಉತ್ತಮವಾಗಿರುವುದಿಲ್ಲ. ಇದರಿಂದ ಅಸಮಾಧಾನಗೊಳ್ಳುವುದಕ್ಕಿಂತ ಅದರ ಹಿಂದಿನ ಕಾರಣ ಏನು ಎಂಬುದನ್ನು ತಿಳಿಯಬೇಕು. ನೀವೆಷ್ಟೇ ಚರ್ಮದ ಕಾಳಜಿ ವಹಿಸಿದರೂ ಚರ್ಮದ ಅಂದ ಹೆಚ್ಚದಿರಲು ಇವು ಕೂಡ ಕಾರಣವಿರಬಹುದು.

*ಹಾರ್ಮೋನ್‌ಗಳಲ್ಲಾಗುವ ವ್ಯತ್ಯಾಸ. ದಿನಚರಿಯಲ್ಲಿನ ಬದಲಾವಣೆ, ಪರಿಸರ ಹಾಗೂ ಒತ್ತಡದ ಕಾರಣದಿಂದ ಕೆಲವೊಮ್ಮೆ ಹಾರ್ಮೋನ್‌ಗಳಲ್ಲಿ ವ್ಯತ್ಯಾಸವಾಗಬಹುದು. ಈ ವ್ಯತ್ಯಾಸವು ನಿಮ್ಮ ಚರ್ಮದ→ಲ್ಲೂ ಕಾಣಿಸುತ್ತದೆ. ಇದರ ಪರಿಹಾರಕ್ಕೆ ಬಾಹ್ಯವಾಗಿ ಕೆಲವೊಂದು ಮಾರ್ಗಗಳನ್ನು ಅನುಸರಿ→ಬೇಕು. ಕೆಲವೊಮ್ಮೆ ದೇಹದಲ್ಲಿ ಆಗುವುದನ್ನು ನಿಯಂತ್ರಣ ಮಾಡುವುದಕ್ಕಿಂತ ಹಾಗೇ ಇರಲು ಬಿಡಬೇಕು. ಚರ್ಮಕ್ಕೆ ಉಸಿರಾಡಲು ಅವಕಾಶ ನೀಡಬೇಕು ಹಾಗೂ ತನ್ನಷ್ಟಕ್ಕೆ ತಾನೇ ಚರ್ಮದ ಸಮಸ್ಯೆಗಳು ನಿವಾರಣೆಯಾಗಲು ಸಮಯಾವಧಿ ನೀಡಬೇಕು.

*ನೀವು ಚರ್ಮದ ಕಾಳಜಿಯ ಸಲುವಾಗಿ ದೀರ್ಘಕಾಲದಿಂದ ಒಂದೇ ದಿನಚರಿಯನ್ನು ಪಾಲಿಸುತ್ತಿರಬಹುದು. ಆ ದಿನಚರಿಗೆ ನಿಮ್ಮ ಚರ್ಮವೂ ಹೊಂದಿಕೊಂಡಿರಬಹುದು. ಕೆಲವೊಮ್ಮೆ ನಿರ್ದಿಷ್ಟ ಕಾರಣದಿಂದ ದಿನಚರಿಯಲ್ಲಿ ಬದಲಾವಣೆಯಾಗಬಹುದು. ಒಂದೇ ದಿನಚರಿಗೆ ಹೊಂದಿಕೊಂಡ ನಿಮ್ಮ ಚರ್ಮ ಹೊಸ ದಿನಚರಿಗೆ ಹೊಂದಿಕೊಳ್ಳಲು ಕೆಲವು ಸಮಯ ಹಿಡಿಯಬಹುದು.

ADVERTISEMENT

*ಕೆಲವೊಮ್ಮೆ ನಿಮ್ಮ ಚರ್ಮದ ಆರೋಗ್ಯ ನೀವು ಅಂದುಕೊಂಡ ಹಾಗೆ ಆಗದೇ ಇರಬಹುದು. ಅದಕ್ಕೆ ಮುಖ್ಯ ಕಾರಣ ನೀವು ಬಳಸುವ ವಸ್ತುವನ್ನು ಸರಿಯಾದ ಕ್ರಮದಲ್ಲಿ ಬಳಸದೇ ಇರುವುದು. ಯಾವುದೇ ಕ್ರೀಮ್‌ ಅಥವಾ ಔಷಧಿಯಾಗಲಿ ಪದೇ ಪದೇ ಹಚ್ಚುವುದು, ಆಗೊಮ್ಮೆ ಈಗೊಮ್ಮೆ ಹಚ್ಚುವುದು ಎರಡನ್ನೂ ಮಾಡಬಾರದು. ಈ ರೀತಿ ಮಾಡುವುದರಿಂದ ಚರ್ಮಕ್ಕೆ ಹಾನಿಯಾಗುತ್ತದೆ. ಯಾವುದೇ ಚರ್ಮಕ್ಕೆ ಸಂಬಂಧಿಸಿದ ಉತ್ಪನ್ನವಾಗಲಿ ಅದನ್ನು ಬಳಸುವ ಕ್ರಮದ ಮೇಲೆ ಅದರ ಫಲಿತಾಂಶ ನಿಂತಿದೆ.

*ನೀವು ತುಂಬಾ ಒಳ್ಳೆಯ ಹಾಗೂ ಬೆಲೆಬಾಳುವ ಉತ್ಪನ್ನವನ್ನು ಚರ್ಮಕ್ಕೆ ಬಳಸುತ್ತಿರುತ್ತೀರಾ. ಆದರೆ ಅದು ನಿಮ್ಮ ಚರ್ಮಕ್ಕೆ ವಿರುದ್ಧವಾಗಿ ಕೆಲಸ ಮಾಡುತ್ತದೆ ಅಂದರೆ ನೀವು ವಾಯಿದೆ ಮುಗಿದ ಉತ್ಪನ್ನವನ್ನು ಬಳಸುತ್ತಿರಬಹುದು. ಈಗ ನಿಮ್ಮ ಚರ್ಮದ ಅಂದ ಹೆಚ್ಚುವುದಿಲ್ಲ ಮಾತ್ರವಲ್ಲಚರ್ಮದ ಆರೋಗ್ಯ ಇನ್ನಷ್ಟು ಹದಗೆಡಬಹುದು. ಆ ಕಾರಣಕ್ಕೆ ಆದಷ್ಟು ನೈಸರ್ಗಿಕವಾದ, ಮನೆಯಲ್ಲೇ ತಯಾರಿಸಿದ ಉತ್ಪನ್ನಗಳನ್ನು ಮುಖಕ್ಕೆ ಹಚ್ಚುವುದು ಸೂಕ್ತ. ಅದರಲ್ಲೂ ನಿಮ್ಮದು ಸೂಕ್ಷ್ಮ ಚರ್ಮವಾದರೆ ಮನೆಮದ್ದಿನ ಬಳಕೆ ಉತ್ತಮ.

*ನಿಮ್ಮ ದೇಹಕ್ಕೆ ವಿರಾಮ ನೀಡುವಂತೆ ಚರ್ಮಕ್ಕೆ ವಿರಾಮ ನೀಡುವುದು ಅತೀ ಅಗತ್ಯ. ಅದಕ್ಕಾಗಿ ಪ್ರತಿದಿನ ಬೆಳಿಗ್ಗೆ ಹಾಗೂ ರಾತ್ರಿ ಮುಖಕ್ಕೆ ವಿರಾಮ ನೀಡಬೇಕು. ಬೆಳಿಗ್ಗೆ ಎದ್ದ ಕೂಡಲೇ ಫೇಸ್‌ವಾಷ್‌ ಅಥವಾ ಸೋಪ್‌ನಿಂದ ಮುಖ ತೊಳೆದುಕೊಳ್ಳಬೇಕು. ಮನೆಯಲ್ಲಿ ಇರುವಾಗ ಏನನ್ನೂ ಹಚ್ಚದೇ ಚರ್ಮವನ್ನು ಹಾಗೇ ಬಿಡುವುದು ಉತ್ತಮ. ಹೊಸ ಉತ್ಪನ್ನ ಬಳಸುವ ಕೆಲ ದಿನಗಳ ಮೊದಲು ಮುಖಕ್ಕೆ ಉಸಿರಾಡಲು ಅವಕಾಶ ನೀಡಿ ನಂತರ ಬೇರೆ ಉತ್ಪನ್ನ ಬಳಸುವುದು ಸೂಕ್ತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.