ADVERTISEMENT

ಜರ್ಮನ್‌ ಕನ್ನಡತಿಯ ಸೀರೆ ಕತೆ!

ಸುಮನಾ ಕೆ
Published 17 ಫೆಬ್ರುವರಿ 2020, 4:34 IST
Last Updated 17 ಫೆಬ್ರುವರಿ 2020, 4:34 IST
ತಾನಾ ಬಾನಾದಲ್ಲಿನ ಸೀರೆಗಳ ಚಿತ್ರ
ತಾನಾ ಬಾನಾದಲ್ಲಿನ ಸೀರೆಗಳ ಚಿತ್ರ   

ಸಂಗ್ರಹದಲ್ಲಿರುವ ಪ್ರತಿ ಸೀರೆ ಜೊತೆ ಹೆಣ್ಣುಮಕ್ಕಳಿಗೊಂದು ಆಪ್ತಭಾವ ಇರುತ್ತದೆ. ಅಪ್ಪ ಕೊಡಿಸಿದ ಮೊದಲ ಸೀರೆ, ನಿಶ್ಚಿತಾರ್ಥ, ಮದುವೆ, ತವರು ಮನೆ, ಗಂಡ ಕೊಡಿಸಿದ ಸೀರೆ..ಹೀಗೆ ಸೀರೆ ಹಿಂದಿರುವ ಕತೆಗಳೂ ಆಸಕ್ತಿಕರ. ಒಂದೊಂದು ಸೀರೆ ಹಿಂದೆಯೂ ಒಂದೊಂದು ಕುತೂಹಲಕರವಾದ ಕತೆ ಇರುತ್ತದೆ.

ಸೀರೆಗಳಲ್ಲೂ ಹಲವು ವಿಧಗಳಿವೆ. ಗಡಿಗಳು ಬದಲಾದಂತೆ ಸೀರೆಗಳ ಹೆಸರು, ವಿನ್ಯಾಸ ಬದಲಾಗುತ್ತಾ ಹೋಗುತ್ತದೆ. ದೇಶದ ಪ್ರತಿ ಪ್ರದೇಶದಲ್ಲೂ ಒಂದೊಂದು ಬಗೆಯ ಸೀರೆಗಳು ಸಿಗುತ್ತವೆ. ಆ ಸೀರೆಗಳು ಅಲ್ಲಿನ ಸಂಸ್ಕೃತಿ, ಪರಂಪರೆ ಪ್ರತಿನಿಧಿಸುತ್ತದೆ.

ಬಂಗಾಳಿ ಕಾಟನ್‌, ಭಾಗಲ್‌ಪುರ್‌ ಸಿಲ್ಕ್‌, ಆಂಧ್ರ ಪ್ರದೇಶದ ಗದ್ವಾಲ್‌, ಇಕತ್‌, ತಮಿಳುನಾಡಿನ ಕಾಂಜೀವರಂ,ರಾಜಸ್ಥಾನದ ಬಾಂದನಿ ಹೊರ ರಾಜ್ಯಗಳ ಸೀರೆಗಳಾದರೆ, ರಾಜ್ಯದಲ್ಲಿ ಇಳಕಲ್‌, ಮೊಳಕಾಲ್ಮೂರು, ಮೈಸೂರು ಸಿಲ್ಕ್‌... ಹೀಗೆ ನಾನಾ ಬಗೆಯ ಸೀರೆಗಳು ಮಹಿಳೆಯರ ಮೈ, ಮನಗಳನ್ನು ಅರಳಿಸುತ್ತವೆ.

ADVERTISEMENT

ತಾನಾ ಬಾನಾ

ಸೀರೆಗಳೆಂದರೆ ಮಹಿಳೆಯರಿಗೇಕೆ ಸಂಭ್ರಮ. ಸೀರೆಯ ಹಿಂದಿರುವ ಇತಿಹಾಸ, ವಿಧಗಳನ್ನು ತಿಳಿಸುವ ವಿಭಿನ್ನ ಕೃತಿಯನ್ನು ಸೌಮ್ಯಾ ರೆಡ್ಡಿ ಶಾಮಣ್ಣ ಬರೆದಿದ್ದಾರೆ.ಅನೇಕ ವರ್ಷಗಳಿಂದ ಜರ್ಮನಿಯಲ್ಲಿ ನೆಲೆಸಿರುವ ಇವರು ಮೂಲತಃ ಬೆಂಗಳೂರಿನವರು. ಈ ಪುಸ್ತಕದ ಹೆಸರು ‘ತಾನಾ ಬಾನಾ’. ಸೀರೆ ನೇಯುವಾಗ ಉಪಯೋಗಿಸುವ ‘ತಾನಾ ಬಾನಾ‘ ಹೆಸರನ್ನೇ ಈ ಕೃತಿಗೆ ಇಟ್ಟಿದ್ದಾರೆ.

ಸೌಮ್ಯಾ ಅವರಿಗೆ ಕೈಮಗ್ಗ, ನೇಕಾರಿಕೆ ಬಗ್ಗೆ ವಿಶೇಷ ಆಸಕ್ತಿ ಇತ್ತು. ಸೀರೆ ಬಗ್ಗೆ ಅಪಾರ ವ್ಯಾಮೋಹ ಹೊಂದಿರುವ ಅವರು, ಹೊಸ ಸ್ಥಳಕ್ಕೆ ಭೇಟಿ ಕೊಟ್ಟಾಗ ಅಲ್ಲಿನ ಸೀರೆಯೊಂದನ್ನು ಖರೀದಿ ಮಾಡುತ್ತಿದ್ದರು. ಬಹುತೇಕ ಎಲ್ಲಾ ವಿಧಧ ಸೀರೆಗಳು ಅವರ ಸಂಗ್ರಹದಲ್ಲಿವೆ. ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮದಿನವನ್ನು ವಿಶೇಷವಾಗಿಸಬೇಕೆಂಬ ಉದ್ದೇಶದಿಂದ ಕೈಮಗ್ಗದ ಸೀರೆಗಳ ಬಗ್ಗೆ ಸುಮಾರು ಎರಡು ವರ್ಷಗಳ ಅಧ್ಯಯನ ನಡೆಸಿ ಈ ಕೃತಿ ರಚಿಸಿದ್ದಾರೆ.

ನೂರಕ್ಕೂ ಹೆಚ್ಚು ಸೀರೆಗಳ ಇತಿಹಾಸ

ಈ ಪುಸ್ತಕವು ದೇಶದ ಸುಮಾರು 100ಕ್ಕೂ ಹೆಚ್ಚು ಸೀರೆಗಳ ಇತಿಹಾಸ, ವಿನ್ಯಾಸ, ಅದರ ತಯಾರಿಕೆಗೆ ಬೇಕಾಗುವ ಸಮಯ, ಕಾರ್ಮಿಕರ ಕೌಶಲದ ಬಗ್ಗೆ ಸಮಗ್ರ ಮಾಹಿತಿ ಹೊಂದಿದೆ. ಪ್ರತಿ ಅಧ್ಯಾಯದಲ್ಲಿ ಸೀರೆ ವಿಧ, ಆಯಾ ಪ್ರದೇಶದ ಸಂಸ್ಕೃತಿ, ಪರಂಪರೆ ಶ್ರೀಮಂತಿಕೆಯನ್ನು ಅವರು ತಿಳಿಸಿದ್ದಾರೆ.

ಈ ಕೃತಿಯಲ್ಲಿ ಸೀರೆಗಳಿಗೆ ಸಂಬಂಧಿಸಿದಂತೆ ಆಸಕ್ತಿದಾಯಕವಾದ ವಿಚಾರಗಳನ್ನು ಅವರು ಹಂಚಿಕೊಂಡಿದ್ದಾರೆ. ಹಾಗೇ ಸೀರೆ ಪರಿಚಯದ ಜೊತೆಗೆ ಬಳಸಿರುವ ಛಾಯಾಚಿತ್ರಗಳು ಕೂಡ ಆಕರ್ಷಕವಾಗಿವೆ. ರಾಜ್ಯದ ಹಲವು ತಾಣಗಳಲ್ಲಿ ಅಪರೂಪದ ಸೀರೆ ಧರಿಸಿದ ರೂಪದರ್ಶಿಗಳ ಫೋಟೊಗಳು ಪುಸ್ತಕದ ಅಂದವನ್ನು ಹೆಚ್ಚಿಸಿವೆ. ಜತೆಗೆ ಲೇಖಕಿ ಕೂಡ ನಾನಾ ಬಗೆಯ ಸೀರೆಯುಟ್ಟು ಸಂಭ್ರಮಿಸಿದ್ದಾರೆ.

ಸೀರೆ ಸಾಂಪ್ರದಾಯಿಕ ಉಡುಪು ಎಂದು ಯುವತಿಯರು ಮೂಗು ಮುರಿಯುತ್ತಿರುವುದ ಬಗ್ಗೆಯೂ ಸೌಮ್ಯಾ ಬೇಸರ ವ್ಯಕ್ತಪಡಿಸುತ್ತಾರೆ. ‘ಜಪಾನ್‌ನಲ್ಲಿ ಅವರ ಸಾಂಪ್ರದಾಯಿಕ ಉಡುಪು ‘ಕಿಮೊನೊ’ ಈಗ ಟೀ ಪಾರ್ಟಿಗಳಿಗೆ ಮಾತ್ರ ಸೀಮಿತವಾದಂತಿದೆ. ಹಾಗೇ ಸೀರೆ ಕೂಡ ಸಾಂಪ್ರದಾಯಿಕ, ಉಡಲು ಕಷ್ಟ ಎಂದು ಮೂಲೆ ಸೇರುತ್ತಿದೆ. ಇದು ಹೀಗೆ ಮುಂದುವರೆದು ಮದುವೆಯಂತಹ ಕಾರ್ಯಕ್ರಮಕ್ಕೆ ಮಾತ್ರ ಸೀಮಿತವಾದರೆ ಕಷ್ಟ. ಅದರ ಶ್ರೀಮಂತಿಕೆ, ವೈವಿಧ್ಯತೆ ಬಗ್ಗೆ ಎಲ್ಲರೂ ತಿಳಿಯಬೇಕು’ ತಮ್ಮ ಕೃತಿ ರಚನೆ ಹಿಂದಿನ ಉದ್ದೇಶವನ್ನು ಅವರು ಹೇಳುತ್ತಾರೆ.

ಸೀರೆ ಒಂದು ಅತ್ಯುತ್ತಮವಾದ ಉಡುಗೆ. ತೊಡಲು ಸುಲಭ. ಈಗ ಸೀರೆಗಳನ್ನು ಪ್ಯಾಂಟ್‌ ಸೀರೆ, ಲೆಹೆಂಗಾ ಹೀಗೆ ನಾನಾ ಬಗೆಗಳಲ್ಲಿ ಆಧುನಿಕವಾಗಿ ಉಟ್ಟುಕೊಳ್ಳಬಹುದು. ಸೀರೆಗಳು ನಮ್ಮ ದೇಶದ ಶ್ರೀಮಂತ ಸಂಸ್ಕೃತಿ, ಪರಂಪರೆಯ ಪ್ರತೀಕ’ ಎಂದು ಸೌಮ್ಯಾ ಹೆಮ್ಮೆಯಿಂದ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.