ADVERTISEMENT

ಚಳಿಗಾಲದಲ್ಲಿ ಬೇಕು ತ್ವಚೆಯ ಕಾಳಜಿ

ಮನಸ್ವಿ
Published 29 ಡಿಸೆಂಬರ್ 2020, 19:30 IST
Last Updated 29 ಡಿಸೆಂಬರ್ 2020, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಸದಾ ಸುಂದರ, ಹೊಳೆಯುವ ಚರ್ಮ ತಮ್ಮದಾಗಬೇಕು ಎಂದು ಎಲ್ಲರೂ ಬಯಸುತ್ತಾರೆ. ತ್ವಚೆಯ ಕಾಂತಿ ಹೆಚ್ಚಿಸಿಕೊಳ್ಳುವ ಸಲುವಾಗಿ ಹಲವು ಮಾರ್ಗಗಳನ್ನು ಅನುಸರಿಸುತ್ತಾರೆ. ಆದರೆ ಚಳಿಗಾಲ ಬಂತು ಎಂದರೆ ಚರ್ಮದ ಕಾಳಜಿ ಮಾಡುವವರಿಗೆ ಚಿಂತೆ ಆರಂಭವಾಗುತ್ತದೆ. ಅದರಲ್ಲೂ ಒಣಚರ್ಮ ಹೊಂದಿರುವವರಿಗೆ ಚಳಿಗಾಲವೆಂದರೆ ಕಿರಿಕಿರಿ. ಒಣಚರ್ಮದವರಿಗೆ ಈ ಕಾಲದಲ್ಲಿ ಚರ್ಮದ ಸಿಪ್ಪೆ ಏಳುವುದು, ತುರಿಕೆ, ಸೀಳುವುದು ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಚರ್ಮದ ಬಗ್ಗೆ ಹೆಚ್ಚು ಕಾಳಜಿ ತೋರುವ ಮೂಲಕ ಸದಾ ಹೊಳೆಯುವಂತೆ ಮಾಡಬಹುದು. ಅಂದದ ಚರ್ಮ ನಿಮ್ಮದಾಗಬೇಕು ಎಂದರೆ ಈ ಕೆಲವು ಮಾರ್ಗಗಳನ್ನು ಅನುಸರಿಸಿ.

ಚರ್ಮದ ಆರೈಕೆ ಮೇಲಿರಲಿ ಗಮನ: ಸಾಮಾನ್ಯವಾಗಿ ಕಚೇರಿಗೆ ಹೋಗುವಾಗ ಅಥವಾ ಹೊರಗಡೆ ಹೋಗುವಾಗ ಚರ್ಮದ ಬಗ್ಗೆ ಹೆಚ್ಚು ಕಾಳಜಿ ತೋರುತ್ತೇವೆ. ಆದರೆ ಮನೆಯಲ್ಲೇ ಇರುವಾಗ ಅಥವಾ ವಾರಾಂತ್ಯದಲ್ಲಿ ಚರ್ಮದ ಬಗ್ಗೆ ಅಷ್ಟೊಂದು ಲಕ್ಷ್ಯ ವಹಿಸುವುದಿಲ್ಲ. ದಿನಚರಿಯಲ್ಲಿ ಏನೇ ಬದಲಾವಣೆಯಾದರು ಮರೆಯದೇ ತ್ವಚೆಯ ಆರೈಕೆ ಮಾಡಿಕೊಳ್ಳುವುದರಿಂದ ಅಂದದ ತ್ವಚೆ ನಿಮ್ಮದಾಗಬಹುದು.

ಫೇಶಿಯಲ್ ಆಯಿಲ್‌ ಬಳಕೆ: ಈ ಕಾಲದಲ್ಲಿ ಉಷ್ಣಾಂಶದಲ್ಲಾಗುವ ಬದಲಾವಣೆಯು ತ್ವಚೆಯು ಬಿರುಕು ಬಿಡುವಂತೆ ಮಾಡುತ್ತದೆ. ಒಣಚರ್ಮ ಹೊಂದಿರುವವರಿಗೆ ತೇವಾಂಶ ಸಿಗುವುದು ಅಗತ್ಯ. ಹಾಗಾಗಿ ನಿಮ್ಮ ದಿನಚರಿಯಲ್ಲಿ ಕೊಬ್ಬರಿಎಣ್ಣೆಯಂತಹ ಫೇಶಿಯಲ್‌ ಆಯಿಲ್‌ಗೆ ಆದ್ಯತೆ ಇರಲಿ. ಚೆನ್ನಾಗಿ ಮುಖ ತೊಳೆದು ಮುಖಕ್ಕೆ ಹಬೆ ಹಿಡಿದು ನಂತರ ಈ ಎಣ್ಣೆ ಹಚ್ಚಿ ಮಸಾಜ್ ಮಾಡಿ. ಇದು ಚರ್ಮವನ್ನು ಒಳಪದರದಿಂದಲೇ ರಕ್ಷಿಸುತ್ತದೆ.

ADVERTISEMENT

ಕೆನೆಯನ್ನು ಹಚ್ಚಿ: ಒಣಚರ್ಮದವರು ಹಾಲಿನ ಕೆನೆಯನ್ನು ಮುಖಕ್ಕೆ ಹಚ್ಚಿ ಮಸಾಜ್ ಮಾಡಿ. ಜೊತೆಗೆ ಜೇನುತುಪ್ಪ ಬೆರೆಸಿ ಹಚ್ಚಿಕೊಳ್ಳುವುದು ಸೂಕ್ತ. ಇದರೊಂದಿಗೆ ಚಳಿಗಾಲಕ್ಕೆ ಹೊಂದುವ ಸೀರಮ್‌, ಫೇಸ್‌ಕ್ರೀಮ್‌, ಮಾಯಿಶ್ಚರೈಸರ್‌, ಬಾಡಿಲೋಷನ್‌ಗಳ ಬಳಕೆಯನ್ನು ಮರೆಯಬಾರದು.

ಸರಿಯಾದ ಆಹಾರಕ್ರಮ: ಆರೋಗ್ಯಕರ ಆಹಾರ ಪದಾರ್ಥಗಳ ಸೇವನೆಯೂ ಮುಖ್ಯ. ಹಸಿರು ತರಕಾರಿ, ಸೊಪ್ಪು, ಮೀನು ಹಾಗೂ ಈ ಕಾಲದಲ್ಲಿ ಸಿಗುವ ಹಣ್ಣುಗಳನ್ನು ಹೆಚ್ಚು ಹೆಚ್ಚು ಸೇವಿಸಬಹುದು. ದಿನಕ್ಕೆ ಕನಿಷ್ಠ ಮೂರು ಲೀಟರ್ ನೀರು ಕುಡಿಯಿರಿ. ಕರಿದ ಪದಾರ್ಥಗಳನ್ನು ಸೇವಿಸಬೇಡಿ.

ನೈಸರ್ಗಿಕ ಉತ್ಪನ್ನಗಳ ಬಳಕೆ: ಮುಖ ತೊಳೆಯಲು ಹೆಚ್ಚು ರಾಸಾಯನಿಕ ಅಂಶವಿಲ್ಲದ, ನೊರೆರಹಿತ ಫೇಸ್‌ಕ್ರೀಮ್ ಬಳಸಬಹುದು. ರಾಸಾಯನಿಕ ಅಂಶವಿರುವ ಉತ್ಪನ್ನಗಳಿಂದ ತ್ವಚೆ ಇನ್ನಷ್ಟು ಒಣಗುತ್ತದೆ. ಆ ಕಾರಣಕ್ಕೆ ಬರಿ ನೀರಿನಿಂದಲೇ ಮುಖ ತೊಳೆಯುವುದು ಒಳ್ಳೆಯದು. ರಾತ್ರಿ ವೇಳೆ ಕೊಬ್ಬರಿ ಎಣ್ಣೆ ಅಥವಾ ಎಳ್ಳೆಣ್ಣೆ ಹಚ್ಚಿಕೊಳ್ಳಿ.

ಒಣಚರ್ಮ ಕೆರೆಯಬೇಡಿ: ಚರ್ಮದ ಪದರ ಒಣಗಿದಾಗ ಸಿಪ್ಪೆ ಏಳಬಹುದು. ಆಗ ತುರಿಕೆ ಉಂಟಾಗಬಹುದು. ಆದರೆ ಉಗುರು ಅಥವಾ ಬ್ರಷ್‌ ಸಹಾಯದಿಂದ ಸಿಪ್ಪೆಯನ್ನು ಕೆರೆಯುವುದು ಅಥವಾ ಉಜ್ಜುವುದು ಮಾಡಬೇಡಿ. ಒಣಗಿದ ತುಟಿಯಲ್ಲೂ ಸಿಪ್ಪೆ ಏಳುತ್ತದೆ. ಅದನ್ನು ಹಲ್ಲಿನಿಂದ ಕಚ್ಚಿ ತೆಗೆಯುವುದರಿಂದ ಸೋಂಕು ಉಂಟಾಗಬಹುದು. ಇದಕ್ಕೆ ನೈಸರ್ಗಿಕ ಅಂಶ ಇರುವ ಲಿಪ್‌ಬಾಮ್‌ ಬಳಸಿ ಅಥವಾ ತುಪ್ಪವನ್ನು ಸವರಿಕೊಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.