ADVERTISEMENT

ಎರಡು ವರ್ಷಗಳಲ್ಲಿ ಬ್ಯಾಂಕ್‌ ಬಂಡವಾಳದಲ್ಲಿ ಇಳಿಕೆ: ಮೂಡೀಸ್‌

ಪಿಟಿಐ
Published 30 ನವೆಂಬರ್ 2020, 14:52 IST
Last Updated 30 ನವೆಂಬರ್ 2020, 14:52 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಭಾರತದ ಬ್ಯಾಂಕ್‌ಗಳಲ್ಲಿ ಹೊಸದಾಗಿ ಬಂಡವಾಳ ಹೂಡಿಕೆ ಆಗದೇ ಇರುವುದರಿಂದಮುಂದಿನ ಎರಡು ವರ್ಷಗಳಲ್ಲಿ ಅವುಗಳಲ್ಲಿನ ಬಂಡವಾಳ ಪ್ರಮಾಣದಲ್ಲಿ ಇಳಿಕೆ ಕಂಡುಬರಲಿದೆ ಎಂದು ಮೂಡೀಸ್‌ ಇನ್‌ವೆಸ್ಟರ್ಸ್‌ ಸರ್ವೀಸ್‌ ಸೋಮವಾರ ಹೇಳಿದೆ.

ಆಸ್ತಿಗಳ ಗುಣಮಟ್ಟದ ಬಗ್ಗೆ ಅನಿಶ್ಚಿತ ಸ್ಥಿತಿ ಎದುರಾಗಿರುವುದು ಪ್ರವರ್ಧಮಾನಕ್ಕೆ ಬರುತ್ತಿರುವ ಏಷ್ಯಾ ದೇಶಗಳ ಬ್ಯಾಂಕ್‌ಗಳಿಗೆ ಬಹುದೊಡ್ಡ ಅಪಾಯವಾಗಿದೆ. ಸದ್ಯದ ಕೋವಿಡ್‌–19 ಸಾಂಕ್ರಾಮಿಕದಿಂದಾಗಿ ಬ್ಯಾಂಕ್‌ಗಳ ಕಾರ್ಯಾಚರಣೆಯು ಸವಾಲಿನಿಂದ ಕೂಡಿದೆ ಎಂದು ತನ್ನ ‘ಎಮರ್ಜಿಂಗ್‌ ಮಾರ್ಕೆಟ್ಸ್‌ ಫೈನಾನ್ಶಿಯಲ್‌ ಇನ್‌ಸ್ಟಿಟ್ಯೂಶನ್ಸ್‌ ಔಟ್‌ಲುಕ್‌’ ವರದಿಯಲ್ಲಿ ವಿವರಿಸಿದೆ.

ಪ್ರವರ್ಧಮಾನಕ್ಕೆ ಬರುತ್ತಿರುವ ದೇಶಗಳಲ್ಲಿ 2021ರಲ್ಲಿ ಬ್ಯಾಂಕಿಂಗ್‌ ವಲಯದ ಮುನ್ನೋಟವು ನಕಾರಾತ್ಮಕವಾಗಿದ್ದು, ವಿಮಾ ವಲಯದ ಮುನ್ನೋಟ ಸ್ಥಿರವಾಗಿದೆ ಎಂದಿದೆ.

ADVERTISEMENT

ಏಷ್ಯಾ ಪೆಸಿಫಿಕ್‌ ವಲಯದಲ್ಲಿ, ಬ್ಯಾಂಕ್‌ಗಳ ವಸೂಲಾಗದ ಸಾಲದ (ಎನ್‌ಪಿಎ) ಪ್ರಮಾಣ ಹೆಚ್ಚಾಗುತ್ತಿದೆ. ಅದರಲ್ಲಿಯೂ ಮುಖ್ಯವಾಗಿ ಭಾರತ ಮತ್ತು ಥಾಯ್ಲೆಂಡ್‌ನ ಬಹುತೇಕ ಬ್ಯಾಂಕ್‌ಗಳಲ್ಲಿ ಎನ್‌ಪಿಎ ಪ್ರಮಾಣದಲ್ಲಿ ಏರಿಕೆಯಾಗಲಿದೆ. ಏಕೆಂದರೆ, ಕೋವಿಡ್‌ನಿಂದಾಗಿ ಆರ್ಥಿಕತೆಗೆ ಹೆಚ್ಚಿನ ನಷ್ಟ ಆಗಿರುವ ಜತೆಗೆ ಕೆಲವು ನಿರ್ದಿಷ್ಟ ಸಾಲಗಳ ವಸೂಲಾತಿಯಲ್ಲಿ ಸಮಸ್ಯೆ ಆಗಿದೆ ಎಂದು ತಿಳಿಸಿದೆ.

ಭಾರತ ಮತ್ತು ಶ್ರೀಲಂಕಾದಲ್ಲಿ ಬ್ಯಾಂಕ್‌ಗಳಿಗೆ ಹೊಸದಾಗಿ ಸರ್ಕಾರಿ ಅಥವಾ ಖಾಸಗಿ ಬಂಡವಾಳ ಹೂಡಿಕೆಯಾಗದೆ ಅವುಗಳ ಬಂಡವಾಳ ಪ್ರಮಾಣದಲ್ಲಿ ಹೆಚ್ಚಿನ ಇಳಿಕೆ ಕಾಣಲಿದೆ. ಭಾರತದಲ್ಲಿ ಬ್ಯಾಂಕೇತರ ಹಣಕಾಸು ಕಂಪನಿಗಳ ನಗದು ಬಿಕ್ಕಟ್ಟಿನಿಂದಾಗಿ ಸಾಲ ನೀಡಿಕೆ ಸಾಮರ್ಥ್ಯವೂ ತಗ್ಗಲಿದೆ ಎಂದು ಅದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.