ADVERTISEMENT

ಅದ್ಭುತ ಅಲ್ಲದಿದ್ದರೂ ಸಮುಚಿತ ಬಜೆಟ್: ಪ್ರಾಧ್ಯಾಪಕ ಪ್ರೊ. ಎಸ್.ಆರ್.ಕೇಶವ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2021, 18:15 IST
Last Updated 1 ಫೆಬ್ರುವರಿ 2021, 18:15 IST
ಎಸ್.ಆರ್‌. ಕೇಶವ
ಎಸ್.ಆರ್‌. ಕೇಶವ   

ಬೆಂಗಳೂರು: ‘ಕೇಂದ್ರದ ಬಜೆಟ್‌ ಗಮನಿಸಿದರೆ ಕೋವಿಡ್ ಕಾಲದಲ್ಲಿ ಇದಕ್ಕಿಂತ ಹೆಚ್ಚಿಗೆ ಏನನ್ನೂ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಅದ್ಬುತ ಅಲ್ಲದಿದ್ದರೂ ಸಮುಚಿತ ಬಜೆಟ್ ಎನ್ನಬಹುದು’ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಪ್ರಾಧ್ಯಾಪಕ ಪ್ರೊ. ಎಸ್.ಆರ್.ಕೇಶವ ಅಭಿಪ್ರಾಯಪಟ್ಟರು.

‘ಪ್ರಜಾವಾಣಿ’ಯ ಫೇಸ್‌ಬುಕ್ ಲೈವ್ ಚರ್ಚೆಯಲ್ಲಿ ಮಾತನಾಡಿದ ಅವರು, ‘ಶತಮಾನದಲ್ಲೆ ಕಂಡರಿಯದ ರೀತಿಯ ಬಜೆಟ್ ಮಂಡಿಸುತ್ತೇವೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದಾಗ ನಿರೀಕ್ಷೆ ಹೆಚ್ಚಿಸಿತ್ತು. ಅದು ಹುಸಿ ಆಯಿತು. ಆದರೆ, ವಾಸ್ತವ ಗಮನಿಸಿದರೆ ಇದಕ್ಕಿಂತ ಹೆಚ್ಚಿಗೆ ಏನನ್ನೂ ಮಾಡಲು ಸಾಧ್ಯವಿರಲಿಲ್ಲ’ ಎಂದು ಪ್ರತಿಪಾದಿಸಿದರು.

‘ಬಜೆಟ್ ಬಗ್ಗೆ ಮಾತನಾಡುವ ಮುನ್ನ ಯಾವ ಕಾಲಘಟ್ಟದಲ್ಲಿ ಬಜೆಟ್ ಮಂಡನೆಯಾಗಿದೆ ಎಂಬುದನ್ನು ನೋಡಬೇಕು. ಲಾಕ್‌ಡೌನ್‌ ಕಾರಣದಿಂದ ಪ್ರತಿ ವಲಯವೂ ತೊಂದರೆಗೆ ಸಿಲುಕಿತ್ತು. ಅಸಮಾನತೆ, ಬಡತನ, ನಿರುದ್ಯೋಗ ಹೆಚ್ಚಾಗಿದೆ. 4 ಕೋಟಿ ಜನರು ಬಡತನಕ್ಕೆ ದೂಡಲ್ಪಟ್ಟಿದ್ದರೆ, 2.8 ಕೋಟಿ ನಿರುದ್ಯೋಗಿಗಳು ಹೆಚ್ಚಾಗಿದ್ದಾರೆ ಎಂಬ ಅಂದಾಜಿದೆ’ ಎಂದು ಹೇಳಿದರು.

ADVERTISEMENT

‘ಆರೋಗ್ಯ ಮತ್ತು ಮೂಲಸೌಕರ್ಯಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಸುಂಕ ಏರಿಕೆಗೆ ಇದ್ದ ಎರಡು ದಾರಿ ಎಂದರೆ ತಂಬಾಕು ಮತ್ತು ಮದ್ಯ ಉದ್ಯಮ. ಅದನ್ನೇ ಈ ಬಾರಿಯೂ ಮಾಡಲಾಗಿದೆ. ತೈಲ ಬೆಲೆ ಹೆಚ್ಚಳವಾದರೂ ಅದರ ಹೊರೆಯನ್ನು ಗ್ರಾಹಕರ ಮೇಲೆ ಬಿಡುವುದಿಲ್ಲ ಎಂದು ಹೇಳಿರುವುದು ಸಮಾಧಾನ ತಂದಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.