ADVERTISEMENT

ಕೃಷಿ ಕ್ಷೇತ್ರ: ಸಮಗ್ರ ದೃಷ್ಟಿಕೋನದ ಕೊರತೆ, ರೈತ ಮಹಿಳೆಯ ಕಡೆಗಣನೆ

ಚುಕ್ಕಿ ನಂಜುಂಡಸ್ವಾಮಿ
Published 8 ಮಾರ್ಚ್ 2021, 19:31 IST
Last Updated 8 ಮಾರ್ಚ್ 2021, 19:31 IST
ಚುಕ್ಕಿ ನಂಜುಂಡಸ್ವಾಮಿ
ಚುಕ್ಕಿ ನಂಜುಂಡಸ್ವಾಮಿ   

ಕೃಷಿ ಕ್ಷೇತ್ರ ಸದ್ಯ ಎದುರಿಸುತ್ತಿರುವ ಬಿಕ್ಕಟ್ಟು ಹಾಗೂ ಸವಾಲುಗಳಿಗೂ ರಾಜ್ಯ ಬಜೆಟ್‌ಗೂ ಸಂಬಂಧವೇ ಇಲ್ಲ. ರೈತರ ಅಭಿವೃದ್ಧಿಯ ಬಗ್ಗೆ ಸಮಗ್ರ ದೃಷ್ಟಿಕೋನದ ಕೊರತೆ ಬಜೆಟ್‌ನಲ್ಲಿ ಎದ್ದು ಕಾಣುತ್ತಿದೆ.

2023ರ ವೇಳೆ ರೈತರ ಆದಾಯ ದ್ವಿಗುಣಗೊಳಿಸುವ ಪ್ರಧಾನಿ ನರೇಂದ್ರ ಮೋದಿ ಅವರ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಕೇಂದ್ರದ ಜೊತೆ ಕೈಜೋಡಿಸಲಿದೆ ಎಂದು ಮುಖ್ಯಮಂತ್ರಿ ಅವರು ಬಜೆಟ್‌ನಲ್ಲಿ ಹೇಳಿದ್ದಾರೆ. ಮೋದಿ ಅವರು ಅಧಿಕಾರಕ್ಕೆ ಬಂದಾಗಿನಿಂದಲೂ ಇದನ್ನು ಹೇಳುತ್ತಲೇ ಬಂದಿದ್ದಾರೆ. ಆದರೆ, ಆದಾಯ ದ್ವಿಗುಣ ಗೊಳಿಸುವುದು ಹೇಗೆ ಎಂಬ ಸ್ಪಷ್ಟ ಕಾರ್ಯಸೂಚಿಯನ್ನು ಸಿದ್ಧ‌ಪಡಿಸಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಮ್ಮ ಬಜೆಟ್‌ಗಳಲ್ಲಿ ಅದರ ಬಗ್ಗೆ ಪ್ರಸ್ತಾಪಿಸಿಲ್ಲ. ಸ್ಪಷ್ಟವಾದ ಸೂತ್ರ ಇಲ್ಲದೇ ಆದಾಯ ದ್ವಿಗುಣ ಗೊಳಿಸಲು ಸಾಧ್ಯವೇ?

ದ್ವಂದ್ವ ನಿಲುವು: ಕೃಷಿಗೆ ಸಂಬಂಧಿಸಿದ ಸರ್ಕಾರದ ದ್ವಂದ್ವ ನೀತಿ ಬಜೆಟ್‌ನಲ್ಲೂ ಸ್ಪಷ್ಟವಾಗಿ ಕಾಣಿಸುತ್ತದೆ. ಒಂದು ಕಡೆ, ಸಾವಯವ ಕೃಷಿಗೆ ಉತ್ತೇಜನಕ್ಕೆ ₹500 ಕೋಟಿ ಹಂಚಿಕೆ, ದೇಶಿ ಗೋತಳಿಗಳ ಸಂರಕ್ಷಣೆಗೆ ಒತ್ತು ಕೊಡುವುದಾಗಿ ಹೇಳುವ ಸರ್ಕಾರ, ಇನ್ನೊಂದೆಡೆ ಹೈಬ್ರಿಡ್‌ ಬೀಜ ನೀತಿ ಜಾರಿಗೊಳಿಸುವುದಾಗಿ ಹೇಳುತ್ತಿದೆ. ಕೇಂದ್ರ ಸರ್ಕಾರ ಹೈಬ್ರಿಡ್‌ ಬೀಜ ಮಸೂದೆಯನ್ನು ಸಿದ್ಧಪಡಿಸುತ್ತಿದೆ. ಇದಕ್ಕೆ ಪೂರಕವಾಗಿ ರಾಜ್ಯ ಸರ್ಕಾರ ಈ ನೀತಿಯನ್ನು ಜಾರಿಗೆ ತರುವುದಾಗಿ ಹೇಳಿದೆ. ಈಗಾಗಲೇ ರೈತರು ಬೀಜಗಳ ಮೇಲಿನ ನಿಯಂತ್ರಣ ಕಳೆದುಕೊಳ್ಳುತ್ತಿದ್ದಾರೆ. ಬಿತ್ತನೆ ಬೀಜಗಳ ಮೇಲೆ ರೈತರು ಹೊಂದಿರುವ ಹಿಡಿತವನ್ನು ಸಂಪೂರ್ಣವಾಗಿ ಬಿಡಿಸುವ ಯತ್ನ ಇದು.

ADVERTISEMENT

ಅಂತರ್ಜಲ ಬಿಕ್ಕಟ್ಟು ಇಡೀ ರಾಜ್ಯವನ್ನು ಬಾಧಿಸುತ್ತಿದೆ. ಹಲವು ನೀರಾವರಿ ಯೋಜನೆಗಳ ಬಗ್ಗೆ ಪ್ರಸ್ತಾಪ ಮಾಡಿರುವ ಯಡಿಯೂರಪ್ಪ ಅವರು ಅಂತರ್ಜಲ ಸಂರಕ್ಷಣೆ ಬಗ್ಗೆ ಎಲ್ಲೂ ಚಕಾರ ಎತ್ತಿಲ್ಲ.

ಒಂದೊಳ್ಳೆ ಕೆಲಸ: ಸಾವಯವ ಇಂಗಾಲ ಹೆಚ್ಚಳಕ್ಕೆ ಪ್ರೋತ್ಸಾಹ ನೀಡಲು ಅಭಿಯಾನ ಹಮ್ಮಿಕೊಳ್ಳುವ ಪ್ರಸ್ತಾವ ಒಳ್ಳೆಯ ಬೆಳವಣಿಗೆ. ಈ ಅಭಿಯಾನ ತುರ್ತಾಗಿ ಆಗಬೇಕಿದೆ. ಇದು ಘೋಷಣೆಗೆ ಸೀಮಿತವಾಗದೆ, ಅದಕ್ಕೆ ನಿರ್ದಿಷ್ಟ ಕಾರ್ಯಸೂಚಿಯನ್ನು ಸಿದ್ಧಪಡಿಸಬೇಕು. ಐದು ವರ್ಷಗಳಲ್ಲಿ ಹಂತ ಹಂತವಾಗಿ ಸಾವಯವ ಇಂಗಾಲ ಹೆಚ್ಚು ಮಾಡಬಹುದು. ರೈತರೇ ಇದನ್ನು ಮಾಡಬಲ್ಲರು. ಇದರಲ್ಲೂ ಖಾಸಗಿಯವರಿಗೆ ಅವಕಾಶ ನೀಡಿ ಅಭಿಯಾನ ಹಾಳು ಮಾಡಲು ಸರ್ಕಾರ ಮುಂದಾಗಬಾರದು.

ವಿವಿಧ ಬೆಳೆಗಳಿಗೆ ಕೇಂದ್ರ ಸರ್ಕಾರ ಘೋಷಿಸುವ ಬೆಂಬಲ ಬೆಲೆಗೆ ಪೂರಕವಾಗಿ ರಾಜ್ಯ ಸರ್ಕಾರವೂ ಬೆಂಬಲಬೆಲೆ ನೀಡುವಂತೆ ಮಾಡಲು ಪ್ರತ್ಯೇಕ ಆವರ್ತನಿಧಿ ಸ್ಥಾಪಿಸಬೇಕು ಎಂದು ಹಲವು ವರ್ಷಗಳಿಂದ ಒತ್ತಾಯಿಸುತ್ತಲೇ ಬಂದಿದ್ದೇವೆ. ಅದು ಸಾಕಾರಗೊಂಡಿಲ್ಲ.

ರೈತ ಮಹಿಳೆಯರ ಕಡೆಗಣನೆ: ಮಹಿಳಾ ದಿನದಂದು ಅವರ ಬಗ್ಗೆ ಪ್ರಸ್ತಾಪಿಸುತ್ತಲೇ ಮುಖ್ಯಮಂತ್ರಿ ಅವರು ಬಜೆಟ್‌ ಭಾಷಣ ಆರಂಭಿಸಿದ್ದಾರೆ. ಆದರೆ, ರೈತ ಮಹಿಳೆಯರ ಬಗ್ಗೆ ಒಂದು ಅಂಶವೂ ಇಲ್ಲ. ಕೃಷಿಯಲ್ಲಿ 90 ಭಾಗ ಕೆಲಸ ಮಾಡುವವರು ಮಹಿಳೆಯರು. ಆದರೆ ಅವರಿಗೆ ಭೂಮಿಯ ಹಕ್ಕು ಇಲ್ಲ. ಶೇ 22ರಷ್ಟು ರೈತ ಮಹಿಳೆಯರು ಮಾತ್ರ ಭೂಮಿಯನ್ನುಹೊಂದಿದ್ದಾರೆ. ಭೂಮಿಯ ಹಕ್ಕು ಹೊಂದಿಲ್ಲದ ಗ್ರಾಮೀಣ ಮಹಿಳೆಯರಿಗೆ ಉತ್ತೇಜನ ಸಿಗಬೇಕಿತ್ತು. ಅದು ಪ್ರಶಸ್ತಿ, ಸಮ್ಮಾನಕ್ಕೆ ಮಾತ್ರ ಸೀಮಿತವಾಗದೆ, ಪುರುಷರಿಗೆ ಸರಿ ಸಮಾನವಾಗಿ ಪ್ರೋತ್ಸಾಹ ಸಿಗಬೇಕಿತ್ತು. ಆದರೆ, ಬಜೆಟ್‌ನಲ್ಲಿ ಅದು ಸಿಕ್ಕಿಲ್ಲ. ಇದು ದೊಡ್ಡ ದುರಂತ. ಲೇಖಕಿ: ರೈತ ನಾಯಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.