ADVERTISEMENT

Karnataka Budget 2021: ಸಂಕಟದ ಗಾತ್ರ ಅರಿವಿಲ್ಲದ ಬಜೆಟ್

ರಾಜಾರಾಂ ತಲ್ಲೂರು
Published 8 ಮಾರ್ಚ್ 2021, 19:31 IST
Last Updated 8 ಮಾರ್ಚ್ 2021, 19:31 IST
ರಾಜಾರಾಂ ತಲ್ಲೂರು
ರಾಜಾರಾಂ ತಲ್ಲೂರು   

ಕಾರ್ಮಿಕರು ಮತ್ತು ಗ್ರಾಮೀಣ ನಿವಾಸಿಗಳಿಗೆ ಈ ಬಜೆಟ್ ತನ್ನ ಹಂಚಿಕೆಯಲ್ಲೇ ಗಮನಾರ್ಹ ಇಳಿತವನ್ನು ತೋರಿಸಿದೆ. ಕಾರ್ಮಿಕರು, ಉದ್ಯೋಗ ಮತ್ತು ಕೌಶಲಾಭಿವೃದ್ಧಿಗಳಿಗೆ ಮೀಸಲಿಟ್ಟ ಹಣ ಕಳೆದ ವರ್ಷದ ₹ 61.3 ಕೋಟಿ ಈ ವರ್ಷಕ್ಕೆ ₹ 59.5 ಕೋಟಿಗೆ ಇಳಿದಿದ್ದರೆ, ಗ್ರಾಮೀಣಾಭಿವೃದ್ಧಿ ವಿಶೇಷ ಕಾರ್ಯಕ್ರಮಗಳಿಗೆ ಹೂಡಿಕೆ ₹ 103.0 ಕೋಟಿಯಿಂದ ₹ 57.5 ಕೋಟಿಗೆ ಇಳಿದಿದೆ.

ಗ್ರಾಮೀಣ ಉದ್ಯೋಗಕ್ಕೆ ಹೂಡಿಕೆಯಲ್ಲಿ ದೊಡ್ಡ ಬದಲಾವಣೆ ಆಗಿಲ್ಲವಾದರೂ ಹೂಡಿಕೆ ತಗ್ಗಿದೆ. ಗ್ರಾಮೀಣ ಸ್ವಸಹಾಯ ಸಂಘಗಳ ಸಣ್ಣ ಉದ್ಯಮಕ್ಕೆ (ಸಂಜೀವಿನಿ) ಬೆಂಬಲ, ಗಾರ್ಮೆಂಟ್ ಕಾರ್ಮಿಕರಿಗೆ ರಿಯಾಯಿತಿ ಬಸ್‌ಪಾಸ್ (ವನಿತಾ ಸಂಗಾತಿ), ಕಟ್ಟಡ ಕಾರ್ಮಿಕರಿಗೆ ನೂರು (ಕಿತ್ತೂರು ರಾಣಿ ಚೆನ್ನಮ್ಮ)ಶಿಶುಪಾಲನಾ ಕೇಂದ್ರಗಳು, 25 ಸಂಚಾರಿ ಆರೋಗ್ಯ ತಪಾಸಣಾ ಕೇಂದ್ರಗಳು, 17ತಾತ್ಕಾಲಿಕ ವಸತಿಗೃಹಗಳು, ಗ್ರಾಮೀಣ ಯುವತಿಯರಿಗೆ ಸಾಫ್ಟ್ ಸ್ಕಿಲ್ ತರಬೇತಿ ಹೀಗೆ ಕೆಲವು ಹೊರಪದರದ ಲಾಭಗಳನ್ನು ಹೊರತುಪಡಿಸಿದರೆ ಮಹತ್ವದ್ದೇನೂ ಇಲ್ಲ.

ಕೊರೊನೋತ್ತರ ಆರ್ಥಿಕತೆಯ ಕುಸಿತದ ಅಂದಾಜು ಸರ್ಕಾರಕ್ಕೆ ಇನ್ನೂ ಸಿಕ್ಕಂತಿಲ್ಲ. ವ್ಯಾಪಾರ ಇಲ್ಲದೇ ವರ್ಷವಿಡೀ ಕುಳಿತು ಸಂಕಟ ಅನುಭವಿಸಿದ ಬೀದಿಬದಿ ವ್ಯಾಪಾರಿಗಳು ಅಥವಾ ಕಾರ್ಮಿಕರು ಈ ಬಜೆಟ್‌ನಿಂದ ನಿರಾಶರಾಗಲಿದ್ದಾರೆ. ಕೃಷಿಯಿಂದ ಹೊರದೂಡಲಾಗುತ್ತಿರುವ ಭೂರಹಿತ ಕೃಷಿ ಕಾರ್ಮಿಕರಿಗೆ ಮತ್ತು ಬೇರೆ ಕೌಶಲರಹಿತ ಕಾರ್ಮಿಕರಿಗೆ ಬಲವಾದ ಬೆಂಬಲ ಮತ್ತು ಕೌಶಲ ಕಲಿಕೆ-ಉದ್ಯೋಗ ನೀಡಿಕೆಗಳತ್ತ ಸರ್ಕಾರ ಹೆಚ್ಚಿನ ಗಮನ ಹರಿಸಿದ್ದರೆ, ಅದಕ್ಕೊಂದು ಲಾಜಿಕಲ್ ಸಮರ್ಥನೆ ಇರುತ್ತಿತ್ತು. ಆ ಅವಕಾಶವನ್ನೂ ಸರ್ಕಾರ ಕಳೆದುಕೊಂಡಿದೆ.

ADVERTISEMENT

ಒಂದು ಬದಿಯಿಂದ ಕೇಂದ್ರ ಸರ್ಕಾರದ ಯೋಜನೆಗಳ ರಾಜ್ಯ ಮಟ್ಟದ ಅನುಷ್ಠಾನವನ್ನೇ ಪ್ರಧಾನ ಉದ್ದೇಶವಾಗಿರಿಸಿಕೊಂಡು, ಇನ್ನೊಂದು ಬದಿಯಿಂದ ಎಲ್ಲ ಯೋಜನೆಗಳಿಗೂ ‘ಖಾಸಗಿ ಸಹಭಾಗಿತ್ವ’ ಬಯಸುತ್ತ, ಮಧ್ಯಮ-ಮೇಲುಮಧ್ಯಮ ವರ್ಗವನ್ನು, ಪ್ರಬಲ ಜಾತಿಗಳನ್ನು ಸಂತೃಪ್ತಿಪಡಿಸುವುದಕ್ಕೆ ಆದ್ಯತೆ ನೀಡುವುದರೊಂದಿಗೆ ರಾಜ್ಯ ಸರ್ಕಾರ ಒಕ್ಕೂಟ ವ್ಯವಸ್ಥೆಯಲ್ಲಿ ತನ್ನ ಸ್ವಂತ ಅಸ್ತಿತ್ವವನ್ನು ಮತ್ತು ಪ್ರಾದೇಶಿಕ ಅನನ್ಯತೆಯನ್ನು ಕಳೆದುಕೊಳ್ಳುತ್ತಿರುವುದು ವರ್ಷಗಳುರುಳಿದಂತೆ ನಿಚ್ಚಳವಾಗುತ್ತಿದೆ. ರಾಜ್ಯದಲ್ಲಿ ಆರ್ಥಿಕ ಅಭಿವೃದ್ಧಿಗೆ ಪ್ರಚೋದನೆ ನೀಡಲು 2021-22ನೇ ಸಾಲಿನಲ್ಲಿ ಸರ್ಕಾರ ಹಂಚಿಕೆ ಮಾಡಿರುವುದು ಕೇವಲ ₹ 52,529 ಕೋಟಿ. ₹ 2,46,206 ಕೋಟಿ ಗಾತ್ರದ ಬಜೆಟ್‌ನಲ್ಲಿ ಇದು ತೀರಾ ಅಲ್ಪಮೊತ್ತ. ಕೊರೊನಾ ಕಾಲದ ಸಂಕಟದ ಗಾತ್ರದ ಅರಿವಿಲ್ಲದ ಬಜೆಟ್ ಇದು ಎಂಬುದು ಸ್ಪಷ್ಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.