ADVERTISEMENT

Karnataka Budget 2021: ಆಸ್ತಿ ವಂಚನೆ ತಡೆಗೆ ಬ್ಲಾಕ್‌ಚೈನ್‌ ತಂತ್ರಜ್ಞಾನದ ಮೊರೆ

ಜನಸ್ನೇಹಿ, ಕ್ರಿಯಾಶೀಲ ಆಡಳಿತಕ್ಕೆ ಸುಧಾರಣೆಯ ಮಂತ್ರ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2021, 11:51 IST
Last Updated 8 ಮಾರ್ಚ್ 2021, 11:51 IST
ಬಜೆಟ್ ಮಂಡನೆ ಮಾಡುತ್ತಿರುವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ – ಪ್ರಜಾವಾಣಿ ಚಿತ್ರ
ಬಜೆಟ್ ಮಂಡನೆ ಮಾಡುತ್ತಿರುವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ – ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಜನಸ್ನೇಹಿ ಮತ್ತು ಕ್ರಿಯಾಶೀಲ ಆಡಳಿತ ಸರ್ಕಾರದ ಧ್ಯೇಯ’ ಎಂದು ಹೇಳಿಕೊಂಡಿರುವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಆಡಳಿತ ಹಾಗೂ ಸಾರ್ವಜನಿಕ ಸೇವೆ ಸುಧಾರಣೆಗಾಗಿ ಹಲವಾರು ಕಾರ್ಯಕ್ರಮಗಳನ್ನು ಪ್ರಕಟಿಸಿದ್ದಾರೆ.

‘ಸರ್ಕಾರದ ಸೇವೆ ಹಾಗೂ ಸೌಲಭ್ಯಗಳನ್ನು ಜನರ ಮನೆ ಬಾಗಿಲಿಗೇ ತಲುಪಿಸಲು ಆಡಳಿತ ಯಂತ್ರವನ್ನು ಎಲ್ಲ ಹಂತಗಳಲ್ಲಿ ಚುರುಕುಗೊಳಿಸುತ್ತೇವೆ. ತಂತ್ರಜ್ಞಾನ ಬಳಸಿ ನಿಖರ ಹಾಗೂ ಪಾರದರ್ಶಕ ಆಡಳಿತ ಹಾಗೂ ತ್ವರಿತ ಸೇವೆ ಒದಗಿಸಲು ಕ್ರಮಕೈಗೊಳ್ಳುತ್ತೇವೆ’ ಎಂದು ಭರವಸೆ ನೀಡಿದ್ದಾರೆ.

ಆಸ್ತಿ ನೋಂದಣಿಯಲ್ಲಿ ವಂಚನೆ ಹಾಗೂ ದಾಖಲೆ ತಿರುಚುವ ಪ್ರಕರಣಗಳಿಗೆ ಕಡಿವಾಣ ಹಾಕಲು ಅತ್ಯಾಧುನಿಕ ‘ಬ್ಲಾಕ್‌ಚೈನ್‌ ತಂತ್ರಜ್ಞಾನ’ದ ಮೊರೆ ಹೋಗಲು ಸರ್ಕಾರ ಮುಂದಾಗಿದೆ. ಆಸ್ತಿ ನೋಂದಣಿ ಪ್ರಕ್ರಿಯೆ ಸುಧಾರಣೆಗೆ ಕಾನ್ಪುರದ ಭಾರತೀಯ ತಂತ್ರಜ್ಞಾನ ಸಂಸ್ಥೆ ನೆರವಿನಿಂದ ಪ್ರಾಯೋಗಿಕ ಯೋಜನೆ ರೂಪಿಸಲು ₹ 1 ಕೋಟಿ ಕಾಯ್ದಿರಿಸಿದೆ. ಆಸ್ತಿ ಕುರಿತ ಗೊಂದಲಗಳನ್ನು ಪರಿಹರಿಸುವಲ್ಲಿ ಇದು ಮಹತ್ತರ ಹೆಜ್ಜೆ.

ವಿವಿಧ ಇಲಾಖೆಗಳು ಭೂ ಸಂಬಂಧಿ ಚಟುವಟಿಕೆಗಳಿಗೆ ಪ್ರತ್ಯೇಕ ತಂತ್ರಾಂಶ ಹೊಂದಿವೆ. ಒಂದೇ ಜಮೀನಿಗೆ ಒಂದಕ್ಕಿಂತ ಹೆಚ್ಚು ಗುರುತುಗಳ ಸೃಷ್ಟಿಗೆ ಇದು ಕಾರಣವಾಗುತ್ತಿದೆ. ಇದನ್ನು ತಪ್ಪಿಸಲು ‌ಏಕೀಕೃತ ಭೂ ನಿರ್ವಹಣಾ ವ್ಯವಸ್ಥೆ ಜಾರಿಗೊಳಿಸುವುದಾಗಿ ಸರ್ಕಾರ ಹೇಳಿದೆ.

ಕ್ರಮಬದ್ಧ ಅಭಿವೃದ್ಧಿಗೆ ಉತ್ತೇಜನ ನೀಡುವ ಸಲುವಾಗಿ ‘ನಗರ ಮಹಾ ಯೊಜನೆ’ ಅಥವಾ ಯೋಜನಾ ಪ್ರಾಧಿಕಾರದ ಮಂಜೂರಾತಿಯನ್ವಯಕೃಷಿ ಭೂಮಿ ಅನ್ಯ ಉದ್ದೇಶಗಳಿಗೆ ಪರಿವರ್ತಿಸುವ ಪ್ರಕ್ರಿಯೆ ಸರಳೀಕರಿಸಲು ಭೂ ಕಂದಾಯ ಕಾಯ್ದೆಗೆ ತಿದ್ದುಪಡಿ ಮಾಡುವುದಾಗಿ ತಿಳಿಸಿದ್ದಾರೆ. ಇದನ್ನು ಯಾವ ರೀತಿ ಮಾಡಲಾಗುತ್ತದೆ ಎಂದು ವಿವರಿಸಿಲ್ಲ. ಇದರಿಂದ ಕೃಷಿ ಭೂಮಿ ರಿಯಲ್‌ ಎಸ್ಟೇಟ್‌ ಉದ್ದೇಶಕ್ಕೆ ಬಳಕೆಯಾಗುವುದಕ್ಕೆ ಉತ್ತೇಜನ ಸಿಗದಂತೆ ಸರ್ಕಾರ ಎಚ್ಚರವಹಿಸಬೇಕು.

ವಿಪತ್ತುಗಳ ಸಂದರ್ಭದಲ್ಲೂ ಸರ್ಕಾರದ ಡೇಟಾ ಸುರಕ್ಷಿತವಾಗಿಡುವುದು ದೊಡ್ಡ ಸವಾಲು. ವಿಪತ್ತಿನ ಬಳಿಕವೂ ಅಗತ್ಯ ದತ್ತಾಂಶವನ್ನು ಮತ್ತೆ ಲಭ್ಯವಾಗುವಂತೆ ಮಾಡಿಕೊಳ್ಳಲು ಅನುಕೂಲವಾಗುವಂತೆ ‘ರಾಜ್ಯ ದತ್ತಾಂಶ ಕೇಂದ್ರದ ವಿಪತ್ತು ಚೇತರಿಕೆ ಮತ್ತು ವ್ಯವಹಾರ ಮುಂದುವರಿಕೆ ತಾಣ’ ರೂಪಿಸಲು ₹ 35 ಕೋಟಿ ನೀಡಿರುವುದು ಸ್ವಾಗತಾರ್ಹ.

ರಾಜ್ಯದ ಎಲ್ಲ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಸಂಗ್ರಹಿಸಿ, ಪ್ರಕಟಿಸಲು ರಾಷ್ಟ್ರೀಯ ಶೈಕ್ಷಣಿಕ ಡೆಪಾಸಿಟರಿ ಅನುಷ್ಠಾನಕ್ಕೆ ₹ 3 ಕೋಟಿ ಕಾಯ್ದಿರಿಸಲಾಗಿದೆ. ಈ ಬಗ್ಗೆ ಚರ್ಚೆ ನಡೆಯುತ್ತಿತ್ತೇ ವಿನಃ ಅನುಷ್ಠಾನ ಕನಸಾಗಿಯೇ ಇತ್ತು. ಶೈಕ್ಷಣಿಕ ದಾಖಲೆಗಳ ಸತ್ಯಾಸತ್ಯತೆ ಪರಿಶೀಲನೆ ಸುಲಭಗೊಳಿಸಲು ಈ ಕ್ರಮದ ಅನಿವಾರ್ಯ ಇತ್ತು.

ರಾಜ್ಯದ 5.5 ಕೋಟಿ ನಿವಾಸಿಗಳ ಕೌಟುಂಬಿಕ ಗುರುತು ಸರ್ಕಾರದ ಬಳಿ ಲಭ್ಯವಿದೆ. ಸರ್ಕಾರವು ಸ್ವಯಂಪ್ರೇರಣೆಯಿಂದ ನಾಗರಿಕ ಸೇವೆ ಮತ್ತು ಸೌಲಭ್ಯ ಒದಗಿಸಲು ಸಾಮಾಜಿಕ ನೋಂದಣಿ ಪುಸ್ತಕ ಮತ್ತು ಅರ್ಹತಾ ನಿರ್ವಹಣೆ ವ್ಯವಸ್ಥೆ ಜಾರಿಗೆ ತರುವ ಪ್ರಸ್ತಾಪ ಬಜೆಟ್‌ನಲ್ಲಿದೆ. ಈ ವ್ಯವಸ್ಥೆಯನ್ನು ಫಲಾನುಭವಿ ನಿರ್ವಹಣೆ ವ್ಯವಸ್ಥೆ, ಆರ್ಥಿಕ ಸೌಲಭ್ಯ ನೇರ ವರ್ಗಾವಣೆ (ಡಿಬಿಟಿ) ವೇದಿಕೆ ಮತ್ತು ಸಾರ್ವಜನಿಕ ಕುಂದುಕೊರತೆ ಪರಿಹಾರ ವ್ಯವಸ್ಥೆಗಳೊಂದಿಗೆ ಸಂಯೋಜಿಸಲಾಗುತ್ತದೆ. ಎಲ್ಲ ಇಲಾಖೆಗಳು ತಮ್ಮ ವ್ಯವಸ್ಥೆಯಲ್ಲಿ ಕೌಟುಂಬಿಕ ಗುರುತುಗಳನ್ನು ದಾಖಲಿಸಲು ಕ್ರಮವಹಿಸಲಾಗುತ್ತದೆ. ಈ ಯೋಜನೆಗೆ ಸರ್ಕಾರ ₹ 15 ಕೋಟಿ ಅನುದಾನ ಮೀಸಲಿಟ್ಟಿದೆ.

ಪ್ರಸ್ತುತ 90 ಯೋಜನೆಗಳಡಿ ಆರ್ಥಿಕ ಸೌಲಭ್ಯವನ್ನು ಫಲಾನುಭವಿಗಳಿಗೆ ನೇರವಾಗಿ ಪಾವತಿ ಮಾಡಲಾಗುತ್ತಿದೆ. ಇನ್ನುಳಿದ ಯೋಜನೆಗಳನ್ನೂ ಡಿಬಿಟಿ ವೇದಿಕೆಯಡಿ ತರುತ್ತಿರುವುದು ಒಳ್ಳೆಯದೇ. ಫಲಾನುಭವಿ ಅದಲು ಬದಲಾಗುವುದು, ಸಕಾಲದಲ್ಲಿ ಸೌಲಭ್ಯ ತಲುಪದಿರುವುದು ಸೇರಿದಂತೆ ಹಲವಾರು ತಾಂತ್ರಿಕ ಲೋಪಗಳೂ ಈ ವ್ಯವಸ್ಥೆಯಲ್ಲಿವೆ. ಇಂತಹ ಲೋಪಗಳನ್ನು ಬಗೆಹರಿಸಲೂ ಕ್ರಮಕೈಗೊಳ್ಳಬೇಕು.

ಮೂಲಗೇಣಿದಾರರು, ಕುಮ್ಕಿ, ಖಾನೆ, ಬಾನೆ, ಡೀಮ್ಡ್‌ ಅರಣ್ಯ ಸಾಗುವಳಿದಾರರ ಸಮಸ್ಯೆಗಳ ಅಧ್ಯಯನ ನಡೆಸಿ ಪರಿಹಾರೋಪಾಯ ಕಂಡುಕೊಳ್ಳಲು ಸಮಿತಿ ರಚಿಸುವ ಬಗ್ಗೆ ಪ್ರಸ್ತಾಪಿಸಲಾಗಿದೆ. ದಶಕಗಳ ಈ ಗೊಂದಲಗಳಿಗೆ ಈ ಸಮಿತಿ ತಾರ್ಕಿಕ ಅಂತ್ಯ ಕಾಣಿಸುತ್ತದೆಯೋ ಕಾದು ನೋಡಬೇಕು.

ಸರ್ಕಾರಿ ನೌಕರರ ಸೌಲಭ್ಯ ಮತ್ತು ಸೇವೆಗಳನ್ನು ಆನ್‌ಲೈನ್‌ನಲ್ಲಿ ಒದಗಿಸಲು ಎಚ್‌ಆರ್‌ಎಂಎಸ್‌–2 ಯೋಜನೆಯನ್ನು ಹಾಗೂ ಜ್ಯೋತಿ ಸಂಜೀವಿನಿ ಯೋಜನೆಯಡಿ ನಗದುರಹಿತ ಚಿಕಿತ್ಸೆ ಒದಗಿಸುವ ಹಳೆ ಯೋಜನೆಗಳನ್ನು 2021–22ರಲ್ಲಿ ಜಾರಿಗೊಳಿಸುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ. ಕರ್ನಾಟಕ ಸರ್ಕಾರಿ ನೌಕರರ ವಿಮಾ ಇಲಾಖೆಯ ಎಲ್ಲ ಪ್ರಕ್ರಿಯೆಗಳನ್ನು ಕಂಪ್ಯೂಟರೀಕರಿಸುವುದಾಗಿಯೂ ಹೇಳಿದ್ದಾರೆ.

ಈಗಾಗಲೇ ಜಾರಿಯಲ್ಲಿರುವ ‘ಜಿಲ್ಲಾಧಿಕಾರಿ ನಡಿಗೆ ಹಳ್ಳಿಯ ಕಡೆಗೆ’, ‘ಮನೆ ಬಾಗಿಲಿಗೇ ಮಾಸಾಶನ’ ಕಾರ್ಯಕ್ರಮಗಳನ್ನು ಬಜೆಟ್‌ನಲ್ಲಿ ಪ್ರಸ್ತಾಪಿಸಿದ್ದಾರೆ. ಎರಡನೇ ಆಡಳಿತ ಸುಧಾರಣಾ ಆಯೋಗ ಎರಡು ವರ್ಷಗಳಲ್ಲಿ ಆಡಳಿತದಲ್ಲಿ ಗಮನಾರ್ಹ ಬದಲಾವಣೆ ತರಲು ಶ್ರಮಿಸಲಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ಆಡಳಿತ ಸುಧಾರಣೆ ಪ್ರಮುಖ ಕಾರ್ಯಕ್ರಮಗಳು

*ರಾಜ್ಯದ ಡೇಟಾ ಕೇಂದ್ರದ ಸೈಬರ್‌ ಸುರಕ್ಷತೆ ಬಲಪಡಿಸಲು ಸುಸಜ್ಜಿತ ಭದ್ರತಾ ಕಾರ್ಯಾಚರಣೆ ಕೇಂದ್ರದ ಸ್ಥಾಪನೆಗೆ ₹ 2 ಕೋಟಿ

* ಜನರಿಗೆ ನಿಖರ ಹಾಗೂ ತ್ವರಿತ ಭೂದಾಖಲೆ ಒದಗಿಸಲು ಗಣಕೀಕೃತ ಆಕಾರ್‌ಬಂದ್‌ ಮಾಹಿತಿ ಹಾಗೂ ಪಹಣಿ ಮಾಹಿತಿ ಸಂಯೋಜನೆ.

* ಗ್ರಾಮೀಣ ಜನವಸತಿ ಪ್ರದೇಶಗಳಲ್ಲಿ ಹಕ್ಕು ದಾಖಲೆ ವಿತರಿಸುವ ‘ಸ್ವಾಮಿತ್ವ’ ಯೋಜನೆ ತ್ವರಿತ ಜಾರಿಗೆ ₹ 25 ಕೋಟಿ.

* 48 ನಗರ ಮತ್ತು ಪಟ್ಟಣಗಳಲ್ಲಿ ನಗರ ಮಾಪನ ದಾಖಲೆಗಳನ್ನು ಸ್ಕ್ಯಾನ್‌ ಮಾಡಿ ಸಂರಕ್ಷಿಸುವುದು

* ಸರ್ಕಾರದ ಜಾಹೀರಾತು ನಿರ್ವಹಣೆಗೆ ಬ್ರ್ಯಾಂಡ್‌ ಪ್ರೊಮೋಷನ್‌ ಕೌನ್ಸಿಲ್‌ ರಚನೆ

* ಸಿನಿಮಾ ಚಿತ್ರೀಕರಣಕ್ಕೆ ಅನುಮತಿ ನೀಡುವ ಪ್ರಕ್ರಿಯೆಗೆ ಸೇವಾಸಿಂಧು ಪೋರ್ಟಲ್‌ ಮೂಲಕ ಏಕಗವಾಕ್ಷಿ ವ್ಯವಸ್ಥೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.