ADVERTISEMENT

Karnataka Budget 2021: ಪ್ರಬಲ ವರ್ಗಗಳತ್ತ ಲಕ್ಷ್ಯ, ತಳಸಮುದಾಯ ನಿರ್ಲಕ್ಷ್ಯ

ಅಲೆಮಾರಿ ಸಮುದಾಯಕ್ಕೆ ಸಿಗದ ಆರ್ಥಿಕ ಆಸರೆ

ವಿಜಯಕುಮಾರ್‌ ಎಸ್‌.ಕೆ
Published 8 ಮಾರ್ಚ್ 2021, 19:31 IST
Last Updated 8 ಮಾರ್ಚ್ 2021, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ಸಾಮಾಜಿಕ ನ್ಯಾಯದೊಂದಿಗೆ ಸಮ ಸಮಾಜ ನಿರ್ಮಾಣಕ್ಕೆ ಬುನಾದಿ’ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಬಜೆಟ್‌ನಲ್ಲಿ ಉದ್ಘೋಷಿಸಿದ್ದಾರೆ. ಆದರೆ ಅನುದಾನ ಹಂಚಿಕೆ ಮಾಡುವಾಗ ತಳ ಸಮುದಾಯಕ್ಕೆ ಸಂಬಂಧಿಸಿದ 16 ನಿಗಮಗಳಿಗೆ ₹500 ಕೋಟಿ ನಿಗದಿ ಮಾಡಿದರೆ, ಒಕ್ಕಲಿಗ, ವೀರಶೈವ ಲಿಂಗಾಯತ ಸಮುದಾಯಗಳಿಗೆ ತಲಾ ₹500 ಕೋಟಿ ಕೊಡುವುದಾಗಿ ಘೋಷಿಸಿದ್ದಾರೆ. ಅಲ್ಪಸಂಖ್ಯಾತರಿಗೆ ₹1,500 ಕೋಟಿ ನಿಗದಿ ಮಾಡಿ ಓಲೈಸುವ ಪ್ರಯತ್ನವನ್ನೂ ಮಾಡಿದ್ದಾರೆ. ಆದರೆ, ಧ್ವನಿ ಇಲ್ಲದ ಅಲೆಮಾರಿ ಸಮುದಾಯಗಳನ್ನು ಸರ್ಕಾರ ಎಂದಿನಂತೆ ಮೂಲೆಗುಂಪು ಮಾಡಿದೆ.

ರಾಜ್ಯದ ಒಟ್ಟು ಬಜೆಟ್ ಗಾತ್ರ ಹೆಚ್ಚಾಗಿದ್ದರೂ ‌ಪರಿಶಿಷ್ಟ ಜಾತಿ ಮತ್ತು ಬುಡಕಟ್ಟು ಉಪಯೋಜನೆಗಳಿಗೆ ಕಳೆದ ವರ್ಷಕ್ಕಿಂತ ₹925 ಕೋಟಿ ಕಡಿಮೆ ಅನುದಾನ ನಿಗದಿ ಮಾಡಲಾಗಿದೆ. ಕಳೆದ ಸಾಲಿನಲ್ಲಿ ₹26,930 ಕೋಟಿ ನಿಗದಿ ಮಾಡಲಾಗಿತ್ತು. ಈ ವರ್ಷ ₹26,005 ಕೋಟಿ ನಿಗದಿಪಡಿಸಲಾಗಿದೆ. ಬದ್ಧ ವೆಚ್ಚಗಳಾದ ವೇತನ, ಗೌರವಧನ, ಅಸಲು ಮತ್ತು ಬಡ್ಡಿ ಪಾವತಿ, ಪಿಂಚಣಿ ಮೊತ್ತ ಕಳೆದ ಸಾಲಿಗಿಂತ ₹13,400 ಕೋಟಿ ಹೆಚ್ಚಳವಾಗಿರುವ ಕಾರಣ ಎಸ್‌ಟಿಪಿ ಮತ್ತು ಟಿಎಸ್‌ಪಿ ಹಂಚಿಕೆ ಕಡಿಮೆಯಾಗಿದೆ ಎಂಬ ಸಮರ್ಥನೆ ನೀಡಲಾಗಿದೆ.

ಜಿಲ್ಲಾ ಕೇಂದ್ರಗಳಲ್ಲಿ ವಿದ್ಯಾರ್ಥಿ ನಿಲಯಗಳಿಗೆ ಬೇಡಿಕೆ ಇದ್ದು, ಮೆಟ್ರಿಕ್ ನಂತರದ 50 ವಿದ್ಯಾರ್ಥಿ ನಿಲಯಗಳನ್ನು ಒಟ್ಟು ₹50 ಕೋಟಿ ವೆಚ್ಚದಲ್ಲಿ ಪ್ರಾರಂಭಿಸಲು ನಿರ್ಧರಿಸಲಾಗಿದೆ. ಇದರಿಂದ ಸುಮಾರು 5 ಸಾವಿರ ವಿದ್ಯಾರ್ಥಿಗಳಿಗೆ ಅನುಕೂಲ ಆಗಲಿದೆ. ನಾಲ್ಕು ವಿಭಾಗಗಳಲ್ಲಿ ತಲಾ ಒಂದು ಮೊರಾರ್ಜಿ ದೇಸಾಯಿ ಶಾಲೆಯನ್ನು ಅದ್ವಿತೀಯ ಕ್ರೀಡಾ ಶಾಲೆ ಎಂದು ಉನ್ನತೀಕರಿಸಿ ಎಸ್‌ಸಿಎಸ್‌ಟಿ ವಿದ್ಯಾರ್ಥಿಗಳಿಗೆ ಕ್ರೀಡಾ ತರಬೇತಿ ನೀಡಲಾಗುವುದು. ಈ ಉದ್ದೇಶಕ್ಕೆ ₹5 ಕೋಟಿ ಮೀಸಲಿಡಲಾಗಿದೆ.

ADVERTISEMENT

ಎಸ್‌ಸಿ/ಎಸ್‌ಟಿ ಉದ್ಯಮಿಗಳಿಗೆ ಹಾಲಿ ಜಾರಿಯಲ್ಲಿರುವ ಶೇ 4ರಷ್ಟು ಬಡ್ಡಿ ಸಹಾಯಧನ ಯೋಜನೆಯನ್ನು ವಾಣಿಜ್ಯ ಮತ್ತು ವ್ಯಾಪಾರ ಚಟುವಟಿಕೆಗಳಿಗೂ ವಿಸ್ತರಿಸಲಾಗಿದೆ. ಗರಿಷ್ಠ ₹1 ಕೋಟಿ ತನಕ ಸಾಲ ಪಡೆಯಲು ಅವಕಾಶ ಕಲ್ಪಿಸಲಾಗುವುದು ಎಂಬ ಭರವಸೆ ದೊರೆತಿದೆ.

ಪರಿಶಿಷ್ಟ ಪಂಗಡದ ಆಶ್ರಮ ಶಾಲೆಗಳನ್ನು ‘ವಾಲ್ಮೀಕಿ ಆಶ್ರಮ ಶಾಲೆ’ ಎಂದು ಮರು ನಾಮಕರಣ, ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ₹500 ಕೋಟಿ ನಿಗದಿ ಮಾಡಿ, ₹100 ಕೋಟಿ ಬಿಡುಗಡೆ ಮಾಡಿದೆ. ಒಕ್ಕಲಿಗ ಸಮುದಾಯದ ಅಭಿವೃದ್ಧಿಗೂ ನಿಗಮ ಸ್ಥಾಪಿಸಿ ₹500 ಕೋಟಿ ನಿಗದಿ ಮಾಡುವ ಭರವಸೆ ನೀಡಲಾಗಿದೆ.

ಅಲ್ಪಸಂಖ್ಯಾತರ ಏಳಿಗೆಗಾಗಿ ₹1,500 ಕೋಟಿ, ಚರ್ಚ್‌ಗಳ ನವೀಕರಣ ಮತ್ತು ದುರಸ್ತಿ, ಕ್ರಿಶ್ಚಿಯನ್‌ ಸಮುದಾಯಭವನ, ಅನಾಥಾಶ್ರಮ ಮತ್ತು ವೃದ್ಧಾಶ್ರಮಗಳಿಗೆ ನೆರವು ಕಾರ್ಯಕ್ರಗಳಿಗೆ ₹200 ಕೋಟಿ ನೀಡಲಾಗಿದೆ. ಅಂಬೇಡ್ಕರ್ ಅಭಿವೃದ್ಧಿ ನಿಗಮ, ವಾಲ್ಮೀಕಿ ಅಭಿವೃದ್ಧಿ ನಿಗಮ, ಭೋವಿ ಅಭಿವೃದ್ಧಿ ನಿಗಮ, ತಾಂಡಾ ಅಭಿವೃದ್ಧಿ ನಿಗಮ, ಬಾಬು ಜಗಜೀವನ್ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ, ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ, ಉಪ್ಪಾರ ಅಭಿವೃದ್ಧಿ ನಿಗಮ, ಆರ್ಯವೈಶ್ಯ ಸಮಯದಾಯ ಅಭಿವೃದ್ಧಿ ನಿಗಮ, ವಿಶ್ವಕರ್ಮ ಅಭಿವೃದ್ಧಿ ನಿಗಮ, ಮರಾಠ ಅಭಿವೃದ್ಧಿ ನಿಗಮ, ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ, ಕಾಡುಗೊಲ್ಲರ ಅಭಿವೃದ್ಧಿ ನಿಗಮ, ಸವಿತಾ ಸಮಾಜ ಅಭಿವೃದ್ಧಿ ನಿಗಮ ಸೇರಿ 16 ನಿಗಮಗಳಿಗೆ ಒಟ್ಟಾರೆ ₹500 ಕೋಟಿ ನಿಗದಿ ಮಾಡಲಾಗಿದೆ. ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ ಪ್ರತ್ಯೇಕವಾಗಿ ₹50 ಕೋಟಿ ನೀಡಲಾಗಿದೆ.

ಎಸ್‌ಸಿಎಸ್‌ಟಿ ಅಲೆಮಾರಿ ಸಮುದಾಯಗಳ ಏಳಿಗೆಗೆ ಪ್ರತ್ಯೇಕ ನಿಗಮ ಸ್ಥಾಪಿಸಿ ಕನಿಷ್ಠ ₹250 ಕೋಟಿ ನಿಗದಿ ಮಾಡಬೇಕು ಎಂಬ ಬೇಡಿಕೆಗೆ ಈ ಬಾರಿಯೂ ಮನ್ನಣೆ ದೊರೆತಿಲ್ಲ. ಅಲೆಮಾರಿ ಸಮುದಾಯಗಳ ವಿಷಯವೇ ಬಜೆಟ್‌ನಲ್ಲಿ ಕಾಣೆಯಾಗಿದೆ.

ಯಾರಿಗೆ ಏನೇನು?

* ಪ್ರತಿ ವಿಭಾಗದಲ್ಲಿ ₹ 5 ಕೋಟಿ ವೆಚ್ಚದಲ್ಲಿ ‘ಅದ್ವಿತೀಯ ಕ್ರೀಡಾ ಶಾಲೆ’ಯಾಗಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮೇಲ್ದರ್ಜೆಗೆ

* ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ 150 ವಿದ್ಯಾರ್ಥಿನಿಲಯಗಳ ಕಟ್ಟಡ ನಿರ್ಮಾಣ

* ಪರಿಶಿಷ್ಟ ಜಾತಿ/ಪಂಗಡದ ಉದ್ಯಮಿಗಳಿಗೆ ನೀಡುತ್ತಿರುವ ಶೇ 4ರಷ್ಟು ಬಡ್ಡಿದರದ ಸಹಾಯಧನ ಸೌಲಭ್ಯದಡಿ ಮಳಿಗೆ/ಡೀಲರ್‌ಶಿಪ್‌/ಫ್ರಾಂಚೈಸಿ ಹಾಗೂ ಹೋಟೆಲ್‌ ಆರಂಭಿಸಲು ವಿಸ್ತರಣೆ

* ಪರಿಶಿಷ್ಟ ಜಾತಿ/ಪಂಗಡದ ಉದ್ಯಮಿಗಳು ಶೇ 4ರಷ್ಟು ಬಡ್ಡಿದರದ ಸಹಾಯಧನ ಸೌಲಭ್ಯದಡಿ ಗರಿಷ್ಠ ₹ 1 ಕೋಟಿ ವರೆಗೆ ಸಾಲ ಪಡೆಯಲು ಅವಕಾಶ

* ಕಾಲ ಮಿತಿಯೊಳಗೆ ಗಂಗಾಕಲ್ಯಾಣ ಯೋಜನೆ ಅನುಷ್ಠಾನಕ್ಕಾಗಿ ‘ಅನುಷ್ಠಾನದ ವಿವೇಚನೆ ಫಲಾನುಭವಿ ಕೈಗೆ’ ಎಂಬ ನೂತನ ವಿಧಾನ ಜಾರಿಗೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.