ADVERTISEMENT

Karnataka Budget 2021: ಪರಿಶಿಷ್ಟರಿಗೆ ಅನುದಾನ ಕಡಿತ ನ್ಯಾಯವೇ?

ವಿಕಾಸ ಆರ್ ಮೌರ್ಯ, ಬೆಂಗಳೂರು
Published 8 ಮಾರ್ಚ್ 2021, 19:31 IST
Last Updated 8 ಮಾರ್ಚ್ 2021, 19:31 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕೋವಿಡ್ ನಂತರದ ಆರ್ಥಿಕ ಸಂಕಷ್ಟದಿಂದಾಗಿ ಇಡೀ ದೇಶವೇ ತತ್ತರಿಸಿದೆ. ದೇಶದಲ್ಲಿ ಅತಿ ಹೆಚ್ಚು ದಲಿತರು ತತ್ತರಿಸಿದ್ದಾರೆ. ಇದು ನಮ್ಮ ರಾಜ್ಯದ ವಿಚಾರದಲ್ಲಿಯೂ ಅಷ್ಟೇ ಸತ್ಯ.

ನಮ್ಮ ರಾಜ್ಯದಲ್ಲಿನ ಅಸಂಘಟಿತ ಕಾರ್ಮಿಕರಲ್ಲಿ ದಲಿತರದ್ದೇ ಹೆಚ್ಚು ಪಾಲು. ನಂತರದ್ದು ಹಿಂದುಳಿದ ಜಾತಿಗಳದ್ದು. ಬಡತನ‌ ರೇಖೆಗಿಂತ ಕೆಳಗಿರುವವರಲ್ಲಿಯೂ ಅಷ್ಟೆ. ಲಾಕ್ ಡೌನ್ ನಂತರ ಅತಿ ಹೆಚ್ಚು ಬಾಧಿತವಾಗಿರುವುದು ಈ ಸಮುದಾಯಗಳೇ. ಇಂತಹ ಪರಿಸ್ಥಿತಿಯಲ್ಲಿ ಅವರಿಗೆ ಹೆಚ್ಚು ಅನುದಾನದ ಅವಶ್ಯಕತೆ ಇತ್ತು. ಆದರೆ, ಈ ಸಾಲಿನ ಬಜೆಟ್‌ನಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗದವರಿಗೆ ಸರ್ಕಾರ ಬಹಳ ನಿರಾಸೆಯನ್ನುಂಟು ಮಾಡಿದೆ.

ಪರಿಶಿಷ್ಟರ ಉಪಯೋಜನೆಗೆ ₹50 ಸಾವಿರ ಕೋಟಿ ಮೀಸಲಿಡಬೇಕೆಂದು ದಲಿತ ಸಂಘಟನೆಗಳು ಸರ್ಕಾರವನ್ನು ಒತ್ತಾಯಿಸಿದ್ದವು. ಆದರೆ, ಇದಕ್ಕೆ ತಣ್ಣೀರೆರಚಿರುವ ಮುಖ್ಯಮಂತ್ರಿ ಅವರು ಹೆಚ್ಚು ಅನುದಾನ ಕೊಡುವುದಿರಲಿ, ಕಾಯ್ದೆಬದ್ಧವಾಗಿ ಕೊಡಬೇಕಾದದ್ದನ್ನೇ ಕೊಟ್ಟಿಲ್ಲ. ತಮ್ಮ‌ ಬಜೆಟ್ ಭಾಷಣದಲ್ಲಿಯೇ ಪರಿಶಿಷ್ಟರಿಗೆ ನೀಡಬೇಕಾದ ಉಪಯೋಜನೆ (SCSP/ TSP) ಮೀಸಲು ಅನುದಾನದಲ್ಲಿ ₹4 ಸಾವಿರ ಕೋಟಿ ಕಡಿಮೆ ನೀಡಿರುವುದಾಗಿ ಘೋಷಿಸಿದ್ದಾರೆ. ಇದಕ್ಕೆ ಅವರು ನೀಡಿರುವ ಕಾರಣ ಆರ್ಥಿಕ ಸಂಕಷ್ಟ. ಇದೇ ಕಾರಣದಿಂದಾಗಿ ಎಸ್ಸಿ,ಎಸ್ಟಿ, ಒಬಿಸಿ ಬೃಹತ್ ಸಮೂಹದ ವಿವಿಧ ಅಭಿವೃದ್ಧಿ ನಿಗಮಗಳಿಗೆ ಒಟ್ಟಾರೆಯಾಗಿ ಕೇವಲ ₹ 500 ಕೋಟಿ ನೀಡಲಾಗಿದೆ.

ADVERTISEMENT

ಆದರೆ, ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ₹ 500 ಕೋಟಿ ಮತ್ತು ಹೊಸದಾಗಿ ಒಕ್ಕಲಿಗ ಅಭಿವೃದ್ಧಿ ನಿಗಮಕ್ಕೆ ₹ 500 ಕೋಟಿ ನೀಡಲು ಯಾವುದೇ ಸಂಕಷ್ಟ ಉಂಟಾಗಿಲ್ಲ.

ಬಸವ ಕಲ್ಯಾಣದ ಅನುಭವ ಮಂಟಪಕ್ಕೆ ₹ 200 ಕೋಟಿ ನೀಡಿದ್ದರೆ, ಅಂಬೇಡ್ಕರ್‌ ರವರು ಭೇಟಿ ನೀಡಿದ್ದ ಹಾಸನ ನಗರದ ಎಕೆ ಬೋರ್ಡಿಂಗ್‌ ಹೋಂ ಸ್ಥಳದಲ್ಲಿನ‌ ಸ್ಮಾರಕಕ್ಕೆ ಕೇವಲ ₹1 ಕೋಟಿ ನೀಡಲಾಗಿದೆ. ಇದ್ಯಾವ ನ್ಯಾಯ? ಮೇಲ್ಜಾತಿ ಸಮೂಹಗಳಿಗಿಲ್ಲದ ಆರ್ಥಿಕ ಸಂಕಷ್ಟ ದಲಿತರು, ಹಿಂದುಳಿದ ಜಾತಿಗಳಿಗೆ ಮಾತ್ರ ಹೇಗೆ ಉಂಟಾಗುತ್ತದೆ?

ಯಾವುದೇ ಸರ್ಕಾರವಿರಲಿ ಪರಿಶಿಷ್ಟರಿಗೆ ಮೀಸಲಿಡುವ ಅನುದಾನವನ್ನು ಪ್ರತಿ ವರ್ಷವೂ ಸಮರ್ಪಕವಾಗಿ ಬಳಸಿಕೊಳ್ಳುವುದಿಲ್ಲ. ಒಂದೋ ಅನುದಾನವನ್ನೇ ನೀಡುವುದಿಲ್ಲ. ನೀಡಿದರೂ ಅದನ್ನು ಬಳಸುವುದಿಲ್ಲ. ಬಳಕೆ‌ ಮಾಡಿದರೂ ಪರಿಶಿಷ್ಟರ ಬದುಕಿಗೆ ಸಂಬಂಧವೇ ಇಲ್ಲದ ಕ್ಷೇತ್ರದಲ್ಲಿ ಹೆಚ್ಚು ಬಳಸಲಾಗುತ್ತದೆ. ಕಳೆದ ವರ್ಷ 11 ಜಿಲ್ಲೆಗಳ 73 ಶಾಸಕರು ಮತ್ತು 16 ಜಿಲ್ಲೆಗಳ 36 ಎಂಎಲ್‌ಸಿಗಳು ಪರಿಶಿಷ್ಟರ ಅನುದಾನ ಬಳಕೆಗೆ ಕ್ರಿಯಾಯೋಜನೆಯನ್ನೇ ಸಿದ್ಧಪಡಿಸಿರಲಿಲ್ಲ. ಇದರ ವಿರುದ್ಧ ಸದನದಲ್ಲಿ ಆಕ್ರೋಶವೂ ವ್ಯಕ್ತವಾಗಿತ್ತು.

ಇಂತಹ ಪರಿಸ್ಥಿತಿಯಲ್ಲಿ ಹೆಚ್ಚು ಅನುದಾನವನ್ನು ನೀಡಿ ಪರಿಶಿಷ್ಟರ ಅಭಿವೃದ್ಧಿಗೆ ಶ್ರಮಿಸುವ ಬದಲು ಪರಿಶಿಷ್ಟರ ಅನುದಾನವನ್ನೇ ಕಡಿತಗೊಳಿಸಿರುವುದು ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಗಿದೆ. ಮುಖ್ಯಮಂತ್ರಿ ಅವರು ಇವ ನಮ್ಮವ.. ಇವ ನಮ್ಮವ.. ಎನ್ನದೇ ಇವನಾರವ.. ಇವನಾರವ.. ಎಂದು ಬಗೆದಿದ್ದಾರೆ.

(ಲೇಖಕ: ದಲಿತ ಸಂಘರ್ಷ ಸಮಿತಿ ಕಾರ್ಯಕರ್ತ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.