ADVERTISEMENT

Karnataka Budget 2021: ಬಜೆಟ್‌ ಕುರಿತು ಜನನಾಯಕರ ಪ್ರತಿಕ್ರಿಯೆ ಹೀಗಿತ್ತು...

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2021, 21:22 IST
Last Updated 8 ಮಾರ್ಚ್ 2021, 21:22 IST
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌   

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಸೋಮವಾರ ಮಂಡಿಸಿದ ರಾಜ್ಯ ಬಜೆಟ್‌ ಬಗ್ಗೆ ಜನನಾಯಕರ ಅಭಿಪ್ರಾಯಗಳು ಇಲ್ಲಿವೆ.

ಇದು ಕಣ್ಣಾಮುಚ್ಚಾಲೆಯ ಬೋಗಸ್‌ ಬಜೆಟ್‌
ಇದೊಂದು ಕಣ್ಣಾಮುಚ್ಚಾಲೆಯ ಬೋಗಸ್ ಬಜೆಟ್. ಜನರನ್ನು ಹೇಗೆಲ್ಲಾ ದಾರಿ ತಪ್ಪಿಸಬಹುದು ಎಂಬುದರ ಬಗ್ಗೆ ಪಿಎಚ್.ಡಿ ಮಾಡಿ ಈ ಬಜೆಟ್ ರೂಪಿಸಿದಂತಿದೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಸರಿಯಿಲ್ಲ, ಕೇಂದ್ರದ ನೆರವೂ ಸಿಕ್ಕಿಲ್ಲ. ಜಿಎಸ್‌ಟಿ ಸಾಲದ ಮೊರೆ ಅನಿವಾರ್ಯವಾಗಿದೆ ಎಂಬುದನ್ನು ಯಡಿಯೂರಪ್ಪ ಅವರು ಭಾಷಣದ ಆರಂಭದಲ್ಲೇ ವಿವರಿಸಿದ್ದಾರೆ. ಕಳೆದ ವರ್ಷ ಮಾಡಿಕೊಂಡಿರುವ ಸಾಲವನ್ನೇ ತೀರಿಸಲು ಆಗಿಲ್ಲ. ಈಗ ಹೊಸದಾಗಿ ₹ 70 ಸಾವಿರ ಕೋಟಿ ಸಾಲದ ಹೊರೆ ರಾಜ್ಯದ ಜನರ ತಲೆ ಮೇಲೆ ಬೀಳಲಿದೆ. ಸಾಲ ಮಾಡಿ ತುಪ್ಪ ತಿನ್ನು ಎಂದು ಸಾಲಗಾರರನ್ನು ಅಣಕಿಸುವ ಮಾತಿದೆ. ಆದರೆ, ಈ ಸರ್ಕಾರ ಸಾಲ ಮಾಡಿ ಜನರಿಗೆ ಮಣ್ಣು ತಿನ್ನಿಸಲು ಹೊರಟಿದೆ. ರಾಜ್ಯಗಳ ಜಿಎಸ್‌ಟಿ ಪಾಲು ಹಂಚುವಾಗ ಗುಜರಾತ್, ಅಸ್ಸಾಂ ಮತ್ತಿತರ ರಾಜ್ಯಗಳ ಕಣ್ಣಿಗೆ ಬೆಣ್ಣೆ ಹಚ್ಚಿದ ಕೇಂದ್ರ ಸರಕಾರ ರಾಜ್ಯದ ಕಣ್ಣಿಗೆ ಸುಣ್ಣ ಸುರಿದಿದೆ. ಅದನ್ನು ರಾಜ್ಯ ಸರಕಾರವಾಗಲಿ, ರಾಜ್ಯದಿಂದ ಕೇಂದ್ರ ಪ್ರತಿನಿಧಿಸುತ್ತಿರುವ ಎರಡು ಡಜನ್ ಸಂಸದರು ಪ್ರಶ್ನಿಸುವ ಗೋಜಿಗೆ ಹೋಗಲಿಲ್ಲ. ಅದರ ಫಲವೇ ಈಗ ರಾಜ್ಯದ ಜನರ ತಲೆ ಮೇಲೆ ಬೀಳುತ್ತಿರುವ ಸಾಲದ ಹೊರೆ.
–ಡಿ.ಕೆ.ಶಿವಕುಮಾರ್‌, ಕೆಪಿಸಿಸಿ ಅಧ್ಯಕ್ಷ

*
ಅಭಿವೃದ್ಧಿಗೆ ಅನುಕೂಲ
ಸಾಮಾಜಿಕ ನ್ಯಾಯವನ್ನು ಈ ಬಜೆಟ್‌ ಎತ್ತಿ ಹಿಡಿದಿದ್ದು, 30 ಜಿಲ್ಲೆಗಳ ಸರ್ವತೋಮುಖ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಳ್ಳಲಾಗಿದೆ. ಈಗಾಗಲೇ ಜಾಗತಿಕ ಮಟ್ಟದಲ್ಲಿ ಅತ್ಯುತ್ತಮ ನಗರವಾಗಿ ಹೊರಹೊಮ್ಮಿರುವ ಬೆಂಗಳೂರು ನಗರವನ್ನು ಇನ್ನು ಬಹು ಆಯಾಮಗಳಲ್ಲಿ ಅಭಿವೃದ್ಧಿಪಡಿಸಲು ಸಂಕಲ್ಪಿಸಲಾಗಿದೆ. ಅದಕ್ಕಾಗಿ ಒಟ್ಟು ₹7,700 ಕೋಟಿ ಅನುದಾನ ಘೋಷಣೆ ಮಾಡಿರುವುದು ಸಂಪನ್ಮೂಲಗಳ ಕೊರತೆಯ ನಡುವೆಯೂ ಅಭಿವೃದ್ಧಿಯ ಇಚ್ಛಾಶಕ್ತಿಗೆ ಹಿಡಿದ ಕನ್ನಡಿ.
–ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಉಪಮುಖ್ಯಮಂತ್ರಿ

ADVERTISEMENT

*
ಸಂಕಷ್ಟದಲ್ಲೂ ಸರ್ವರಿಗೂ ನ್ಯಾಯ ಕಲ್ಪಿಸಿದ ಬಜೆಟ್
‌ಬಜೆಟ್‌ನಲ್ಲಿ ರಾಜಧಾನಿ ಬೆಂಗಳೂರು ನಗರದ ಸರ್ವಾಂಗೀಣ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿರುವುದು ಸ್ವಾಗತಾರ್ಹ ಮತ್ತು ಸರ್ವರಿಗೂ ಅನುಕೂಲವಾಗಲಿದೆ. ನಗರದಲ್ಲಿರುವ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿರುವ ಲಕ್ಷಾಂತರ ಕಾರ್ಮಿಕರಿಗೆ ಓಡಾಟಕ್ಕೆ ಅನುಕೂಲ ಮಾಡಿಕೊಡುವ ವಿಶೇಷ ಪಾಸ್ ವ್ಯವಸ್ಥೆಯಾದ ವನಿತಾ ಸಂಗಾತಿ ಯೋಜನೆ ಜಾರಿಗೆ ತರಲಾಗುತ್ತಿದೆ. ಸೇಫ್ ಸಿಟಿ ಯೋಜನೆಯಡಿ ನಗರದಲ್ಲಿ ಇನ್ನೂ 7,500 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವ ಮೂಲಕ ಮುಖ್ಯಮಂತ್ರಿಗಳು ನಗರದ ನಾಗರಿಕರ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ.
–ಎಸ್‌.ಆರ್‌.ವಿಶ್ವನಾಥ್‌, ಬಿಡಿಎ ಅಧ್ಯಕ್ಷ

*
ಹೊರವಲಯದ ನಿರ್ಲಕ್ಷ್ಯ
ಬಿಬಿಎಂಪಿ ವ್ಯಾಪ್ತಿಗೆ ಸೇರಿದ 110 ಹಳ್ಳಿಗಳಲ್ಲಿ ಕುಡಿಯುವ ನೀರು ಹಾಗೂ ಒಳಚರಂಡಿ ವ್ಯವಸ್ಥೆ ಕಲ್ಪಿಸಲು ರಸ್ತೆಗಳನ್ನು ಅಗೆದು ಹಾಕಲಾಗಿದೆ. ಈ ರಸ್ತೆಗಳು ವಾಹನ ಸಂಚಾರಕ್ಕೆ ಯೋಗ್ಯವಾಗಿಲ್ಲ. ಹೊರವಲಯದ ಪ್ರದೇಶಗಳ ಅಭಿವೃದ್ಧಿಗೆ ₹5 ಸಾವಿರ ಕೋಟಿ ಅನುದಾನ ನೀಡುವಂತೆ ಮುಖ್ಯಮಂತ್ರಿ ಅವರಿಗೆ ಪತ್ರ ಬರೆದಿದ್ದೆ. ಆದರೆ, ಈ ಬಗ್ಗೆ ಗಮನ ಹರಿಸಿಲ್ಲ. ಬಿಬಿಎಂಪಿ ಬಜೆಟ್‌ನಲ್ಲಾದರೂ ಅಗತ್ಯ ಅನುದಾನ ನೀಡಬೇಕು. ರಾಜಕಾಲುವೆಗಳ ಅಭಿವೃದ್ಧಿಗೂ ಅನುದಾನ ನೀಡಿಲ್ಲ. ಪೀಣ್ಯ ಕೈಗಾರಿಕಾ ಪ್ರದೇಶದ ಅಭಿವೃದ್ಧಿಗೆ ₹100 ಕೋಟಿ ನೀಡಿರುವುದು ಸ್ವಾಗತಾರ್ಹ.
–ಆರ್.ಮಂಜುನಾಥ್‌, ದಾಸರಹಳ್ಳಿ ಶಾಸಕ

*
ಹೈನೋದ್ಯಮಕ್ಕೆ ಉತ್ತೇಜನ
ಹೈನುಗಾರಿಕೆಯನ್ನು ಉತ್ತೇಜಿಸಲು ಹೊರ ರಾಜ್ಯಗಳ ವಿವಿಧ ದೇಸಿ ತಳಿಗಳನ್ನು ರಾಜ್ಯದ ರೈತರಿಗೆ ಪರಿಚಯಿಸಲು ಸಮಗ್ರ ಗೋಸಂಕುಲ ಅಭಿವೃದ್ಧಿ ಪರಿಚಯಿಸಿದ್ದು ರಾಜ್ಯದ ಹೈನೋದ್ಯಮಕ್ಕೆ ಹೆಚ್ಚು ಉತ್ತೇಜನ ದೊರಕಲಿದೆ.ಕೋವಿಡ್ ಸಂಕಷ್ಟದಲ್ಲೂ ಅತ್ಯಂತ ಸಮತೋಲಿತ ಹಾಗೂ ರೈತಪರ ಮತ್ತು ಪಶುಪಾಲಕರಿಗೆ ಉತ್ತೇಜನ ನೀಡುವ ಬಜೆಟ್ ಅನ್ನು ಮುಖ್ಯಮಂತ್ರಿ ಮಂಡನೆ ಮಾಡಿದ್ದಾರೆ.
–ಪ್ರಭು ಚವ್ಹಾಣ್‌, ಪಶುಸಂಗೋಪನಾ ಸಚಿವ

*
ತೆರಿಗೆ ಹೆಚ್ಚಳ ಇಲ್ಲದ ಬಜೆಟ್‌
ನೈಸರ್ಗಿಕ ಪ್ರಕೋಪ, ಕೋವಿಡ್‌ ಸಂಕಷ್ಟದ ಮಧ್ಯೆಯೂ ತೆರಿಗೆ ಹೆಚ್ಚಳ ಇಲ್ಲದ ಅತ್ಯುತ್ತಮ ಬಜೆಟ್‌. ಮಹಿಳಾ ದಿನಾಚರಣೆಯ ದಿನವೇ ಬಜೆಟ್‌ ಮಂಡಿಸಿರುವ ಮುಖ್ಯಮಂತ್ರಿಯವರು ಮಹಿಳೆಯರಿಗಾಗಿ ವಿಶೇಷ ಅನುದಾನ ನೀಡಿದ್ದಾರೆ. ಕೃಷಿ, ಆರೋಗ್ಯ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಪೂರಕ ಬಜೆಟ್‌.
–ನಳಿನ್‌ ಕುಮಾರ್ ಕಟೀಲು, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ

*
ಸಾರಿಗೆ ಪುನಶ್ಚೇತನಕ್ಕೆ ಆದ್ಯತೆ
ಬಜೆಟ್ ರಾಜ್ಯದ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿದೆ. ಎಲ್ಲ ಕ್ಷೇತ್ರಗಳ ಅಭಿವೃದ್ಧಿಯಲ್ಲೂ ಸಮತೋಲನ ಸಾಧಿಸುವಲ್ಲಿ ಈ ಬಜೆಟ್ ಯಶಸ್ವಿಯಾಗಿದೆ. ಸಾರಿಗೆ ವಲಯಕ್ಕೂ ಹಲವು ಹೊಸ ಕಾರ್ಯಕ್ರಮಗಳೊಂದಿಗೆ ಪುನಶ್ಚೇತನ ನೀಡುವ ನಮ್ಮ ಪ್ರಯತ್ನಕ್ಕೆ ಮುಖ್ಯಮಂತ್ರಿಯವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
–ಲಕ್ಷ್ಮಣ ಸವದಿ, ಉಪಮುಖ್ಯಮಂತ್ರಿ

*
ವಿಕಾಸ ‍ಪತ್ರ
ಕೊರೊನಾ ಸಂಕಷ್ಟ ಕಾಲದ ಆರ್ಥಿಕ ಹಿಂಜರಿತದ ಮಧ್ಯೆಯೂ ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಆಶಯದೊಂದಿಗೆ ಸಮತೋಲಿತ ಬಜೆಟ್ ಅನ್ನು ಯಡಿಯೂರಪ್ಪ ಮಂಡಿಸಿದ್ದಾರೆ. ಇದನ್ನು ವಿಕಾಸ ಪತ್ರ ಎಂದು ಬಣ್ಣಿಸುವುದೇ ಸೂಕ್ತ.
–ಡಿ.ವಿ.ಸದಾನಂದ ಗೌಡ, ಕೇಂದ್ರ ರಸಗೊಬ್ಬರ ಸಚಿವ

*
ಸರ್ವರ ಲೇಸು ಬಯಸುವ ಬಜೆಟ್‌
ಆರ್ಥಿಕ ಸಂಕಷ್ಟದ ಸಮಯದಲ್ಲೂ ಸರ್ವರ ಲೇಸು ಬಯಸುವ ಬಜೆಟ್‌ ಅನ್ನು ಯಡಿಯೂರಪ್ಪ ಮಂಡಿಸಿದ್ದಾರೆ. ಕೊರೊನಾದಿಂದಾಗಿ ನಿರೀಕ್ಷಿತ ಪ್ರಮಾಣದಲ್ಲಿ ಸಂಪನ್ಮೂಲ ಸಂಗ್ರಹ ಆಗಿಲ್ಲ. ಹೀಗಾಗಿ, ತಮ್ಮ ಇತಿಮಿತಿಯಲ್ಲಿ ಎಲ್ಲ ಕ್ಷೇತ್ರ, ಜಾತಿ ಹಾಗೂ ಜನಾಂಗಗಳ ಕಲ್ಯಾಣಕ್ಕೆ ಪೂರಕವಾದ ಯೋಜನೆ ಪ್ರಕಟಿಸಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ ಇಲಾಖೆಗಳಿಗೆ ಹೆಚ್ಚಿನ ಅನುದಾನ ನಿರೀಕ್ಷೆ ಮಾಡಲಾಗಿತ್ತು. ಆದರೆ, ಸೀಮಿತ ಸಂಪನ್ಮೂಲದಲ್ಲಿ ಅನುದಾನ ಹಂಚಿಕೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಪನ್ಮೂಲ ಒದಗಿಸುವ ವಿಶ್ವಾಸ ಇದೆ.
–ಡಾ.ಕೆ.ಸುಧಾಕರ್‌, ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ

*
ಇದ್ದೂ ಇಲ್ಲದಂತಿರುವ ಬಜೆಟ್
ಈ ಬಾರಿಯ ಬಜೆಟ್‌ ಮೇಲ್ನೋಟಕ್ಕೆ ಆಕರ್ಷಕ. ಪ್ರಬಲ ವರ್ಗಗಳಿಗೆ ಮಣೆ ಹಾಕಿರುವುದು ಸ್ಪಷ್ಟವಾಗಿ ಕಂಡುಬರುತ್ತದೆ. ಕೆಲವು ಕ್ಷೇತ್ರಗಳಿಗೆ ಒತ್ತು ನೀಡಿರುವುದು ಆಶಾದಾಯಕ. ನೆರೆ ಮತ್ತು ಬರ ಸಮಸ್ಯೆಗಳಿಗೆ ಎಂದಿನಂತೆ ಈ ಬಾರಿಯೂ ನಿರ್ಲಕ್ಷಿಸಲಾಗಿದೆ. ಬಜೆಟ್‌ನಲ್ಲಿ ಘೋಷಣೆಗಳು ಮುಖ್ಯವಲ್ಲ. ಅವುಗಳ ಅನುಷ್ಠಾನಕ್ಕೂ ಗಮನ ನೀಡಿ. ಒಟ್ಟಾರೆ ರಾಜ್ಯದ ಸರ್ವತೋಮುಖ ಅಭಿವೃದ್ಧಿಯ ಹೊಣೆ ಬಜೆಟ್‌ನಲ್ಲಿ ಇಲ್ಲ.
–ರವಿಕೃಷ್ಣಾರೆಡ್ಡಿ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಧ್ಯಕ್ಷ

*
ಖಾಲಿ ಹಾಳೆ ತುಂಬಿಸಿರುವ ಬಜೆಟ್
ಎಲ್ಲ ಹಳೆಯ ಯೋಜನೆಗಳಿಗೆ ಹೊಸ ಹೆಸರು ನೀಡುವ ಮೂಲ ಅವರ ಚೇಲಾಗಳನ್ನು ಸಂಭ್ರಮಪಡಿಸುವ ಬೋಗಸ್ ಬಜೆಟ್ ಹಾಗೂ ಅರಳು ಮರುಳಲ್ಲಿ ಮಾಡಿರುವ ಸಾಲದ ಬಜೆಟ್. ಮತ್ತಷ್ಟು ಸಾಲ ಮಾಡಿ ಬಡ್ಡಿ ಏರಿಸಿದ್ದೆ ಯಡಿಯೂರಪ್ಪ ಅವರ ಬಜೆಟ್‌ನ ಸಾಧನೆ.
–ಬಿ.ಟಿ.ನಾಗಣ್ಣ, ಆಮ್ ಆದ್ಮಿ ಪಕ್ಷದ ಬೆಂಗಳೂರು ಘಟಕ ಉಪಾಧ್ಯಕ್ಷ

*
ದಲಿತರಿಗೆ ಮಾರಕ
ಒಕ್ಕಲಿಗರು ಮತ್ತು ವೀರಶೈವ ಅಭಿವೃದ್ಧಿ ನಿಗಮಗಳಿಗೆ ತಲಾ ₹500 ಕೋಟಿ ನೀಡಿರುವ ಸರ್ಕಾರ 16 ಸಮುದಾಯದಗಳನ್ನು ಒಳಗೊಂಡ ಹಿಂದುಳಿದ ನಿಗಮಗಳಿಗೆ ₹500 ಕೋಟಿ ಅನುದಾನ ಘೋಷಿಸಿರುವುದು ಯಾವ ನ್ಯಾಯ? ಇದು ದಲಿತ ಮತ್ತು ಹಿಂದುಳಿದವರಿಗೆ ಮಾರಕವಾದ ಬಜೆಟ್.
–ಲಕ್ಷ್ಮೀನಾರಾಯಣ ನಾಗವಾರ, ರಾಜ್ಯ ದಲಿತ ಸಂಘರ್ಷ ಸಮಿತಿ ಸಂಚಾಲಕ

*
ಬಜೆಟ್ ಎಂಬ ಕಣ್ಕಟ್ಟು
ಮಹಿಳಾ ದಿನದ ಹೆಸರಿನಲ್ಲಿ ಬಜೆಟ್‌ನ ಮೊದಲ ಸಾಲುಗಳು ಮಹಿಳಾ ವಿಭಾಗಕ್ಕೆ ಬಂದಿದೆ ಎಂಬುದು ಬಿಟ್ಟರೆ ಖಚಿತವಾಗಿ ಸಮತೆಯ ತಲೆಮಾರು ಕಟ್ಟುವ ಕನಸು ಎಲ್ಲಿಯೂ ಹುಟ್ಟಲಿಲ್ಲ. ಒಟ್ಟು ಬಜೆಟ್ ನ ಕೇವಲ ಶೇ 1 ಹಣ ಕೊಟ್ಟು ಮಹಿಳೆಯರ ಅಭಿವೃದ್ಧಿ ಮಾಡುತ್ತೇವೆ ಎನ್ನುವ ಕಣ್ಕಟ್ಟು ಇದು. ಕೊವಿಡ್‌ನಿಂದ ಕಂಗೆಟ್ಟ ಕಾಲದಲ್ಲಿಯೂ ದಿಟ್ಟತನದಿಂದ ಎದುರಿಸಿದ ಸ್ವಸಹಾಯ ಸಂಘದ ಮಹಿಳೆಯರಿಗೆ ಭರವಸೆ ನೀಡುವ ಅಕ್ಷರಗಳೂ ಕಾಣುತ್ತಿಲ್ಲ. ಉದ್ಯೊಗದ ಕ್ಷೇತ್ರ ಸಂಪೂರ್ಣವಾಗಿ ಕುಸಿದಿದ್ದು ಅದರ ಬಗ್ಗೆ ಚಕಾರವಿಲ್ಲ. ನಗರ ಉದ್ಯೋಗ ಖಾತ್ರಿ ಯೋಜನೆಯ ಮೂಲಕ ಹದಗೆಟ್ಟ ನಗರವಾಸಿಗಳ ಬದುಕಿಗೆ ಸ್ವಲ್ಪವಾದರೂ ನೆರವು ನೀಡಬಹುದಾಗಿದ್ದನ್ನು ರಾಜ್ಯದ ಬಜೆಟ್ ಗಮನಕ್ಕೆ ತೆಗೆದುಕೊಂಡಿಲ್ಲ. ಜಾತಿ ಆಧಾರಿತ ನಿಗಮಗಳ ಸರ್ವತೋಮುಖ ಅಭಿವೃದ್ಧಿಗೆ ಕೋಟ್ಯಂತರ ರೂಪಾಯಿ ನೀಡಿ ಅತೃಪ್ತ ಆತ್ಮಗಳನ್ನು ತೃಪ್ತಿ ‌ಪಡಿಸುವ ಪ್ರಯತ್ನ ಮಾಡಲಾಗಿದೆ.
–ವಿಮಲಾ ಕೆ.ಎಸ್., ಜನವಾದಿ ಮಹಿಳಾ ಸಂಘಟನೆ

*
ಸಮತೋಲಿತ ಬಜೆಟ್‌
ಹೊಸ ತೆರಿಗೆ ಹೊರಿಸದೇ ಪ್ರಗತಿಗೆ ಇಂಬು ನೀಡುವ ಸಮತೋಲಿತ ಬಜೆಟ್ ಇದಾಗಿದೆ. ಕೃಷಿ, ನೀರಾವರಿ, ಮಹಿಳೆ, ಸಮಾಜ ಕಲ್ಯಾಣ, ಹಿಂದುಳಿದ ವರ್ಗ, ಮೂಲಸೌಕರ್ಯಕ್ಕೆ ಪ್ರಾಧಾನ್ಯತೆ ನೀಡಲಾಗಿದೆ. ಯಾವುದೇ ಹಳೇ ಯೋಜನೆಗಳನ್ನು ಕೈಬಿಟ್ಟಿಲ್ಲ. ಕೋವಿಡ್ ಸಂದರ್ಭದಲ್ಲಿ ಆರ್ಥಿಕ ಹಿನ್ನಡೆಯನ್ನು ಸರ್ಕಾರ ಎದುರಿಸಿತ್ತು. ಆದರೆ, ಆ ಸಂಕಷ್ಟವನ್ನು ಸರಿದೂಗಿಸಿ ಆರ್ಥಿಕ ಮುನ್ನಡೆ ಸಾಧಿಸಲು ಬಜೆಟ್ ಪೂರಕವಾಗಿದೆ.
–ಬಸವರಾಜ ಬೊಮ್ಮಾಯಿ,‌ ಗೃಹ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.