ADVERTISEMENT

Union Budget 2021: ‌ಖೇಲೊ ಇಂಡಿಯಾಗೆ ಖೋತಾ, ಸಾಯ್‌ಗೆ ಭಾರಿ ಮೊತ್ತ

ಬಜೆಟ್‌: ರಾಷ್ಟ್ರೀಯ ಕ್ರೀಡಾ ಫೆಡರೇಷನ್‌ಗಳಿಗೆ ₹ 280 ಕೋಟಿ; ಕ್ರೀಡಾಪಟುಗಳ ಪ್ರೋತ್ಸಾಹಧನದಲ್ಲಿ ಕಡಿತ

ಪಿಟಿಐ
Published 1 ಫೆಬ್ರುವರಿ 2021, 15:56 IST
Last Updated 1 ಫೆಬ್ರುವರಿ 2021, 15:56 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕೋವಿಡ್‌–19ರಿಂದ ಉಂಟಾಗಿರುವ ಪ್ರತಿಕೂಲ ಪರಿಸ್ಥಿತಿ ಕ್ರೀಡಾ ಕ್ಷೇತ್ರಕ್ಕೆ ಮೀಸಲಿಡುವ ಮೊತ್ತದ ಮೇಲೆಯೂ ಪರಿಣಾಮ ಬೀರಿದ್ದು ಬಜೆಟ್‌ನಲ್ಲಿ ಕ್ರೀಡೆಗೆ ಕಳೆದ ಬಾರಿಗಿಂತ ₹ 230.78 ಕೋಟಿ ಕಡಿಮೆ ಮೊತ್ತ ತೆಗೆದಿರಿಸಲಾಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಮಂಡಿಸಿದ ಬಜೆಟ್‌ನಲ್ಲಿ ಕ್ರೀಡಾಕ್ಷೇತ್ರಕ್ಕೆ ₹2596.14 ಕೋಟಿ ಘೋಷಿಸಿದ್ದಾರೆ.

ಕಳೆದ ಬಾರಿ ₹ 2826.92 ಕೋಟಿ ಹಣವನ್ನು ನೀಡಲಾಗಿತ್ತು. ಕೋವಿಡ್ ಕಾಲಿಟ್ಟ ನಂತರ ಚಟುವಟಿಕೆ ಕಡಿಮೆಯಾದ ಕಾರಣ ಆ ಮೊತ್ತವನ್ನು ₹ 1800.15 ಕೋಟಿಗೆ ಇಳಿಸಲಾಗಿತ್ತು. ಕಳೆದ ವರ್ಷದ ಪರಿಷ್ಕೃತ ಬಜೆಟ್‌ ಮೊತ್ತಕ್ಕೆ ಹೋಲಿಸಿದರೆ ಈ ಬಾರಿ ₹795.99 ಕೋಟಿ ಹೆಚ್ಚುವರಿಯಾಗಿ ನೀಡಿದಂತಾಗಿದೆ.

ಕೇಂದ್ರ ಸರ್ಕಾರದ ಪ್ರಮುಖ ಯೋಜನೆಯಾದ ಖೇಲೊ ಇಂಡಿಯಾದಿಂದ ಬಹುಪಾಲು ಮೊತ್ತವನ್ನು ಕಡಿತಗೊಳಿಸಲಾಗಿದ್ದು ₹ 232.71 ಕೋಟಿ ಖೋತಾ ಆಗಿದೆ. ಹಿಂದಿನ ಸಲ ಈ ಯೋಜನೆಗಾಗಿ ₹ 890.42 ಕೋಟಿ ತೆಗೆದಿರಿಸಲಾಗಿದ್ದರೆ ಈ ವರ್ಷದ ಮೊತ್ತ ₹ 657.71 ಕೋಟಿಗೆ ಇಳಿದಿದೆ. ಆದರೆ ಭಾರತ ಕ್ರೀಡಾ ಪ್ರಾಧಿಕಾರಕ್ಕೆ (ಸಾಯ್‌) ನೀಡುವ ಮೊತ್ತದಲ್ಲಿ ಗಣನೀಯ ಏರಿಕೆ ಕಂಡಿದೆ. ಕಳೆದ ವರ್ಷ ಸಾಯ್‌ಗೆ ₹ 500 ಕೋಟಿ ಕಡಿಮೆ ಮೊತ್ತವನ್ನು ನೀಡಿದ್ದರೆ ಈ ಬಾರಿ ₹ 660.41 ಕೋಟಿ ನೀಡಲಾಗಿದೆ. ₹ 160.41 ಏರಿಕೆ ಕಂಡಿದೆ.

ADVERTISEMENT

ರಾಷ್ಟ್ರೀಯ ಕ್ರೀಡಾ ಫೆಡರೇಷನ್‌ಗಳಿಗೆ ಕಳೆದ ಬಾರಿಯಂತೆ ಈ ವರ್ಷವೂ ದೊಡ್ಡ ಮೊತ್ತವನ್ನು ತೆಗೆದಿರಿಸಲು ನಿರ್ಧರಿಸಲಾಗಿದೆ. ₹ 35 ಕೋಟಿ ಏರಿಕೆಯೊಂದಿಗೆ ₹ 280 ಕೋಟಿ ಸಿಗಲಿದೆ. ಕ್ರೀಡಾಪಟುಗಳಿಗೆ ನೀಡುವ ಪ್ರೋತ್ಸಾಹಧನದಲ್ಲಿ ಕಡಿತ ಮಾಡಲಾಗಿದ್ದು ಇದಕ್ಕಾಗಿ ಒಟ್ಟು ತೆಗೆದಿರಿಸುವ ಮೊತ್ತವನ್ನು ₹ 70 ಕೋಟಿಯಿಂದ ₹ 53 ಕೋಟಿಗೆ ಇಳಿಸಲಾಗಿದೆ. ರಾಷ್ಟ್ರೀಯ ಕ್ರೀಡಾ ಅಭಿವೃದ್ಧಿ ನಿಧಿಯಲ್ಲೂ ಕಡಿತ ಮಾಡಲಾಗಿದ್ದು ₹ 25 ಕೋಟಿ ಮಾತ್ರ ತೆಗೆದಿರಿಸಲಾಗಿದೆ.

2010ರ ಕಾಮನ್ವೆಲ್ತ್ ಗೇಮ್ಸ್‌ಗಾಗಿ ನಿರ್ಮಿಸಿದ ಸಾಯ್ ಕ್ರೀಡಾಂಗಣದ ಅಭಿವೃದ್ಧಿಗಾಗಿ ನೀಡಲು ಉದ್ದೇಶಿಸಿದ್ದ ₹ 75 ಕೋಟಿಯನ್ನು ₹ 30 ಕೋಟಿಗೆ ಇಳಿಸಲಾಗಿದೆ. ಕ್ರೀಡಾಪಟುಗಳಿಗಾಗಿ ಇರುವ ರಾಷ್ಟ್ರೀಯ ಕ್ಷೇಮನಿಧಿಯ ಮೊತ್ತದಲ್ಲಿ ಯಾವುದೇ ಬದಲಾವಣೆ ಇಲ್ಲ. ಕಳೆದ ವರ್ಷದಂತೆ ಈ ಬಾರಿಯೂ ₹ 2 ಕೋಟಿ ನೀಡಲಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಕ್ರೀಡಾ ಬೆಳವಣಿಗೆಗಾಗಿ ಕಳೆದ ವರ್ಷದಂತೆ ಈ ಬಾರಿಯೂ ₹ 50 ಕೋಟಿ ನೀಡಲು ನಿರ್ಧರಿಸಲಾಗಿದೆ. ಲಕ್ಷ್ಮಿಬಾಯಿ ರಾಷ್ಟ್ರೀಯ ದೈಹಿಕ ಶಿಕ್ಷಣ ಸಂಸ್ಥೆಗೆ ಹಿಂದಿನ ವರ್ಷದಂತೆ ₹ 55 ಕೋಟಿ ಸಿಗಲಿದ್ದು ವಿಶ್ವ ಉದ್ದೀಪನ ಮದ್ದು ಸೇವನೆ ತಡೆ ಘಟಕಕ್ಕೆ (ವಾಡಾ) ನೀಡುವ ಮೊತ್ತವನ್ನು ₹ 2 ಕೋಟಿಯಿಂದ ₹ 2.5 ಕೋಟಿಗೆ ಏರಿಸಲಾಗಿದೆ.

ಇವುಗಳನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.