ADVERTISEMENT

Karnataka Budget 2021‌: ಹುಬ್ಬಳ್ಳಿ-ಧಾರವಾಡದ ಜನರ ನಿರೀಕ್ಷೆ ನೂರು

ಬಸವರಾಜ ಹವಾಲ್ದಾರ
Published 5 ಮಾರ್ಚ್ 2021, 11:05 IST
Last Updated 5 ಮಾರ್ಚ್ 2021, 11:05 IST
ಹುಬ್ಬಳ್ಳಿಯ ರಾಣಿ ಚೆನ್ನಮ್ಮ ವೃತ್ತ
ಹುಬ್ಬಳ್ಳಿಯ ರಾಣಿ ಚೆನ್ನಮ್ಮ ವೃತ್ತ   

ಹುಬ್ಬಳ್ಳಿ: ಧಾರವಾಡ ಜಿಲ್ಲೆ, ಅದರಲ್ಲೂ ಅವಳಿ ನಗರದ ಅಭಿವೃದ್ಧಿಗಾಗಿ ರಾಜ್ಯ ಬಜೆಟ್‌ನಲ್ಲಿ ದೊಡ್ಡ ಪ್ರಮಾಣದ ಅನುದಾನ ನಿರೀಕ್ಷೆಯಲ್ಲಿ ಜನರಿದ್ದಾರೆ. ಜತೆಗೆ ಕಳೆದ ಬಾರಿ ಘೋಷಣೆಯಾಗಿದ್ದ ಯೋಜನೆಗಳ ಜಾರಿಗೂ ಆಗ್ರಹಿಸುತ್ತಿದ್ದಾರೆ.

ಈ ಭಾಗದ ಮಹತ್ವದ ಯೋಜನೆಯಾದ ಕಳಸಾ ಬಂಡೂರಿ ಮಹದಾಯಿ ನೀರು ಬಳಕೆಗೆ ₹500 ಕೋಟಿ ಅನುದಾನ ತೆಗೆದಿರಿಸಲಾಗಿತ್ತು. ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಗೆ ಹಂಚಿಕೆಯಾಗಿರುವ ನೀರಿನ ಬಳಕೆ ಕುರಿತು ಕೇಂದ್ರ ಸರ್ಕಾರ ಗೆಜೆಟ್‌ನಲ್ಲಿ ಪ್ರಕಟಿಸಿರುವುದು ಬಿಟ್ಟರೆ, ಅನುದಾನ ಮಾತ್ರ ಖರ್ಚಾಗಿಲ್ಲ.

ಮಹಾನಗರ ಪಾಲಿಕೆಯ ನಿವೃತ್ತ ನೌಕರರಿಗೆ ನೀಡಲು ₹102 ಕೋಟಿ ಪಿಂಚಣಿ ಪಾವತಿಸಬೇಕಿತ್ತು. ಕಾಂಗ್ರೆಸ್‌ ಆಡಳಿತದಲ್ಲಿದ್ದಾಗ ಬಿಜೆಪಿ ನಾಯಕರು, ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದರೆ ಕೂಡಲೇ ಪಿಂಚಣಿ ಬಾಕಿ ಬಿಡುಗಡೆ ಮಾಡಲು ಕ್ರಮಕೈಗೊಳ್ಳುವುದಾಗಿ ಹೇಳುತ್ತಿದ್ದರು. ₹ 52 ಕೋಟಿ ಬಿಡುಗಡೆಯಾಗಿದ್ದು, ಇನ್ನು ₹49 ಕೋಟಿ ಬಾಕಿ ಉಳಿದಿದೆ.

ADVERTISEMENT

ಬೆಳಗಾವಿ–ಧಾರವಾಡ ಕಿತ್ತೂರು ಮಾರ್ಗವಾಗಿ ರೈಲು ಮಾರ್ಗ ನಿರ್ಮಾಣಕ್ಕೆ ಹಸಿರು ನಿಶಾನೆ ದೊರೆತಿದೆ. ಕೇಂದ್ರ ಸರ್ಕಾರವು ₹50 ಕೋಟಿ ಅನುದಾನ ತೆಗೆದಿರಿಸಿದೆ. ರೈಲು ಮಾರ್ಗ ನಿರ್ಮಾಣಕ್ಕೆ 837 ಎಕರೆ ಭೂಮಿ ಬೇಕಾಗಿದ್ದು, ಅದನ್ನು ರಾಜ್ಯ ಸರ್ಕಾರ ಭೂಸ್ವಾಧೀನ ಪಡಿಸಿಕೊಂಡು ರೈಲ್ವೆ ಇಲಾಖೆಗೆ ಹಸ್ತಾಂತರಿಸಬೇಕು.

ಧಾರವಾಡ ಜಿಲ್ಲೆಯಲ್ಲಿ 225 ಹಾಗೂ ಬೆಳಗಾವಿ ಜಿಲ್ಲೆಯಲ್ಲಿ 602 ಎಕರೆ ಭೂಮಿ ಬೇಕಾಗಿದೆ. ಆದರೆ, ಇಲ್ಲಿಯವರೆಗೆ ಭೂಸ್ವಾಧೀನ ಪ್ರಕ್ರಿಯೆ ಆರಂಭವಾಗಿಲ್ಲ. ಹಾಗಾಗಿ, ಕಾಮಗಾರಿ ಇನ್ನೂ ಆರಂಭವಾಗಿಲ್ಲ. ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ವಿಜ್ಞಾನೇಶ್ವರ ಅಧ್ಯಯನ ಪೀಠ ಆರಂಭಕ್ಕೆ ರಾಜ್ಯ ಸರ್ಕಾರ ₹1 ಕೋಟಿ ಬಿಡುಗಡೆ ಮಾಡಿತ್ತು. ಇನ್ನೂ ಪೀಠ ಕಾರ್ಯಾರಂಭ ಮಾಡಿಲ್ಲ.

ಜಿಲ್ಲೆಯ ಬಹುತೇಕ ರಸ್ತೆಗಳ ಅಭಿವೃದ್ಧಿಗೆ ₹1 ಸಾವಿರ ಕೋಟಿ ಅನುದಾನ ನೀಡಬೇಕು ಎಂದು ಜಿಲ್ಲೆಯ ಜನಪ್ರತಿನಿಧಿಗಳು ಮನವಿ ಮಾಡಿಕೊಂಡಿದ್ದರು. ಅನುದಾನ ಬಿಡುಗಡೆ ಮಾಡಲು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಒಪ್ಪಿಗೆ ಸೂಚಿಸಿದ್ದಾರೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ತಿಳಿಸಿದ್ದರು. ಬಜೆಟ್‌ ಆ ಅನುದಾನದ ನಿರೀಕ್ಷೆಯಲ್ಲಿ ಜನರಿದ್ದಾರೆ.

ಹುಬ್ಬಳ್ಳಿ ಹಾಗೂ ಧಾರವಾಡದಲ್ಲಿ ಶಿಕ್ಷಣ ಪಡೆಯುವುದಕ್ಕಾಗಿ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳ ವಿದ್ಯಾರ್ಥಿಗಳು ಬರುತ್ತಾರೆ. ಅವರಿಗೆ ಸೂಕ್ತ ವಸತಿ ವ್ಯವಸ್ಥೆ ಇಲ್ಲದ್ದರಿಂದಾಗಿ ಶಿಕ್ಷಣದ ವೆಚ್ಚ ಹೆಚ್ಚಾಗುತ್ತಿದೆ. ಹೆಚ್ಚುವರಿಯಾಗಿ ವಸತಿ ನಿಲಯಗಳನ್ನು ಮಂಜೂರು ಮಾಡಬೇಕಿದೆ.

ಜಿಲ್ಲೆಯ ಅಳ್ನಾವರ ಹಾಗೂ ಅಣ್ಣಿಗೇರಿಯನ್ನು ಹೊಸ ತಾಲ್ಲೂಕುಗಳಾಗಿ ಘೋಷಣೆ ಮಾಡಿ ಎರಡು ವರ್ಷಗಳಾಗಿವೆ. ಆದರೆ, ಅಲ್ಲಿ ಯಾವುದೇ ಕಚೇರಿಗಳು ಕಾರ್ಯಾರಂಭ ಮಾಡಿಲ್ಲ. ಆ ಕಚೇರಿಗಳಿಗೆ ಜಾಗ ಒದಗಿಸುವ ಹಾಗೂ ಕಟ್ಟಡ ನಿರ್ಮಾಣಕ್ಕೆ ಅನುದಾನ ಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.