ADVERTISEMENT

Union Budget 2021: ನಮ್ಮ ಮೆಟ್ರೊ 2ಎ, 2ಬಿ ಮಾರ್ಗಗಳಿಗೆ ಅನುದಾನ

ಈ ಎರಡು ಯೋಜನೆಗಳಿಗೆ ಕೇಂದ್ರದಿಂದ ಇನ್ನೂ ಸಿಕ್ಕಿಲ್ಲ ಒಪ್ಪಿಗೆ * ಆದರೂ ಬಜೆಟ್‌ನಲ್ಲಿ ಪ್ರಸ್ತಾಪ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2021, 19:31 IST
Last Updated 1 ಫೆಬ್ರುವರಿ 2021, 19:31 IST
ನಮ್ಮ ಮೆಟ್ರೊ –ಸಾಂದರ್ಭಿಕ ಚಿತ್ರ
ನಮ್ಮ ಮೆಟ್ರೊ –ಸಾಂದರ್ಭಿಕ ಚಿತ್ರ   

ಬೆಂಗಳೂರು: ನಮ್ಮ ಮೆಟ್ರೊ ಎರಡನೇ ಹಂತದ ವಿಸ್ತರಣೆಯ 2ಎ ಮತ್ತು 2ಬಿ ಮಾರ್ಗಗಳಿಗೆ ಕೇಂದ್ರದ ಪಾಲಿನ ಅನುದಾನ ಒದಗಿಸುವ ಬಗ್ಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ 2021–22ನೇ ಸಾಲಿನ ಬಜೆಟ್‌ನಲ್ಲಿ ಪ್ರಸ್ತಾಪಿಸಿದ್ದಾರೆ.

ನಮ್ಮ ಮೆಟ್ರೊ 2ಎ ಮಾರ್ಗವು ಸಿಲ್ಕ್‌ಬೋರ್ಡ್‌ನಿಂದ ಕೆ.ಆರ್‌.ಪುರದವರೆಗೆ ಹಾಗೂ 2 ಬಿ ಮಾರ್ಗವು ಕೆ.ಆರ್‌.ಪುರದಿಂದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ ನಿರ್ಮಾಣವಾಗಲಿದೆ. ಒಟ್ಟು 58.19 ಕಿ.ಮೀ ಉದ್ದದ ಈ ಮಾರ್ಗಗಳ ಕಾಮಗಾರಿಗೆ ₹ 14,788 ಕೋಟಿ ವೆಚ್ಚವಾಗಲಿದೆ. ಇದರಲ್ಲಿ ಕೇಂದ್ರವು ಹೆಚ್ಚೂ ಕಡಿಮೆ ಶೇ 20ರಷ್ಟು ಪಾಲನ್ನು ಭರಿಸಲಿದೆ.

‘ಈ ಎರಡು ಮಾರ್ಗಗಳಿಗೆ ಕೇಂದ್ರದಿಂದ ನಿಖರವಾಗಿ ಎಷ್ಟು ಮೊತ್ತ ಸಿಗಲಿದೆ ಎಂಬುದನ್ನು ಇನ್ನಷ್ಟೇ ತಿಳಿಯಬೇಕಿದೆ. ಇದರಲ್ಲಿ ಮೂಲ ಬಂಡವಾಳ ವೆಚ್ಚ, ಭೂಮಿ ವೆಚ್ಚ, ತೆರಿಗೆಗೆ ಸಂಬಂಧಿಸಿದ ವೆಚ್ಚಗಳು ಸೇರಿಸಿ ಈ ಮೊತ್ತವನ್ನು ಲೆಕ್ಕಾಚಾರ ಹಾಕಬೇಕಿದೆ’ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್‌ಸಿಎಲ್‌) ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ADVERTISEMENT

ಅಚ್ಚರಿಯ ವಿಷಯವೆಂದರೆ ಈ ಎರಡೂ ಮಾರ್ಗಗಳಿಗೂ ಕೇಂದ್ರ ಸಚಿವ ಸಂಪುಟ ಇನ್ನೂ ಅನುಮೋದನೆ ನೀಡಿಲ್ಲ. ಕೇಂದ್ರದ ಅನುಮೋದನೆಗಾಗಿ ಬಿಎಂಆರ್‌ಸಿಎಲ್‌ ಮೂರು ವರ್ಷಗಳಿಂದ ಕಾಯುತ್ತಿದೆ.

‘ಈ ಎರಡು ಮಾರ್ಗಗಳಿಗೆ ರಾಜ್ಯ ಸರ್ಕಾರ ಈಗಾಗಲೇ ಅನುಮೋದನೆ ನೀಡಿದ್ದು, ಅನುದಾನವನ್ನೂ ಬಿಡುಗಡೆ ಮಾಡಿದೆ. ಅದರಲ್ಲೇ ಭೂಸ್ವಾಧೀನ ಹಾಗೂ ಅಗತ್ಯ ಮೂಲಸೌಕರ್ಯಗಳ ಸ್ಥಳಾಂತರ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದೇವೆ. ಈಗ ಈ ಯೋಜನೆಗಳ ಬಗ್ಗೆ ಹಣಕಾಸು ಸಚಿವರುಬಜೆಟ್‌ನಲ್ಲೇ ಪ್ರಸ್ತಾಪಿಸಿರುವುದರಿಂದ ಎರಡನೇ ಹಂತದ ಈ ಎರಡೂ ವಿಸ್ತರಿತ ಮಾರ್ಗಗಳಿಗೂ ಕೇಂದ್ರದಿಂದ ಶೀಘ್ರವೇ ಅನುಮೋದನೆ ಸಿಗುವ ಭರವಸೆ ಮೂಡಿದೆ’ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿ ತಿಳಿಸಿದರು.

‘ವಿಮಾನನಿಲ್ದಾಣಕ್ಕೆ ಮೆಟ್ರೊ ಸಂಪರ್ಕ ಕಲ್ಪಿಸುವ ಯೋಜನೆಗೆ ಅನುಮೋದನೆ ನೀಡದಿದ್ದರೂ ಕೇಂದ್ರದ ಪಾಲಿಗೆ ಅನುದಾನ ಬಿಡುಗಡೆ ಬಗ್ಗೆ ಬಜೆಟ್‌ ಭಾಷಣದಲ್ಲಿ ಹಣಕಾಸು ಸಚಿವರು ಪ್ರಸ್ತಾಪಿಸಿರುವುದು ಸ್ವಾಗತಾರ್ಹ. ಆದರೆ, ಈ ಮಹತ್ವದ ಯೋಜನೆಗೆ ಅನುಮೋದನೆ ನೀಡಲು ಕೇಂದ್ರ ಸರ್ಕಾರ ವರ್ಷಾನುಗಟ್ಟಲೆ ಸತಾಯಿಸುತ್ತಿರುವುದು ಏಕೆಂದು ಅರ್ಥವಾಗುತ್ತಿಲ್ಲ’ ಎಂದು ‘ಪ್ರಜಾರಾಗ್‌’ನ ಸಂಜೀವ ದ್ಯಾಮಣ್ಣವರ್‌ ಅಚ್ಚರಿ ವ್ಯಕ್ತಪಡಿಸಿದರು.

ಉಪನಗರ ರೈಲು ಯೋಜನೆಯ ಉಲ್ಲೇಖವಿಲ್ಲ

ಉಪನಗರ ರೈಲು ಯೋಜನೆಗೆ ಬಜೆಟ್‌ನಲ್ಲಿ ಎಷ್ಟು ಅನುದಾನ ಕಾಯ್ದಿರಿಸಲಾಗಿದೆ ಎಂದು ಬಜೆಟ್‌ ಭಾಷಣದಲ್ಲಿ ನಿರ್ಮಲಾ ಸೀತಾರಾಮನ್‌ ಉಲ್ಲೇಖಿಸಿಲ್ಲ. ರೈಲ್ವೆ ಇಲಾಖೆಯ ಪಿಂಕ್‌ ಬುಕ್‌ ಬಿಡುಗಡೆಯಾದ ಬಳಿಕವೇ ಈ ಕುರಿತ ವಿವರಗಳು ಸಿಗಲಿವೆ.

ನಗರದಲ್ಲಿ ಉಪನಗರ ರೈಲು ಸೇವೆಗೆ ಮೂಲಸೌಕರ್ಯ ಕಲ್ಪಿಸುವ ₹ 15,767 ಕೋಟಿ ವೆಚ್ಚದ ಯೋಜನೆಗೆ ಕೇಂದ್ರ ಸರ್ಕಾರ 2020ರಲ್ಲಿ ಅನುಮೋದನೆ ನೀಡಿತ್ತು. ಒಟ್ಟು ಮೊತ್ತದಲ್ಲಿ ₹ 2,479 ಕೋಟಿಯನ್ನು ಕೇಂದ್ರ ಭರಿಸಲಿದೆ. ಆದರೆ, ರೈಲ್ವೆ ಸಚಿವಾಲಯವು ಅನುದಾನದ ರೂಪದಲ್ಲಿ ₹ 500 ಕೋಟಿಯನ್ನು ಮಾತ್ರ ನೀಡಲಿದ್ದು, ತನ್ನ ಪಾಲಿನ ಉಳಿದ ಮೊತ್ತವನ್ನು ರೈಲ್ವೆ ಜಾಗದ ನಗದೀಕರಣದಿಂದ ಹೊಂದಿಸಲು ಸೂಚಿಸಿತ್ತು.

‘ಹೈಸ್ಪೀಡ್‌ ರೈಲು– ದೇಸೀಕರಣ ಅಗತ್ಯ’

‘ದೇಶದ ರೈಲ್ವೆ ಯೋಜನೆಗಳಿಗೆ ಈ ಬಾರಿಯ ಬಜೆಟ್‌ನಲ್ಲಿ ಭರಪೂರ ಅನುದಾನ ಪ್ರಕಟಿಸಿದ್ದಾರೆ. ಆದರೆ, ಹೈಸ್ಪೀಡ್‌ ರೈಲು ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಸ್ವಾವಲಂಬನೆ ಸಾಧಿಸುವಲ್ಲಿ ನಮ್ಮ ದೇಶವು ಹಿಂದೆ ಬಿದ್ದಿದೆ’ ಎಂದು ಸಂಜೀವ ದ್ಯಾಮಣ್ಣವರ್‌ ಅಭಿಪ್ರಾಯಪಟ್ಟರು.

‘ಹೈಸ್ಪೀಡ್‌ ರೈಲು ತಂತ್ರಜ್ಞಾನವನ್ನು ನಮ್ಮ ದೇಶದಲ್ಲೇ ಅಭಿವೃದ್ಧಿಪಡಿಸುವುದು, ಬೋಗಿಗಳ ವಿನ್ಯಾಸ, ಹಳಿಗಳ ಸುಧಾರಣೆ, ಸುರಕ್ಷತಾ ಅಂಶಗಳ ಸುಧಾರಣೆಗೆ ಮತ್ತು ಸಂಶೋಧನೆಗೆ ಸಮಗ್ರ ಕಾರ್ಯಕ್ರಮ ರೂಪಿಸುವ ಅಗತ್ಯವಿತ್ತು. ಈ ವಿಚಾರದಲ್ಲಿ ಚೀನಾ ನಮಗಿಂತ ತುಂಬಾ ಮುಂದಿದೆ. ಶೇ 70ರಷ್ಟು ಮೆಟ್ರೊ ಸೌಕರ್ಯವನ್ನು ದೇಸೀಯವಾಗಿ ಅಭಿವೃದ್ಧಿಪಡಿಸುವಲ್ಲಿ ಸಫಲರಾಗಿದ್ದೇವೆ. ಅದೇ ರೀತಿ ಹೈಸ್ಪೀಡ್‌ ರೈಲು ಸಂಪರ್ಕಕ್ಕೂ ಒತ್ತು ನೀಡದೇ ಹೋದರೆ ಈ ಕ್ಷೇತ್ರದಲ್ಲಿ ಆತ್ಮನಿರ್ಭರ ಗುರಿ ಸಾಧನೆ ಸಾಧ್ಯವಾಗದು’ ಎಂದರು.

‘ರೈಲ್ವೆ ಮಾರ್ಗಗಳ ವಿದ್ಯುದೀಕರಣಕ್ಕೆ ಬಜೆಟ್‌ನಲ್ಲಿ ಒತ್ತು ನೀಡಿರುವುದು ಸ್ವಾಗತಾರ್ಹ. ಇದರಿಂದ ರಾಜ್ಯದ ಅನೇಕ ರೈಲು ಮಾರ್ಗಗಳ ವಿದ್ಯುದೀಕರಣ ಕಾಮಗಾರಿಗಳಿಗೂ ಅನುಕೂಲವಾಗಲಿದೆ. ಇನ್ನೆರಡು ವರ್ಷಗಳಲ್ಲಿ ರಾಜ್ಯದ ಎಲ್ಲ ರೈಲು ಮಾರ್ಗಗಳು ವಿದ್ಯುದೀಕರಣಗೊಳ್ಳಲಿವೆ’ ಎಂದು ಅವರು ಆಶಾವಾದ ವ್ಯಕ್ತಪಡಿಸಿದರು.

ಇವುಗಳನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.