ADVERTISEMENT

Union Budget 2021: ಕಡಿಮೆ ವೆಚ್ಚದ ಮೆಟ್ರೊ ಸೇವೆಯ ಭರವಸೆ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2021, 19:49 IST
Last Updated 1 ಫೆಬ್ರುವರಿ 2021, 19:49 IST
ಮೆಟ್ರೊ ರೈಲು
ಮೆಟ್ರೊ ರೈಲು   

ನವದೆಹಲಿ: ಟಯರ್‌ 2 ಹಾಗೂ ಟಯರ್‌ 3 ನಗರಗಳಲ್ಲಿ ಅತಿ ಕಡಿಮೆ ವೆಚ್ಚದ ‘ಮೆಟ್ರೊಲೈಟ್‌’ ಹಾಗೂ ‘ಮೆಟ್ರೊನಿಯೊ’ ಎಂಬ ಎರಡು ಹೊಸ ಮೆಟ್ರೊ ಸೇವೆಗಳನ್ನು ಆರಂಭಿಸಲಾಗುತ್ತದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್‌ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದಾರೆ.

ದೇಶದಲ್ಲಿ ಈಗಾಗಲೇ 702 ಕಿ.ಮೀ ಉದ್ದದ ಮೆಟ್ರೊ ರೈಲು ಮಾರ್ಗ ಹೊಂದಿದೆ. ಇನ್ನು 27 ನಗರಗಳಲ್ಲಿ 1,600 ಕಿ.ಮೀ ಮೆಟ್ರೋ ರೈಲು ಮಾರ್ಗದ ನಿರ್ಮಾಣ ಕಾಮಗಾರಿಯು ಪ್ರಗತಿಯಲ್ಲಿದೆ ಎಂದು ತಿಳಿಸಿದರು.

ದೇಶದ ಬೇರೆ ಬೇರೆ ಭಾಗಗಳ ಮೆಟ್ರೊ ರೈಲು ಅಭಿವೃದ್ಧಿ ಕೆಲಸಗಳಿಗೆ ಅನುದಾನವನ್ನು ಬಜೆಟ್‌ನಲ್ಲಿ ಹಂಚಿಕೆ ಮಾಡಲಾಗಿದೆ.

ADVERTISEMENT

ಬೆಂಗಳೂರು ಮೆಟ್ರೊ ಯೋಜನೆ ಹಂತ 2ಎ ಹಾಗೂ 2ಬಿಗೆ ₹ 14,788 ಕೋಟಿ ಅನುದಾನ ಘೋಷಿಸಿದ್ದಾರೆ. 58.19 ಕಿ.ಮೀವರೆಗೂ ಮಾರ್ಗವನ್ನು ವಿಸ್ತರಿಸಲು ಈ ಅನುದಾನ ಘೋಷಣೆ ಮಾಡಲಾಗಿದೆ.

ನಗರ ಪ್ರದೇಶಗಳಲ್ಲಿ ಮಟ್ರೊ ರೈಲು ಸಂಪರ್ಕ ಹಾಗೂ ನಗರ ಸಾರಿಗೆ ಬಸ್‌ ಸೇವೆಗಳನ್ನು ವಿಸ್ತರಿಸುವ ಮೂಲಕ ಸಾರ್ವಜನಿಕ ಸಾರಿಗೆ ಸೇವೆ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ. ಇದಕ್ಕೆ ₹18 ಸಾವಿರ ಕೋಟಿ ಮೀಸಲಿಟ್ಟಿದ್ದು, ಈ ಹೊಸ ಸೇವೆಯು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) 20 ಸಾವಿರ ಬಸ್‌ಗಳನ್ನು ನಿರ್ವಹಣೆ ಮಾಡಲಿದೆ.

ಕೊಚ್ಚಿ ಮೆಟ್ರೊ ರೈಲು ಹಂತ–2ರಲ್ಲಿ 11.5 ಕಿ.ಮೀ ಉದ್ದದ ಮಾರ್ಗಕ್ಕೆ ₹1957.05 ಕೋಟಿ ಹಾಗೂ ಚೆನ್ನೈ ಮೆಟ್ರೋ ರೈಲು ಹಂತ–2ರ 118.9 ಕಿ.ಮೀ ಉದ್ದದ ಮಾರ್ಗಕ್ಕೆ ₹63.246 ಕೋಟಿ ಅನುದಾನ ಘೋಷಣೆ ಮಾಡಿದ್ದಾರೆ.

ರಕ್ಷಣಾ ಬಜೆಟ್ ಮೊತ್ತ ಅಲ್ಪ ಏರಿಕೆ
ಲಡಾಖ್ ಗಡಿಯಲ್ಲಿ ಚೀನೀ ಪಡೆಗಳು ಹಾಗೂ ಭಾರತೀಯ ಯೋಧರು ಸಂಘರ್ಷಕ್ಕೆ ಇಳಿದಿದ್ದ ಘಟನೆಯ ನಡುವೆ ಸೇನೆಯನ್ನು ಆಧುನೀಕರಣಗೊಳಿಸಲು ಸರ್ಕಾರ ಮುಂದಾಗಿತ್ತು. ಆದರೆ ಕೇಂದ್ರ ಸರ್ಕಾರವು ಪ್ರಸಕ್ತ ಸಾಲಿನಲ್ಲಿ ರಕ್ಷಣಾ ಬಜೆಟ್‌ಗೆ ಏರಿಕೆ ಮಾಡಿರುವ ಅನುದಾನ ಕಡಿಮೆ.

ಸೇನಾಪಡೆಗಳು ಆಧುನಿಕ ಶಸ್ತ್ರಾಸ್ತ್ರ, ಯುದ್ಧವಿಮಾನ ಖರೀದಿಯಂತಹ ವೆಚ್ಚಗಳಿಗೆ ₹1.34 ಲಕ್ಷ ಕೋಟಿ ಮೀಸಲು ಇರಿಸಲಾಗಿದೆ. ಕಳೆದ ಬಾರಿಗೆ ಹೋಲಿಸಿದರೆ, ಇದಕ್ಕಾಗಿ ₹20,776 ಕೋಟಿ ಅನುದಾನ ಹೆಚ್ಚಿಸಲಾಗಿದೆ.

ಕಳೆದ ಬಜೆಟ್‌ನಲ್ಲಿ ₹1.33 ಲಕ್ಷ ಕೋಟಿ ಇದ್ದ ಪಿಂಚಣಿ ಈ ಬಾರಿ ₹1.16 ಲಕ್ಷ ಕೋಟಿಗೆ ಇಳಿಕೆಯಾಗಿದೆ. ಪಿಂಚಣಿ ವೆಚ್ಚ ಕಡಿತ ಮಾಡುವ ನಿರ್ಧಾರವು ಸಿಬ್ಬಂದಿಯ ನಿವೃತ್ತಿ ವಯಸ್ಸುನ್ನು ಏರಿಸುವ ಸೂಚನೆಯಾಗಿದೆ ಎಂದು ತಜ್ಞರು ಅಂದಾಜಿಸಿದ್ದಾರೆ

100 ಸೈನಿಕ ಶಾಲೆ ಆರಂಭಕ್ಕೆ ಬಜೆಟ್‌ನಲ್ಲಿ ಪ್ರಸ್ತಾಪಿಸಿದ್ದನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸ್ವಾಗತಿಸಿದ್ದಾರೆ.

ಇವುಗಳನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.