ADVERTISEMENT

Union Budget 2021: ದೇಶಿ ಉತ್ಪಾದನೆಗೆ ಉತ್ತೇಜನ

ಜವಳಿ ಕ್ಷೇತ್ರಕ್ಕೆ ಸುಂಕ ಇಳಿಕೆ ನೆರವು: ಎಂಎಸ್ಎಂಇಗಳಿಗೆ ಸ್ಪರ್ಧೆಗೆ ಪ್ರೋತ್ಸಾಹ

ಪಿಟಿಐ
Published 1 ಫೆಬ್ರುವರಿ 2021, 19:58 IST
Last Updated 1 ಫೆಬ್ರುವರಿ 2021, 19:58 IST
ಕೋಲ್ಕತ್ತದ ಉಡುಪು ತಯಾರಿಕಾ ಕಾರ್ಖಾನೆಯಲ್ಲಿ ಸೋಮವಾರ ಕೆಲಸದಲ್ಲಿ ನಿರತರಾಗಿದ್ದ ಕಾರ್ಮಿಕರು
ಕೋಲ್ಕತ್ತದ ಉಡುಪು ತಯಾರಿಕಾ ಕಾರ್ಖಾನೆಯಲ್ಲಿ ಸೋಮವಾರ ಕೆಲಸದಲ್ಲಿ ನಿರತರಾಗಿದ್ದ ಕಾರ್ಮಿಕರು   

ನವದೆಹಲಿ: ದೇಶೀಯವಾಗಿ ಉತ್ಪಾದನೆಗೆ ಹೆಚ್ಚಿನ ಪ್ರೋತ್ಸಾಹ ನೀಡುವುದು, ಉದ್ಯೋಗಾವಕಾಶಗಳ ಸೃಷ್ಟಿಗೆ ಉತ್ತೇಜನ ನೀಡುವ ಕ್ರಮವಾಗಿ ವಿವಿದ ಕಚ್ಚಾ ಉತ್ಪನ್ನಗಳಿಗೆ ಅನ್ವಯಿಸಿ ಪ್ರಾಥಮಿಕ ಆಮದು ಸುಂಕವನ್ನು ಇಳಿಸಲಾಗಿದೆ.

ಈ ಕ್ರಮವು ದೇಶೀಯವಾಗಿ ಉತ್ಪಾದನೆಯನ್ನು ಹೆಚ್ಚಿಸಲು ಹಾಗೂ ಮುಖ್ಯವಾಗಿ ಸಣ್ಣ, ಅತಿಸಣ್ಣ ಮತ್ತು ಮಧ್ಯಮ ವರ್ಗದ ಕೈಗಾರಿಕೆಗಳು ಸ್ಪರ್ಧೆಗೆ ಸಜ್ಜಾಗಲು ನೆರವಾಗಲಿದೆ. ಅಲ್ಲದೆ, ಇವುಗಳ ಸ್ಪರ್ಧೆಗೆ ಸಮಾನ ವೇದಿಕೆಯು ಸೃಷ್ಟಿಯಾಗಲಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಕೋವಿಡ್‌ ಪರಿಸ್ಥಿತಿಯಲ್ಲಿ ಆರ್ಥಿಕತೆ ಪುನಶ್ಚೇತನದ ಹಾದಿಯು ಕಷ್ಟಕರವಾಗಿತ್ತು. ವಿಶ್ವವೇ ಅನೇಕ ಸವಾಲುಗಳಿಗೆ ಮುಖಾಮುಖಿಯಾಗಿತ್ತು. ಆ ಸಂದರ್ಭದಲ್ಲೂ ದೇಶದಲ್ಲಿ ಕೈಗಾರಿಕಾ ವಲಯವು ಅಸಾಧಾರಣವಾದ ಸ್ಥಿತಿಸ್ಥಾಪಕತ್ವವನ್ನು ಪ್ರದರ್ಶಿಸಿತು ಎಂದು ಅವರು ಶ್ಲಾಘಿಸಿದರು.

ADVERTISEMENT

ಮೊಬೈಲ್‌, ಚಾರ್ಜರ್ –ರಿಯಾಯಿತಿ ವಾಪಸು: ಪ್ರಸ್ತುತ ದೇಶೀಯವಾಗಿ ವಿದ್ಯುನ್ಮಾನ ಪರಿಕರಗಳ ಉತ್ಪಾದನೆ ಕ್ಷೇತ್ರವು ಕ್ಷಿಪ್ರವಾಗಿ ಬೆಳೆಯುತ್ತಿದೆ. ಪರಿಣಾಮ, ಭಾರತವೀಗ ಮೊಬೈಲ್‌ ಪೋನ್ ಮತ್ತು ಚಾರ್ಜರ್‌ಗಳನ್ನು ರಫ್ತು ಮಾಡುವ
ಹಂತವನ್ನು ತಲುಪಿದೆ.

ದೇಶಿ ಉತ್ಪಾದನೆಯ ವಸ್ತುಗಳ ಗುಣಮಟ್ಟ, ಮೌಲ್ಯ ವೃದ್ಧಿಗೆ ಪೂರಕವಾಗಿ ನೆರವಾಗಲು ಚಾರ್ಜರ್‌ಗಳು ಮತ್ತು ಮೊಬೈಲ್‌ ಫೋನ್‌ನ ಕೆಲ ಬಿಡಿಭಾಗಗಳ ನೀಡಿದ್ದ ರಿಯಾಯಿತಿ ಹಿಂಪಡೆಯಲಾಗಿದೆ. ಕೆಲ ಪರಿಕರಗಳ ಮೇಲೆ ಇದ್ದ ಶೂನ್ಯ ತೆರಿಗೆ ಬದಲಾಗಿ, ಇನ್ನು ಸಾಮಾನ್ಯ ಎಂಬಂತಹ ಶೇ 2.5ರಷ್ಟು ತೆರಿಗೆ ಇರುತ್ತದೆ ಎಂದು ತಿಳಿಸಿದರು.

ಲೋಹ, ತಾಮ್ರ ಮರುಬಳಕೆಗೆ ನೆರವು: ಸಣ್ಣ ಮತ್ತು ಮಧ್ಯಮ ವರ್ಗದ ಉದ್ಯಮಗಳು ಕಬ್ಬಿಣ ಮತ್ತು ಉಕ್ಕಿನ ತೀವ್ರ ದರ ಏರಿಕೆಯ ಪರಿಣಾಮವನ್ನು ಎದುರಿಸಲು ಆಗುವಂತೆ ಅಲಾಯ್‌, ಅಲಾಯ್‌ಯೇತರ, ಸ್ಟೇನ್‌ಲೆಸ್‌ ಸ್ಟೀಲ್‌ನ ಕೆಲ ಉತ್ಪನ್ನಗಳಿಗೆ ಅನ್ವಯಿಸಿ ಏಕರೂಪದ ಶೇ 7.5ರಷ್ಟು ತೆರಿಗೆ ವಿಧಿಸಲಾಗಿದೆ.

ಲೋಹದ ಮರುಬಳಕೆಗೆ ಉತ್ತೇಜನ ನೀಡಲು, ಎಂಎಸ್‌ಎಂಇಗಳಿಗೆ ಅನ್ವಯಿಸಿ ಕಬ್ಬಿಣ ಕಚ್ಚಾ ಪದಾರ್ಥಗಳಿಗೆ ಮಾರ್ಚ್‌ 31, 2022ರವರೆಗೂ ಸುಂಕ ವಿನಾಯಿತಿ ನೀಡಲಾಗಿದೆ. ಅಂತೆಯೇ, ತಾಮ್ರದ ಮರುಬಳಕೆಗೆ ಪ್ರೊತ್ಸಾಹ ನೀಡಲು ತಾಮ್ರದ ಕಚ್ಚಾ ಪದಾರ್ಥಗಳ ಮೇಲಿನ ಸುಂಕವನ್ನು ಈಗಿನ ಶೇ 5ರಿಂದ ಶೇ 2.5ಕ್ಕೆ ಇಳಿಸಲಾಗಿದೆ.

ಆಟೊಮೊಬೈಲ್ ಉದ್ಯಮ: ಆಟೊಮೊಬೈಲ್‌ ಉದ್ಯಮ ಕ್ಷೇತ್ರದಲ್ಲಿ ಬಳಸಲಾಗುವ ಕೆಲ ಬಿಡಿ ಭಾಗಗಳ ಆಮದು ಸುಂಕವನ್ನು ಶೇ 15ಕ್ಕೆ ಏರಿಸಲಾಗಿದ್ದು, ಇದು ಫೆಬ್ರುವರಿ 2 ರಿಂದಲೇ ಜಾರಿಗೆ ಬರಲಿದೆ. ಸದ್ಯ ಸುಂಕದ ಪ್ರಮಾಣ ಶೇ 7.5ರಿಂದ 10ರವರೆಗೂ ಇತ್ತು.

7 ಟೆಕ್ಸ್‌ಟೈಲ್ ಪಾರ್ಕ್ ಸ್ಥಾಪನೆ ಗುರಿ
ಜವಳಿ ಕ್ಷೇತ್ರದಲ್ಲಿ ಹೆಚ್ಚಿನ ಉದ್ಯೋಗಗಳ ಸೃಷ್ಟಿ, ಅಧಿಕ ಬಂಡವಾಳ ಆಕರ್ಷಿಸಲು ಮೂರು ವರ್ಷಗಳಲ್ಲಿ 7 ಟೆಕ್ಸ್‌ಟೈಲ್ ಪಾರ್ಕ್ ಸ್ಥಾಪನೆ ಗುರಿ ಹೊಂದಲಾಗಿದೆ. ಇದಕ್ಕಾಗಿ ಭಾರಿ ಹೂಡಿಕೆ ಟೆಕ್ಸ್‌ಟೈಲ್‌ ಪಾರ್ಕ್ (ಮಿತ್ರಾ) ಯೋಜನೆಯನ್ನು ಸದ್ಯ ಚಾಲ್ತಿಯಲ್ಲಿರುವ ಪಿಎಲ್‌ಐ ಯೋಜನೆಯ ಜೊತೆಗೆ ಆರಂಭಿಸಲಾಗುವುದು.

ಇದಲ್ಲದೆ, ಈ ಉದ್ಯಮವನ್ನು ಪ್ರೋತ್ಸಾಹಿಸಲು ವಿವಿಧ ಕಚ್ಚಾ ಪದಾರ್ಥಗಳ ಮೇಲಿನ ಪ್ರಾಥಮಿಕ ಅಮದು ಸುಂಕವನ್ನು ಭಾಗಶಃ ಇಳಿಸಲಾಗಿದೆ. ಈ ಕ್ರಮವು ಜವಳಿ ಉದ್ಯಮದ ಜೊತೆಗೆ ಎಂಎಸ್‌ಎಂಇಗಳು ಹಾಗೂ ರಫ್ತು ಪ್ರಕ್ರಿಯೆಗೂ ನೆರವಾಗಲಿದೆ ಎಂದು ಸಚಿವೆ ಪ್ರತಿಪಾದಿಸಿದರು.

ಜನಾಭಿಪ್ರಾಯ...

ದೇಶದ ವಿತ್ತೀಯ ಕೊರತೆ ಜಿಡಿಪಿಯ ಶೇ 9.5ರಷ್ಟು ಆಗಲಿರುವ ಅಂದಾಜು ಆತಂಕಕಾರಿ. ₹ 13ಸಾವಿರ ಕೋಟಿ ಆತ್ಮನಿರ್ಭರ ಪ್ಯಾಕೇಜಿನ ಪ್ರಸ್ತಾಪ ದೇಶದ ಆರ್ಥಿಕತೆ ಸುಧಾರಣೆಗೆ ಹೇಗೆ ಸಹಾಯ ಎಂಬ ಉಲ್ಲೇಖವಿಲ್ಲ.
– ಐಸಾಕ್ ವಾಸ್, ಕೆನರಾ ವಾಣಿಜ್ಯೋದ್ಯಮ ಸಂಸ್ಥೆ ಕೆಸಿಸಿಐ) ಅಧ್ಯಕ್ಷ

**

ಕೇಂದ್ರ ಬಜೆಟ್‌ನಲ್ಲಿ ಕಲಬುರ್ಗಿಗೆ ರೈಲ್ವೆ ವಿಭಾಗ ಮತ್ತು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್‌)ಯನ್ನು ಘೋಷಣೆ ಮಾಡಬಹುದು ಎಂಬ ನಿರೀಕ್ಷೆ ಇತ್ತು. ಅದು ಹುಸಿಯಾಗಿದೆ.
–ಅಮರನಾಥ ಪಾಟೀಲ, ಎಚ್‌ಕೆಸಿಸಿಐ ಅಧ್ಯಕ್ಷ, ಕಲಬುರ್ಗಿ

**

ಮೂಲಸೌಕರ್ಯ, ಕೃಷಿ, ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಇದೊಂದು ಉತ್ತಮ ಬಜೆಟ್‌. ಮೂರು ಕ್ಷೇತ್ರಗಳ ಮೇಲಿನ ಅನುದಾನ ಹೆಚ್ಚಳದಿಂದ ಉದ್ಯೋಗ ಸೃಷ್ಟಿಯಾಗಲಿದೆ.
–ಮಹೇಂದ್ರ ಲದ್ದಡ, ಅಧ್ಯಕ್ಷ, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ, ಹುಬ್ಬಳ್ಳಿ

**
ನ್ಯಾಷನಲ್‌ ನರ್ಸಿಂಗ್‌ ಕಮಿಷನ್‌ ರಚಿಸಿದ್ದಾರೆ. ಸಂಶೋಧನಾ ಕ್ಷೇತ್ರಕ್ಕೆ ಒತ್ತು ನೀಡಿದ್ದು, ತೃಪ್ತಿಕರ ಬಜೆಟ್‌. ಈ ಸುಧಾರಣೆ ಅನುಷ್ಠಾನಕ್ಕೆ ಅಧಿಕಾರಿಗಳು ಬದ್ಧತೆ ತೋರಿಸಬೇಕು.
–ಡಾ.ಆರ್.ಬಾಲಸುಬ್ರಮಣ್ಯಂ, ವಿ–ಲೀಡ್‌ ಸಂಸ್ಥಾಪಕ, ಮೈಸೂರು

**

ಬಿಸಿಯೂಟಕ್ಕೆ ₹1400 ಕೋಟಿ ಮತ್ತು ಐಸಿಡಿಎಸ್‌ಗೆ ಶೇ 30ರಷ್ಟು ಕಡಿತವಾಗಿರುವುದರಿಂದ ಮಕ್ಕಳು ಮತ್ತು ಮಹಿಳೆಯರಿಗೆ ಕೊಡುಗೆ ಶೂನ್ಯವಾಗಿದೆ ಮಾತ್ರವಲ್ಲ ಈ ಎರಡು ಯೋಜನೆಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.
–ಎಸ್. ವರಲಕ್ಷ್ಮಿ, ಅಧ್ಯಕ್ಷೆ, ಸಿಐಟಿಯು

**
ಕನಿಷ್ಠ ಬೆಂಬಲ ಬೆಲೆಗೆ ಕಾನೂನಾತ್ಮಕ ಬಲ ನೀಡುವ ಪ್ರಸ್ತಾವವೇ ಇಲ್ಲ. ಸ್ವಾಮಿನಾಥನ್ ವರದಿ ಕುರಿತು ಚಕಾರ ಎತ್ತಿಲ್ಲ. ಕೃಷಿ ಅಭಿವೃದ್ಧಿಗೆ ಸೆಸ್‌ ವಿಧಿಸಲಾಗಿದೆ.
-ಎಚ್‌.ಆರ್. ಬಸವರಾಜಪ್ಪ, ರೈತ ಮುಖಂಡ, ಶಿವಮೊಗ್ಗ

ಇವುಗಳನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.