ADVERTISEMENT

Union Budget 2021- ರೈತರ ಕಲ್ಯಾಣಕ್ಕೆ ಸರ್ಕಾರ ಬದ್ಧ: ನಿರ್ಮಲಾ ಸೀತಾರಾಮನ್

ಎಂಎಸ್‌ಪಿ ವ್ಯವಸ್ಥೆ ಬಲವರ್ಧನೆ, ಖರೀದಿಯಲ್ಲೂ ಹೆಚ್ಚಳ

ಪಿಟಿಐ
Published 1 ಫೆಬ್ರುವರಿ 2021, 10:30 IST
Last Updated 1 ಫೆಬ್ರುವರಿ 2021, 10:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಸರ್ಕಾರ ರೈತರಿಂದ ಆಹಾರ ಧಾನ್ಯ ಖರೀದಿಸುವ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಬೆಳೆಗಳಿಗೆ ನೀಡುವ ಕನಿಷ್ಠ ಬೆಂಬಲ ಬೆಲೆಯನ್ನು ಉತ್ಪಾದನಾ ವೆಚ್ಚಕ್ಕಿಂತ ಒಂದೂವರೆ ಪಟ್ಟು ಏರಿಸಲಾಗಿದೆ. ಈ ಮೂಲಕ ಕೇಂದ್ರ ಸರ್ಕಾರ ರೈತರ ಕಲ್ಯಾಣಕ್ಕೆ ಬದ್ಧವಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರತಿಪಾದಿಸಿದರು.

ಬಜೆಟ್‌ ಮಂಡನೆ ವೇಳೆ ಈ ವಿಷಯ ಪ್ರಸ್ತಾಪಿಸಿದ ಅವರು, ‘ಕಳೆದ ಆರು ವರ್ಷಗಳಲ್ಲಿ ಕನಿಷ್ಠ ಬೆಂಬಲ ಬೆಲೆ ನೀಡಿ ರೈತರಿಂದ ಭತ್ತ, ಗೋಧಿ, ದ್ವಿದಳ ಧಾನ್ಯಗಳಂತಹ ಆಹಾರ ಧಾನ್ಯಗಳನ್ನು ಖರೀದಿಸಿದ ಪ್ರಮಾಣದಲ್ಲಿ ಏರಿಕೆಯಾಗಿದೆ‘ ಎಂದು ಹೇಳಿದರು. ‘ಧಾನ್ಯಗಳ ಸಂಗ್ರಹ ಹೆಚ್ಚಾದಂತೆ, ರೈತರಿಗೆ ಹಣ ಪಾವತಿ ಪ್ರಮಾಣವೂ ಗಣನೀಯವಾಗಿ ಏರಿಕೆಯಾಗಿದೆ‘ ಎಂದು ಅವರು ತಿಳಿಸಿದರು.

ಕೃಷಿ ಕ್ಷೇತ್ರದ ಅಭಿವೃದ್ಧಿಗಾಗಿ ಸರ್ಕಾರ ಕೈಗೊಂಡಿರುವ ಕ್ರಮಗಳು ಮತ್ತು ಮಾಡಿರುವ ಸಾಧನೆಗಳ ಬಗ್ಗೆ ಸಚಿವರು ವಿವರಣೆ ನೀಡುತ್ತಿದ್ದಂತೆ ವಿರೋಧ ಪಕ್ಷದ ಸಂಸದರು ಸರ್ಕಾರ ಜಾರಿಗೊಳಿಸಿರುವ ಮೂರು ಹೊಸ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ, ಘೋಷಣೆ ಕೂಗಿದರು.

ADVERTISEMENT

ಇದೇ ವೇಳೆ ಸಚಿವರು ಕಳೆದ ಆರು ವರ್ಷಗಳಲ್ಲಿ ಕನಿಷ್ಠ ಬೆಂಬಲ ಬೆಲೆಯಡಿ ರೈತರಿಂದ ಖರೀದಿಸಿರುವ ಧಾನ್ಯಗಳ ಪ್ರಮಾಣ ಮತ್ತು ರೈತರಿಗೆ ಪಾವತಿಸಿರುವ ಮೊತ್ತದ ಬಗ್ಗೆ ಮಾಹಿತಿ ಹಂಚಿಕೊಂಡರು. 2013–14ರಲ್ಲಿ ಗೋಧಿ ಖರೀದಿಯಲ್ಲಿ ರೈತರಿಗೆ ಪಾವತಿಸಿದ ಒಟ್ಟು ಮೊತ್ತ ₹33,874 ಕೋಟಿ , 2019–20ರಲ್ಲಿ ಅದು ₹62,802 ಕೋಟಿಯಷ್ಟಾಗಿದೆ. 2020–21ರಲ್ಲಿ₹75 ಸಾವಿರ ಕೋಟಿ ಪಾವತಿಸಲಾಗಿದೆ‘ ಎಂದು ಮಾಹಿತಿ ನೀಡಿದರು.

‘ಗೋಧಿ ಬೆಳೆಯುವ ರೈತರ ಸಂಖ್ಯೆ 2019–20ರಲ್ಲಿ 35.75 ಲಕ್ಷದಷ್ಟಿತ್ತು. 2020–21ರಲ್ಲಿ ಗೋಧಿ ಬೆಳೆಯುವ ರೈತರ ಸಂಖ್ಯೆ 43.36 ಲಕ್ಷದಷ್ಟು ಹೆಚ್ಚಾಗಿದೆ‘ ಎಂದು ಸಚಿವೆ ನಿರ್ಮಲಾ ಅಂಕಿ ಅಂಶ ನೀಡಿದರು.

2013-14ರಲ್ಲಿ ಭತ್ತ ಬೆಳೆಯುವ ರೈತರಿಗೆ ಸರ್ಕಾರ ಪಾವತಿಸಿದ ಮೊತ್ತ ₹63,928 ಕೋಟಿ. 2019-20ರಲ್ಲಿ ಇದು ₹ 1,41,930 ಕೋಟಿಗೆ ಏರಿದೆ. 2020-21ರಲ್ಲಿ ₹1,72,752 ಕೋಟಿಗೆ ಏರಲಿದೆ. ಭತ್ತದ ಕೃಷಿಕರ ಸಂಖ್ಯೆ 2019-20ರಲ್ಲಿ 1.2 ಕೋಟಿಯಷ್ಟಿತ್ತು. 2020-21ರಲ್ಲಿ 1.54 ಕೋಟಿಗೆ ಏರಿದೆ‘ ಎಂದು ಸಚಿವರು ಹೇಳಿದರು.

2013-14ರಲ್ಲಿ ರೈತರಿಂದ ದ್ವಿದಳ ಧಾನ್ಯಗಳನ್ನು ಖರೀದಿಸಲು ಸರ್ಕಾರ ನೀಡಿದ ಹಣ ₹236 ಕೋಟಿ . 2019-20ರ ವೇಳೆಗೆ ಇದು ₹ 8,285 ಕೋಟಿಗೆ ಹೆಚ್ಚಳವಾಯಿತು. 2020-21ರಲ್ಲಿ ₹10,530 ಕೋಟಿಗೆ ತಲುಪಿದೆ. ಇದು 2013-14ರಿಂದ ಇಲ್ಲಿವರೆಗೆ 40 ಪಟ್ಟು ಹೆಚ್ಚಾಗಿದೆ‘ ಎಂದು ಸಚಿವರು ಮಾಹಿತಿ ನೀಡಿದರು. ಇದೇ ರೀತಿ ಹತ್ತಿ ಕೃಷಿಕರಿಗೆ 2013-14ರಲ್ಲಿ ₹90 ಕೋಟಿ ಪಾವತಿಸಿದರೆ, 2020-21ರಲ್ಲಿ ಜನವರಿ 27ರವರೆಗೆ ಪಾವತಿಸಿದ ಮೊತ್ತ ₹25,974 ಕೋಟಿಯಷ್ಟಾಗಿದೆ ಎಂದು ಅವರು ಅಂಕಿ ಅಂಶ ನೀಡಿದರು.

ಇವುಗಳನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.