ADVERTISEMENT

Union Budget 2021- ಆಮದು ಸುಂಕ ಇಳಿಕೆ: ಚಿನ್ನ, ಬೆಳ್ಳಿ ದರ ಇಳಿಕೆ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2021, 11:44 IST
Last Updated 1 ಫೆಬ್ರುವರಿ 2021, 11:44 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಆಮದು ಸುಂಕ ತಗ್ಗಿಸಿರುವುದರಿಂದ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಇಳಿಕೆ ಆಗಲಿದೆ ಎಂದು ಉದ್ಯಮ ವಲಯ ಹೇಳಿದೆ.

ಶೇ 10ರಷ್ಟಿದ್ದ ಆಮದು ಸುಂಕವನ್ನು 2019ರ ಜುಲೈನಲ್ಲಿ ಶೇ 12.5ಕ್ಕೆ ಏರಿಕೆ ಮಾಡಲಾಗಿತ್ತು. ಇದಕ್ಕೆ ಉದ್ಯಮವು ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಸುಂಕ ತಗ್ಗಿಸುವಂತೆ ಬೇಡಿಕೆ ಸಲ್ಲಿಸುತ್ತಲೇ ಇತ್ತು. ಇದೀಗ ಸರ್ಕಾರವು ಸುಂಕವನ್ನು ಶೇ 7.5ಕ್ಕೆ ಇಳಿಕೆ ಮಾಡಿದೆ. ಈ ಮೂಲಕ ಕೇಂದ್ರ ಸರ್ಕಾರವು ಚಿನ್ನಾಭರಣ ಉದ್ಯಮದ ಬೇಡಿಕೆಗೆ ಕೊನೆಗೂ ಸ್ಪಂದಿಸಿದೆ. ಇದರಿಂದಾಗಿ ಸಂಘಟಿತ ವ್ಯಾಪಾರಕ್ಕೆ ಉತ್ತೇಜನ ಸಿಗಲಿದ್ದು, ಕಳ್ಳಸಾಗಣೆ ನಿಯಂತ್ರಣಕ್ಕೆ ಬರಲಿದೆ ಎಂದು ಉದ್ಯಮ ವಲಯ ಅಭಿಪ್ರಾಯಪಟ್ಟಿದೆ.

‘ಬಹಳ ದಿನಗಳಿಂದ ಎದುರು ನೋಡುತ್ತಿದ್ದ ನಿರ್ಧಾರ ಇದಾಗಿದೆ. ಆಮದು ಸುಂಕ ಇಳಿಕೆಯಿಂದ ಚಿನ್ನದ ಕಳ್ಳಸಾಗಣೆ ತಗ್ಗಲಿದೆ. ಚಿನ್ನಾಭರಣ ಉದ್ಯಮ ಮತ್ತು ಖರೀದಿದಾರರಿಗೂ ಅನುಕೂಲ ಆಗಲಿದೆ. ಸರ್ಕಾರದ ಈ ಕ್ರಮದಿಂದ ಚಿನ್ನದ ದರ ಒಂದು ಗ್ರಾಂಗೆ ಸರಿಸುಮಾರು ₹ 125 ರಷ್ಟು ಹಾಗೂ ಬೆಳ್ಳಿ ದರ ಕೆ.ಜಿಗೆ ₹ 1,750ರಷ್ಟು ಇಳಿಕೆ ಆಗಲಿದೆ’ ಎಂದು ಕರ್ನಾಟಕ ಚಿನ್ನಾಭರಣ ವ್ಯಾಪಾರಿಗಳ ಒಕ್ಕೂಟದ ಅಧ್ಯಕ್ಷ ಸುಮೇಶ್ ವಧೇರಾ ಅವರು ಪ್ರಜಾವಾಣಿಗೆ ಮಾಹಿತಿ ನೀಡಿದರು.

ADVERTISEMENT

‘ಚಿನ್ನ ಮತ್ತು ಚಿನ್ನಾಭರಣ ಮಾರುಕಟ್ಟೆಯಲ್ಲಿ ಸಂಘಟಿತ ಮತ್ತು ಪ್ರಾಮಾಣಿಕ ವರ್ತಕರಿಗೆ ಹೆಚ್ಚು ಅಗತ್ಯವಿರುವ ಉತ್ತೇಜನಾ ಕ್ರಮವಾಗಿದೆ. ಅಕ್ರಮ ವ್ಯಾಪಾರ ನಿಯಂತ್ರಿಸಲು ಅನುಕೂಲ ಆಗಲಿದೆ’ ಎಂದು ವಿಶ್ವ ಚಿನ್ನ ಸಮಿತಿಯ (ಡಬ್ಲ್ಯುಜಿಸಿ) ಭಾರತದ ವ್ಯವಸ್ಥಾಪಕ ನಿರ್ದೇಶಕ ಸೋಮಸುಂದರಂ ಪಿ.ಆರ್‌. ತಿಳಿಸಿದರು.

ಗರಿಷ್ಠ ಸುಂಕದಿಂದ ಚಿನ್ನದ ಕಳ್ಳಸಾಗಣೆಗೆ ಉತ್ತೇಜನ ಸಿಗುವುದಷ್ಟೇ ಅಲ್ಲದೆ ಸರ್ಕಾರಕ್ಕೆ ಬರುವ ವರಮಾನದಲ್ಲಿಯೂ ಇಳಿಕೆ ಆಗುತ್ತದೆ. ಹೀಗಾಗಿ ಸುಂಕ ಇಳಿಕೆ ನಿರ್ಧಾರ ಸೂಕ್ತವಾಗಿದೆ. ಪಾರದರ್ಶಕ ವ್ಯಾಪಾರವು ಯಾವಾಗಲೂ ಗ್ರಾಹಕರ ವಿಶ್ವಾಸ ವೃದ್ಧಿಸುತ್ತದೆ’ ಎಂದು ಮಲಬಾರ್‌ ಗೋಲ್ಡ್‌ ಆ್ಯಂಡ್‌ ಡೈಮಂಡ್ಸ್‌ನ ಅಧ್ಯಕ್ಷ ಎಂ.ಪಿ. ಅಹಮ್ಮದ್ ಹೇಳಿದರು.

‘ಸುಂಕವನ್ನು ಶೇ 12.5ಕ್ಕೆ ಏರಿಕೆ ಮಾಡಿದಾಗಿನಿಂದ ಬೆಲೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಬೆಲೆಯನ್ನು ಹಿಂದಿನ ಮಟ್ಟಕ್ಕೆ ತರಲು ಆಮದು ಸುಂಕದಲ್ಲಿ ಇಳಿಕೆ ಮಾಡುತ್ತಿದ್ದೇವೆ’ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ತಿಳಿಸಿದರು.

ದೇಶಿ ತಯಾರಿಕೆಗೆ ಉತ್ತೇಜನ ಸಿಗಲಿದ್ದು, ರಫ್ತು ಹೆಚ್ಚಿಸಲು ನೆರವಾಗಲಿದೆ ಎಂದು ಹರಳು ಮತ್ತು ಚಿನ್ನಾಭರಣ ರಫ್ತು ಉತ್ತೇಜನ ಮಂಡಳಿ (ಜಿಜೆಇಪಿಸಿ) ಹೇಳಿದೆ.

ಸುಂಕ ಇಳಿಕೆ

* ಪ್ಲಾಟಿನಂ; ಶೇ 12.5 ರಿಂದ ಶೇ 10ಕ್ಕೆ

* ದುಬಾರಿ ಬೆಲೆಯ ಲೋಹದ ನಾಣ್ಯಗಳು; ಶೇ 12.5 ರಿಂದ ಶೇ 10ಕ್ಕೆ

* ಚಿನ್ನದ ಬಾರ್‌; ಶೇ 11.85 ರಿಂದ ಶೇ 6.9

* ಬೆಳ್ಳಿ ಬಾರ್‌; ಶೇ 11 ರಿಂದ ಶೇ 6.1ಕ್ಕೆ

***

ಉದ್ಯಮದ ವಿವರ

ಶೇ 27.20

2020–21ರ ಏಪ್ರಿಲ್‌–ಡಿಸೆಂಬರ್‌ ಅವಧಿಯಲ್ಲಿ ಚಿನ್ನದ ಆಮದಿನಲ್ಲಿ ಆಗಿರುವ ಇಳಿಕೆ

67%

2020–21ರ ಏಪ್ರಿಲ್‌–ಡಿಸೆಂಬರ್‌ ಅವಧಿಯಲ್ಲಿ ಬೆಳ್ಳಿ ಆಮದಿನಲ್ಲಿ ಆಗಿರುವ ಇಳಿಕೆ

800–900 ಟನ್‌

ವಾರ್ಷಿಕವಾಗಿ ಆಮದು ಮಾಡಿಕೊಳ್ಳುತ್ತಿರುವ ಚಿನ್ನದ ಪ್ರಮಾಣ

40%

ಪ್ರಸಕ್ತ ಹಣಕಾಸು ವರ್ಷದ 9 ತಿಂಗಳಿನಲ್ಲಿ ಹರಳು ಮತ್ತು ಚಿನ್ನಾಭರಣ ರಫ್ತು ವಹಿವಾಟಿನಲ್ಲಿ ಆಗಿರುವ ಇಳಿಕೆ

ಇವುಗಳನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.