ADVERTISEMENT

ಜಯತೀರ್ಥ ಸ್ಥಾಪಿಸಿದ ನವೋದ್ಯಮ

ಎಂ.ಮಹೇಶ
Published 29 ಜನವರಿ 2019, 19:30 IST
Last Updated 29 ಜನವರಿ 2019, 19:30 IST
ನವೋದ್ಯಮಿ ಜಯತೀರ್ಥ ಕುಲಕರ್ಣಿ
ನವೋದ್ಯಮಿ ಜಯತೀರ್ಥ ಕುಲಕರ್ಣಿ   

ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲ್ಲೂಕು ತಿಗಡಿಯ ಜಯತೀರ್ಥ ಕುಲಕರ್ಣಿ ಅವರು ಕೀಟನಾಶಕ ಮತ್ತು ರಾಸಾಯನಿಕ ಮುಕ್ತ ತರಕಾರಿ ಬೆಳೆದು ವಿದೇಶಗಳಿಗೆ ರಫ್ತು ಮಾಡುವ ನವೋದ್ಯಮದ ಮೂಲಕ ಗಮನ ಸೆಳೆದಿದ್ದಾರೆ. ಗುತ್ತಿಗೆ ಒಪ್ಪಂದ ಕೃಷಿ ಆಧಾರದಲ್ಲಿ ರೈತರಿಗೆ ನಿಶ್ಚಿತ ಬೆಲೆ ಒದಗಿಸಿ ತರಕಾರಿಗಳನ್ನು ಖರೀದಿ ಮಾಡಿ, ವಿದೇಶದಲ್ಲಿ ಮಾರುಕಟ್ಟೆ ಕಂಡುಕೊಂಡಿದ್ದಾರೆ.

ರಾಸಾಯನಿಕಗಳನ್ನು ಬಳಸದೇ ಬೆಳೆಯುವ (ರೆಸಿಡ್ಯೂ ಫ್ರೀ) ತರಕಾರಿಗಳಿಗೆ ವಿದೇಶಗಳಲ್ಲಿ ಬಹಳ ಬೇಡಿಕೆ ಇದೆ. ಇದನ್ನು ಬಂಡವಾಳ ಮಾಡಿಕೊಂಡು ಮಾರುಕಟ್ಟೆ ವಿಸ್ತರಿಸುತ್ತಿದ್ದಾರೆ. ಬೆಂಡೆಕಾಯಿ, ಹಸಿರು ಮೆಣಸಿನಕಾಯಿ, ಹಾಗಲಕಾಯಿ, ನುಗ್ಗೆಕಾಯಿ,
ಬೀನ್ಸ್‌ ರಫ್ತು ಮಾಡುತ್ತಿದ್ದಾರೆ. 4 ವರ್ಷಗಳ ಹಿಂದೆ ಯುರೋಪ್‌ ರಾಷ್ಟ್ರಗಳಿಗೆ 40 ಟನ್‌ನೊಂದಿಗೆ ಆರಂಭವಾದ ರಫ್ತು ಚಟುವಟಿಕೆ ಈಗ ವಾರ್ಷಿಕ 500 ಟನ್‌ ಗಡಿ ದಾಟಿದೆ.

‘ವೆಜಿಫ್ರೆಷ್‌ ಅಗ್ರೊ ಎಕ್ಸ್‌ಪೋರ್ಟ್‌’ ಕಂಪನಿ ಮೂಲಕ ತಾಜಾ ಹಾಗೂ ಶೈತ್ತೀಕರಿಸಿದ ವಿಧಾನದಲ್ಲಿ ತರಕಾರಿ ರವಾನಿಸುತ್ತಾರೆ. ಜರ್ಮನಿ, ನೆದರ್ಲೆಂಡ್, ಇಂಗ್ಲೆಂಡ್, ಇಟಲಿ, ಕತಾರ್‌, ದುಬೈ ರಾಷ್ಟ್ರಗಳ ಜನರು ಬೆಳಗಾವಿಯ ತರಕಾರಿ ರುಚಿ ಸವಿಯುತ್ತಿದ್ದಾರೆ. ಹೆಚ್ಚು ಬೇಡಿಕೆ ಇರುವುದರಿಂದಾಗಿ 400 ರಿಂದ 450 ಟನ್‌ ಬೆಂಡೆಕಾಯಿ ರಫ್ತು ಮಾಡುತ್ತಿದ್ದಾರೆ.

ADVERTISEMENT

‘ಬೈಲಹೊಂಗಲ ಭಾಗದಲ್ಲಿ 300ರಿಂದ 400 ಎಕರೆ ಪ್ರದೇಶದಲ್ಲಿ 200 ಮಂದಿ ರೈತರು ನಮಗಾಗಿಯೇ ತರಕಾರಿಗಳನ್ನು ಬೆಳೆಯುತ್ತಾರೆ. ನಿಶ್ಚಿತ ಬೆಲೆ ಸಿಗುವುದರಿಂದ ಅವರಿಗೆ ಆತಂಕವಿಲ್ಲ. ಇಬ್ಬರು ಕೃಷಿ ಪದವೀಧರರನ್ನು ನೇಮಿಸಿಕೊಂಡಿದ್ದು, ಬೇಸಾಯ ಕ್ರಮದ ಕುರಿತು ರೈತರಿಗೆ ಸಲಹೆ ನೀಡುತ್ತಾರೆ. ರಾಸಾಯನಿಕ ಬಳಸದಂತೆ ನೋಡಿಕೊಳ್ಳುತ್ತಾರೆ. ಬೇಸಾಯ ವೆಚ್ಚ ತಗ್ಗಿಸುವ ಹಾಗೂ ಶೇ 20ರಷ್ಟು ಇಳುವರಿ ಹೆಚ್ಚಿಸುವ ವಿಧಾನ ಅನುಸರಿಸುತ್ತಿದ್ದೇವೆ. ತೋಟಗಾರಿಕಾ ಇಲಾಖೆಯ ಆರ್ಥಿಕ ನೆರವಿನಿಂದ ತಿಗಡಿಯಲ್ಲಿ ಸ್ಥಾಪಿಸಿರುವ ಪ್ಯಾಕ್‌ಹೌಸ್‌ನಲ್ಲಿ ಪ್ಯಾಕಿಂಗ್ ಆಗುತ್ತದೆ. ಗೋವಾ ಮೂಲಕ ಯುರೋಪ್ ರಾಷ್ಟ್ರಗಳಿಗೆ ರವಾನಿಸುತ್ತೇವೆ. 200 ರೈತರು ಹಾಗೂ ಇತರ 50 ಮಂದಿಗೆ ಉದ್ಯೋಗ ಸಿಕ್ಕಿದೆ. 2019ರಲ್ಲಿ ರಫ್ತು ಪ್ರಮಾಣವನ್ನು ಸಾವಿರ ಟನ್‌ಗಳಿಗೆ ಹೆಚ್ಚಿಸುವ ಗುರಿ ಇದೆ. ಗುಂಟೂರು ಮೆಣಸಿನಕಾಯಿ, ದಾಳಿಂಬೆ ರಫ್ತು ಮಾಡುವ ಯೋಜನೆಯೂ ಇದೆ’ ಎಂದು ಜಯತೀರ್ಥ ಕುಲಕರ್ಣಿ ಹೇಳುತ್ತಾರೆ.

ತಾಜಾ ಹಾಗೂ ರಾಸಾಯನಿಕ ಮುಕ್ತ ತರಕಾರಿಗೆ ಯುರೋಪ್‌ನಲ್ಲಿ ಭಾರಿ ಬೇಡಿಕೆ ಇದೆ. ಅಂತರರಾಷ್ಟ್ರೀಯ ಮಾರುಕಟ್ಟೆ ಆಧರಿಸಿ ತರಕಾರಿಯನ್ನು ವಿಮಾನದ ಮೂಲಕ ಯುರೋಪ್‌ಗೆ ಸಾಗಣೆ ಮಾಡಲಾಗುತ್ತಿದೆ. ರಾಸಾಯನಿಕ ಬಳಸದೆ ತರಕಾರಿ ಬೆಳೆಯುವ ಕುರಿತುರೈತರಿಗೆ ನಿರಂತರ ಮಾರ್ಗದರ್ಶನ, ಮೇಲುಸ್ತುವಾರಿ ವಹಿಸಲಾಗುತ್ತಿದೆ. ಬಿತ್ತನೆಯಿಂದ ಕೊಯ್ಲಿನವರೆಗೂ ಸಲಹೆ ಕೊಡಲಾಗುತ್ತದೆ. ತಿಗಡಿಯನ್ನು ಕೇಂದ್ರವಾಗಿಟ್ಟುಕೊಂಡು ಸುತ್ತಮುತ್ತಲಿನ ಸಣ್ಣ ರೈತರ ಆರ್ಥಿಕ ಬೆಂಬಲಕ್ಕೆ ಜಯತೀರ್ಥ ನಿಂತಿದ್ದಾರೆ.

ಇಲ್ಲಿ ಬೆಳೆಯುವ ಬೆಂಡೆಕಾಯಿ, ಹಾಗಲಕಾಯಿ, ಚವಳಿಕಾಯಿ, ಸೋರೆಕಾಯಿ, ಹಸಿರು ಮೆಣಸಿನಕಾಯಿ ಯುರೋಪ್‌ ರಾಷ್ಟ್ರಗಳ ಅಡುಗೆ ಮನೆಗಳಲ್ಲಿ ಬಳಕೆಯಾಗುತ್ತಿವೆ. ನಾಲ್ಕು ವರ್ಷಗಳಿಂದ ನಿರಂತರವಾಗಿ ರಫ್ತು ಮಾಡುತ್ತಿದ್ದಾರೆ. ಇದಕ್ಕೆ ಸರ್ಕಾರವೂ ಆರ್ಥಿಕ ನೆರವು ನೀಡಿದೆ. ತಿಗಡಿಯಲ್ಲಿ ಹವಾನಿಯಂತ್ರಿತ ಪ್ಯಾಕಿಂಗ್ ಹೌಸ್ ನಿರ್ಮಿಸಲಾಗಿದೆ.ಪ್ರತಿ 3 ದಿನಕ್ಕೊಮ್ಮೆ ಹಸಿರಿನ, ನಾಲ್ಕು ಇಂಚು ಉದ್ದದ, ಡೊಂಕು, ಹುಳುಕು ಇರದ ಬೆಂಡೆಕಾಯಿಯನ್ನು ಜಮೀನಿನಿಂದಲೇ ಪರೀಕ್ಷೆಗೆ ಕಳುಹಿಸಲಾಗುತ್ತದೆ. ಬೆಂಗಳೂರಿನ ‘ಅಪೆಡಾ’ದಲ್ಲಿ (ಎಪಿಇಡಿಎ- ಅಗ್ರಿಕಲ್ಚರಲ್ ಆ್ಯಂಡ್ ಪ್ರೊಸೆಸ್ಡ ಫುಡ್ ಪ್ರಾಡಕ್ಟ್‌ ಎಕ್ಸ್‌ಪೋರ್ಟ್‌ ಡೆವಲಪ್‌ಮೆಂಟ್‌ ಅಥಾರಿಟಿ) ಹಲವು ರೀತಿಯಲ್ಲಿ ರಾಸಾಯನಿಕ ಪರೀಕ್ಷೆಗೆ ಒಳಪಡಿಸಿ ರಾಸಾಯನಿಕ ಮುಕ್ತವಾದುದು ಎಂದು ಪ್ರಮಾಣೀಕರಿಸಿದ ನಂತರವೇ ತರಕಾರಿಗಳನ್ನು ರಫ್ತಿಗಾಗಿ ಪರಿಗಣಿಸಲಾಗುತ್ತದೆ.

ಎಲ್ಲ ತರಕಾರಿ ಕಳುಹಿಸುವಾಗಲೂ ಇದೇ ಮಾದರಿ ಅನುಸರಿಸಲಾಗುತ್ತದೆ. ವಾರ್ಷಿಕ ಸರಾಸರಿ 400 ಟನ್ ಬೆಂಡೆಕಾಯಿ, ತಲಾ 150 ಟನ್ ಚವಳಿಕಾಯಿ ಮತ್ತು ಸೋರೆಕಾಯಿ, 100 ಟನ್ ಹಾಗಲಕಾಯಿ, 200 ಟನ್ ಹಸಿಮೆಣಸಿನಕಾಯಿ ರಫ್ತು ಮಾಡಲಾಗುತ್ತಿದೆ. ಅಂತರರಾಷ್ಟ್ರೀಯ ಮಾರುಕಟ್ಟೆ ಆಧರಿಸಿ ಪ್ರತಿ ತರಕಾರಿ ದರ (ಕೆ.ಜಿ.ಗೆ) ₹ 18ರಿಂದ ₹20ರವರೆಗೆ ದರ ನಿಗದಿ ಮಾಡಲಾಗುತ್ತದೆ. 10–15 ದಿನಗಳಿಗೊಮ್ಮೆ ರೈತರ ಖಾತೆಗೆ ನೇರವಾಗಿ ಹಣ ಪಾವತಿಸಲಾಗುತ್ತದೆ.

ರೈತರಿಗೆ ಸಾಗಣೆ, ದಲ್ಲಾಳಿಗಳ ಕಾಟ, ದರ ಏರಿಳಿತದ ಆತಂಕ ಹಾಗೂ ಪ್ಯಾಕಿಂಗ್ ವೆಚ್ಚದ ಉಸಾಬರಿ ಇಲ್ಲ. ‘ಪ್ಯಾಕ್ ಮಾಡಿದ ತರಕಾರಿಯನ್ನು ಹವಾನಿಯಂತ್ರಿತ ಕಂಟೇನರ್‌ನಲ್ಲಿ ರಸ್ತೆ ಮಾರ್ಗವಾಗಿ ಗೋವಾ ತಲುಪಿಸಲಾಗುತ್ತದೆ. ಅಲ್ಲಿಂದ ವಿಮಾನಗಳ ಮೂಲಕ ಯುರೋಪ್‌ಗೆ ಸಾಗಿಸಲಾಗುತ್ತಿದೆ. ಈ ಸಂದರ್ಭದಲ್ಲಿ ‘ಅಪೆಡಾ’ ಪ್ರಮಾಣಪತ್ರ ಆಯಾ ತರಕಾರಿ ಜತೆಗೆ ಇರುವುದು ಕಡ್ಡಾಯ. ಇಲ್ಲದಿದ್ದಲ್ಲಿ ವಿಮಾನದಲ್ಲಿ ಸಾಗಿಸಲು ನಿರಾಕರಿಸಲಾಗುತ್ತಿದೆ. ಹೀಗೆ ಕಟ್ಟುನಿಟ್ಟಿನ ವ್ಯವಸ್ಥೆ ಇದೆ’ ಎಂದೂ ಅವರು ಹೇಳುತ್ತಾರೆ. ಸಂಪರ್ಕಕ್ಕೆ: 98865 39521.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.