ADVERTISEMENT

ಲಾಕ್‌ಡೌನ್‌ನಲ್ಲಿ ರೈತರಿಗೆ ₹8,000 ಕೋಟಿ ತಲುಪಿಸಿದ ಅಮುಲ್‌

ಏಜೆನ್ಸೀಸ್
Published 3 ಜೂನ್ 2020, 12:11 IST
Last Updated 3 ಜೂನ್ 2020, 12:11 IST
ಅಮುಲ್‌
ಅಮುಲ್‌    

ಬೆಂಗಳೂರು: ಲಾಕ್‌ಡೌನ್‌ ಅವಧಿಯಲ್ಲಿ ಡೈರಿ ಉತ್ಪನ್ನಗಳನ್ನು ಜನರಿಗೆ ತಲುಪಿಸಲು ನಿರ್ಣಾಯಕವಾದ ಸರಬರಾಜು ಸರಪಳಿ ಕೊಂಡಿ ಕಳಚದಂತೆ ತಡೆಯಲು ಅಮುಲ್‌ ರೈತರಿಗೆ ಸಕಾಲಕ್ಕೆ ನಗದು ನೀಡಿದೆ. ಈ ಮೂಲಕ ನಿರ್ಬಂಧಗಳ ನಡುವೆಯೂ ಅಮುಲ್‌ ಉತ್ತಮ ವಹಿವಾಟು ನಡೆಸಿದೆ ಹಾಗೂ ಹೈನುಗಾರಿಕೆ ನಡೆಸುವವರು, ರೈತರಿಗೆ ₹8,000 ಕೋಟಿ ನಗದು ತಲುಪಿಸಿದೆ.

ದೇಶದ ಪ್ರಮುಖ ಡೈರಿ ಉದ್ಯಮ ಸಂಸ್ಥೆಯಾಗಿರುವ ಅಮುಲ್‌ನ ವ್ಯವಸ್ಥಾಪಕ ನಿರ್ದೇಶಕ ಆರ್‌.ಎಸ್.ಸೋಧಿ ಲಾಕ್‌ಡೌನ್‌ ಅವಧಿಯಲ್ಲಿ ಅಮುಲ್‌ನ ಕಾರ್ಯಾಚರಣೆಯ ಕುರಿತು ಹೇಳಿಕೊಂಡಿದ್ದಾರೆ. ದ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ ನಡೆಸಿರುವ ವೆಬ್‌ಚಾಟ್‌ನಲ್ಲಿ ಈ ವಿಷಯ ಪ್ರಸ್ತಾಪವಾಗಿದೆ.

'ದೇಶದಲ್ಲಿ ಸುಮಾರು 10 ಕೋಟಿ ಕುಟುಂಬಗಳಿಗೆ ಹಾಲು ಜೀವನಾಧಾರವಾಗಿದೆ. ಹಾಲು ಸರಬರಾಜು ನಿಲ್ಲಿಸಬೇಕೆಂದರೂ ನಿಲ್ಲಿಸಲು ಸಾಧ್ಯವಿಲ್ಲ. ಗೃಹ ವ್ಯವಹಾರಗಳ ಸಚಿವಾಲಯ, ಸ್ಥಳೀಯ ಆಡಳಿತಗಳ ಸಹಕಾರದಿಂದಾಗಿ ಕಠಿಣ ಪರಿಸ್ಥಿತಿಯಲ್ಲಿಯೂ ಸರಬರಾಜಿಗೆ ತೊಡುಕಾಗಲಿಲ್ಲ. ನಿತ್ಯ ಸುಮಾರು 2.6 ಕೋಟಿ ಲೀಟರ್‌ ಹಾಲು ಸಂಗ್ರಹಿಸುತ್ತೇವೆ. ಈ ಸಮಯದಲ್ಲಿ ನಾವು ಶೇ 15ರಷ್ಟು ಹೆಚ್ಚು ಸಂಗ್ರಹಿಸುತ್ತಿದ್ದೇವೆ. ಕಳೆದ 60 ದಿನಗಳಲ್ಲಿ ನಾವು ರೈತರಿಗೆ ₹8,000 ಕೋಟಿ ನೀಡಿದ್ದೇವೆ. ಪ್ರಮುಖವಾಗಿ ಗುಜರಾತ್‌ನ ಗ್ರಾಮೀಣ ಆರ್ಥಿಕತೆಗೆ ನಗದು ಪೂರೈಕೆಯಾಗಿದೆ' ಎಂದು ಆರ್‌.ಎಸ್.ಸೋಧಿ ಹೇಳಿದ್ದಾರೆ.

ADVERTISEMENT

ಹೊಟೇಲ್‌, ರೆಸ್ಟೊರೆಂಟ್‌ಗಳು ಮುಚ್ಚಿದ್ದರಿಂದ ಡೈರಿ ಉತ್ಪನ್ನಗಳು, ಹಾಲು ಬೇಡಿಕೆ ಕುಸಿದರೂ ದಿನ ಕಳೆದಂತೆ ಮನೆಗಳಲ್ಲಿ ಬಳಕೆ ಹೆಚ್ಚಿತು. ಮನೆಗಳಿಂದ ಬೇಡಿಕೆ ಹೆಚ್ಚಿದ ಪರಿಣಾಮ ನಷ್ಟ ಅನುಭವಿಸಲಿಲ್ಲ. ಕೋವಿಡ್–19 ದೃಢಪಟ್ಟ ಪ್ರಕರಣಗಳು ಹೆಚ್ಚು ಕಾಣಿಸಿಕೊಂಡ ಗ್ರಾಮಗಳಿಂದ ಹಾಲು ಸಂಗ್ರಹಿಸುವುದನ್ನು ನಿಲ್ಲಿಸುತ್ತಿದ್ದೆವು. ಆ ಭಾಗಗಳಿಂದ ಖರೀದಿಗೆ ಸರ್ಕಾರದಿಂದ ಹಸಿರು ನಿಶಾನೆ ಬರುವವರೆಗೂ ಕಾದಿದ್ದೆವು. ಭಾರತ ಸರ್ಕಾರ ಡೈರಿ ಮೂಲಭೂತ ಸೌಕರ್ಯಗಳ ನಿಧಿಯಾಗಿ ₹15,000 ಕೋಟಿ ವಿನಿಯೋಗಿಸಲು ನಿರ್ಧರಿಸಿದೆ. ಇದರಿಂದ ನಿತ್ಯ 1.5 ಕೋಟಿ ಲೀಟರ್‌ ಹಾಲು ಸಂಸ್ಕರಣೆಗೆ ಸೌಲಭ್ಯ ಕಲ್ಪಿಸಬಹುದು. 1 ಲಕ್ಷ ಲೀಟರ್‌ ಹಾಲಿನ ನಿರ್ವಹಣೆಯ ಮೂಲಕ 6,000 ಉದ್ಯೋಗ ಸೃಷ್ಟಿಸಬಹುದು. ₹15,000 ಕೋಟಿ ಬಳಕೆ ಮಾಡಿ ದೇಶದ 30 ಲಕ್ಷ ಗ್ರಾಮೀಣ ಕುಟುಂಬಗಳಿಗೆ ಜೀವನಾಧಾರವಾಗಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಕಳೆದ ವರ್ಷ ಅಮುಲ್‌ ಬ್ರ್ಯಾಂಡ್‌ನ ವಹಿವಾಟು ₹52,000 ಕೋಟಿ. ದೇಶದ ಅತಿ ದೊಡ್ಡ ಆಹಾರ ಮತ್ತು ಎಫ್‌ಎಂಸಿಜಿ ಕಂಪನಿಯಾಗಿರುವ ಅಮುಲ್‌, ಕಳೆದ 10 ವರ್ಷಗಳಲ್ಲಿ ವಾರ್ಷಿಕ ವೃದ್ಧಿ ದರ (ಸಿಎಜಿಆರ್‌) ಶೇ 17ರಷ್ಟು ಬೆಳವಣಿಗೆ ಕಂಡಿದೆ. 2010ರಲ್ಲಿ ಕಂಪನಿಯ ಒಟ್ಟು ವಹಿವಾಟು ₹8,000 ಕೋಟಿ. ಶೇ 40ರಷ್ಟು ಹಾಲು ಸಂಗ್ರಹ ಗುಜರಾತ್ ಹೊರಗಿನ ರಾಜ್ಯಗಳಿಂದ ನಡೆಸಲಾಗುತ್ತಿದೆ. ದೇಶದಾದ್ಯಂತ ಡೈರಿ ಘಟಕಗಳು ಹಾಗೂ ತಂತ್ರಜ್ಞಾನಗಳಲ್ಲಿ ಪ್ರತಿ ವರ್ಷ ಕಂಪನಿ ₹800–900 ಕೋಟಿ ಹೂಡಿಕೆ ಮಾಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.