ADVERTISEMENT

ಸೋಮವಾರ, 20–5–1968

​ಪ್ರಜಾವಾಣಿ ವಾರ್ತೆ
Published 19 ಮೇ 2018, 19:30 IST
Last Updated 19 ಮೇ 2018, 19:30 IST
ಸೋಮವಾರ, 20–5–1968
ಸೋಮವಾರ, 20–5–1968   

ಪೌರಾಡಳಿತದಿಂದ ರಾಜಕೀಯ ದೂರವಿರಲು ಇಂದಿರಾ ಅಭಿಮತ
ಮದ್ರಾಸ್, ಮೇ 19–
ಪುರಸಭೆಗಳ ಚುನಾವಣೆಗಳಿಂದ ರಾಜಕೀಯ ದೂರವಿರುವುದು ಶ್ರೇಯಸ್ಕರವೆಂದು ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರು ಇಂದು ಇಲ್ಲಿ ವಿಮಾನನಿಲ್ದಾಣದಲ್ಲಿ ಪತ್ರಕರ್ತರೊಡನೆ ಮಾತನಾಡುತ್ತಾ ನುಡಿದರು.

‘ಆದರೆ ಇದು ವ್ಯವಹಾರ ರೂಪಕ್ಕೆ ಇಳಿಯುವ ಮುನ್ನ ಎಲ್ಲ ರಾಜಕೀಯ ಪಕ್ಷಗಳೂ ಒಪ್ಪಿಕೊಳ್ಳಬೇಕಾದ ವಿಚಾರ’ ಎಂದರು.

ಒಮ್ಮತದ ಆಯ್ಕೆಗೆ ಯತ್ನಿಸಲು ಎಸ್ಸೆನ್‌ಗೆ ಮನವಿ
ಬೆಂಗಳೂರು, ಮೇ 19–
ವಿಧಾನ ಮಂಡಲದ ಕಾಂಗ್ರೆಸ್ ನೂತನ ನಾಯಕನ ಸರ್ವಾನುಮತದ ಆಯ್ಕೆಗಾಗಿ ಮುಖ್ಯಮಂತ್ರಿ ಶ್ರೀ ಎಸ್. ನಿಜಲಿಂಗಪ್ಪ ಅವರಿಗೆ ಪೂರ್ಣ ಅಧಿಕಾರ ಕೊಡುವುದು. ಇದು ಆಗದೆ ಚುನಾವಣೆ ನಡೆದರೆ ಸಚಿವ ಶ್ರೀ ವೀರೇಂದ್ರ ಪಾಟೀಲ್ ಅವರಿಗೆ ಬೆಂಬಲ ನೀಡುವುದು– ಇದು ಶ್ರೀ ವೀರೇಂದ್ರ ಪಾಟೀಲ್ ಅವರ ಬೆಂಬಲಿಗರ ನಿಲುವು.

ADVERTISEMENT

ನಗರಕ್ಕೆ ಆಗಮಿಸಿರುವ ಹಾಗೂ ನಗರದಲ್ಲಿರುವ ಸುಮಾರು 60 ಮಂದಿ ಕಾಂಗ್ರೆಸ್ ಶಾಸಕರು ಇಂದು ಮುಖ್ಯ
ಮಂತ್ರಿ ಶ್ರೀ ಎಸ್. ನಿಜಲಿಂಗಪ್ಪ ಅವರನ್ನು ಕಂಡು ನಾಯಕನ ಒಮ್ಮತದ ಆಯ್ಕೆಗಾಗಿ ಪ್ರಯತ್ನ ಮಾಡಬೇಕೆಂದು ಪ್ರಾರ್ಥಿಸಿ ಜೊತೆಗೆ ತಮ್ಮ ಬೆಂಬಲ ಶ್ರೀ ವೀರೇಂದ್ರ ಪಾಟೀಲ್ ಅವರಿಗಿದೆಯೆಂದೂ ತಿಳಿಸಿದರು.

ಕಾಶ್ಮೀರದ ಭವಿಷ್ಯ ನಿರ್ಧಾರದ ಹಕ್ಕು ಭಾರತ ಸಂಸತ್ತಿಗೆ ಇಲ್ಲ: ಷೇಖ್
ಶ್ರೀನಗರ, ಮೇ 19–
ಕಾಶ್ಮೀರದ ಭವಿಷ್ಯವನ್ನು ನಿರ್ಧರಿಸುವ ಹಕ್ಕು ಭಾರತದ ಸಂಸತ್ತಿಗೆ ಇಲ್ಲ ಎಂದು ಷೇಖ್ ಅಬ್ದುಲ್ಲಾ ಘೋಷಿಸಿದ್ದಾರೆ. ಅದು ಕೈಗೊಂಡ ಯಾವ ನಿರ್ಧಾರವನ್ನೇ ಆಗಲಿ ಕಾಶ್ಮೀರದ ಜನರು ಸ್ವೀಕರಿಸಿದ ನಂತರವೇ ಅದಕ್ಕೆ ಕಾಶ್ಮೀರಿಗಳು ಬದ್ಧರು ಎಂದು ಅವರು ಹೇಳಿದ್ದಾರೆ.

ಜಾತೀಯತೆ ನಿರ್ಮೂಲನಕ್ಕೆ ಶಾಸನ ಕ್ರಮ?
ದೆಹಲಿ, ಮೇ 19– ಜಾತೀಯತೆಯನ್ನು ತೊಡೆದುಹಾಕಲು ಆಡಳಿತ ಹಾಗೂ ರಾಜಕೀಯ ಮಟ್ಟದಲ್ಲಿ ಕ್ರಮಕೈಗೊಳ್ಳಲು ಇಂದು ಇಲ್ಲಿ ಸಮಾವೇಶಗೊಂಡಿದ್ದ ಮುಖ್ಯಮಂತ್ರಿಗಳ ಸಭೆಯಲ್ಲಿ ಒಪ್ಪಂದಕ್ಕೆ ಬರಲಾಯಿತು.

ಜಾತೀಯ ಗಲಭೆಗೆ ಕಾರಣಕರ್ತರಾದವರ ಮೇಲೆ ಕಾನೂನು ಕ್ರಮ ಅಗತ್ಯವೆಂಬ ತರ್ಕಬದ್ಧ ಅಭಿಪ್ರಾಯವನ್ನು ಮುಖ್ಯಮಂತ್ರಿಗಳೆಲ್ಲ ವ್ಯಕ್ತಪಡಿಸಿದರಲ್ಲದೆ, ಅಂತಹವರ ಬಗ್ಗೆ ಕೈಗೊಳ್ಳಲಾಗುವ ಕಾನೂನುಕ್ರಮವನ್ನು ಯಾವ ದರ್ಜೆಯಲ್ಲೂ ಕೈಬಿಡಬಾರದೆಂದೂ ಒಮ್ಮತಕ್ಕೆ ಬಂದರು.

ಜಾತೀಯ ಪಕ್ಷಗಳನ್ನು ನಿಷೇಧಿಸಬೇಕೆಂದೂ ಕೆಲವರು ಅಭಿಪ್ರಾಯಪಟ್ಟರು. ಆದರೆ ಜಾತೀಯ ಪಕ್ಷ ಯಾವುದು, ಯಾವುದಲ್ಲವೆಂಬುದನ್ನು ನಿರೂಪಿಸುವುದು ಕಷ್ಟವೆಂಬುದು ಇನ್ನೂ ಕೆಲವರ ಅಭಿಪ್ರಾಯವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.