ADVERTISEMENT

ಅಕ್ಷಯ ತೃತೀಯಾ: ಮತ್ತೆ ಲಾಕ್‌ಡೌನ್‌ ಬಿಸಿ, ಆನ್‌ಲೈನ್‌ನಲ್ಲಿ ವ್ಯಾಪಾರದ ನಿರೀಕ್ಷೆ

ವಿಜಯ್ ಜೋಷಿ
Published 12 ಮೇ 2021, 19:45 IST
Last Updated 12 ಮೇ 2021, 19:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಲಾಕ್‌ಡೌನ್‌ ಕಾರಣದಿಂದಾಗಿ ಹಿಂದಿನ ವರ್ಷ ‘ಅಕ್ಷಯ ತೃತೀಯಾ’ ಸಂದರ್ಭದಲ್ಲಿ ನಿರೀಕ್ಷಿತ ವಹಿವಾಟು ಕಾಣದಿದ್ದ ರಾಜ್ಯದ ಚಿನ್ನಾಭರಣ ವರ್ತಕರಿಗೆ ಈ ಬಾರಿಯೂ ಲಾಕ್‌ಡೌನ್‌ನ ಬಿಸಿ ತಟ್ಟಿದೆ. ಆದರೆ, ಕೆಲವು ವರ್ತಕರು ಅಲ್ಪ ಪ್ರಮಾಣದಲ್ಲಿಯಾದರೂ ವ್ಯಾಪಾರ ನಡೆಸುವ ಇರಾದೆಯೊಂದಿಗೆ ಆನ್‌ಲೈನ್‌ ಮೊರೆ ಹೋಗಿದ್ದಾರೆ.

‘ಕೆಲವು ವರ್ತಕರು ಆನ್‌ಲೈನ್‌ ಮೂಲಕ ಚಿನ್ನಾಭರಣ, ಚಿನ್ನದ ಗಟ್ಟಿ ಅಥವಾ ಚಿನ್ನದ ನಾಣ್ಯದ ವ್ಯಾಪಾರ ನಡೆಸಲಿದ್ದಾರೆ. ಎಲ್ಲರಿಂದಲೂ ಆನ್‌ಲೈನ್‌ ಮೂಲಕ ವ್ಯಾಪಾರ ನಡೆಸಲು ಆಗುವುದಿಲ್ಲ’ ಎಂದು ಬೆಂಗಳೂರು ಚಿನ್ನಾಭರಣ ವರ್ತಕರ ಸಂಘದ ಅಧ್ಯಕ್ಷ ವಿದ್ಯಾಸಾಗರ್ ‘ಪ್ರಜಾವಾಣಿ’ಗೆ ತಿಳಿಸಿದರು. ಆನ್‌ಲೈನ್‌ ಮೂಲಕ ನಡೆಸುವ ಚಿನ್ನಾಭರಣ ವ್ಯಾಪಾರದಲ್ಲಿ, ಆಭರಣಗಳನ್ನು ಗ್ರಾಹಕರಿಗೆ ತಲುಪಿಸುವುದು ತುಸು ಸವಾಲೆನಿಸಬಹುದು ಎಂದು ಅವರು ಹೇಳಿದರು.

‘ಕಳೆದ ಬಾರಿಯ ಲಾಕ್‌ಡೌನ್‌ ಸಮಯದಲ್ಲಿ ಗ್ರಾಹಕರಿಂದ ಬೇಡಿಕೆ ಸ್ವೀಕರಿಸಿದ್ದೆವು. ಲಾಕ್‌ಡೌನ್ ತೆರವಾದ ನಂತರ ಅವರಿಗೆ ಆಭರಣ ತಲು‍ಪಿಸಿದ್ದೆವು’ ಎಂದು ಅವರು ತಿಳಿಸಿದರು.

ADVERTISEMENT

‘ಮೂರು–ನಾಲ್ಕು ವರ್ಷಗಳಿಂದ ವಹಿವಾಟು ಮಂದಗತಿಯಲ್ಲಿ ನಡೆದಿತ್ತು. ಕಳೆದ ಬಾರಿ ಲಾಕ್‌ಡೌನ್‌ ಎದುರಾಯಿತು. ಈ ಬಾರಿಯೂ ಅದೇ ಆಗಿದೆ’ ಎಂದು ಬೆಂಗಳೂರು ಚಿನ್ನಾಭರಣ ವರ್ತಕರ ಸಂಘದ ನಿಕಟಪೂರ್ವ ಅಧ್ಯಕ್ಷ ವೆಂಕಟೇಶ ಬಾಬು ಹೇಳಿದರು. ‘ಆನ್‌ಲೈನ್‌ ಮೂಲಕ ಕೆಲವರು ಮಾತ್ರ ಚಿನ್ನ ಖರೀದಿ ಮಾಡುತ್ತಾರೆ. ಆಭರಣ ಖರೀದಿಸುವವರಿಗಿಂತಲೂ, ಆನ್‌ಲೈನ್‌ನಲ್ಲಿ ಚಿನ್ನದ ಗಟ್ಟಿ ಅಥವಾ ಚಿನ್ನದ ನಾಣ್ಯ ಖರೀದಿಸುವವರು ಹೆಚ್ಚು’ ಎಂದರು.

‘ಅಕ್ಷಯ ತೃತೀಯಾ ಬರುತ್ತದೆ ಎಂದು ನಾವು ತಿಂಗಳಿಂದ ತಯಾರಿ ಮಾಡಿಕೊಳ್ಳುತ್ತೇವೆ. ಜನ ಕೂಡ ಈ ಸಂದರ್ಭದಲ್ಲಿ ಚಿನ್ನ ಖರೀದಿಸಬೇಕು ಎಂಬ ಬಯಕೆ ಹೊಂದಿರುತ್ತಾರೆ. ಈ ಬಾರಿ ಲಾಕ್‌ಡೌನ್‌, ನಿರ್ಬಂಧಗಳು ಎದುರಾಗಬಹುದು ಎಂಬ ಸಂದೇಶವನ್ನು ನಾವು ವರ್ತಕರಿಗೆ ನೀಡಿದ್ದೆವು. ಹಾಗಾಗಿ ಹಲವರು ಆನ್‌ಲೈನ್‌ ಮೂಲಕ ವಹಿವಾಟು ನಡೆಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಶುಕ್ರವಾರ ಆಭರಣ ಬುಕ್ ಮಾಡಿ, ಲಾಕ್‌ಡೌನ್‌ ತೆರವಾದ ನಂತರ ಬಂದು ಖರೀದಿಸುವವರೂ ಇದ್ದಾರೆ’ ಎಂದು ಕರ್ನಾಟಕ ಚಿನ್ನಾಭರಣ ವರ್ತಕರ ಸಂಘದ ಅಧ್ಯಕ್ಷ ಟಿ.ಎ. ಶರವಣ ಹೇಳಿದರು.

ತಮ್ಮಲ್ಲಿಗೆ ಭೇಟಿ ಮಾಡಿ ಆಭರಣ ಖರೀದಿಸಿದ್ದ ಗ್ರಾಹಕರ ವಿವರ ಇರುವ ಚಿನ್ನಾಭರಣ ಮಳಿಗೆಗಳವರು, ಗ್ರಾಹಕರಿಗೆ ನೇರವಾಗಿ ಕರೆ ಮಾಡಿ ವಿವಿಧ ಕೊಡುಗೆಗಳ ಬಗ್ಗೆ ಅವರಿಗೆ ವಿವರ ನೀಡುತ್ತಿದ್ದಾರೆ. ಆ ಮೂಲಕವೂ ಗ್ರಾಹಕರನ್ನು ಸೆಳೆಯುವ ಪ್ರಯತ್ನ ನಡೆದಿದೆ ಎಂದು ವರ್ತಕರೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.