ADVERTISEMENT

ಫಾಸ್ಟ್ಯಾಗ್ ರೀಡ್ ಆಗಿಲ್ಲವೇ? ಟೋಲ್ ಪಾವತಿಸಬೇಕಾಗಿಲ್ಲ

ಏಜೆನ್ಸೀಸ್
Published 16 ಜನವರಿ 2020, 9:56 IST
Last Updated 16 ಜನವರಿ 2020, 9:56 IST
ಟೋಲ್‌ ಪ್ಲಾಜಾದಲ್ಲಿ ಫಾಸ್ಟ್ಯಾಗ್‌ ಲೇನ್– ಸಾಂದರ್ಭಿಕ ಚಿತ್ರ
ಟೋಲ್‌ ಪ್ಲಾಜಾದಲ್ಲಿ ಫಾಸ್ಟ್ಯಾಗ್‌ ಲೇನ್– ಸಾಂದರ್ಭಿಕ ಚಿತ್ರ   
""
""
""

ಬೆಂಗಳೂರು: ಹೆದ್ದಾರಿ ಟೋಲ್‌ ಪ್ಲಾಜಾಗಳ ಮೂಲಕ ಹಾದು ಹೋಗಲು ವಾಹನಗಳಿಗೆ ಜನವರಿ 15ರಿಂದ ಫಾಸ್ಟ್ಯಾಗ್‌ ಕಡ್ಡಾಯ ಆಗಿದೆ. ಆದರೆ, ಟೋಲ್‌ ಪ್ಲಾಜಾಗಳಲ್ಲಿ ಅಳವಡಿಸಲಾಗಿರುವ ಯಂತ್ರಗಳು ಫಾಸ್ಟ್ಯಾಗ್‌ ಮಾಹಿತಿ ಗ್ರಹಿಸುವಲ್ಲಿ ವಿಫಲವಾದರೆ ಉಚಿತವಾಗಿ ಸಂಚಾರ ಮುಂದುವರಿಸಬಹುದು.

ಫಾಸ್ಟ್ಯಾಗ್ ಕಡ್ಡಾಯವು 65 ಟೋಲ್ ಪ್ಲಾಜಾಗಳಿಗೆ 30 ದಿನ ವಿಸ್ತರಣೆಯಾಗಿದೆ. ಇದರ ಹೊರತಾಗಿಯೂ, ಫಾಸ್ಟ್ಯಾಗ್ ರೀಡಿಂಗ್ ಆಗದಿದ್ದರೆ ಉಚಿತವಾಗಿ ಸಾಗಬಹುದು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಶುಲ್ಕ ಮತ್ತು ಸಂಗ್ರಹ ನಿಯಮಾವಳಿಗಳಿಗೆ ಸಂಬಂಧಿಸಿದ ಅಧಿಸೂಚನೆ ( National Highway Fee Determination of Rates and Collection Amendment Rule 2018 GSR 427E 07.05.2018 notification) ಪ್ರಕಾರ, ಟೋಲ್‌ ಪ್ಲಾಜಾ ಲೇನ್‌ಗಳಲ್ಲಿ ಅವಳವಡಿಸಲಾಗಿರುವ ಫಾಸ್ಟ್ಯಾಗ್‌ ಯಂತ್ರ ಸ್ಕ್ಯಾನ್‌ ಮಾಡಲು ವಿಫಲವಾದಲ್ಲಿ ವಾಹನಗಳು ಟೋಲ್ ಕಟ್ಟದೆಯೇ ಮುಂದುವರಿಯಲು ಅವಕಾಶ ನೀಡಲಾಗುತ್ತದೆ.

'ಸರಿಯಾದ ಫಾಸ್ಟ್ಯಾಗ್‌ ಹೊಂದಿದ್ದು, ಅದಕ್ಕೆ ಜೋಡಿಸಲಾಗಿರುವ ಖಾತೆಯಲ್ಲಿ ಶುಲ್ಕ ಪಾವತಿಸಲು ಸಾಕಾಗುವಷ್ಟು ಮೊತ್ತ ಉಳಿದಿದ್ದರೂ ಎಲೆಕ್ಟ್ರಾನಿಕ್‌ ಟೋಲ್‌ ಸಂಗ್ರಹ ಸ್ಥಳದಲ್ಲಿ ವಾಹನ ಸವಾರರ ಶುಲ್ಕ ಪಾವತಿಸಲು ಸಾಧ್ಯವಾಗದಿದ್ದರೆ; ಫಾಸ್ಟ್ಯಾಗ್‌ ಅಥವಾ ಅಂತಹ ಯಾವುದೇ ಉಪಕರಣದಿಂದ ಶುಲ್ಕ ಪಾವತಿಸುವ ಸೌಲಭ್ಯ ಇಲ್ಲದೆ ಹೋದರೆ, ಅಳವಡಿಸುವ ಯಂತ್ರಗಳು ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ ವಾಹನಗಳನ್ನು ಶುಲ್ಕ ಪಾವತಿಸದೆಯೇ ಸಾಗಲು ಅವಕಾಶ ಮಾಡಿಕೊಡಬಹುದು. ಶೂನ್ಯ ದರ ಶುಲ್ಕ ಪಾವತಿ ರಸೀದಿಯನ್ನು ಕಡ್ಡಾಯವಾಗಿ ನೀಡಬೇಕಾಗುತ್ತದೆ' ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ADVERTISEMENT

ದೇಶದ 523 ಟೋಲ್‌ ಪ್ಲಾಜಾಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (ಎನ್‌ಎಚ್‌ಎಐ) ಡಿಸೆಂಬರ್‌ 15ರಿಂದ ಎಲೆಕ್ಟ್ರಾನಿಕ್‌ ಟೋಲ್‌ ಸಂಗ್ರಹ ಆರಂಭಿಸಿದೆ. ಎನ್‌ಎಚ್‌ಎಐ ಪ್ರಕಾರ, ಈಗಾಗಲೇ 1.10 ಕೋಟಿ ಫಾಸ್ಟ್ಯಾಗ್‌ಗಳ ವಿತರಣೆಯಾಗಿದೆ.

ಫಾಸ್ಟ್ಯಾಗ್‌...

ರೇಡಿಯೊ ಫ್ರೀಕ್ವೆನ್ಸಿ ಐಡೆಂಟಿಫಿಕೇಷನ್ (ಆರ್‌ಎಫ್‌ಐಡಿ) ಸವಲತ್ತು ಉಳ್ಳ, ಸ್ಮಾರ್ಟ್‌ ಲೇಬಲ್‌ಗಳನ್ನು ಫ್ಯಾಸ್ಟ್ಯಾಗ್ ಎನ್ನಲಾಗುತ್ತದೆ. ಫಾಸ್ಟ್ಯಾಗ್‌ನಲ್ಲಿ ಕ್ಯುಆರ್‌ ಜೋಡ್‌ ಇರಲಿದೆ (ಕೆಲವು ಬ್ಯಾಂಕ್‌ಗಳ ಫಾಸ್ಟ್ಯಾಗ್‌ನಲ್ಲಿ ಬಾರ್‌ಕೋಡ್ ಇರಲಿದೆ). ಫಾಸ್ಟ್ಯಾಗ್‌ ಅನ್ನು ವಾಹನದ ಮುಂಭಾಗದ ಗಾಜಿಗೆ (ವಿಂಡ್‌ಸ್ಕ್ರೀನ್‌) ಅಂಟಿಸಿರಲಾಗುತ್ತದೆ. ಇದನ್ನು ವಾಹನದ ನೋಂದಣಿ ಸಂಖ್ಯೆಗೆ ಜೋಡಿಸಿರಲಾಗುತ್ತದೆ. ಆಯಾ ವಾಹನದ ಫಾಸ್ಟ್ಯಾಗ್‌ ಖಾತೆಯಲ್ಲಿ ಮುಂಚಿತವಾಗಿ ಹಣ ಜಮೆ ಮಾಡಿರಬೇಕು.

ಟೋಲ್‌ಬೂತ್‌ಗಳ ಫಾಸ್ಟ್ಯಾಗ್‌ ಲೇನ್‌ನಲ್ಲಿ ರೀಡರ್ ಇರುತ್ತದೆ. ಆ ಲೇನ್ ಅನ್ನು ವಾಹನ ಹಾದುಹೋದಾಗ ಅದರಲ್ಲಿರುವ ಫಾಸ್ಟ್ಯಾಗ್‌ ಅನ್ನು ರೀಡರ್, ರೀಡ್ ಮಾಡಲಿದೆ. ಆ ಫಾಸ್ಟ್ಯಾಗ್‌ನ ಖಾತೆಯಿಂದ ಶುಲ್ಕ ಪಾವತಿ ಆಗಲಿದೆ.ಐಸಿಐಸಿಐ, ಎಚ್‌ಡಿಎಫ್‌ಸಿ, ಆಕ್ಸಿಸ್‌, ಎಸ್‌ಬಿಐ, ಏರ್‌ಟೆಲ್ ಪೇಮೆಂಟ್ ಬ್ಯಾಂಕ್ ಸೇರಿದಂತೆ 22 ಬ್ಯಾಂಕ್‌ಗಳು ಫಾಸ್ಟ್ಯಾಗ್ ಮಾರಾಟ ಮಾಡುತ್ತವೆ. ಆಯ್ದ ಶಾಖೆಗಳಲ್ಲಿ ಈ ಸೇವೆ ಲಭ್ಯವಿದೆ. ಆನ್‌ಲೈನ್‌ನಲ್ಲೂ ಖರೀದಿಸಬಹುದಾಗಿದೆ. ಟೋಲ್‌ ಪ್ಲಾಜಾಗಳಲ್ಲೂ ಫಾಸ್ಟ್ಯಾಗ್ ಖರೀದಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.