ADVERTISEMENT

ಮೇ ತಿಂಗಳಲ್ಲಿ ಈವರೆಗೆ ವಿದೇಶಿ ಬಂಡವಾಳ ಹೂಡಿಕೆದಾರರಿಂದ ₹ 35,137 ಕೋಟಿ ಹಿಂದಕ್ಕೆ

ಫೆಡರಲ್‌ ರಿಸರ್ವ್‌ನಿಂದ ಬಡ್ಡಿದರ ಹೆಚ್ಚಳ, ಡಾಲರ್‌ ಮೌಲ್ಯ ವೃದ್ಧಿ ಪರಿಣಾಮ

ಪಿಟಿಐ
Published 21 ಮೇ 2022, 13:43 IST
Last Updated 21 ಮೇ 2022, 13:43 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ವಿದೇಶಿ ಬಂಡವಾಳ ಹೂಡಿಕೆದಾರರು(ಎಫ್‌ಪಿಐ)ದೇಶದ ಷೇರುಪೇಟೆಗಳಿಂದ ಬಂಡವಾಳ ಹಿಂದಕ್ಕೆ ಪಡೆಯುವುದು ಮುಂದುವರಿದಿದೆ. ಮೇ ತಿಂಗಳಿನಲ್ಲಿ ಇದುವರೆಗೆ ₹ 35,137 ಕೋಟಿ ಮೊತ್ತವನ್ನು ಷೇರುಪೇಟೆಯಿಂದ ಹಿಂದಕ್ಕೆ ಪಡೆದಿದ್ದಾರೆ. ಇದರಿಂದಾಗಿ 2022ರಲ್ಲಿ ಈವರೆಗೆ ಷೇರುಪೇಟೆಯಿಂದ ಒಟ್ಟಾರೆ ₹ 1.63 ಲಕ್ಷ ಕೋಟಿಗೂ ಅಧಿಕ ಬಂಡವಾಳ ಹೊರಹೋದಂತಾಗಿದೆ.

ಅಮೆರಿಕದ ಕೇಂದ್ರೀಯ ಬ್ಯಾಂಕ್‌ ಫೆಡರಲ್‌ ರಿಸರ್ವ್‌ ಇನ್ನಷ್ಟು ತ್ವರಿತವಾಗಿ ಬಡ್ಡಿದರ ಹೆಚ್ಚಳ ಮಾಡುವ ಸಾಧ್ಯತೆ ಹಾಗೂ ಕರೆನ್ಸಿ ವಿನಿಯಮ ಮಾರುಕಟ್ಟೆಯಲ್ಲಿ ಡಾಲರ್‌ ಮೌಲ್ಯ ವೃದ್ಧಿಯಾಗುತ್ತಿರುವುದರಿಂದ ವಿದೇಶಿ ಬಂಡವಾಳ ಹೊರಹರಿವು ಹೆಚ್ಚಾಗುತ್ತಿದೆ.

ಅ‘ಲ್ಪಾವಧಿಯಲ್ಲಿ ಭಾರತದ ಮಾರುಕಟ್ಟೆಯಲ್ಲಿ ವಿದೇಶಿ ಬಂಡವಾಳ ಒಳಹರಿವು ಚಂಚಲವಾಗಿರಲಿದೆ. ಕಚ್ಚಾ ತೈಲ ದರ ಏರಿಕೆ, ಹಣದುಬ್ಬರ, ಕೇಂದ್ರೀಯ ಬ್ಯಾಂಕ್‌ಗಳು ಆರ್ಥಿಕ ನೀತಿಯನ್ನು ಬಿಗಿಗೊಳಿಸಿರುವುದು ಸೇರಿದಂತೆ ಇನ್ನೂ ಹಲವು ಕಾರಣಗಳಿಂದ ಬಂಡವಾಳ ಒಳಹರಿವು ಅಸ್ಥಿರವಾಗಿರಲಿದೆ’ ಎಂದು ಕೋಟಕ್‌ ಸೆಕ್ಯುರಿಟೀಸ್‌ನ ಮುಖ್ಯಸ್ಥ ಶ್ರೀಕಾಂತ್‌ ಚೌಹಾಣ್‌ ಹೇಳಿದ್ದಾರೆ.

ADVERTISEMENT

‘ಅಮೆರಿಕದ ಮಾರುಕಟ್ಟೆಯು ದುರ್ಬಲವಾಗಿದ್ದು, ಡಾಲರ್‌ ಮೌಲ್ಯ ಉತ್ತಮವಾಗಿದೆ. ಹೀಗಾಗಿ ಅಲ್ಪಾವಧಿಯಲ್ಲಿ ಎಫ್‌ಪಿಐ ಮಾರಾಟ ಮಾಡುವುದನ್ನು ಮುಂದುವರಿಸಲಿದ್ದಾರೆ’ ಎಂದು ಜಿಯೋಜಿತ್‌ ಹಣಕಾಸು ಸೇವೆಗಳ ಮುಖ್ಯ ಹೂಡಿಕೆ ತಜ್ಞ ವಿ.ಕೆ. ವಿಜಯಕುಮಾರ್‌ ಅಭಿಪ್ರಾಯಪಟ್ಟಿದ್ದಾರೆ.

‘ಎಫ್‌ಪಿಐ ಹೊರಹರಿವಿಗೆ ಪ್ರಮುಖ ಕಾರಣವೇ ಡಾಲರ್‌ ಮೌಲ್ಯ ವೃದ್ಧಿ. ಡಾಲರ್ ಇಂಡೆಕ್ಸ್‌ 103ರ ಮಟ್ಟವನ್ನೂ ಮೀರಿದೆ. ಎಫ್‌ಪಿಐಗೆ ದೊಡ್ಡ ಮಟ್ಟದಲ್ಲಿ ಲಾಭ ಮಾಡಿಕೊಳ್ಳಲು ಭಾರತವು ಪ್ರಮುಖ ಮಾರುಕಟ್ಟೆ ಆಗಿದೆ’ ಎಂದೂ ಅವರು ಹೇಳಿದ್ದಾರೆ.

ರಷ್ಯಾ–ಉಕ್ರೇನ್‌ ಸಂಘರ್ಷದಿಂದ ಪೂರೈಕೆ ಸಮಸ್ಯೆ ಎದುರಾಗಿದೆ. ಇದರಿಂದಾಗಿ ಹಣದುಬ್ಬರ ಹೆಚ್ಚಾಗುತ್ತಿದೆ. ಈ ಸಮಸ್ಯೆ ನಿವಾರಣೆಗಾಗಿ ಅಮೆರಿಕದ ಫೆಡರಲ್‌ ರಿಸರ್ವ್‌ ಈಗಾಗಲೇ ಎರಡು ಬಾರಿ ಬಡ್ಡಿದರ ಏರಿಕೆ ಮಾಡಿದೆ.

‘ರಷ್ಯಾ–ಉಕ್ರೇನ್‌ ಸಂಘರ್ಷದಿಂದಾಗಿ ಹೂಡಿಕೆದಾರರು ಭಾರತದಂತಹ ಮಾರುಕಟ್ಟೆಯಿಂದ ದೂರ ಉಳಿಯುತ್ತಿದ್ದಾರೆ. ಅಲ್ಲದೆ, ಸದ್ಯದ ಪರಿಸ್ಥಿತಿಯಲ್ಲಿ ಲಾಭ ಮಾಡಿಕೊಳ್ಳುವುದಕ್ಕಿಂತಲೂ ಉತ್ತಮ ಆಯ್ಕೆ ಬೇರೊಂದಿಲ್ಲ ಎನ್ನುವುದು ಅವರ ಅಭಿಪ್ರಾಯಪವಾಗಿದೆ’ ಎಂದು ಮಾರ್ನಿಂಗ್‌ಸ್ಟಾರ್‌ ಇಂಡಿಯಾದ ಸಹಾಯಕ ನಿರ್ದೇಶಕ ಹಿಮಾಂಶು ಶ್ರೀವಾಸ್ತವ ಹೇಳಿದ್ದಾರೆ.

ವಿದೇಶಿ ಹೂಡಿಕೆದಾರರು ಸಾಲಪತ್ರ ಮಾರುಕಟ್ಟೆಯಿಂದಲೂ ₹ 6,133 ಕೋಟಿ ಬಂಡವಾಳ ಹಿಂದಕ್ಕೆ ಪಡೆದಿದ್ದಾರೆ. ತೈವಾನ್‌, ದಕ್ಷಿಣ ಕೊರಿಯಾ, ಇಂಡೊನೇಷ್ಯಾ ಮತ್ತು ಪಿಲಿಪ್ಪೀನ್ಸ್‌ ದೇಶಗಳಿಂದಲೂ ಮೇ ತಿಂಗಳಿನಲ್ಲಿ ಬಂಡವಾಳ ಹೊರಹರಿವು ಕಂಡುಬಂದಿದೆ.

ಮುಖ್ಯಾಂಶಗಳು

ಕೇಂದ್ರೀಯ ಬ್ಯಾಂಕ್‌ಗಳಿಂದ ಬಡ್ಡಿದರ ಏರಿಕೆ

ಅಮೆರಿಕದ ಡಾಲರ್‌ ಮೌಲ್ಯ ವೃದ್ಧಿ

ರಷ್ಯಾ–ಉಕ್ರೇನ್‌ ಸಂಘರ್ಷ

***

ಬಂಡವಾಳ ಹೊರಹರಿವು (ಕೋಟಿಗಳಲ್ಲಿ)

ಜನವರಿ;₹ 28,526

ಫೆಬ್ರುವರಿ;₹ 38,068

ಮಾರ್ಚ್‌;₹ 48,262

ಏಪ್ರಿಲ್‌; ₹ 17,144

ಮೇ 2–20; ₹ 35,137

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.