ADVERTISEMENT

ಖಾದ್ಯ ತೈಲಗಳ ಆಮದು ಸುಂಕ ಇಳಿಕೆ

ಪಿಟಿಐ
Published 11 ಸೆಪ್ಟೆಂಬರ್ 2021, 12:22 IST
Last Updated 11 ಸೆಪ್ಟೆಂಬರ್ 2021, 12:22 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಖಾದ್ಯ ತೈಲಗಳ ಚಿಲ್ಲರೆ ಮಾರಾಟ ದರವನ್ನು ತಗ್ಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ತಾಳೆ ಎಣ್ಣೆ, ಸೋಯಾ ಎಣ್ಣೆ ಹಾಗೂ ಸೂರ್ಯಕಾಂತಿ ಎಣ್ಣೆಗಳ ಮೇಲಿನ ಮೂಲ ಆಮದು ಸುಂಕವನ್ನು ಕಡಿಮೆ ಮಾಡಿದೆ.

ಶನಿವಾರದಿಂದಲೇ ಜಾರಿಗೆ ಬರುವಂತೆ ಕಚ್ಚಾ ತಾಳೆ ಎಣ್ಣೆಯ ಮೇಲಿನ ಮೂಲ ಆಮದು ಸುಂಕವನ್ನು ಶೇ 10ರಷ್ಟು ಇದ್ದಿದ್ದು ಶೇ 2.5ಕ್ಕೆ ಇಳಿಕೆ ಮಾಡಿದೆ. ಕಚ್ಚಾ ಸೋಯಾ ಎಣ್ಣೆ ಮತ್ತು ಕಚ್ಚಾ ಸೂರ್ಯಕಾಂತಿ ಎಣ್ಣೆಯ ಮೇಲಿನ ಸುಂಕವನ್ನು ಶೇ 7.5ರಿಂದ ಶೇ 2.5ಕ್ಕೆ ತಗ್ಗಿಸಲಾಗಿದೆ ಎಂದು ಹಣಕಾಸು ಸಚಿವಾಲಯದ ಪ್ರಕಟಣೆಯು ತಿಳಿಸಿದೆ.

ಸರ್ಕಾರದ ಈ ನಿರ್ಧಾರದಿಂದಾಗಿ ಕಚ್ಚಾ ಸೋಯಾ, ಸೂರ್ಯಕಾಂತಿ ಮತ್ತು ತಾಳೆ ಎಣ್ಣೆಗಳ ಆಮದು ಸುಂಕವು ಶೇ 24.75ಕ್ಕೆ ತಗ್ಗಿದಂತಾಗಿದೆ. ಸಂಸ್ಕರಿಸಿದ ತಾಳೆ ಎಣ್ಣೆ, ಸೋಯಾ ಮತ್ತು ಸೂರ್ಯಕಾಂತಿ ಎಣ್ಣೆಗಳ ಮೇಲಿನ ಸುಂಕವು ಶೇ 35.75ರಷ್ಟಾಗಿದೆ ಎಂದು ಸಾಲ್ವೆಂಟ್‌ ಎಕ್ಸ್‌ಟ್ರ್ಯಾಕ್ಟರ್ಸ್‌ ಅಸೋಸಿಯೇಷನ್‌ ಆಫ್‌ ಇಂಡಿಯಾ (ಎಸ್‌ಇಎ) ಕಾರ್ಯನಿರ್ವಾಹಕ ನಿರ್ದೇಶಕ ಬಿ.ವಿ. ಮೆಹ್ತಾ ತಿಳಿಸಿದ್ದಾರೆ.

ADVERTISEMENT

ಈ ಸುಂಕ ಕಡಿತದಿಂದಾಗಿ ಪ್ರತಿ ಲೀಟರ್‌ ಮೇಲಿನ ಚಿಲ್ಲರೆ ಮಾರಾಟ ದರದಲ್ಲಿ ₹ 4–5ರಷ್ಟು ಕಡಿಮೆ ಆಗುವ ಸಾಧ್ಯತೆ ಇದೆ. ಆದರೆ, ಭಾರತವು ಆಮದು ಸುಂಕ ತಗ್ಗಿಸಿದ ಬಳಿಕ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿದರವು ಹೆಚ್ಚಾಗುವುದು ಸಾಮಾನ್ಯವಾಗಿದೆ. ಹೀಗಾದಲ್ಲಿ ಪ್ರತಿ ಲೀಟರಿಗೆ ₹ 2–3 ರಷ್ಟು ಮಾತ್ರವೇ ಇಳಿಕೆ ಆಗಬಹುದು ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.