ADVERTISEMENT

ಜಿಎಸ್‌ಟಿ ವ್ಯಾಪ್ತಿಗೆ ಪೆಟ್ರೋಲ್, ಡೀಸೆಲ್: ಮಂಡಳಿಯಿಂದ ಪರಿಶೀಲನೆ?

ಪಿಟಿಐ
Published 15 ಸೆಪ್ಟೆಂಬರ್ 2021, 2:03 IST
Last Updated 15 ಸೆಪ್ಟೆಂಬರ್ 2021, 2:03 IST
   

ನವದೆಹಲಿ: ಪೆಟ್ರೋಲ್, ಡೀಸೆಲ್ ಹಾಗೂ ಇತರ ಪೆಟ್ರೋಲಿಯಂ ಉತ್ಪನ್ನಗಳನ್ನು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯಾಪ್ತಿಗೆ ತರುವ ಬಗ್ಗೆ ಜಿಎಸ್‌ಟಿ ಮಂಡಳಿಯು ಶುಕ್ರವಾರದ ಸಭೆಯಲ್ಲಿ ಪರಿಶೀಲನೆ ನಡೆಸುವ ಸಾಧ್ಯತೆ ಇದೆ.

ಈ ಉತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತಂದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮ ವರಮಾನದ ವಿಚಾರದಲ್ಲಿ ದೊಡ್ಡ ಪ್ರಮಾಣದಲ್ಲಿ ರಾಜಿ–ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ಕೋವಿಡ್‌–19 ಚಿಕಿತ್ಸೆಗೆ ಸಂಬಂಧಪಟ್ಟ ಕೆಲವು ಅಗತ್ಯ ವಸ್ತುಗಳಿಗೆ ಸುಂಕ ವಿನಾಯಿತಿಯನ್ನು ವಿಸ್ತರಿಸುವ ಬಗ್ಗೆಯೂ ಮಂಡಳಿಯು ಪರಿಶೀಲನೆ ನಡೆಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ತಗ್ಗಿಸಬೇಕು ಎಂದಾದರೆ ಇವುಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವುದು ಸೂಕ್ತ ಎಂಬ ಅಭಿಪ್ರಾಯ ಇದೆ. ಪೆಟ್ರೋಲ್ ಹಾಗೂ ಡೀಸೆಲ್‌ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವ ಬಗ್ಗೆ ತೀರ್ಮಾನ ಕೈಗೊಳ್ಳುವಂತೆ ಜಿಎಸ್‌ಟಿ ಮಂಡಳಿಗೆ ಕೇರಳ ಹೈಕೋರ್ಟ್‌ ಜೂನ್‌ನಲ್ಲಿ ಸೂಚಿಸಿತ್ತು. ಕೋರ್ಟ್‌ ಈ ರೀತಿ ಸೂಚನೆ ನೀಡಿರುವ ಕಾರಣ, ಈ ವಿಚಾರವನ್ನು ಮಂಡಳಿಯ ಮುಂದೆ ಚರ್ಚೆಗೆ ಇರಿಸಲಾಗುವುದು ಎಂದು ಮೂಲಗಳು ಹೇಳಿವೆ.

ADVERTISEMENT

ಜಿಎಸ್‌ಟಿಯು ಬಳಕೆ ಆಧಾರಿತ ತೆರಿಗೆ ವ್ಯವಸ್ಥೆ. ಈ ವ್ಯವಸ್ಥೆಯ ಅಡಿಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳನ್ನು ತರುವುದರಿಂದ ಈ ಉತ್ಪನ್ನಗಳು ಮಾರಾಟ ಹೆಚ್ಚಾಗಿ ಆಗುವ ರಾಜ್ಯಗಳಿಗೆ ಹೆಚ್ಚಿನ ಆದಾಯ ಸಿಗುತ್ತದೆ. ಆದರೆ, ಇವುಗಳನ್ನು ಉತ್ಪಾದಿಸು ರಾಜ್ಯಗಳಿಗೆ ಹೆಚ್ಚಿನ ಆದಾಯ ಸಿಗುವುದಿಲ್ಲ. ಉದಾಹರಣೆಗೆ, ಹೆಚ್ಚಿನ ಜನಸಂಖ್ಯೆ ಇರುವ, ಬಳಕೆಯೂ ಹೆಚ್ಚಿಗೆ ಇರುವ ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯಗಳು ಗುಜರಾತ್‌ನಂತಹ ರಾಜ್ಯಗಳಿಗಿಂತ ಹೆಚ್ಚಿನ ಆದಾಯ ಸಂಗ್ರಹಿಸುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.