ADVERTISEMENT

ಎಲ್‌ಐಸಿ: ಶೇ 20ರಷ್ಟು ವಿದೇಶಿ ಹೂಡಿಕೆಗೆ ಅವಕಾಶ?

ರಾಯಿಟರ್ಸ್
Published 8 ಸೆಪ್ಟೆಂಬರ್ 2021, 16:45 IST
Last Updated 8 ಸೆಪ್ಟೆಂಬರ್ 2021, 16:45 IST
   

ನವದೆಹಲಿ: ಭಾರತೀಯ ಜೀವ ವಿಮಾ ನಿಗಮದಲ್ಲಿ (ಎಲ್‌ಐಸಿ) ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಗೆ ಶೇಕಡ 20ರಷ್ಟು ಷೇರುಗಳನ್ನು ಖರೀದಿಸಲು ಅವಕಾಶ ಕಲ್ಪಿಸುವ ಬಗ್ಗೆ ಕೇಂದ್ರ ಸರ್ಕಾರವು ಪರಿಶೀಲನೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಎಲ್‌ಐಸಿ ಷೇರುಗಳನ್ನು ಸಾರ್ವಜನಿಕರಿಗೆ ಖರೀದಿಗೆ ಮುಕ್ತವಾಗಿಸುವ ಪ್ರಕ್ರಿಯೆಯು (ಐಪಿಒ) ಭಾರತದ ಅತಿದೊಡ್ಡ ಐಪಿಒ ಆಗಲಿದೆ ಎಂಬ ನಿರೀಕ್ಷೆ ಇದೆ.

ಈಗಿರುವ ನಿಯಮಗಳ ಅನ್ವಯ, ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಗೆ ಖಾಸಗಿ ವಿಮಾ ಕಂಪನಿಗಳಲ್ಲಿ ಶೇಕಡ 74ರವರೆಗೆ, ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಶೇ 20ರವರೆಗೆ ಷೇರುಪಾಲು ಹೊಂದಲು ಅವಕಾಶ ಇದೆ. ಆದರೆ ಅವರು ಎಲ್‌ಐಸಿಯಲ್ಲಿ ಷೇರುಪಾಲು ಹೊಂದಲು ಅವಕಾಶ ಇಲ್ಲ. ಈಗ ಅವಕಾಶ ಕಲ್ಪಿಸಿದರೆ, ವಿದೇಶಿ ಪಿಂಚಣಿ ನಿಧಿಗಳಿಗೆ, ವಿಮಾ ಕಂಪನಿಗಳಿಗೆ ಹಾಗೂ ಮ್ಯೂಚುವಲ್ ಫಂಡ್ ಕಂಪನಿಗಳಿಗೆ ಎಲ್‌ಐಸಿ ಐಪಿಒ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಅವಕಾಶ ಸಿಗುತ್ತದೆ.

ADVERTISEMENT

ಎಲ್‌ಐಸಿ ಷೇರುಗಳನ್ನು ಸಾರ್ವಜನಿಕರಿಗೆ ಖರೀದಿಗೆ ಮುಕ್ತವಾಗಿಸಿ, ಷೇರುಗಳ ಮಾರಾಟ ಹಾಗೂ ಖರೀದಿ ಷೇರುಪೇಟೆಗಳಲ್ಲಿ ಹಾಲಿ ಹಣಕಾಸು ವರ್ಷದಲ್ಲಿಯೇ ಶುರುವಾಗಬೇಕು ಎಂಬ ಗುರಿಯನ್ನು ಕೇಂದ್ರವು ಹೊಂದಿದೆ. ಐಪಿಒ ಪ್ರಕ್ರಿಯೆ ಶುರುಮಾಡಲು 10 ಮರ್ಚೆಂಟ್ ಬ್ಯಾಂಕ್‌ಗಳನ್ನು ಹಿಂದಿನ ತಿಂಗಳು ಆಯ್ಕೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.