ADVERTISEMENT

ವಿದೇಶಿ ನೇರ ಬಂಡವಾಳ ಹೂಡಿಕೆಗೆ ಭಾರತ ನೆಚ್ಚಿನ ತಾಣ: ಡೆಲಾಯ್ಟ್ ಸಮೀಕ್ಷೆ

ಪಿಟಿಐ
Published 14 ಸೆಪ್ಟೆಂಬರ್ 2021, 11:03 IST
Last Updated 14 ಸೆಪ್ಟೆಂಬರ್ 2021, 11:03 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ವಿದೇಶಿ ನೇರ ಬಂಡವಾಳ ಹೂಡಿಕೆಯ (ಎಫ್‌ಡಿಐ) ವಿಚಾರದಲ್ಲಿ ಭಾರತವು ಆಕರ್ಷಕ ತಾಣವಾಗಿ ಉಳಿದಿದೆ. ಆರೋಗ್ಯಕರ ಆರ್ಥಿಕ ಬೆಳವಣಿಗೆಯ ಸಾಧ್ಯತೆ ಇರುವುದು, ಕುಶಲ ಕೆಲಸಗಾರರು ಲಭ್ಯವಿರುವುದು ಇದಕ್ಕೆ ಕಾರಣ ಎಂದು ಡೆಲಾಯ್ಟ್‌ ಸಂಸ್ಥೆ ನಡೆಸಿರುವ ಸಮೀಕ್ಷೆಯೊಂದು ಹೇಳಿದೆ.

ಅಲ್ಪಾವಧಿಯಲ್ಲಿ ಹಾಗೂ ದೀರ್ಘಾವಧಿಯಲ್ಲಿ ಭಾರತವು ತೋರಲಿರುವ ಸಾಧನೆ ಬಗ್ಗೆ ಅಂತರರಾಷ್ಟ್ರೀಯ ಮಟ್ಟದ ಉದ್ಯಮಿಗಳು ಭರವಸೆ ವ್ಯಕ್ತಪಡಿಸಿದ್ದಾರೆ. ಅವರು ಹೆಚ್ಚುವರಿ ಹೂಡಿಕೆ ಮಾಡಲು ಹಾಗೂ ಹೊಸದಾಗಿ ಹೂಡಿಕೆ ಮಾಡಲು ಯೋಜನೆಗಳನ್ನು ಸಿದ್ಧಪಡಿಸುತ್ತಿದ್ದಾರೆ ಎಂದು ಸಮೀಕ್ಷೆಯು ಹೇಳಿದೆ.

‘ಸಮೀಕ್ಷೆಯು ಅಮೆರಿಕ, ಬ್ರಿಟನ್, ಜಪಾನ್ ಮತ್ತು ಸಿಂಗಪುರದ ಉದ್ಯಮ ವಲಯದ 1,200 ಪ್ರಮುಖರಿಂದ ಅಭಿಪ್ರಾಯ ಸಂಗ್ರಹಿಸಿದೆ’ ಎಂದು ‘ಭಾರತದಲ್ಲಿನ ಎಫ್‌ಡಿಐ ಅವಕಾಶ’ ಎನ್ನುವ ಈ ವರದಿ ಹೇಳಿದೆ. ಜವಳಿ ಮತ್ತು ವಸ್ತ್ರ, ಆಹಾರ ಸಂಸ್ಕರಣೆ, ಎಲೆಕ್ಟ್ರಾನಿಕ್ಸ್, ಔಷಧ ಉದ್ಯಮ, ವಾಹನ ಮತ್ತು ಬಿಡಿಭಾಗಗಳು, ರಾಸಾಯನಿಕಗಳು ಸೇರಿದಂತೆ ಹೆಚ್ಚು ಬಂಡವಾಳ ಬೇಕಾಗುವ ಏಳು ವಲಯಗಳಲ್ಲಿ ಭಾರತವು ಹೆಚ್ಚು ಎಫ್‌ಡಿಐ ಆಕರ್ಷಿಸುವ ಗುರಿ ಹೊಂದಬಹುದು.

ADVERTISEMENT

ಜಪಾನಿನ ಉದ್ಯಮಿಗಳು ಭಾರತದಲ್ಲಿನ ಮಾರುಕಟ್ಟೆಯ ಪ್ರಯೋಜನ ಪಡೆಯಲು ಹೂಡಿಕೆ ಮಾಡುತ್ತಿದ್ದಾರೆ; ಅವರು ಭಾರತದಲ್ಲಿ ವಸ್ತುಗಳನ್ನು ಸಿದ್ಧಪಡಿಸಿ ಅವುಗಳನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗೆ ಒಯ್ಯುವ ಉದ್ದೇಶವನ್ನಷ್ಟೇ ಹೊಂದಿಲ್ಲ. ಭಾರತದಲ್ಲಿ ವಾಣಿಜ್ಯ ವಹಿವಾಟು ನಡೆಸುವುದನ್ನು ಇನ್ನಷ್ಟು ಸುಲಲಿತ ಆಗಿಸಲು ಈಚೆಗೆ ಕೆಲವು ಕ್ರಮಗಳನ್ನು ಕೈಗೊಳ್ಳಲಾಗಿದ್ದರೂ ಅದರ ಬಗ್ಗೆ ಹೂಡಿಕೆದಾರರಲ್ಲಿ ಅರಿವಿನ ಕೊರತೆ ಇದೆ. ಜಪಾನ್ ಹಾಗೂ ಸಿಂಗಪುರ ದೇಶಗಳ ಉದ್ಯಮಿಗಳು ಈ ಕ್ರಮಗಳ ಬಗ್ಗೆ ಬಹಳ ಕಡಿಮೆ ಮಾಹಿತಿ ಹೊಂದಿದ್ದಾರೆ ಎಂದು ಸಮೀಕ್ಷೆ ವಿವರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.