ADVERTISEMENT

ಕೈಗಾರಿಕಾ ಉತ್ಪಾದನೆ ಶೇ 11.5ರಷ್ಟು ಬೆಳವಣಿಗೆ

ಪಿಟಿಐ
Published 11 ಸೆಪ್ಟೆಂಬರ್ 2021, 15:27 IST
Last Updated 11 ಸೆಪ್ಟೆಂಬರ್ 2021, 15:27 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶದ ಕೈಗಾರಿಕಾ ಉತ್ಪಾದನೆಯು ಜುಲೈನಲ್ಲಿ ಶೇ 11.5ರಷ್ಟು ಬೆಳವಣಿಗೆ ಕಂಡಿದೆ. ತಯಾರಿಕೆ, ಗಣಿಗಾರಿಕೆ ಮತ್ತು ಇಂಧನ ವಲಯಗಳ ಉತ್ತಮ ಬೆಳವಣಿಗೆಯಿಂದಾಗಿ ಈ ಪ್ರಗತಿ ಸಾಧ್ಯವಾಗಿದೆ.

ಹಿಂದಿನ ವರ್ಷದ ಜುಲೈನಲ್ಲಿ ಕೈಗಾರಿಕಾ ಉತ್ಪಾದನೆ ಕುಸಿತ ಕಂಡಿದ್ದು ಸಹ 2021ರ ಜುಲೈನಲ್ಲಿ ಈ ಪ್ರಮಾಣದ ಬೆಳವಣಿಗೆಗೆ ಕಾರಣವಾಗಿದೆ. 2020ರ ಜುಲೈನಲ್ಲಿ ಕೈಗಾರಿಕಾ ಉತ್ಪಾದನೆಯು ಶೇ 10.5ರಷ್ಟು ಕುಸಿದಿತ್ತು. ಹೀಗಿದ್ದರೂ 2021ರ ಜೂನ್‌ ತಿಂಗಳಿಗೆ ಹೋಲಿಸಿದರೆ ಶೇ 2.2ರಷ್ಟು ಇಳಿಕೆ ಆಗಿದೆ.

ಕೈಗಾರಿಕಾ ಉತ್ಪಾದನಾ ಸೂಚ್ಯಂಕಕ್ಕೆ (ಐಐಪಿ) ಶೇ 77.63ರಷ್ಟು ಕೊಡುಗೆ ನೀಡುವ ತಯಾರಿಕಾ ವಲಯವು ಜುಲೈನಲ್ಲಿ ಶೇ 10.5ರಷ್ಟು ಬೆಳವಣಿಗೆ ಕಂಡಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿಯು (ಎನ್‌ಎಸ್‌ಒ) ಮಾಹಿತಿ ನೀಡಿದೆ.

ADVERTISEMENT

ಗಣಿಗಾರಿಕೆ ವಲಯದ ಉತ್ಪಾದನೆಯು ಶೇ 19.5 ರಷ್ಟು ಹಾಗೂ ಇಂಧನ ವಲಯದ ಉತ್ಪಾದನೆಯು ಶೇ 11.1ರಷ್ಟು ಪ್ರಗತಿ ಕಂಡಿವೆ. ಬಂಡವಾಳ ಸರಕುಗಳ ವಲಯವು ಶೇ 29.5ರಷ್ಟು ಬೆಳವಣಿಗೆ ಕಂಡಿದೆ. ಹಿಂದಿನ ವರ್ಷದ ಜುಲೈನಲ್ಲಿ ಶೇ 22.8ರಷ್ಟು ಕುಸಿದಿತ್ತು.

ಗ್ರಾಹಕ ಬಳಕೆ ವಸ್ತುಗಳ ಉತ್ಪಾದನೆಯು ಶೇ 20.2ರಷ್ಟು ಪ್ರಗತಿ ಕಂಡಿದೆ. ಕಳೆದ ವರ್ಷದ ಜುಲೈನಲ್ಲಿ ಶೇ 23.7ರಷ್ಟು ಕುಸಿದಿತ್ತು ಎಂದು ಎನ್‌ಎಸ್‌ಒ ತಿಳಿಸಿದೆ. 2020ರ ಜುಲೈನಲ್ಲಿ ಐಐಪಿ 117.9 ರಷ್ಟಿತ್ತು. ಇದು 2021ರ ಜುಲೈನಲ್ಲಿ 131.4ಕ್ಕೆ ಏರಿಕೆ ಆಗಿದೆ.

ಕೈಗಾರಿಕಾ ಉತ್ಪಾದನೆಯು ಚೇತರಿಕೆ ಕಂಡುಕೊಳ್ಳುತ್ತಿದೆಯಾದರೂ 2019ರ ಜುಲೈನಲ್ಲಿ ಕಂಡಿದ್ದ ಬೆಳವಣಿಗೆಗೆ ಹೋಲಿಸಿದರೆ ಕಡಿಮೆ ಮಟ್ಟದಲ್ಲಿಯೇ ಇದೆ. ಕೋವಿಡ್‌ನಿಂದಾಗಿ ಕೈಗಾರಿಕಾ ಉತ್ಪಾದನೆಯು ಕಳೆದ ವರ್ಷದ ಮಾರ್ಚ್‌ನಲ್ಲಿ ಶೇ 18.7ರಷ್ಟು ಕುಸಿತ ಕಂಡಿತ್ತು. 2020ರ ಆಗಸ್ಟ್‌ವರೆಗೂ ನಕಾರಾತ್ಮಕ ಮಟ್ಟದಲ್ಲಿಯೇ ಇತ್ತು.

ಬೆಳವಣಿಗೆ ಹಾದಿ (%)

ಮೇ;28.6

ಜೂನ್‌;13.6

ಜುಲೈ;11.4

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.