ADVERTISEMENT

ಹೊಸ ಎಲ್‌ಜಿ ಸ್ಮಾರ್ಟ್‌ಫೋನ್ ಇನ್ನು ಸಿಗಲ್ಲ

ರಾಯಿಟರ್ಸ್
Published 5 ಏಪ್ರಿಲ್ 2021, 6:45 IST
Last Updated 5 ಏಪ್ರಿಲ್ 2021, 6:45 IST
ಸಾಂದರ್ಭಿಕ ಚಿತ್ರ (ಕೃಪೆ: ಐಸ್ಟಾಕ್)
ಸಾಂದರ್ಭಿಕ ಚಿತ್ರ (ಕೃಪೆ: ಐಸ್ಟಾಕ್)   

ಸೋಲ್: ನಷ್ಟದ ಕಾರಣ ಸ್ಮಾರ್ಟ್‌ಫೋನ್ ತಯಾರಿಕಾ ಘಟಕವನ್ನು ಮುಚ್ಚುವುದಾಗಿ ದಕ್ಷಿಣ ಕೊರಿಯಾದ ಕಂಪನಿ ಎಲ್‌ಜಿ ಎಲೆಕ್ಟ್ರಾನಿಕ್ಸ್‌ ಸೋಮವಾರ ಹೇಳಿದೆ.

ಆರು ವರ್ಷಗಳಲ್ಲಿ ಸುಮಾರು 450 ಕೋಟಿ ಡಾಲರ್‌ ನಷ್ಟ ಅನುಭವಿಸಿದ್ದು, ಮುಂದಿರುವ ಎಲ್ಲ ಆಯ್ಕೆಗಳನ್ನು ಪರಿಗಣಿಸಲಾಗುತ್ತಿದೆ ಎಂದು ಕಂಪನಿಯು ಜನವರಿಯಲ್ಲಿ ಹೇಳಿತ್ತು.

ಘಟಕವನ್ನು ವಿಯೆಟ್ನಾಂನ ವಿನ್‌ಗ್ರೂಪ್‌ಗೆ ಮಾರಾಟ ಮಾಡುವುದಕ್ಕೆ ಸಂಬಂಧಿಸಿದ ಮಾತುಕತೆಗಳು ಭಿನ್ನಾಭಿಪ್ರಾಯ ಉಂಟಾಗಿದ್ದರಿಂದ ಮುರಿದುಬಿದ್ದಿದೆ ಎಂದು ಮೂಲಗಳು ಹೇಳಿವೆ.

ADVERTISEMENT

ಅಲ್ಟ್ರಾ ವೈಡ್ ಆ್ಯಂಗಲ್ ಕ್ಯಾಮರಾ ಒಳಗೊಂಡಿರುವ ಸ್ಮಾರ್ಟ್‌ಫೋನ್ ಸೇರಿದಂತೆ ಹಲವು ಮೊಬೈಲ್ ಫೋನ್‌ಗಳ ಮೂಲಕ ವಿಶ್ವದ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿದ್ದ ಎಲ್‌ಜಿಯು 2013ರಲ್ಲಿ ಮೂರನೇ ಅತಿದೊಡ್ಡ ಸ್ಮಾರ್ಟ್‌ಫೋನ್ ತಯಾರಕ ಕಂಪನಿಯಾಗಿ ಹೊರಹೊಮ್ಮಿತ್ತು. ಆ್ಯಪಲ್ ಐಎನ್‌ಸಿ ಮತ್ತು ಸ್ಯಾಮ್ಸಂಗ್ ಎಲೆಕ್ಟ್ರಾನಿಕ್ಸ್ ನಂತರದ ಸ್ಥಾನ ಪಡೆದುಕೊಂಡಿತ್ತು.

ಆದರೆ ನಂತರ, ಎಲ್‌ಜಿಯ ಪ್ರಮುಖ ಸ್ಮಾರ್ಟ್‌ಫೋನ್ ಬ್ರ್ಯಾಂಡ್‌ಗಳು ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್ ಸಮಸ್ಯೆ ಎದುರಿಸಿದವು. ಸಾಫ್ಟ್‌ವೇರ್ ಅಪ್‌ಡೇಟ್‌ ವಿಳಂಬ ಸೇರಿದಂತೆ ಹಲವು ಸಮಸ್ಯೆಗಳು ಬ್ರ್ಯಾಂಡ್‌ ಕುಸಿಯುವಂತೆ ಮಾಡಿತು. ಚೀನಾದ ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ ಕಂಪನಿಯು ಮಾರುಕಟ್ಟೆ ವಿಭಾಗದಲ್ಲಿ ಪರಿಣತಿಯ ಕೊರತೆ ಎದುರಿಸುತ್ತಿದೆ ಎಂದು ವಿಶ್ಲೇಷಕರು ಟೀಕಿಸಿದ್ದಾರೆ.

ಇತ್ತೀಚೆಗೆ ಉತ್ತರ ಅಮೆರಿಕ ಮತ್ತು ಲ್ಯಾಟಿನ್‌ ಅಮೆರಿಕದ ಮಾರುಕಟ್ಟೆ ಪಾಲಿನಲ್ಲಿ ಕ್ರಮವಾಗಿ 3 ಹಾಗೂ 5ನೇ ಬ್ರ್ಯಾಂಡ್ ಆಗಿ ರ್‍ಯಾಂಕ್ ಗಳಿಸಿದ್ದರೂ ಕಂಪನಿಯ ಜಾಗತಿಕ ಮಾರುಕಟ್ಟೆ ಪಾಲು ಶೇ 2ರಷ್ಟು ಮಾತ್ರವೇ ಇದೆ.

ಭವಿಷ್ಯದಲ್ಲಿ ಎಲ್‌ಜಿಯು ತನ್ನ ಮೊಬೈಲ್ ತಂತ್ರಜ್ಞಾನವನ್ನು ಗೃಹೋಪಯೋಗಿ ಉಪಕರಣಗಳ ವ್ಯವಹಾರ ಮತ್ತು ವಾಹನಗಳ ಬಿಡಿಭಾಗಗಳ ವ್ಯವಹಾರಗಳಲ್ಲಿ ಬಳಸುವ ನಿರೀಕ್ಷೆ ಇದೆ. ಕಳೆದ ವರ್ಷ ಎಲ್‌ಜಿಯು ‘ಮ್ಯಾಗ್ನಾ ಇಂಟರ್‌ನ್ಯಾಷನಲ್ ಐಎನ್‌ಸಿ’ ಜತೆ ಜಂಟಿ ಉದ್ಯಮ ಪ್ರಾರಂಭಿಸಿತ್ತು. ಎಲೆಕ್ಟ್ರಿಕ್ ಕಾರುಗಳಿಗೆ ಬಿಡಿಭಾಗಗಳನ್ನು ತಯಾರಿಸುವ ಸಲುವಾಗಿ ಈ ಉದ್ಯಮ ಪ್ರಾರಂಭಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.