ADVERTISEMENT

ಎರಡನೇ ತ್ರೈಮಾಸಿಕದಲ್ಲಿ ತಯಾರಿಕೆ ಸುಧಾರಣೆ, ವೆಚ್ಚ ಹೆಚ್ಚಳ: ಫಿಕ್ಕಿ ಸಮೀಕ್ಷೆ

ಪಿಟಿಐ
Published 12 ಸೆಪ್ಟೆಂಬರ್ 2021, 11:16 IST
Last Updated 12 ಸೆಪ್ಟೆಂಬರ್ 2021, 11:16 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶದಲ್ಲಿ ತಯಾರಿಕಾ ಚಟುವಟಿಕೆಯು ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಸುಧಾರಿಸಿಕೊಳ್ಳಲಿದೆ. ಆದರೆ, ವ್ಯಾಪಾರ ಮತ್ತು ತಯಾರಿಕಾ ವೆಚ್ಚಗಳು ಹೆಚ್ಚುತ್ತಿವೆ ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘದ (ಫಿಕ್ಕಿ) ಸಮೀಕ್ಷೆಯು ತಿಳಿಸಿದೆ.

ತಯಾರಿಕೆ ಮೇಲಿನ ವೆಚ್ಚವು ನಿರಂತರವಾಗಿ ಏರಿಕೆಯಾಗುತ್ತಲೇ ಇದೆ ಎಂದು ತಯಾರಿಕೆ ವಲಯದ ಪ್ರತಿನಿಧಿಗಳು ಹೇಳಿದ್ದಾರೆ. ಕೋವಿಡ್‌ ಕಾರಣಂದಿಂದಾಗಿ ಕಡಿಮೆ ಸಾಮರ್ಥ್ಯದ ಬಳಕೆ, ಸಾಗಣೆ ವೆಚ್ಚದಲ್ಲಿನ ಏರಿಕೆ, ಕಚ್ಚಾ ವಸ್ತುಗಳ ಬೆಲೆ ಏರಿಕೆ, ವಿದ್ಯುತ್ ವೆಚ್ಚ ಮತ್ತು ಹೆಚ್ಚಿನ ಬಡ್ಡಿ ದರಗಳು ಕೂಡ ಉತ್ಪಾದನಾ ವೆಚ್ಚದಲ್ಲಿ ಹೆಚ್ಚಳಕ್ಕೆ ಕಾರಣವಾಗುತ್ತಿವೆ ಎಂದು ಅವರು ಹೇಳಿರುವುದಾಗಿ ‘ಫಿಕ್ಕಿ’ ತನ್ನ ಈಚಿನ ಎರಡನೇ ತ್ರೈಮಾಸಿಕ ಸಮೀಕ್ಷೆಯಲ್ಲಿ ಹೇಳಿದೆ.

ಎರಡನೇ ತ್ರೈಮಾಸಿಕದಲ್ಲಿ ರಫ್ತು ವ್ಯಾಪಾರವು ಹೆಚ್ಚಾಗಲಿದೆ ಎಂದು ಶೇ 58ರಷ್ಟು ಪ್ರತಿನಿಧಿಗಳು ಹೇಳಿದ್ದಾರೆ. ನೇಮಕಾತಿಯು ಈ ವಲಯದಲ್ಲಿ ಮಂದಗತಿಯಲ್ಲಿ ಸಾಗುತ್ತಿದ್ದು, ಮುಂದಿನ ಮೂರು ತಿಂಗಳುಗಳಲ್ಲಿ ಯಾವುದೇ ಹೆಚ್ಚುವರಿ ನೇಮಕಾತಿ ಮಾಡಿಕೊಳ್ಳುವುದಿಲ್ಲ ಎಂದು ಶೇ 68ರಷ್ಟು ಪ್ರತಿನಿಧಿಗಳು ಹೇಳಿರುವುದಾಗಿ ಸಮೀಕ್ಷೆಯು ತಿಳಿಸಿದೆ.

ವಾರ್ಷಿಕ ವಹಿವಾಟು ಮೊತ್ತವು ₹ 2.7 ಲಕ್ಷ ಕೋಟಿಗಿಂತಲೂ ಹೆಚ್ಚಿಗೆ ಇರುವ ದೊಡ್ಡ, ಸಣ್ಣ ಮತ್ತು ಮಧ್ಯಮ ಗಾತ್ರದ ತಯಾರಿಕಾ ಘಟಕಗಳಿಂದ ಅಭಿಪ್ರಾಯ ಸಂಗ್ರಹಿಸಲಾಗಿದೆ ಎಂದು ಫಿಕ್ಕಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.