ADVERTISEMENT

ಪ್ಯಾನ್ ಕಾರ್ಡ್ ಜೊತೆಗೆ ಆಧಾರ್ ಜೋಡಿಸುವ ಗಡುವು ಮತ್ತೆ ವಿಸ್ತರಣೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಮಾರ್ಚ್ 2023, 10:17 IST
Last Updated 28 ಮಾರ್ಚ್ 2023, 10:17 IST
   

ನವದೆಹಲಿ: ಪ್ಯಾನ್ ಕಾರ್ಡ್ ಜೊತೆಗೆ ಆಧಾರ್ ಜೋಡಿಸುವ ಕೊನೆಯ ದಿನಾಂಕವನ್ನು 2023ರ ಜೂನ್ 30ರವರಗೆ ವಿಸ್ತರಿಸಿ ಕೇಂದ್ರ ಹಣಕಾಸು ಇಲಾಖೆ ಮಂಗಳವಾರ ಆದೇಶ ಮಾಡಿದೆ.

ಈ ಮೊದಲು ಮಾರ್ಚ್ 31 ಆಧಾರ್ ಅನ್ನು ಪ್ಯಾನ್ ಕಾರ್ಡ್ ಜೊತೆಗೆ ಜೋಡಿಸಲು ಕಡೆಯ ದಿನವಾಗಿತ್ತು.

ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ ಅವರು ಗಡುವು ವಿಸ್ತರಣೆ ಮಾಡುವಂತೆ ಪ್ರಧಾನಿ ಮೋದಿ ಅವರಿಗೆ ಮನವಿ ಮಾಡಿದ್ದರು. ಈ ಬೆನ್ನಲ್ಲೆ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

ADVERTISEMENT

ಲಿಂಕ್ ಮಾಡಲು 2022ರ ಮಾರ್ಚ್ 31ರವರೆಗೆ ಉಚಿತವಾಗಿತ್ತು. 2022ರ ಏಪ್ರಿಲ್ 1ರಿಂದ ₹500 ಪಾವತಿಸಿ ಆಧಾರ್ ಲಿಂಕ್ ಮಾಡಬೇಕಾಗಿತ್ತು. 2022ರ ಜೂನ್‌ನಿಂದ 2023ರ ಮಾರ್ಚ್ 31ರವರಗೆ ಲಿಂಕ್ ಮಾಡಬೇಕಾದರೆ ₹1,000 ಪಾವತಿಸಬೇಕು ಎಂದು ಹೇಳಲಾಗಿತ್ತು. ಒಂದು ವೇಳೆ ಈ ಗಡುವಿನ ಒಳಗೆ ಲಿಂಕ್ ಮಾಡದಿದ್ದರೇ ಆ ನಂತರ ಬರುವ ಅರ್ಜಿಗಳಿಗೆ ₹10 ಸಾವಿರ ದಂಡ ಹಾಕಲಾಗುವುದು ಎಂದು ತಿಳಿಸಲಾಗಿತ್ತು.

ಆದರೆ, ಇದೀಗ ಗುಡುವು ಮತ್ತೆ ವಿಸ್ತರಣೆಯಾಗಿರುವುದರಿಂದ ₹1000 ಶುಲ್ಕದೊಂದಿಗೆ ಜೂನ್ 30ರವರಗೆ ಆಧಾರ್‌ ಸಂಖ್ಯೆಯನ್ನು ಪ್ಯಾನ್‌ಗೆ ಲಿಂಕ್ ಮಾಡಬಹುದು.

ಒಬ್ಬನೇ ವ್ಯಕ್ತಿ ಒಂದಕ್ಕಿಂತ ಹೆಚ್ಚು ಪ್ಯಾನ್‌ ಹೊಂದಿರುವುದನ್ನು ತಪ್ಪಿಸುವ ಉದ್ದೇಶದಿಂದ, ಪ್ಯಾನ್‌ ಜತೆಗೆ ಆಧಾರ್ ಜೋಡಿಸುವ ವ್ಯವಸ್ಥೆಯನ್ನು 2017ರ ಏಪ್ರಿಲ್‌ನಲ್ಲಿ ಕೇಂದ್ರ ಸರ್ಕಾರವು ಜಾರಿಗೆ ತಂದಿತ್ತು.

ಪ್ಯಾನ್‌–ಆಧಾರ್ ಜೋಡಣೆಗೆ ಆಗ ಸರ್ಕಾರವು ಯಾವುದೇ ಶುಲ್ಕ ವಿಧಿಸಿರಲಿಲ್ಲ. ಆದರೆ, ನಿರೀಕ್ಷಿತ ಮಟ್ಟದಲ್ಲಿ ಜೋಡಣೆ ಕಾರ್ಯಗತವಾಗಲಿಲ್ಲ. ಹೀಗಾಗಿ ಪ್ಯಾನ್‌–ಆಧಾರ್ ಜೋಡಣೆಗೆ ನೀಡಿದ್ದ ಗಡುವನ್ನು ಸರ್ಕಾರವು ಹಲವು ಬಾರಿ ವಿಸ್ತರಿಸಿತ್ತು. ಕೊನೆಯ ಹಂತದ್ದು ಎಂದು ಹೇಳಿ 2022ರ ಮಾರ್ಚ್‌ನಲ್ಲಿ ವಿಸ್ತರಿಸಿದ ಗಡುವು 2023ರ ಮಾರ್ಚ್‌ 31ಕ್ಕೆ ಕೊನೆಯಾಗಲಿದೆ ಎನ್ನಲಾಗಿತ್ತು.

‘ಆಧಾರ್‌ ಜೊತೆಗೆ ಜೋಡಣೆಯಾಗದ ಪ್ಯಾನ್‌ಗಳನ್ನು ಇದೇ ಮಾರ್ಚ್‌ 31ರ ನಂತರ ಬಳಸಲು ಸಾಧ್ಯವಿಲ್ಲ. ಆನಂತರ ವ್ಯಾವಹಾರಿಕ ಮತ್ತು ತೆರಿಗೆ ಲಾಭಗಳನ್ನು ಕಳೆದುಕೊಳ್ಳಬೇಕಾಗುತ್ತದೆ’ ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ ಅಧ್ಯಕ್ಷರು ಈಚೆಗೆ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.