ADVERTISEMENT

ಸಾಲ ಮೇಳ: ಬ್ಯಾಂಕ್‌ಗಳಿಂದ ₹81,781 ಕೋಟಿ ವಿತರಣೆ

ಪಿಟಿಐ
Published 14 ಅಕ್ಟೋಬರ್ 2019, 14:47 IST
Last Updated 14 ಅಕ್ಟೋಬರ್ 2019, 14:47 IST
ನಿರ್ಮಲಾ ಸೀತಾರಾಮನ್‌
ನಿರ್ಮಲಾ ಸೀತಾರಾಮನ್‌   

ನವದೆಹಲಿ : ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಹಮ್ಮಿಕೊಂಡಿದ್ದ 9 ದಿನಗಳ ಸಾಲ ಮೇಳಗಳ ಸಂದರ್ಭದಲ್ಲಿ ₹ 81,781 ಕೋಟಿಗಳಷ್ಟು ಸಾಲ ವಿತರಿಸಲಾಗಿದೆ.

‘ಅಕ್ಟೋಬರ್‌ 1ರಿಂದ ಏರ್ಪಡಿಸಲಾಗಿದ್ದ ಗ್ರಾಹಕರ ಸಂಪರ್ಕ ಕಾರ್ಯಕ್ರಮಗಳಲ್ಲಿ ಈ ಮೊತ್ತದ ಸಾಲ ವಿತರಿಸಲಾಗಿದೆ. ಇದರಲ್ಲಿ ₹ 34,342 ಕೋಟಿ ಮೊತ್ತದ ಹೊಸ ಸಾಲಗಳು ಸೇರಿವೆ’ ಎಂದು ಹಣಕಾಸು ಕಾರ್ಯದರ್ಶಿ ರಾಜೀವ್‌ ಕುಮಾರ್‌ ಹೇಳಿದ್ದಾರೆ.

‘ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹಣ ಇದೆ. ದೊಡ್ಡ ಉದ್ದಿಮೆಗಳು ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ (ಎಂಎಸ್‌ಎಂಇ) ಕೊಡಬೇಕಾಗಿರುವ ಬಾಕಿ ಮೊತ್ತ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗಿದೆ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

ಬ್ಯಾಂಕ್‌ಗಳ ಮುಖ್ಯಸ್ಥರ ಜತೆ ಸಭೆ ನಡೆಸಿದ ನಂತರ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.

‘ದೊಡ್ಡ ಕಾರ್ಪೊರೇಟ್‌ ಕಂಪನಿಗಳು ‘ಎಂಎಸ್‌ಎಂಇ’ ವಲಯಗಳಿಗೆ ಬಾಕಿ ಪಾವತಿ ಉಳಿಸಿಕೊಂಡಿರುವುದರಿಂದ, ಸಣ್ಣ ಉದ್ದಿಮೆಗಳಿಗೆ ಹಣಕಾಸಿನ ಲಭ್ಯತೆ ಒದಗಿಸಲು ಬಿಲ್‌ ಡಿಸ್ಕೌಂಟ್‌ ಸೌಲಭ್ಯ ಒದಗಿಸಲು ಬ್ಯಾಂಕ್‌ಗಳಿಗೆ ಕೇಳಿಕೊಳ್ಳಲಾಗಿದೆ.

ಬೃಹತ್ ಉದ್ದಿಮೆಗಳು ಕಂಪನಿ ವ್ಯವಹಾರ ಸಚಿವಾಲಯಕ್ಕೆ ಸಲ್ಲಿಸಿರುವ ರಿಟರ್ನ್ಸ್‌ಗಳ ಪ್ರಕಾರ, ‘ಎಂಎಸ್‌ಎಂಇ’ ವಲಯಕ್ಕೆ ₹ 40 ಸಾವಿರ ಕೋಟಿ ಬಾಕಿ ಉಳಿಸಿಕೊಂಡಿವೆ. ದೀಪಾವಳಿಗೆ ಮುಂಚೆ ಈ ಬಾಕಿ ವಿತರಿಸಲು ಸರ್ವ ಪ್ರಯತ್ನ ಮಾಡಲಾಗುತ್ತಿದೆ’ ಎಂದು ಹೇಳಿದ್ದಾರೆ.

ನಿರಂತರ ನಿಗಾ: ‘ಪಂಜಾಬ್‌ ಆ್ಯಂಡ್‌ ಮಹಾರಾಷ್ಟ್ರ ಸಹಕಾರಿ ಬ್ಯಾಂಕ್‌ನಲ್ಲಿನ (ಪಿಎಂಸಿ) ಬೆಳವಣಿಗೆಗಳ ಬಗ್ಗೆ ನಾನು ನಿರಂತರ ನಿಗಾ ಇರಿಸಿರುವೆ. ಈ ಸಂಬಂಧ ಆರ್‌ಬಿಐ ಗವರ್ನರ್‌ ಶಕ್ತಿಕಾಂತ್‌ ದಾಸ್‌ ಜತೆ ಚರ್ಚಿಸಿರುವೆ. ಠೇವಣಿ ಖಾತರಿ ಮಿತಿಯನ್ನು ಸದ್ಯದ ₹ 1 ಲಕ್ಷದಿಂದ ಹೆಚ್ಚಿಸುವುದನ್ನು ಕೇಂದ್ರ ಸರ್ಕಾರ ಪರಿಶೀಲಿಸುತ್ತಿದೆ. ಇದಕ್ಕೆ ಸಂಸತ್ತಿನ ಸಮ್ಮತಿ ಬೇಕಾಗಿದೆ’ ಎಂದೂ ನಿರ್ಮಲಾ ಹೇಳಿದ್ದಾರೆ.

ದಿವಾಳಿ ಅಂಚಿನಲ್ಲಿದ್ದ ರಿಯಲ್‌ ಎಸ್ಟೇಟ್‌ ಸಂಸ್ಥೆ ‘ಎಚ್‌ಡಿಐಎಲ್‌’ಗೆ ಭಾರಿ ಮೊತ್ತದ ಸಾಲ ನೀಡಿದ ಹಗರಣದಲ್ಲಿ ‘ಪಿಎಂಸಿ’ ಸಿಲುಕಿಕೊಂಡಿದೆ. ದೇಶದ 10 ಮುಂಚೂಣಿ ಪಟ್ಟಣ ಸಹಕಾರಿ ಬ್ಯಾಂಕ್‌ಗಳಲ್ಲಿ ಒಂದಾಗಿರುವ ‘ಪಿಎಂಸಿ’ಗೆ ಆರ್‌ಬಿಐ ಆಡಳಿತಾಧಿಕಾರಿ ನೇಮಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.