ADVERTISEMENT

ಆಗಸ್ಟ್‌ನಲ್ಲಿ ಸಗಟು ಹಣದುಬ್ಬರ ಶೇ 11.39

ತಯಾರಿಕಾ ಉತ್ಪನ್ನಗಳು ಬೆಲೆ ಏರಿಕೆ ಪರಿಣಾಮ

ಪಿಟಿಐ
Published 14 ಸೆಪ್ಟೆಂಬರ್ 2021, 11:20 IST
Last Updated 14 ಸೆಪ್ಟೆಂಬರ್ 2021, 11:20 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಸಗಟು ದರ ಸೂಚ್ಯಂಕ (ಡಬ್ಲ್ಯುಪಿಐ) ಆಧರಿಸಿದ ಹಣದುಬ್ಬರವು ಆಗಸ್ಟ್‌ನಲ್ಲಿ ಶೇಕಡ 11.39ಕ್ಕೆ ಏರಿಕೆ ಕಂಡಿದೆ. ಇದು ಜುಲೈನಲ್ಲಿ ಶೇ 11.16ರಷ್ಟಿತ್ತು.

ಎರಡು ತಿಂಗಳಿನಿಂದ ಇಳಿಮುಖವಾಗಿದ್ದ ಸಗಟು ಹಣದುಬ್ಬರವು ಆಗಸ್ಟ್‌ನಲ್ಲಿ ಮತ್ತೆ ಏರಿಕೆ ಹಾದಿಗೆ ಮರಳಿದಂತೆ ಆಗಿದೆ. ಅಲ್ಲದೆ, ಸತತ ಐದನೇ ತಿಂಗಳಿನಲ್ಲಿಯೂ ಎರಡಂಕಿ ಮಟ್ಟದಲ್ಲಿಯೇ ಮುಂದುವರಿದಿದೆ. 2020ರ ಆಗಸ್ಟ್‌ನಲ್ಲಿ ಹಣದುಬ್ಬರವು ಶೇ 0.41ರಷ್ಟಿತ್ತು.

ಆಹಾರ ವಸ್ತುಗಳ ಬೆಲೆ ತಗ್ಗಿದ್ದರೂ ತಯಾರಿಕಾ ವಲಯದ ಉತ್ಪನ್ನಗಳ ಬೆಲೆಯಲ್ಲಿ ಏರಿಕೆ ಕಂಡುಬಂದಿರುವುದೇ ಆಗಸ್ಟ್‌ನಲ್ಲಿ ಸಗಟು ಹಣದುಬ್ಬರ ಹೆಚ್ಚಾಗಲು ಕಾರಣ. ತಯಾರಿಕಾ ವಲಯದ ಉತ್ಪನ್ನಗಳ ಹಣದುಬ್ಬರ ಪ್ರಮಾಣವು ಜುಲೈನಲ್ಲಿ ಶೇ 11.20ರಷ್ಟು ಇದ್ದಿದ್ದು, ಆಗಸ್ಟ್‌ನಲ್ಲಿ ಶೇ 11.39ಕ್ಕೆ ಏರಿಕೆ ಆಗಿದೆ.

ADVERTISEMENT

ಆಹಾರೇತರ ಉತ್ಪನ್ನಗಳು, ಖನಿಜ ತೈಲಗಳು, ಕಚ್ಚಾ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ಆಹಾರ ಉತ್ಪನ್ನಗಳು, ಜವಳಿ, ರಾಸಾಯನಿಕ ಮತ್ತು ರಸಗೊಬ್ಬರ ಉತ್ಪನ್ನಗಳು ಇತ್ಯಾದಿಗಳ ಬೆಲೆಯು ಜುಲೈಗೆ ಹೋಲಿಸಿದರೆ ಆಗಸ್ಟ್‌ನಲ್ಲಿ ಏರಿಕೆ ಆಗಿದೆ. ಹೀಗಾಗಿ ಸಗಟು ಹಣದುಬ್ಬರ ದರ ಹೆಚ್ಚಾಗಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಪ್ರಕಟಣೆ ತಿಳಿಸಿದೆ.

ಆಹಾರ ವಸ್ತುಗಳ ಹಣದುಬ್ಬರವು ಸತತ ನಾಲ್ಕನೇ ತಿಂಗಳಿನಲ್ಲಿಯೂ ಇಳಿಕೆ ಕಂಡಿದೆ. ಜುಲೈನಲ್ಲಿ ಶೂನ್ಯ ಮಟ್ಟದಲ್ಲಿ ಇದ್ದಿದ್ದು ಆಗಸ್ಟ್‌ನಲ್ಲಿ ಶೇ (–) 1.29ಕ್ಕೆ ತಲುಪಿದೆ. ಈರುಳ್ಳಿ ಮತ್ತು ಬೇಳೆಕಾಳು ಬೆಲೆ ಹೆಚ್ಚಾಗಿದ್ದೂ ಈ ಇಳಿಕೆ ಆಗಿದೆ ಎಂದು ಪ್ರಕಟಣೆ ಹೇಳಿದೆ. ಈರುಳ್ಳಿ ಹಣದುಬ್ಬರವು ಶೇ 62.78ರಷ್ಟು, ಬೇಳೆಕಾಳುಗಳ ಹಣದುಬ್ಬರ ಶೇ 9.41ರಷ್ಟು ಆಗಿದೆ. ಕಚ್ಚಾ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲದ ಹಣದುಬ್ಬರವು ಶೇ 40.03ರಷ್ಟಾಗಿದೆ.

ಡಬ್ಲ್ಯುಪಿಐ ಹಾದಿ
ಏಪ್ರಿಲ್‌
; 10.74
ಮೇ; 12.94
ಜೂನ್‌; 12.07
ಜುಲೈ; 11.16
ಆಗಸ್ಟ್‌; 11.39

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.