ADVERTISEMENT

ದೇಶದ ಆರ್ಥಿಕ ಬೆಳವಣಿಗೆ ನಿರೀಕ್ಷೆಗಿಂತಲೂ ವೇಗವಾಗಿದೆ: ಅನುರಾಗ್‌ ಠಾಕೂರ್

ಪಿಟಿಐ
Published 13 ಮಾರ್ಚ್ 2021, 13:05 IST
Last Updated 13 ಮಾರ್ಚ್ 2021, 13:05 IST
   

ಮುಂಬೈ: ಆರ್ಥಿಕತೆಯ ಹಲವು ವಲಯಗಳಲ್ಲಿ ಸಕಾರಾತ್ಮಕ ಬೆಳವಣಿಗೆ ಗೋಚರಿಸುತ್ತಿದ್ದು, ದೇಶವು ಈಗಾಗಲೇ ನಿರೀಕ್ಷೆಗಿಂತಲೂ ವೇಗವಾಗಿ ಚೇತರಿಕೆ ಕಾಣಲು ಆರಂಭಿಸಿದೆ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್‌ ಠಾಕೂರ್‌ ಶನಿವಾರ ಹೇಳಿದ್ಧಾರೆ.

ಇನ್‌ಸ್ಟಿಟ್ಯೂಟ್‌ ಆಫ್‌ ಆಕ್ಚುಯರೀಸ್‌ ಆಫ್‌ ಇಂಡಿಯಾ ಆಯೋಜಿಸಿದ್ದ ಆನ್‌ಲೈನ್ ಸಮಾವೇಶದಲ್ಲಿ ಮಾತನಾಡಿದ ಅವರು,ವಿವಿಧ ವಲಯಗಳಲ್ಲಿ ಬೆಳವಣಿಗೆ ಕಾಣುವ ಜೊತೆಗೆ ಫೆಬ್ರುವರಿಯಲ್ಲಿ ವಿದೇಶಿ ಬಂಡವಾಳ ಒಳಹರಿವು ₹ 25,787 ಕೋಟಿಳಷ್ಟಾಗಿದೆ ಎಂದು ಅವರು ತಿಳಿಸಿದ್ದಾರೆ.

ಸತತವಾಗಿ ಎರಡು ತ್ರೈಮಾಸಿಕಗಳಲ್ಲಿ ನಕಾರಾತ್ಮಕ ಬೆಳವಣಿಗೆ ಕಂಡಿದ್ದ ಜಿಡಿಪಿಯು ಅಕ್ಟೋಬರ್‌–ಡಿಸೆಂಬರ್‌ ತ್ರೈಮಾಸಿಕದಲ್ಲಿ ಶೇ 0.4ರಷ್ಟು ಸಕಾರಾತ್ಮಕ ಬೆಳವಣಿಗೆ ಕಂಡಿದೆ ಎನ್ನುವ ಮಾಹಿತಿಯು ರಾಷ್ಟ್ರೀಯ ಸಾಂಖ್ಯಿಕ ಕಚೇರಿಯು (ಎನ್‌ಎಸ್‌ಒ) ಬಿಡುಗಡೆ ಮಾಡಿರುವಮಾಹಿತಿಯಲ್ಲಿದೆ.

ADVERTISEMENT

‘ದೇಶದ ವಿದೇಶಿ ವಿನಿಮಯ ಮೀಸಲು ಸಂಗ್ರಹವು ಕಳೆದ ಕೆಲವು ತಿಂಗಳುಗಳಿಂದ ಏರಿಕೆಯಾಗುತ್ತಲೇ ಇದೆ. 2021ರ ಜನವರಿಯಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟವಾದ ₹ 43.07 ಲಕ್ಷ ಕೋಟಿಗಳಿಗೆ ತಲುಪಿತ್ತು.

‘ಕಳೆದ ಎಂಟು ತಿಂಗಳಿನಲ್ಲಿಯೇ ವಿದೇಶಿ ವಿನಿಮಯ ಮೀಸಲು ಸಂಗ್ರಹವು ₹ 7.30 ಲಕ್ಷ ಕೋಟಿಗಳಷ್ಟಾಗಿದೆ’ ಎಂದು ಅವರು ಹೇಳಿದ್ದಾರೆ.

‘ಜಾಗತಿಕ ನಿಧಿಗಳು ಮತ್ತು ಹೂಡಿಕೆದಾರರು ಭಾರತವನ್ನು ಹೂಡಿಕೆ ತಾಣವನ್ನಾಗಿ ನೋಡುತ್ತಿದ್ದಾರೆ ಎನ್ನುವುದಕ್ಕೆ ಹಾಗೂ ಭಾರತದ ಬೆಳವಣಿಗೆಯ ಬಗ್ಗೆ ಆಶಾವಾದಿಗಳಾಗಿದ್ದಾರೆ ಎನ್ನುವುದಕ್ಕೆ ಇವು ಸೂಚನೆಗಳಾಗಿವೆ’ ಎಂದು ಅವರು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.