ADVERTISEMENT

ಬ್ಯಾಂಕ್‌, ಎಫ್‌ಎಂಸಿಜಿ ಷೇರುಗಳ ಗಳಿಕೆ

ಪಿಟಿಐ
Published 11 ಡಿಸೆಂಬರ್ 2020, 15:40 IST
Last Updated 11 ಡಿಸೆಂಬರ್ 2020, 15:40 IST

ಮುಂಬೈ: ಬ್ಯಾಂಕ್‌, ಇಂಧನ ಮತ್ತು ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಬಳಕೆಯ ಉತ್ಪನ್ನಗಳ (ಎಫ್‌ಎಂಸಿಜಿ) ಕಂಪನಿಗಳ ಷೇರುಗಳ ಖರೀದಿ ಜೋರಾಗಿದ್ದ ಕಾರಣ ಭಾರತದ ಷೇರು ಮಾರುಕಟ್ಟೆಗಳು ಶುಕ್ರವಾರ ಏರಿಕೆ ಕಂಡವು. ವಿದೇಶಿ ಬಂಡವಾಳದ ಒಳಹರಿವು ಕೂಡ ಮುಂದುವರಿಯಿತು.

ದಿನದ ವಹಿವಾಟಿನ ನಡುವಿನಲ್ಲಿ ಸಾರ್ವಕಾಲಿಕ ದಾಖಲೆಯ ಮಟ್ಟವಾದ 46,309ಕ್ಕೆ ತಲುಪಿದ್ದ ಬಿಎಸ್‌ಇ ಸೆನ್ಸೆಕ್ಸ್, ಮಧ್ಯಾಹ್ನದ ವಹಿವಾಟಿನಲ್ಲಿ ಕುಸಿತವನ್ನೂ ಕಂಡಿತ್ತು. ಆದರೆ, ದಿನದ ಅಂತ್ಯದಲ್ಲಿ 139 ಅಂಶಗಳ ಏರಿಕೆಯನ್ನು ದಾಖಲಿಸಿ, 46,099 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿತು.

ನಿಫ್ಟಿ 35 ಅಂಶಗಳ ಏರಿಕೆ ಕಂಡು, 13,513 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿತು. ಶೇಕಡ 5.68ರಷ್ಟು ಏರಿಕೆ ಕಂಡ ಒಎನ್‌ಜಿಸಿ ಕಂಪನಿ ಷೇರುಗಳು ಅತಿಹೆಚ್ಚಿನ ಗಳಿಕೆ ದಾಖಲಿಸಿದವು. ಎನ್‌ಟಿಪಿಸಿ, ಟಾಟಾ ಸ್ಟೀಲ್, ಐಟಿಸಿ, ಐಸಿಐಸಿಐ ಬ್ಯಾಂಕ್, ಟೈಟಾನ್, ಬಜಾಜ್ ಆಟೊ ಮತ್ತು ಎಸ್‌ಬಿಐ ಷೇರುಗಳು ಕೂಡ ಗಳಿಕೆ ಕಂಡವು.

ADVERTISEMENT

ಎಕ್ಸಿಸ್ ಬ್ಯಾಂಕ್, ಮಹೀಂದ್ರ ಆ್ಯಂಡ್ ಮಹೀಂದ್ರ, ಟೆಕ್ ಮಹೀಂದ್ರ, ಎಚ್‌ಸಿಎಲ್‌ ಟೆಕ್ನಾಲಜೀಸ್, ಬಜಾಜ್ ಫಿನ್‌ಸರ್ವ್‌ ಮತ್ತು ಇನ್‌ಫೊಸಿಸ್‌ ಷೇರುಗಳು ಕುಸಿತ ದಾಖಲಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.