ADVERTISEMENT

ರಿಯಾಯ್ತಿ ಆಮಿಷಕ್ಕೆ ಮರುಳಾಗದಿರಿ!

ವಿಶ್ವನಾಥ ಎಸ್.
Published 5 ಮಾರ್ಚ್ 2021, 12:14 IST
Last Updated 5 ಮಾರ್ಚ್ 2021, 12:14 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೈ ಗೆಟಕುವ ಬೆಲೆಗೆ ಸ್ಮಾರ್ಟ್‌ಫೋನ್‌, ಕಡಿಮೆ ಬೆಲೆಗೆ ಇಂಟರ್ನೆಟ್‌ ಲಭ್ಯವಾಗುತ್ತಿರುವುದು ಡಿಜಿಟಲ್‌ ಜಗತ್ತಿಗೆ ಹೆಚ್ಚು ಹೆಚ್ಚು ತೆರೆದುಕೊಳ್ಳುವಂತೆ ನಮ್ಮನ್ನು ಪ್ರೇರೇಪಿಸುತ್ತಿದೆ. ಅದರಲ್ಲಿಯೂ ಕೊರೊನಾ ಬಂದ ಬಳಿಕವಂತೂ ನಮ್ಮ ಆನ್‌ಲೈನ್‌ ಖರೀದಿ ಭಾರಿ ಹೆಚ್ಚಾಗಿದೆ. ಅಂಗಡಿ ಮಳಿಗೆಗೆ ಖುದ್ದು ಭೇಟಿ ನೀಡದೇ ಖರೀದಿ ಸಾಧ್ಯವೇ ಇಲ್ಲ ಎಂದುಕೊಂಡಿದ್ದನ್ನೂ ಮನೆಯಲ್ಲಿ ಕುಳಿತುಕೊಂಡೇ ಖರೀದಿ ಮಾಡಿದ್ದೇವೆ. ಆರಂಭದಲ್ಲಿ ಎಲೆಕ್ಟ್ರಾನಿಕ್ಸ್‌ ಉತ್ಪನ್ನಗಳು, ಬಟ್ಟೆ, ಸೌಂದರ್ಯವರ್ಧಕಗಳಿಗೆ ಸೀಮಿತವಾಗಿದ್ದ ಆನ್‌ಲೈನ್‌ ವ್ಯಾಪಾರ ಇಂದು ದಿನಸಿ ವಸ್ತುಗಳನ್ನೂ ಪೂರೈಸುತ್ತಿದೆ. ಇದ್ದಲ್ಲಿಗೇ ಎಲ್ಲವನ್ನೂ ತರಿಸಿಕೊಳ್ಳಬಹುದು ಎಂದ ಮಾತ್ರಕ್ಕೆ ಆನ್‌ಲೈನ್ ಖರೀದಿ ಸುರಕ್ಷಿತ ಎಂದುಕೊಳ್ಳಲಾಗದು. ಏಕೆಂದರೆ ದಿನಕ್ಕೆ ಕನಿಷ್ಠ ಒಂದಾದರೂ ಆನ್‌ಲೈನ್‌ ವಂಚನೆ ನಡೆದ ಬಗ್ಗೆ ವರದಿಯಾಗುತ್ತಲೇ ಇರುತ್ತದೆ.

ಘಟನೆ 1: ಸ್ನೇಹಿತರೊಬ್ಬರು ಫೇಸ್‌ಬುಕ್‌ನಲ್ಲಿ ಬಂದ ಜಾಹೀರಾತನ್ನು ನಂಬಿ ₹ 1,499 ಕಳೆದುಕೊಂಡರು. ಆಗಿದ್ದಿಷ್ಟೆ; ₹ 3 ಸಾವಿರದ ಚೇರ್‌ ₹ 1,499ಕ್ಕೆ ನೀಡುವುದಾಗಿ ಫೇಸ್‌ಬುಕ್‌ನಲ್ಲಿ flakeshop.in ಹೆಸರಿನ ಜಾಲತಾಣ ಪ್ರಕಟಿಸಿತ್ತು. ಭಾರಿ ರಿಯಾಯ್ತಿ ಸಿಗುತ್ತದೆ ಎಂದು ಸಂಭ್ರಮಪಟ್ಟ ಅವರು, ಆನ್‌ಲೈನ್ ಪೇಮೆಂಟ್‌ ಮಾಡಿಯೇಬಿಟ್ಟರು. ಆರ್ಡರ್‌ ಕನ್ಫರ್ಮ್‌ ಆಯಿತು. ಆದರೆ ಎಷ್ಟು ದಿನ ಕಳೆದರೂ ಚೇರ್‌ ಬರಲೇ ಇಲ್ಲ. ಟ್ರ್ಯಾಕ್‌ ಮಾಡೋಣ ಅಂತ ವೆಬ್‌ಸೈಟ್‌ಗೆ ಹೋಗಿ ಅಲ್ಲಿ ನೀಡಿದ್ದ ನಂಬರಿಗೆ ಕರೆ ಮಾಡಿದರೆ ಯಾರೂ ರಿಸೀವ್ ಮಾಡಲಿಲ್ಲ. ಇ–ಮೇಲ್‌ ಮಾಡಿದರೆ ಅದಕ್ಕೂ ನೊ ರಿಪ್ಲೆ. ಆ ಬಳಿಕ ಆ ಜಾಲತಾಣ ಮಂಗಮಾಯ! ಅವರು ಸ್ಕ್ರೀನ್ ಶಾಟ್‌ ತೆಗೆದುಕೊಂಡಿದ್ದನ್ನೇ ಎಲ್ಲರಿಗೂ ತೋರಿಸಿ, ನೀವೂ ಮೋಸ ಹೋಗದಿರಿ ಎಂದು ಎಚ್ಚರಿಸುತ್ತಿದ್ದಾರೆ.

ಘಟನೆ 2: ಐ.ಟಿ. ಕಂಪನಿಯಲ್ಲಿ→ಕೆಲಸ ಮಾಡುವ ಪ್ರಮೋದ್‌ (ಹೆಸರು ಬದಲಿಸಲಾಗಿದೆ) ಅವರು ಇದೇ ರೀತಿ ರಿಯಾಯ್ತಿ ಕೊಡುಗೆಯ ಜಾಲಕ್ಕೆ ಬಿದ್ದು
₹5 ಸಾವಿರ ಕಳೆದುಕೊಂಡಿದ್ದಾರೆ. ಇಂತಹ ಸಾಕಷ್ಟು ಘಟನೆಗಳು ನಮ್ಮ ಸುತ್ತಮುತ್ತ ನಡೆಯುತ್ತಲೇ ಇರುತ್ತವೆ. ಆದರೆ, ಯಾರು ಸಹ ಮೋಸ ಹೋಗಿದ್ದೇನೆ ಎಂದು ತಾವಾಗಿಯೇ ಹೇಳಿಕೊಳ್ಳುವುದಿಲ್ಲ. ಯಾರಾದರೂ ಅಂತಹ ವಿಷಯದ ಬಗ್ಗೆ ಮಾತಾಡಿದರೆ ಆಗ, ನನಗೂ ಹೀಗೇ ಆಗಿದೆ ಎಂದು ಹೇಳುತ್ತಾರಷ್ಟೆ.

ADVERTISEMENT

ಜನವರಿಯಲ್ಲಿ ಮುಂಬೈ ಪೊಲೀಸರು ನಕಲಿ ಶಾಪಿಂಗ್‌ ಜಾಲತಾಣ ನಡೆಸುತ್ತಿದ್ದ ಗುಜರಾತ್‌ನ ಐ.ಟಿ ತಜ್ಞರೊಬ್ಬರನ್ನು ಬಂಧಿಸಿದ್ದಾರೆ. ನಕಲಿ ಜಾಲತಾಣಗಳ ಮೂಲಕ ಗೃಹೋಪಯೋಗಿ ವಸ್ತುಗಳನ್ನು ಮಾರಾಟ ಮಾಡುವ ಸೋಗಿನಲ್ಲಿ 22 ಸಾವಿರಕ್ಕೂ ಅಧಿಕ ಜನರಿಗೆ ಸುಮಾರು
₹70 ಲಕ್ಷ ಮೋಸ ಮಾಡಿದ್ದರು ಎಂದು ಪೊಲೀಸರು ತಮ್ಮ ಟ್ವಿಟರ್‌ ಖಾತೆಯಲ್ಲಿ ಹೇಳಿಕೊಂಡಿದ್ದಾರೆ.

ಮುಂಬೈ ಪೊಲೀಸರ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿರುವ ಜಾಲತಾಣಗಳ ಪಟ್ಟಿ:

lshopiiee.comlwhite-stones.inljollyfashion.inlfabricmaniaa.com

ltakesaree.comlassuredkart.in

lrepublicsaleoffers.myshopify. com

lfabricwibes.comlefinancetic.com

lthefabricshome.comlthermoclassic.site

kasmira.in

ಅಧಿಕೃತ (ಉದಾಹರಣೆಗೆ ಫ್ಲಿಪ್‌ಕಾರ್ಟ್‌, ಅಮೆಜಾನ್‌) ಜಾಲತಾಣದಲ್ಲಿ ಖರೀದಿಸಿದರೆ ಯಾವುದೇ ಹಂತದಲ್ಲಿ ಸಮಸ್ಯೆ ಅಥವಾ ವಂಚನೆ ಆದರೂ ಕಂಪನಿ ಅದನ್ನು ಬಗೆಹರಿಸುವ ಪ್ರಯತ್ನ ನಡೆಸುತ್ತದೆ. ಏಕೆಂದರೆ ಇವುಗಳು ಗ್ರಾಹಕರ ವಿಶ್ವಾಸ ಕಳೆದುಕೊಳ್ಳಲು ಇಷ್ಟಪಡುವುದಿಲ್ಲ. ಕಳೆದ ವರ್ಷ ಸ್ನೇಹಿತರೊಬ್ಬರು ಫ್ಲಿಪ್‌ಕಾರ್ಟ್ ಮೂಲಕ ಮಂಚ ಆರ್ಡರ್‌ ಮಾಡಿದ್ದರು. ಮನೆಗೆ ತಂದು ಫಿಟ್‌ ಮಾಡುವ ಮೊದಲೇ ಅದು ಡ್ಯಾಮೇಜ್‌ ಆಗಿತ್ತು. ಅದನ್ನು ಫಿಟ್‌ ಮಾಡುವ ವ್ಯಕ್ತಿಗೆ ತಿಳಿಸಿದರೂ ಆತ ಅದನ್ನು ಫಿಟ್‌ ಮಾಡಿಯೇ ಹೋದ. ಕೊನೆಗೆ ಫ್ಲಿಪ್‌ಕಾರ್ಟ್‌ ಅನ್ನು ಸಂಪರ್ಕಿಸಿದಾಗ ಮಂಚವನ್ನು ವಾಪಸ್‌ ಪಡೆದು ಅವರ ಹಣ ಖಾತೆಗೆ ಜಮಾ ಆಯಿತು. ಅದೇ, ಅನಧಿಕೃತ ಅಥವಾ ಇದುವರೆಗೂ ಒಮ್ಮೆಯೂ ಕೇಳಿಯೇ ಇರದ ಜಾಲತಾಣದಲ್ಲಿ ಅಗ್ಗದ ಬೆಲೆಗೆ ಸಿಗುತ್ತದೆ ಎನ್ನುವ ಕಾರಣಕ್ಕೆ ಖರೀದಿಸಲು ಮುಂದಾದರೆ ದುಡ್ಡು ಕಳೆದುಕೊಳ್ಳುವುದರಲ್ಲಿ ಸಂದೇಹವೇ ಇಲ್ಲ. ದೂರು ಕೊಟ್ಟು ಹಣ ಮರಳಿ ಪಡೆಯುತ್ತೇನೆ ಎಂದರೆ, ಆ ಜಾಲತಾಣ ಅಸ್ತಿತ್ವದಲ್ಲೇ ಇರುವುದಿಲ್ಲ! ಅಲ್ಲಿ ನೀಡಿದ್ದ ಫೋನ್‌ ನಂಬರ್‌, ಇ–ಮೇಲ್‌ ವಿಳಾಸ ಎಲ್ಲವೂ ನಕಲಿ ಆಗಿರುತ್ತದೆ. ಹಾಗಾಗಿ ಭಾರಿ ರಿಯಾಯ್ತಿ, ವಿನಾಯ್ತಿ ಎಂದು ಕಂಡೊಡನೆ ಮರುಳಾಗದಿರಿ.

ಸುರಕ್ಷಿತ ಆನ್‌ಲೈನ್‌ ವಹಿವಾಟಿಗೆ...

lಕಂಪ್ಯೂಟರ್‌ ಬಳಸುತ್ತಿದ್ದರೆ ಆಗಾಗ್ಗೆ ಸಾಫ್ಟ್‌ವೇರ್ ಅಪ್‌ಡೇಟ್ ಮಾಡುತ್ತಿರಿ

lಹಣ ಪಾವತಿಸಲು ಸಾರ್ವಜನಿಕ ವೈಫೈ ಬಳಸದಿರಿ

lಜನಪ್ರಿಯ ಜಾಲತಾಣಗಳಿಂದ ಮಾತ್ರವೇ ಖರೀದಿಸಿ

lವಿಶ್ವಾಸಾರ್ಹ ಇ-ಕಾಮರ್ಸ್‌ ಕಂಪನಿಗಳಲ್ಲಿಯೇ ಖರೀದಿಸಿ

lಸಾಮಾಜಿಕ ಜಾಲತಾಣಗಳಲ್ಲಿ ಕ್ಲಿಕ್ ಟು ಬೈ ಆಯ್ಕೆಯ ಮೂಲಕ ಖರೀದಿಸಬೇಡಿ

lಕ್ಯಾಷ್‌ ಆನ್‌ ಡೆಲಿವರಿ ಇದ್ದರೆ ಆ ಆಯ್ಕೆಯನ್ನೇ ಬಳಸುವುದು ಹೆಚ್ಚು ಸೂಕ್ತ. ಏಕೆಂದರೆ ಒಂದೊಮ್ಮೆ ಖರೀದಿಸಿದ ವಸ್ತು ಬರದೇ ಇದ್ದರೆ ಏನನ್ನೂ ಕಳೆದುಕೊಳ್ಳುವುದಿಲ್ಲ

lಮೊಬೈಲ್‌ಗೆ ಇದುವರೆಗೂ ಕೇಳದೇ ಇರುವ ಕಂಪನಿಗಳ ಹೆಸರಿನಲ್ಲಿ ಭಾರಿ ರಿಯಾಯ್ತಿ ಕೊಡುಗೆಗಳ ನಾನಾ ಮೆಸೇಜ್‌ ಬರುತ್ತಿರುತ್ತವೆ. ಅವುಗಳನ್ನು ನಿರ್ಲಕ್ಷಿಸಿ

lಇ–ಮೇಲ್‌ಗೆ ಬರುವ ಅಪರಿಚಿತ ಅಥವಾ ಇನ್ಯಾವುದೇ ರೀತಿಯ ಲಿಂಕ್‌ಗಳನ್ನು ಕ್ಲಿಕ್ ಮಾಡಿ ಖರೀದಿಸಲು ಮುಂದಾಗದಿರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.