ADVERTISEMENT

ಪ್ರಶ್ನೋತ್ತರ | ಎಲ್‌ಐಸಿ ಪಾಲಿಸಿ ಉತ್ತಮ ಹೂಡಿಕೆಯೇ?

ಯು.ಪಿ.ಪುರಾಣಿಕ್
Published 20 ಮೇ 2020, 6:14 IST
Last Updated 20 ಮೇ 2020, 6:14 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ    

ಶಾಂತಾಕುಮಾರಿ, ಬೈಲಹೊಂಗಲ

ನಾನು ಹೈಸ್ಕೂಲ್‌ ಟೀಚರ್‌. ವಯಸ್ಸು 41. ಪತಿ ಸಣ್ಣ ವ್ಯವಹಾರದ ಅಂಗಡಿ ಇಟ್ಟಿದ್ದಾರೆ. ನನಗೆ 7 ವರ್ಷದ ಹೆಣ್ಣು ಮಗು ಹಗೂ 5 ವರ್ಷದ ಗಂಡು ಮಗು ಇದೆ. ನನ್ನ ಹೆಸರಿನಲ್ಲಿ ನಿವೇಶನ ಹಾಗೂ ಬಹಳ ಹಳೆಯದಾದ ಮನೆ ಇದೆ. ಇದನ್ನು ಕೆಡವಿ ₹ 30 ಲಕ್ಷ ಗೃಹ ಸಾಲ ಪಡೆದು ಮನೆಕಟ್ಟಿಸಬೇಕೆಂದಿರುವೆ. ನನ್ನ ಒಟ್ಟು ಸಂಬಳ ₹ 60 ಸಾವಿರ. ಕಡಿತದ ನಂತರ ₹53,000 ಕೈಗೆ ಬರುತ್ತದೆ. ಮಕ್ಕಳ ವಿದ್ಯಾಭ್ಯಾಸ ಹಾಗೂ ಮುಂದಿನ ಜೀವನ ಗಮನದಲ್ಲಿ ಇಟ್ಟುಕೊಂಡು ನಾನು ಮನೆ ಕಟ್ಟಿಸುವುದು ಸೂಕ್ತವೇ ತಿಳಿಸಿ.

ಉತ್ತರ: ನೀವು ವಾಸವಾಗಿರುವ ಮನೆ ದುರಸ್ತಿ ಮಾಡಿಸಿದರೆ ವಾಸಕ್ಕೆ ಯೋಗ್ಯವಾದರೆ, ಹೊಸ ಮನೆ ಕಟ್ಟಿಸುವ ಅವಶ್ಯವಿಲ್ಲ. ಇದೇ ವೇಳೆ, ದುರಸ್ತಿಗೆಂದು ಪ್ರಾರಂಭಿಸಿ ಬಹಳಷ್ಟು ಖರ್ಚು ಬರುವುದಾದರೆ ಹೊಸ ಮನೆ ಕಟ್ಟಿಸುವುದೇ ಲೇಸು. ನಿಮ್ಮ ಪತಿ ಮನೆ ಖರ್ಚು ನೋಡಿಕೊಳ್ಳಲಿ. ನೀವು ಈಗಲೇ ಗೃಹ ಸಾಲ ಪಡೆಯಿರಿ. ನಿಮಗೆ 19 ವರ್ಷ ಸೇವಾವಧಿ ಇರುವುದರಿಂದ ₹ 30 ಲಕ್ಷ ಗೃಹ ಸಾಲಕ್ಕೆ ಸಮೀಪದಲ್ಲಿ ಮಾಸಿಕ ಸಮಾನ ಕಂತು ₹30 ಸಾವಿರ ಬರಬಹುದು. ಇಎಂಐ ತುಂಬಿದ ನಂತರವೂ ನಿಮ್ಮೊಡನೆ ₹ 23,000 ಉಳಿಯುತ್ತದೆ. ಸಾಧ್ಯವಾದರೆ ಪಿಪಿಎಫ್‌ ಖಾತೆ ತೆರೆದು ಮಾಸಿಕ ₹ 5 ಸಾವಿರ, ಹೆಣ್ಣು ಮಗುವಿನ ಸಲುವಾಗಿ ಸುಕನ್ಯಾ ಸಮೃದ್ಧಿಯಲ್ಲಿ ಮಾಸಿಕ ₹ 5 ಸಾವಿರ ಹಾಗೂ ಗಂಡು ಮಗುವಿನ ಸಲುವಾಗಿ ಮಾಸಿಕ ₹ 5 ಸಾವಿರ ಆರ್‌.ಡಿ ಮಾಡಿ. ಎರಡೂ ಮಕ್ಕಳ ಸಲುವಾಗಿ ವಾರ್ಷಿಕ ತಲಾ ₹ 10ಗ್ರಾಂ ಬಂಗಾರ ಕೊಳ್ಳಿ.

ADVERTISEMENT

ಮಹಾಂತೇಶ, ಗುಳೇದಗುಡ್ಡ

ನಾನು ಪ್ರಾಥಮಿಕ ಶಾಲಾ ಶಿಕ್ಷಕ. ವಯಸ್ಸು 32. ತಿಂಗಳ ಸಂಬಳ ₹ 32,700. ಎಲ್‌ಐಸಿಯವರ ಮೂರು ಪಾಲಿಸಿ ಮಾಡಿಸಿ ಮಾಸಿಕ ಕಂತು ₹ 12 ಸಾವಿರ ತುಂಬುತ್ತಿದ್ದೇನೆ. ಪಾಲಿಸಿ ಅವಧಿ 10–12 ವರ್ಷಗಳು. ಇದು ಉತ್ತಮ ಹೂಡಿಕೆಯೇ. ಬೇರಾವುದೇ ಉಳಿತಾಯ ಮಾಡಿಲ್ಲ.

ಉತ್ತರ: ಪ್ರತಿಯೊಬ್ಬ ವ್ಯಕ್ತಿಗೂ ಜೀವ ವಿಮೆ ಅಗತ್ಯವಿದೆ. ಆದರೆ, ಇಲ್ಲಿ ಓರ್ವ ವ್ಯಕ್ತಿ ತನ್ನ ಒಟ್ಟು ಆದಾಯದ ಶೇ 10–15ರಷ್ಟು ಮಾತ್ರ ಹೂಡಿಕೆ ಮಾಡುವುದು ಸೂಕ್ತ. ಜೀವ ವಿಮೆಯಲ್ಲಿ ವಿಮೆಗೆ ಪ್ರಾಧಾನ್ಯ ಹೊರತು ಉಳಿತಾಯಕ್ಕಲ್ಲ. ಇದೇ ವೇಳೆ ಹೆಚ್ಚಿನ ಮೊತ್ತದ ವಿಮೆ ಪಾಲಿಸಿ ಬೇಕೆಂದಾದರೆ ಎಲ್‌ಐಸಿ–ಟರ್ಮ್‌ ಇನ್ಶುರೆನ್ಸ್‌ ಪಾಲಿಸಿ ಮಾಡುವುದು ಸರಿ ಇರುತ್ತದೆ. ಇಲ್ಲಿ ಅವಧಿ ಮುಗಿದು ಹಣ ಪಡೆಯುವಂತಿಲ್ಲವಾದರೂ ಪಾಲಿಸಿ ಮೊತ್ತ ವ್ಯಕ್ತಿಯ ಮರಣದ ಸಂದರ್ಭದಲ್ಲಿ ನಾಮ ನಿರ್ದೇಶಕರು ಪಡೆಯಬಹುದು. ದೊಡ್ಡ ಮೊತ್ತದ ಪಾಲಿಸಿಯ ಪ್ರೀಮಿಯಂ ಹಣ ಬಹಳ ಕಡಿಮೆ ಇರುತ್ತದೆ. ಪಡೆದಿರುವ ಪಾಲಿಸಿ ಎಂದಿಗೂ ನಿಲ್ಲಿಸಬೇಡಿ. ಮಧ್ಯದಲ್ಲಿ ನಿಲ್ಲಿಸಿದರೆ ಕಟ್ಟಿದ ಹಣ ಕೂಡಾ ಸಿಗುವುದಿಲ್ಲ. ಮುಂದೆ ಎಷ್ಟಾದರೂ ಆರ್‌.ಡಿ ಮಾಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.