ADVERTISEMENT

PV Web Exclusive: ಮಿತಿ ಇರಬೇಕು ಸಾಲಕ್ಕೆ, ಆದರೆ ಆ ಮಿತಿ ಎಷ್ಟು?!

ವಿಜಯ್ ಜೋಷಿ
Published 25 ಸೆಪ್ಟೆಂಬರ್ 2020, 6:10 IST
Last Updated 25 ಸೆಪ್ಟೆಂಬರ್ 2020, 6:10 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಟಾಟಾ ಮೋಟರ್ಸ್‌ ಕಂಪನಿಯ ಷೇರುದಾರರ ಸಭೆಯು ಈಚೆಗೆ ನಡೆಯಿತು. ಕೋವಿಡ್–19 ಸಾಂಕ್ರಾಮಿಕದ ಕಾರಣದಿಂದಾಗಿ ಅದು ಆನ್‌ಲೈನ್‌ ಮೂಲಕವೇ ನಡೆಯಿತು. ಆ ಸಭೆಯಲ್ಲಿ ಮಾತನಾಡಿದ ಕಂಪನಿಯ ಅಧ್ಯಕ್ಷ ಎನ್. ಚಂದ್ರಶೇಖರನ್ ಅವರು ಕಂಪನಿಯ ಸಾಲದ ಹೊರೆಯನ್ನು ಇನ್ನು ಮೂರು ವರ್ಷಗಳ ಅವಧಿಯಲ್ಲಿ ಶೂನ್ಯದ ಸಮೀಪಕ್ಕೆ ತರಲಾಗುವುದು ಎಂದು ಘೋಷಿಸಿದರು. ಇದಕ್ಕೆ ಷೇರುದಾರರಿಂದ ಸಂತಸದ ಪ್ರತಿಕ್ರಿಯೆ ವ್ಯಕ್ತವಾಯಿತು.

ಚಂದ್ರಶೇಖರನ್ ಅವರು ಈ ಘೋಷಣೆ ಮಾಡುವ ಸಂದರ್ಭದಲ್ಲಿ ಟಾಟಾ ಮೋಟರ್ಸ್ ಷೇರಿನ ಬೆಲೆ ₹ 127ರ ಆಸುಪಾಸಿನಲ್ಲಿ ಇತ್ತು. ಸಾಲಮುಕ್ತವಾಗುವ ಉದ್ದೇಶ ಕಂಪನಿಗೆ ಇದೆ ಎಂಬುದು ಗೊತ್ತಾದ ನಂತರ, ಷೇರುಪೇಟೆಯಲ್ಲಿ ಟಾಟಾ ಮೋಟರ್ಸ್ ಷೇರಿನ ಬೆಲೆ ₹ 151ರವರೆಗೂ ಏರಿಕೆ ಆಗಿತ್ತು. ಸಾಲಮುಕ್ತವಾಗುವ ಉದ್ದೇಶವು ಹೂಡಿಕೆದಾರರಲ್ಲಿ ಟಾಟಾ ಮೋಟರ್ಸ್ ಷೇರುಗಳಿಗೆ ಬೇಡಿಕೆ ಹೆಚ್ಚುವಂತೆ ಮಾಡಿತು.

ಹೂಡಿಕೆದಾರ ವಿಜಯ್ ಕೆದಿಯಾ ಅವರು ಜೀ ಎಂಟರ್‌ಟೇನ್ಮೆಂಟ್‌ ಕಂಪನಿಯಲ್ಲಿ ಹೂಡಿಕೆ ಮಾಡಿದ್ದಾರೆ. ಇದಕ್ಕೆ ಒಂದು ಕಾರಣ ಕಂಪನಿಯ ಆಡಳಿತದ ಬಗ್ಗೆ ಅವರಿಗೆ ಇರುವ ನಂಬಿಕೆ. ಇನ್ನೊಂದು ಮುಖ್ಯ ಕಾರಣ, ಕಂಪನಿ ಸಾಲಮುಕ್ತ ಆಗಿರುವುದು. ರಿಲಯನ್ಸ್ ಇಂಡಸ್ಟ್ರೀಸ್‌ ಲಿಮಿಟೆಡ್‌ ಕಂಪನಿಯನ್ನು ಸಾಲಮುಕ್ತ ಆಗಿಸುವುದಾಗಿ ಕಂಪನಿಯ ಅಧ್ಯಕ್ಷ ಮುಕೇಶ್ ಅಂಬಾನಿ ಅವರು ಹಿಂದಿನ ವರ್ಷ ಘೋಷಿಸಿದ್ದರು. ಅದನ್ನು ಅವರು ಮಾಡಿ ತೋರಿಸಿದ್ದಾರೆ ಕೂಡ. ಕಂಪನಿಯನ್ನು ಸಾಲಮುಕ್ತ ಆಗಿಸುವ ಘೋಷಣೆ ಮಾಡಿದ ನಂತರದ ದಿನಗಳಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಷೇರುಗಳು ಹೇಗೆ ಮೌಲ್ಯವರ್ಧಿಸಿಕೊಂಡಿವೆ, ಅವು ಹೂಡಿಕೆದಾರರ ಪಾಲಿಗೆ ಎಷ್ಟು ಸಂಪತ್ತು ತಂದುಕೊಟ್ಟಿವೆ ಎಂಬುದನ್ನು ಹಲವರು ಗಮನಿಸಿರಬಹುದು.

ADVERTISEMENT

ಒಳ್ಳೆಯ ಕಾರ್ಪೊರೇಟ್ ಆಡಳಿತ ಇರುವ, ಸಾಲಮುಕ್ತ ಆಗಿರುವ ಅಥವಾ ಸಾಲಮುಕ್ತ ಆಗುವುದಾಗಿ ದೃಢ ನಿರ್ಣಯ ಕೈಗೊಂಡ ಕಂಪನಿಗಳು ಹೂಡಿಕೆದಾರರಿಗೆ ಯಾವತ್ತಿಗೂ ಇಷ್ಟವಾಗುತ್ತವೆ. ಇದನ್ನು ನಾವು ನಮ್ಮ ವೈಯಕ್ತಿಕ ಜೀವನದಲ್ಲಿ ಅನ್ವಯಿಸಿ ನೋಡಬಹುದೇ? ಕಂಪನಿಗಳು ತಾವು ಸಾಲಮುಕ್ತ ಆಗುವುದಾಗಿ ತೀರ್ಮಾನ ತೆಗೆದುಕೊಳ್ಳುವುದನ್ನೂ ಸಾಲಮುಕ್ತ ಆಗಿರುವುದಾಗಿ ಘೋಷಿಸುವುದನ್ನೂ ಸ್ಫೂರ್ತಿಯಾಗಿ ತೆಗೆದುಕೊಂಡು, ವೈಯಕ್ತಿಕವಾಗಿ ನಾವೂ ಸಾಲಮುಕ್ತ ಆಗುವ ತೀರ್ಮಾನ ತೆಗೆದುಕೊಳ್ಳಬಹುದಲ್ಲ? ಆ ತೀರ್ಮಾನಕ್ಕೆ ಅನುಗುಣವಾಗಿ ನಡೆದುಕೊಳ್ಳಬಹುದಲ್ಲ?

ಸಾಲ ಮಾಡುವುದು ಅಪರಾಧವಲ್ಲ: ಒಂದು ವಿಚಾರವನ್ನು ಸ್ಪಷ್ಟಪಡಿಸಿಕೊಳ್ಳೋಣ. ಸಾಲ ಮಾಡುವುದು ಅಪರಾಧ ಅಲ್ಲ; ಅದು ಕೆಟ್ಟ ಕೆಲಸವಂತೂ ಅಲ್ಲವೇ ಅಲ್ಲ. ಸಾಲ ಮಾಡುವುದು ಒಳ್ಳೆಯದೋ, ಕೆಟ್ಟದ್ದೋ ಎಂಬುದು ತೀರ್ಮಾನವಾಗುವುದು ನಾವು ಮಾಡಿದ ಸಾಲ ಯಾವ ಉದ್ದೇಶಕ್ಕೆ ಎಂಬುದನ್ನು ಆಧರಿಸಿರುತ್ತದೆ. ಆದರೆ, ಯಾವುದೇ ಉದ್ದೇಶಕ್ಕಾಗಿ ಮಾಡಿದ ಸಾಲಕ್ಕೆ ಮಿತಿ ಇರುತ್ತದೆ, ಇರಬೇಕು.

ಹಾಗಾದರೆ, ಆ ಮಿತಿ ಏನು? ಇದಕ್ಕೆ ಎಲ್ಲರೂ ಒಪ್ಪಿಕೊಳ್ಳಬಹುದಾದ ಒಂದು ಮಿತಿ ಇಲ್ಲ. ಆದರೆ, ಬ್ಯಾಂಕಿಂಗ್ ಮತ್ತು ಹಣಕಾಸು ವಲಯದ ತಜ್ಞರು, ಒಬ್ಬ ವ್ಯಕ್ತಿ ನಿಭಾಯಿಸಬಹುದಾದ ಸಾಲದ ಮಿತಿಯನ್ನು ತೀರ್ಮಾನಿಸಲು ಒಂದು ಸೂತ್ರವನ್ನು ಹೆಣೆದಿದ್ದಾರೆ. ಇದನ್ನು ಅವರು ಸಾಲ ಮತ್ತು ಆದಾಯದ ನಡುವಣ ಅನುಪಾತ (ಡಿಟಿಐ – ಡೆಟ್ ಇನ್‌ಕಂ ರೇಷ್ಯೋ) ಎಂದು ಕರೆದಿದ್ದಾರೆ. ಇದನ್ನು ಲೆಕ್ಕಹಾಕುವುದು ತೀರಾ ಸರಳ.

ವ್ಯಕ್ತಿಯೊಬ್ಬ ಪ್ರತೀ ತಿಂಗಳು ಪಾವತಿಸಬೇಕಾದ ಎಲ್ಲ ಬಗೆಯ ಸಾಲದ ಕಂತುಗಳ ಒಟ್ಟು ಮೊತ್ತ ಎಷ್ಟು ಎಂಬುದನ್ನು ಒಂದೆಡೆ ನಮೂದಿಸಿಕೊಳ್ಳಬೇಕು. ಉದಾಹರಣೆ, ಶ್ರೀಹರಿ ಎಂಬ ವ್ಯಕ್ತಿಗೆ ಪ್ರತಿ ತಿಂಗಳು ವಾಹನ ಸಾಲಕ್ಕೆ ₹ 9,000, ಕ್ರೆಡಿಟ್ ಕಾರ್ಡ್‌ ಬಿಲ್‌ ಪಾವತಿಸಲು ₹ 5,000 ಹಾಗೂ ಸ್ನೇಹಿತರ ಬಳಿ ಪಡೆದಿರುವ ಕೈಸಾಲ ತೀರಿಸಲು ₹ 3,000 ಬೇಕು ಎಂದು ಭಾವಿಸಿ. ಅಂದರೆ, ಶ್ರೀಹರಿ ಪ್ರತಿ ತಿಂಗಳು ಸಾಲ ತೀರಿಸುವುದಕ್ಕಾಗಿ ಒಟ್ಟು ₹ 17 ಸಾವಿರ ವಿನಿಯೋಗಿಸಬೇಕು. ಶ್ರೀಹರಿಯ ಮಾಸಿಕ ವೇತನ ₹ 50,000. ಸಾಲಕ್ಕಾಗಿ ವಿನಿಯೋಗಿಸುವ ಒಟ್ಟು ಮೊತ್ತವನ್ನು ಆದಾಯದಿಂದ ಭಾಗಿಸಬೇಕು (17,000/50,000=0.34). ಈ ಸರಳ ಗಣಿತದಲ್ಲಿ ಸಿಗುವ ಮೊತ್ತ 0.34.

ಡಿಟಿಐ 0.35 ಅಥವಾ ಅದಕ್ಕಿಂತ ಕಡಿಮೆ ಇದ್ದರೆ ಒಳ್ಳೆಯದು ಎನ್ನುವುದು ಹಣಕಾಸು ತಜ್ಞರ ಅಭಿಮತ. ಇದು 0.50ಕ್ಕಿಂತ ಜಾಸ್ತಿ ಇದ್ದರೆ ಆ ವ್ಯಕ್ತಿಯ ಹಣಕಾಸು ಸ್ಥಿತಿ ತೀರಾ ಕಳವಳಕಾರಿ ಹಂತವನ್ನು ತಲುಪಿದೆ ಎಂದೇ ಅರ್ಥ. ಡಿಟಿಐ ಸಂಖ್ಯೆಯನ್ನು ಶೇಕಡಾವಾರು ಲೆಕ್ಕದಲ್ಲಿ ಕೂಡ ಹೇಳುವ ಪದ್ಧತಿ ಇದೆ. ಮೇಲೆ ಹೇಳಿದ, ಶ್ರೀಹರಿಯ ಡಿಟಿಐ 0.34. ಇದನ್ನು ಶೇಕಡ 34 ಎಂದೂ ಹೇಳಬಹುದು. ಅಂದರೆ, ಶ್ರೀಹರಿ ಪ್ರತಿ ತಿಂಗಳು ಸಂಪಾದಿಸುವ ಹಣದಲ್ಲಿ ಶೇಕಡ 34ರಷ್ಟು ವಿವಿಧ ಸಾಲಗಳ ಮರುಪಾವತಿಗೆ ವೆಚ್ಚವಾಗುತ್ತಿದೆ.

ಡಿಟಿಐ 0.50ಕ್ಕಿಂತ (ಅಂದರೆ ಶೇಕಡ 50ರಷ್ಟಕ್ಕಿಂತ ಎಂದೂ ಹೇಳಬಹುದು) ಹೆಚ್ಚಿದ್ದರೆ, ಆ ವ್ಯಕ್ತಿಗೆ ಹೆಚ್ಚುವರಿ ಖರ್ಚು ಮಾಡಲು ಕೈಯಲ್ಲಿ ಹಣ ಇರುವುದಿಲ್ಲ. ಹಣಕಾಸಿನ ತುರ್ತು ಸಂದರ್ಭಗಳನ್ನು ನಿಭಾಯಿಸಲು ಆತ ಹೆಣಗಾಡಬೇಕಾಗುತ್ತದೆ. ವ್ಯಕ್ತಿಗೆ ಹಣಕಾಸಿನ ಸ್ಥಿರತೆ ಸಾಧಿಸಬೇಕು ಎಂಬ ಗುರಿ ಇದ್ದರೆ ಡಿಟಿಐ ಪ್ರಮಾಣವನ್ನು ಸಾಧ್ಯವಾದಷ್ಟು ಕಡಿಮೆ ಮಾಡಿಕೊಳ್ಳುವುದು ಬಹುಮುಖ್ಯ. ಸಾಲಮುಕ್ತ ಆಗುವುದು ಅಂದರೆ, ಡಿಟಿಐ ಪ್ರಮಾಣವನ್ನು ಶೂನ್ಯಕ್ಕೆ ತರುವುದು. ಸಾಲ ರಹಿತರಾಗಿ ಇರುವುದು ಅಥವಾ ಸಾಲಕ್ಕೆ ಲಕ್ಷ್ಮಣ ರೇಖೆ ವಿಧಿಸಿಕೊಳ್ಳುವುದು ಸಂಪತ್ತು ಸೃಷ್ಟಿಯ ಗುರಿ ಹೊಂದಿರುವವರು ಇರಿಸಬೇಕಾದ ಬಹುಮುಖ್ಯ ಹೆಜ್ಜೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.