ADVERTISEMENT

ಹೂಡಿಕೆ, ಜೀವ ವಿಮೆ ಸೌಲಭ್ಯ

ಜೆ.ಸಿ.ಜಾಧವ
Published 17 ಮಾರ್ಚ್ 2020, 19:30 IST
Last Updated 17 ಮಾರ್ಚ್ 2020, 19:30 IST
ಜೀವ ವಿಮೆ
ಜೀವ ವಿಮೆ   

ಜೀವ ವಿಮೆಯ ಸಾಂಪ್ರದಾಯಿಕ ಪಾಲಿಸಿಗಳು ಉಳಿತಾಯ ಮತ್ತು ವಿಮೆ ಒಳಗೊಂಡಿರುತ್ತವೆ. ಆದರೆ, ಹೂಡಿಕೆ ಹಾಗೂ ವಿಮೆ ಸೌಲಭ್ಯ ಇರುವ ಪಾಲಿಸಿಗಳಿಗೆ ಯುಲಿಪ್ (ಯುನಿಟ್ ಲಿಂಕ್ಡ್) ಪಾಲಿಸಿಗಳೆಂದು ಹೆಸರು. ಉಳಿತಾಯ ಹಾಗೂ ಹೂಡಿಕೆ ಎನ್ನುವ ಈ ಎರಡೂ ಪದಗಳ ಅರ್ಥ ಅಥವಾ ಪರಿಕಲ್ಪನೆಗಳು ಒಂದೇ ಬಗೆಯಲ್ಲವೇ ಎಂದೆನಿಸಿದರೂ ಸಹ ನಿಜವಾದ ಅರ್ಥದಲ್ಲಿ ಒಂದಕ್ಕೊಂದು ಬಹಳ ವ್ಯತ್ಯಾಸಗಳಿವೆ. ಉಳಿತಾಯ ಎನ್ನುವುದು ನಾವು ಮುಂದಿನ ದಿನಗಳಲ್ಲಿ ಬಳಸಲು, ಭವಿಷ್ಯತ್ತಿನಲ್ಲಿ ಕಷ್ಟಕ್ಕೆ ಒದಗಲಿ ಎಂದು ತೆಗೆದು ಇರಿಸುವ ಹಣವಾಗಿರುತ್ತದೆ. ಹೂಡಿಕೆ ಎನ್ನುವುದು ಹಣವನ್ನು ವೃದ್ಧಿ ಮಾಡಲು ಹಾಗೂ ವೃದ್ಧಿಯಾದ ಹಣವನ್ನು ನಾವು ನಮ್ಮ ಹಣಕಾಸಿನ ಹತ್ತು ಹಲವು ಜವಾಬ್ದಾರಿಗಳನ್ನು ನಿಭಾಯಿಸಿಕೊಳ್ಳಲು ಒದಗುವಂತಹ ಹಣವಾಗಿರುತ್ತದೆ.

ಹೀಗೆ ಜೀವ ವಿಮೆ ಹಾಗೂ ಹೂಡಿಕೆ ಎರಡೂ ಲಾಭಗಳು ಒಂದೇ ವಿನಿಯೋಗದಲ್ಲಿ ದೊರೆತರೆ, ಅದಕ್ಕಿಂತ ಬೇರೆ ಭಾಗ್ಯವಿಲ್ಲ. ಕೇಂದ್ರ ಸರ್ಕಾರಿ ಸ್ವಾಮ್ಯದ ಭಾರತೀಯ ಜೀವ ವಿಮಾ ನಿಗಮವು (ಎಲ್ಐಸಿ) ಎರಡು ಹೊಸ ಯೋಜನೆಗಳನ್ನು ಪರಿಚಯಿಸಿದೆ. ಈ ಎರಡೂ ಪಾಲಿಸಿಗಳು ಯುಲಿಪ್ ಪಾಲಿಸಿಗಳು. ಯುಲಿಪ್ ಪಾಲಿಸಿ ಎಂದ ಕೂಡಲೇ ಗಾಬರಿಯಾಗಬೇಡಿ. ಏಕೆಂದರೆ ಹೂಡಿಕೆಯಲ್ಲಿ ಎಲ್ಲಿ ಕಡಿಮೆಯಾಗುವುದೋ ಎನ್ನುವ ಭಯ ಬೇಡ. ಈ ಹಿಂದೆ ಇದ್ದ ಯುಲಿಪ್ ಪಾಲಿಸಿಗಳಲ್ಲಿರುವ ಬಹಳಷ್ಟು ದೋಷಗಳನ್ನು ಸರಿಪಡಿಸಿ ಗ್ರಾಹಕರಿಗೆ ಉತ್ತಮ ಗಳಿಕೆ ನೀಡುವ ಉದ್ದೇಶದಿಂದ ಈ ಪಾಲಿಸಿಗಳನ್ನು ಪರಿಚಯಿಸಲಾಗಿದೆ.

ಪ್ರಮುಖ ಬದಲಾವಣೆಗಳು ಏನೆಂದರೆ ಇದರಲ್ಲಿ ವಿಮೆ ಏಜೆಂಟರಿಗೆ ಕಮಿಷನ್ ದರ ಅತಿ ಕಡಿಮೆ ಇದೆ. ಅಂದರೆ ಅವರು ಈ ಯೋಜನೆಯಲ್ಲಿ ತೊಡಗಿಸುವವರಿಗೆ ಸೇವೆ ಎಂದು ತಿಳಿದು ನೆರವಾಗುವರು. ಆಡಳಿತಾತ್ಮಕ ವೆಚ್ಚ ಇರುವುದಿಲ್ಲ. ಪ್ರೀಮಿಯಂ ಅಲೊಕೇಷನ್ ವೆಚ್ಚ ಕಡಿಮೆ ಇದೆ. ಮೊರ್ಟಾಲಿಟಿ ವೆಚ್ಚ ರಿಸ್ಕ್ ಕವರ್ ಹಂತದವರೆಗೆ ಮಾತ್ರ. ನಂತರ ಮ್ಯಾಚುರಿಟಿ ವೇಳೆಯಲ್ಲಿ ಕಡಿತವಾದ ಈ ವೆಚ್ಚವನ್ನು ಪಾಲಿಸಿದಾರರಿಗೆ ಮರಳಿ ನೀಡುತ್ತಾರೆ ಎನ್ನುವುದು ಗಮನಿಸಬೇಕಾದ ಸಂಗತಿ.

ADVERTISEMENT

ಯುನಿಟ್ ಫಂಡ್ ವ್ಯಾಲ್ಯೂ ಜೊತೆಗೆ ಗ್ಯಾರಂಟೀಡ್ ಎಡಿಷನ್ ಇರುವುದು ಪಾಲಿಸಿದಾರರಿಗೆ ವರದಾನವಾಗಿರಲಿದೆ. ಇಂತಹ ಹಲವಾರು ವೈಶಿಷ್ಟ್ಯಗಳನ್ನು ಒಳಗೊಂಡಿರುವ ಕಾರಣ ಪಾಲಿಸಿದಾರರಿಗೆ ಅವರು ಹೂಡಿಕೆ ಮಾಡಿದ ಮೊತ್ತಕ್ಕೆ ಉತ್ತಮ ಗಳಿಕೆಯ ಜೊತೆಗೆ ವಿಮಾ ರಕ್ಷಣೆ ನೀಡಲಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಈ ಯೋಜನೆಗಳ ವಿವರಗಳು ಹೀಗಿವೆ. ಈ ಎರಡೂ ಯೋಜನೆಗಳು ವಿಮೆ ಏಜೆಂಟರ ಮೂಲಕ ಅಥವಾ ಆನ್-ಲೈನ್ ಮೂಲಕ ಖರೀದಿಸಬಹುದು. ಆದರೆ ಪ್ರತಿನಿಧಿಗಳ ಮೂಲಕವೇ ಪಡೆಯುವುದು ಹೆಚ್ಚು ಒಳ್ಳೆಯದು. ಏಕೆಂದರೆ ಅವರು ತಮಗೆ ಪಾಲಿಸಿಯ ಅವಧಿಯಲ್ಲಿ ಸೇವೆ ನೀಡುವುದರಲ್ಲಿ ನೆರವಾಗುವರು. ಅಲ್ಲದೇ ಪ್ರತಿನಿಧಿಗಳಿಗೆ ಕಮಿಷನ್ ದರ ಅತಿ ಕಡಿಮೆ ಇರುವುದರಿಂದ ನಿಮ್ಮ ಫಂಡ್ ವ್ಯಾಲ್ಯೂನಲ್ಲಿ ಅಷ್ಟೊಂದು ವ್ಯತ್ಯಾಸವಾಗುವುದಿಲ್ಲ.

ಎರಡೂ ಯೋಜನೆಗಳ ಸಾಮಾನ್ಯ ಸೌಲಭ್ಯಗಳು

ಫಂಡ್ ಆಯ್ಕೆಗಳು: ಬಾಂಡ್, ಸೆಕ್ಯುರ್ಡ್, ಬ್ಯಾಲನ್ಸ್ ಮತ್ತು ಗ್ರೋಥ್ ಫಂಡ್- ಇವುಗಳ ಪೈಕಿ ಯಾವುದಾದರೂ ಆಯ್ಕೆ ಸೌಲಭ್ಯ

ಉಚಿತ ಬದಲಾವಣೆ: ಲಾಭಾಂಶ ಹೆಚ್ಚಿಸುವ ಉದ್ದೇಶದಿಂದ ವರ್ಷದಲ್ಲಿ ನಾಲ್ಕು ಬಾರಿ ಉಚಿತವಾಗಿ ಫಂಡ್ ಆಯ್ಕೆಗಳ ಮಧ್ಯೆ ನಿಮ್ಮ ಹಣ ಬದಲಾಯಿಸಬಹುದು.

ಅವಶ್ಯಕತೆ ಎನಿಸಿದಾಗ ಹಣ ಹಿಂಪಡೆಯುವ ಸೌಲಭ್ಯ. ಪಾಲಿಸಿ ಪ್ರಾರಂಭದ 5ವರ್ಷಗಳ ನಂತರ ಭಾಗಶಃ ಮೊತ್ತ ಹಿಂಪಡೆಯಬಹುದು.

ವ್ಯವಸ್ಥಿತ ಹೂಡಿಕೆಯ ಜೊತೆಗೆ ಜೀವ ವಿಮೆಯು (ಸಿಸ್ಟಮ್ಯಾಟಿಕ್ ಇನ್ವೆಸ್ಟಮೆಂಟ್ ಇನ್ಶುರೆನ್ಸ್ ಪ್ಲ್ಯಾನ್– SIIP)

ಮೂಲ ವಿಮಾ ರಕ್ಷಣೆ ಮೊತ್ತ (ಬೇಸಿಕ್ ಸಮ್ ಅಶ್ಯೂರ್ಡ್ –BSA): 55ನೇ ವರ್ಷದ ಪ್ರಾಯದವರಿಗೆ ವಾರ್ಷಿಕ ಪ್ರೀಮಿಯಂನ 10ಪಟ್ಟು

55ನೇ ವರ್ಷದ ಮೇಲ್ಪಟ್ಟ ಪ್ರಾಯದವರಿಗೆ ವಾರ್ಷಿಕ ಪ್ರೀಮಿಯಂನ 7 ಪಟ್ಟು.

ಯೋಜನೆ ಸಂಖ್ಯೆ 852 ಪಡೆಯಲು ಇರಬೇಕಾದ ಅರ್ಹತೆಗಳು

ಕನಿಷ್ಠ 90 ದಿನಗಳ ಮಗುವಿನಿಂದ, ಗರಿಷ್ಠ 65 ವರ್ಷ ವಯಸ್ಸಿನವರು ಅರ್ಹರು

ಮ್ಯಾಚುರಿಟಿ ಅವಧಿ: ಕನಿಷ್ಠ- 18 ವರ್ಷ, ಗರಿಷ್ಠ- 85 ವರ್ಷ

ಪಾಲಿಸಿ ಅವಧಿ: 10ರಿಂದ 25ವರ್ಷಗಳು

ಮ್ಯಾಚುರಿಟಿ ಸೌಲಭ್ಯ: ಪಾಲಿಸಿದಾರರ ಯುನಿಟ್ ಫಂಡ್ ವ್ಯಾಲ್ಯು ಮತ್ತು ಕಡಿತವಾದ ಮೊರ್ಟಾಲಿಟಿ ವೆಚ್ಚವನ್ನು ಮರಳಿ ನೀಡಲಾಗುವುದು.
ಡೆತ್ ಬೆನಿಫಿಟ್: ಬೇಸಿಕ್ ಸಮ್ ಅಶೂರ್ಡ್ ಅಥವಾ ಪಾಲಿಸಿದಾರರ ಫಂಡ್ ವ್ಯಾಲೂ ಅಥವಾ ಒಟ್ಟು ಪ್ರೀಮಿಯಂನ 105 ಪಟ್ಟು ಇವುಗಳಲ್ಲಿ ಯಾವುದು ಹೆಚ್ಚು ಬರುವುದೋ ಆ ಮೊತ್ತವನ್ನು ನಾಮಿನಿಗೆ ನೀಡಲಾಗುವುದು.

ಖಾತರಿ ಸೌಲಭ್ಯಗಳು: ಆಯಾ ವರ್ಷದ ಅವಧಿ ಮುಗಿದ ನಂತರ ವಾರ್ಷಿಕ ಪ್ರೀಮಿಯಂನ ಪ್ರತಿಶತದ ಮೊತ್ತವು ಯುನಿಟ್ ಫಂಡ್ ವ್ಯಾಲ್ಯೂಗೆ ಸೇರ್ಪಡೆ. 6 ವರ್ಷಗಳ ನಂತರ ಶೇ 5, 10 ವರ್ಷಕ್ಕೆ ಶೇ 10, 15 ವರ್ಷಕ್ಕೆ ಶೇ 15, 20 ವರ್ಷಕ್ಕೆ ಶೇ 20 ಮತ್ತು 25 ವರ್ಷಕ್ಕೆ ಶೇ 25.

ನಿವೇಶ್‌ ಪ್ಲಸ್

ಈ (ಯೋಜನೆ ಸಂಖ್ಯೆ 849) ಯೋಜನೆಯು ಏಕ ಕಂತಿನಲ್ಲಿ ಪಾವತಿಸುವ ಯೋಜನೆಯಾಗಿದೆ.

ಕನಿಷ್ಠ ಪ್ರೀಮಿಯಂ; ₹ 1 ಲಕ್ಷ

ಗರಿಷ್ಠ ಮೊತ್ತ; ಮಿತಿ ನಿಗದಿಪಡಿಸಿಲ್ಲ

ಮೂಲ ವಿಮಾ ರಕ್ಷಣೆ (ಬೇಸಿಕ್ ಸಮ್ ಅಶೂರ್ಡ್): ಪಾವತಿಸಿದ ಪ್ರೀಮಿಯಂನ 1.25ರಷ್ಟು ಅಥವಾ 10ರಷ್ಟು ಲೈಫ್ ಕವರ್ ಆಯ್ಕೆ ಮಾಡಿಕೊಳ್ಳಬಹುದು.

ವಿಮಾ ಅವಧಿ: 10 ರಿಂದ 25 ವರ್ಷಗಳು

ಈ ಯೋಜನೆಗೆ ಅರ್ಹತೆಗಳು

ಕನಿಷ್ಠ ವಯಸ್ಸು- 90 ದಿನಗಳು

ಗರಿಷ್ಠ ವಯಸ್ಸು- 35 ವರ್ಷ ಅಥವಾ 70ವರ್ಷ (ಲೈಫ್ ಕವರ್ ಆಯ್ಕೆಯ ಮೇರೆಗೆ)

ಮ್ಯಾಚುರಿಟಿ ವಯಸ್ಸು: ಕನಿಷ್ಠ- 50 ವರ್ಷ ಅಥವಾ 85 ವರ್ಷ (ಲೈಫ್ ಕವರ್ ಆಯ್ಕೆಯ ಮೇರೆಗೆ)

ಗ್ಯಾರಂಟೀಡ್ ಹೆಚ್ಚುವರಿಗಳು: ಆಯಾ ವರ್ಷದ ಅವಧಿ ಮುಗಿದ ನಂತರ ತಾವು ಪಾವತಿಸಿದ ಏಕ ಕಂತಿನ ಪ್ರೀಮಿಯಂನ ಪ್ರತಿಶತದ ಮೊತ್ತವು ಪಾಲಿಸಿದಾರರ ಯುನಿಟ್ ಫಂಡ್ ವ್ಯಾಲ್ಯೂಗೆ ಸೇರ್ಪಡೆಯಾಗುತ್ತದೆ.
6 ವರ್ಷಗಳ ನಂತರ ಶೇ 3, 10 ವರ್ಷಕ್ಕೆ ಶೇ 4, 15 ವರ್ಷಕ್ಕೆ ಶೇ 5, 20 ವರ್ಷಕ್ಕೆ ಶೇ 6, 25 ವರ್ಷಕ್ಕೆ ಶೇ 7

ಮ್ಯಾಚುರಿಟಿ ಬೆನಿಫಿಟ್: ಪಾಲಿಸಿದಾರರ ಯುನಿಟ್ ಫಂಡ್ ವ್ಯಾಲ್ಯೂ

ಡೆತ್ ಬೆನಿಫಿಟ್: ಬೇಸಿಕ್ ಸಮ್ ಅಶ್ಯೂರ್ಡ್ ಅಥವಾ ಪಾಲಿಸಿದಾರರ ಯುನಿಟ್ ಫಂಡ್ ವ್ಯಾಲ್ಯೂ ಯಾವುದು ಹೆಚ್ಚು ಬರುವುದೋ ಆ ಮೊತ್ತವನ್ನು ನಾಮಿನಿಗೆ ದೊರೆಯಲಿದೆ

ಹೀಗೆ ಈ ಎರಡೂ ಯೋಜನೆಗಳು ಹೂಡಿಕೆ ಹಾಗೂ ಜೀವ ವಿಮೆಯ ರಕ್ಷಣೆ ನೀಡುತ್ತವೆ. ಈ ಎರಡೂ ಯೋಜನೆಗಳಲ್ಲಿ ತಮ್ಮ ಹಣಕಾಸಿನ ಲಭ್ಯತೆ ಆಧರಿಸಿ ಏಕ ಕಂತಿನ ಅಥವಾ ನಿರಂತರ ಪಾವತಿಸುವ ಪಾಲಿಸಿ ಖರೀದಿಯಲ್ಲಿ ಯಾವುದು ಹೆಚ್ಚು ಪ್ರಯೋಜನ ಎನ್ನುವುದನ್ನು ತಿಳಿದುಕೊಳ್ಳಿ. ಎರಡೂ ಯೋಜನೆಗಳಲ್ಲಿನ ಹೂಡಿಕೆಗೆ ಉತ್ತಮ ಗಳಿಕೆ ದೊರೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.