ADVERTISEMENT

ಬಂಡವಾಳ ಮಾರುಕಟ್ಟೆ: ಬ್ಯಾಂಕ್ ಶುಲ್ಕ: ನಿಮಗಿದು ತಿಳಿದಿರಲಿ

ಅವಿನಾಶ್ ಕೆ.ಟಿ
Published 5 ಮಾರ್ಚ್ 2021, 12:11 IST
Last Updated 5 ಮಾರ್ಚ್ 2021, 12:11 IST
ಅವಿನಾಶ್ ಕೆ.ಟಿ.
ಅವಿನಾಶ್ ಕೆ.ಟಿ.   

ಉಳಿತಾಯ ಖಾತೆಗೆ ಹಲವು ಬಗೆಯ ಶುಲ್ಕ/ದಂಡಗಳನ್ನು ಬ್ಯಾಂಕ್‌ಗಳು ವಿಧಿಸುತ್ತವೆ. ಆದರೆ ಬಹುತೇಕರಿಗೆ ಆ ಬಗ್ಗೆ ತಿಳಿದಿಲ್ಲ. ಕೆಲವು ಶುಲ್ಕಗಳನ್ನು ಹೇರುವಾಗ ಬ್ಯಾಂಕ್‌ಗಳು ಎಸ್ಎಂಎಸ್ ಸಂದೇಶ ಕಳುಹಿಸುವುದಿಲ್ಲ. ನೇರವಾಗಿ ನಿಮ್ಮ ಖಾತೆಯಿಂದ ಹಣ ಕಡಿತ ಮಾಡುತ್ತವೆ. ಖಾತೆಯ ಜಮಾ–ಖರ್ಚು ವಿವರ ನೋಡಿದಾಗ ಮಾತ್ರ ಆ ಶುಲ್ಕಗಳ ಬಗ್ಗೆ ಗೊತ್ತಾಗುತ್ತದೆ. ಅಂತಹ ಶುಲ್ಕಗಳ ಪೈಕಿ ಪೋಸ್‌ಡೆಕ್ ಚಾರ್ಜಸ್ (POSDEC CHARGES) ಬಗ್ಗೆ ಮಾಹಿತಿ ಇಲ್ಲಿದೆ.

ಸಣ್ಣ ತಪ್ಪಿಗೆ ದಂಡ: ಫೆಬ್ರವರಿ 11ರಂದು ನನ್ನ ಸ್ನೇಹಿತನೊಬ್ಬ ಪೆಟ್ರೋಲ್ ಬಂಕ್‌ಗೆ ಹೋಗಿ ತನ್ನ ಕಾರಿಗೆ ₹ 2 ಸಾವಿರಕ್ಕೆ ಪೆಟ್ರೋಲ್ ತುಂಬಿಸಿದ. ಬಳಿಕ ತನ್ನ ಡೆಬಿಟ್ ಕಾರ್ಡ್ ಮೂಲಕ ಪಾವತಿಗೆ ಮುಂದಾದ. ಮೂರು ಸಲ ಪ್ರಯತ್ನ ಮಾಡಿದರೂ, ಖಾತೆಯಲ್ಲಿ ಸಾಕಷ್ಟು ಬ್ಯಾಲೆನ್ಸ್ ಇಲ್ಲದ ಕಾರಣ ಪಾವತಿ ಸಾಧ್ಯವಾಗಲಿಲ್ಲ. ಇದಾದ 13 ದಿನಗಳ ಬಳಿಕ ಅಂದರೆ ಫೆಬ್ರವರಿ 23ರಂದು ನನ್ನ ಸ್ನೇಹಿತನ ಬ್ಯಾಂಕ್ ಖಾತೆಯಿಂದ ಮೂರು ಬಾರಿ ₹ 29ರಂತೆ ಒಟ್ಟು ₹ 87 ಕಡಿತವಾಗಿದೆ. ಹೀಗೆ ಕಡಿತವಾಗಿರುವ ಹಣದ ಮುಂದೆ POSDEC CHG/11-02-2021 ಎಂಬ ಒಕ್ಕಣೆ ಇದೆ. ಏನಿದು ಎಂದು ಪರಿಶೀಲಿಸಲು ಹೊರಟಾಗ, ಖಾತೆಯಲ್ಲಿ ಹಣವಿಲ್ಲದಿದ್ದಾಗ
ಡೆಬಿಟ್ ಕಾರ್ಡ್ ಮೂಲಕ ಆತ ಪಾವತಿಗೆ ಪ್ರಯತ್ನಿಸಿದ ಕಾರಣ ಬ್ಯಾಂಕ್ ದಂಡ ವಿಧಿಸಿರುವುದು ಗೊತ್ತಾಗಿದೆ. ಇದು ನನ್ನ ಸ್ನೇಹಿತನೊಬ್ಬನ ಕಥೆಯಲ್ಲ, ಬಹುತೇಕರು ಹೀಗೆ ಡೆಬಿಟ್ ಕಾರ್ಡ್‌ಗಳ ಶುಲ್ಕ/ದಂಡಗಳ ಬಗ್ಗೆ ಸರಿಯಾಗಿ ತಿಳಿದುಕೊಳ್ಳದೆ ಸಮಸ್ಯೆಗೆ ಸಿಲುಕಿದ್ದಾರೆ.

ಏನಿದು ಪೋಸ್‌ಡೆಕ್ ಶುಲ್ಕ/ದಂಡ?: ನಿಮ್ಮ ಬ್ಯಾಂಕ್ ಖಾತೆಯಲ್ಲಿ ಹಣವಿಲ್ಲದಿದ್ದಾಗ ತಿಳಿದೋ ತಿಳಿಯದೆಯೋ ಎಟಿಎಂ ಮೂಲಕ ಹಣ ತೆಗೆಯಲು ಪ್ರಯತ್ನಿಸಿದರೆ ಅಥವಾ ಡೆಬಿಟ್ ಕಾರ್ಡ್ ಮೂಲಕ ಪಾವತಿಗೆ ಮುಂದಾದರೆ ಕೆಲವು ಬ್ಯಾಂಕ್‌ಗಳು ನಿಮಗೆ ದಂಡ ವಿಧಿಸುತ್ತವೆ. ಇದನ್ನೇ ಪೋಸ್‌ಡೆಕ್ (POSDEC CHG / Point of Sale Decline Charges) ಎಂದು ಕರೆಯುತ್ತಾರೆ. ನಿಮ್ಮ ಖಾತೆಯಲ್ಲಿ ದುಡ್ಡಿಲ್ಲ ಎಂಬ ಕಾರಣಕ್ಕೆ ಎಷ್ಟು ಬಾರಿ ಪಾವತಿ ವಿಫಲವಾಗುತ್ತದೋ ಅಷ್ಟು ಬಾರಿ ನೀವು ದಂಡ ಕಟ್ಟಬೇಕಾಗುತ್ತದೆ. ಉದಾಹರಣೆಗೆ ನೀವು ಒಂದು ಬಾರಿ ಪಾವತಿಗೆ ಪ್ರಯತ್ನಿಸಿ ಅದು ವಿಫಲವಾದರೆ ₹ 29 ದಂಡ ಕಟ್ಟಬೇಕಾಗುತ್ತದೆ. ಖಾತೆಯಲ್ಲಿ ಹಣವಿಲ್ಲದಿದ್ದಾಗ ಹತ್ತು ಬಾರಿ ಪಾವತಿಗೆ ಯತ್ನಿಸಿ, ವಿಫಲವಾದರೆ ₹ 290 ದಂಡವನ್ನು ಬ್ಯಾಂಕ್ ವಿಧಿಸುತ್ತದೆ.

ADVERTISEMENT

ನೆಟ್‌ವರ್ಕ್ ಸಮಸ್ಯೆಯಾದಾಗಲೂ ದಂಡ?: ನೆಟ್‌ವರ್ಕ್ ಸಮಸ್ಯೆಯಿಂದ ಕೆಲವು ಬಾರಿ ಡೆಬಿಟ್ ಕಾರ್ಡ್ ಪಾವತಿ ವಿಫಲವಾದರೆ ಅದಕ್ಕೂ ದಂಡ ವಿಧಿಸಿರುವ ಬಗ್ಗೆ ಜನರು ಆನ್‌ಲೈನ್ ವೇದಿಕೆಗಳಲ್ಲಿ ಪ್ರಸ್ತಾಪಿಸಿದ್ದಾರೆ. ಬ್ಯಾಂಕ್ ಖಾತೆಯಲ್ಲಿ ಹಣವಿದ್ದರೂ ಕೆಲ ಬ್ಯಾಂಕ್‌ಗಳು ಶುಲ್ಕ ವಿಧಿಸಿವೆ ಎಂದು ಜನರು ದೂರಿದ್ದಿದೆ.

ನೀವೂ ದಂಡ ಕಟ್ಟಿದ್ದೀರಾ?: ಬಹುತೇಕರಿಗೆ ಬ್ಯಾಂಕ್ ಖಾತೆಯ ವಿವರ ನೋಡುವ ರೂಢಿ ಇಲ್ಲ. ಖಾತೆಯಲ್ಲಿ ಇರುವ ಮೊತ್ತ ಎಷ್ಟು ಎಂಬುದರ ವಿವರ ಎಸ್‌ಎಂಎಸ್‌ ಮೂಲಕವೇ ಸಿಗುತ್ತದೆ
ಎಂದು ಸುಮ್ಮನಾಗುತ್ತಾರೆ. ಆದರೆ ಬ್ಯಾಂಕ್‌ಗಳು ವಿಧಿಸುವ ಶುಲ್ಕ ಅಥವಾ ದಂಡದ ವಿವರ ಎಸ್‌ಎಂಎಸ್‌ ಮೂಲಕ ಗೊತ್ತಾಗಿಯೇ ಆಗುತ್ತದೆ ಎನ್ನಲಾಗದು. ಬ್ಯಾಂಕ್‌ನಿಂದ ಬರುವ ಮಾಸಿಕ ಸ್ಟೇಟ್‌ಮೆಂಟ್‌ನಲ್ಲಿ ಮಾತ್ರ ಈ ಬಗ್ಗೆ ಪ್ರಸ್ತಾಪವಿರುತ್ತದೆ. ಪ್ರತಿ ತಿಂಗಳು ತಪ್ಪದೇ ನಿಮ್ಮ ಖಾತೆಯ ಸ್ಟೇಟ್‌ಮೆಂಟ್ ನೋಡಿಕೊಳ್ಳುವುದು ಉತ್ತಮ. ಹೀಗೆ ಮಾಡಿದಾಗ, ಒಂದೊಮ್ಮೆ ನಿಮ್ಮದಲ್ಲದ ತಪ್ಪಿಗೆ ಶುಲ್ಕ ವಿಧಿಸಿದ್ದರೆ ದೂರು ನೀಡಿ ಪರಿಹಾರ ಕಂಡುಕೊಳ್ಳಬಹುದು.

ಬಾಂಡ್ ಏರಿಕೆಗೆ ಇಳಿದ ಷೇರುಪೇಟೆ

ಅಮೆರಿಕದಲ್ಲಿ ಬಾಂಡ್ ಮೇಲಿನ ಗಳಿಕೆ ಹೆಚ್ಚಳ, ಸಿರಿಯಾ ಮೇಲೆ ಅಮೆರಿಕ ದಾಳಿ, ಜಾಗತಿಕವಾಗಿ ಹೆಚ್ಚಳವಾಗುತ್ತಿರುವ ಕೋವಿಡ್–19 ಪ್ರಕರಣಗಳು, ವಿದೇಶಿ ಮಾರುಕಟ್ಟೆಗಳಲ್ಲಿ ಮಂದಗತಿಯ ವಹಿವಾಟು ಸೇರಿ ಪ್ರಮುಖ ಕಾರಣಗಳಿಂದಾಗಿ ಷೇರುಪೇಟೆ ಸೂಚ್ಯಂಕಗಳು ಭಾರೀ ಕುಸಿತ ದಾಖಲಿಸಿವೆ. 49,099 ಅಂಶಗಳಲ್ಲಿ ವಹಿವಾಟು ಮುಗಿಸಿರುವ ಸೆನ್ಸೆಕ್ಸ್ ವಾರದ ಅವಧಿಯಲ್ಲಿ ಶೇಕಡ 3.5ರಷ್ಟು ಕುಸಿತ ಕಂಡಿದೆ. 14,529 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ನಿಫ್ಟಿ ಶೇ 3ರಷ್ಟು ಇಳಿಕೆ ದಾಖಲಿಸಿದೆ. ಬಜೆಟ್ ನಂತರದಲ್ಲಿ ಷೇರು ಮಾರುಕಟ್ಟೆ ಕಂಡಿದ್ದ ಗಳಿಕೆಯ ಶೇ 50ರಷ್ಟು ಈಗ ಇಲ್ಲವಾಗಿದೆ. ಫೆಬ್ರವರಿ 26ರಂದು ಒಂದೇ ದಿನ ಹೂಡಿಕೆದಾರರು ₹ 5 ಲಕ್ಷ ಕೋಟಿ ಕಳೆದುಕೊಂಡಿದ್ದಾರೆ.

ಮಾರುಕಟ್ಟೆಯಲ್ಲಿ ನಕಾರಾತ್ಮಕತೆ ಹೆಚ್ಚಾಗಿದ್ದು ಅನಿಶ್ಚಿತತೆ ಮುಂದುವರಿಯಲಿದೆ ಎನ್ನುವುದನ್ನು ಸತತ ಎರಡನೆಯ ವಾರ ಕುಸಿತ ದಾಖಲಿಸಿರುವ ಸೂಚ್ಯಂಕಗಳು ಹೇಳುತ್ತಿವೆ. ವಲಯವಾರು ಪ್ರಗತಿಯಲ್ಲಿ ನಿಫ್ಚಿ ಬ್ಯಾಂಕ್ ಸೂಚ್ಯಂಕ ವಾರದ ಅವಧಿಯಲ್ಲಿ ಶೇ 3ರಷ್ಟು ಕುಸಿತ ದಾಖಲಿಸಿದೆ. ಮಾಹಿತಿ ತಂತ್ರಜ್ಞಾನ, ವಾಹನ ಉತ್ಪಾದನೆ, ಫಾರ್ಮಾ ವಲಯಗಳು ಅತಿ ಹೆಚ್ಚು ಕುಸಿತ ದಾಖಲಿಸಿವೆ. ಆದರೆ ಲೋಹ ವಲಯ ಸದ್ಯ ಅಗ್ರಸ್ಥಾನದಲ್ಲಿದೆ. ಪ್ರಮುಖ ಸೂಚ್ಯಂಕಗಳ ಇಳಿಕೆಯ ನಡುವೆಯೂ ಮಿಡ್ ಕ್ಯಾಪ್ ಸೂಚ್ಯಂಕ ವಾರದ ಅವಧಿಯಲ್ಲಿ ಶೇ 0.6ರಷ್ಟು ಗಳಿಕೆ ಕಂಡಿದೆ.

ಇಳಿಕೆ–ಗಳಿಕೆ: ನಿಫ್ಟಿಯಲ್ಲಿ 37 ಪ್ರಮುಖ ಕಂಪನಿಗಳ ಷೇರುಗಳು ನಕಾರಾತ್ಮಕ ಫಲಿತಾಂಶ ಕೊಟ್ಟಿವೆ. ಮಹೀಂದ್ರ ಶೇ 8.29ರಷ್ಟು, ಕೋಟಕ್ ಮಹೀಂದ್ರ ಬ್ಯಾಂಕ್ ಶೇ 8.17ರಷ್ಟು, ಪವರ್ ಗ್ರಿಡ್ ಶೇ 7.71ರಷ್ಟು, ಟೆಕ್ ಮಹೀಂದ್ರ ಶೇ 7.56ರಷ್ಟು ಮತ್ತು ಎಚ್‌ಡಿಎಫ್‌ಸಿ ಶೇ 7.37ರಷ್ಟು ಕುಸಿತ ಕಂಡಿವೆ. ಹಿಂಡಾಲ್ಕೊ ಶೇ 10.47ರಷ್ಟು, ಕೋಲ್ ಇಂಡಿಯಾ ಶೇ 9.30ರಷ್ಟು, ಟಾಟಾ ಸ್ಟೀಲ್ ಶೇ 6.63ರಷ್ಟು, ಒಎನ್‌ಜಿಸಿ ಶೇ 6.76ರಷ್ಟು ಮತ್ತು ಬಿಪಿಸಿಎಲ್ ಶೇ 4.62ರಷ್ಟು ಗಳಿಸಿಕೊಂಡಿವೆ.

ಐಪಿಒ: ಎಂಟಾರ್ ಟೆಕ್ನಾಲಜೀಸ್‌ನ ಐಪಿಒ ಮಾರ್ಚ್ 3ರಿಂದ 5ರವರೆಗೆ ನಡೆಯಲಿದೆ.

ಮುನ್ನೋಟ: ಷೇರು ಮಾರುಕಟ್ಟೆಯ ಓಟಕ್ಕೂ ಅರ್ಥ ವ್ಯವಸ್ಥೆಗೂ ತಾಳಮೇಳ ಇಲ್ಲವಾಗಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಈ ಹಿಂದೆಯೇ ಹೇಳಿದ್ದರು. ಇದೀಗ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಅಧ್ಯಕ್ಷ ಅಜಯ್ ತ್ಯಾಗಿ ಕೂಡ ಅದೇ ಮಾತು ಹೇಳಿದ್ದಾರೆ. ಇದರ ಅರ್ಥ, ಷೇರುಪೇಟೆ ಸೂಚ್ಯಂಕಗಳು ಅಲ್ಪಾವಧಿಯಲ್ಲಿ ಅನಿರೀಕ್ಷಿತ ಬೆಳವಣಿಗೆಯನ್ನು ಕಂಡಿವೆ ಎಂದು. ಈ ಕಾರಣದಿಂದಾಗಿ ಮುಂದಿನ ದಿನಗಳಲ್ಲೂ ಷೇರುಪೇಟೆಯ ಏರಿಳಿತ ಹೀಗೆಯೇ ಮುಂದುವರಿಯುವ ಸಾಧ್ಯತೆ ನಿಚ್ಚಳವಾಗಿದೆ. ಬಾಂಡ್‌ಗಳ ಮೇಲಿನ ಗಳಿಕೆ ಹೆಚ್ಚಾಗಿರುವುದು ಷೇರುಪೇಟೆಗೆ ತಲೆನೋವಾಗಿ ಪರಿಣಮಿಸಿದೆ. ಜಾಗತಿಕ ಮಾರುಕಟ್ಟೆಗಳ ಚಲನೆಯೂ ದೇಶಿಯ ಷೇರು ಮಾರುಕಟ್ಟೆಗಳ ಸೂಚ್ಯಂಕಗಳ ಗತಿ ನಿರ್ಧರಿಸಲಿದೆ.

(ಲೇಖಕ: ‘ಇಂಡಿಯನ್ ಮನಿ ಡಾಟ್ ಕಾಂ’ನ ಹಣಕಾಸು ಸಲಹಾ ವಿಭಾಗದ ಮುಖ್ಯಸ್ಥ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.