ADVERTISEMENT

ಪ್ರಶ್ನೋತ್ತರ - ಉತ್ತಮ ಉಳಿತಾಯ ಯೋಜನೆ ತಿಳಿಸಿ

ಯು.ಪಿ.ಪುರಾಣಿಕ್
Published 13 ಜುಲೈ 2021, 21:03 IST
Last Updated 13 ಜುಲೈ 2021, 21:03 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ರಾಮಚಂದ್ರ ನಾರಾಯಣ ಹೆಗಡೆ, ಶಿರಸಿ

l ಪ್ರಶ್ನೆ: ನಾನು ಹಾಗೂ ನಮ್ಮ ಮನೆಯ ಸದಸ್ಯರು ಪ್ರತೀ ಬುಧವಾರ ನಿಮ್ಮ ಅಂಕಣ ಓದುತ್ತೇವೆ. ನಮಗೆ ಉಳಿತಾಯದ ವಿಚಾರದಲ್ಲಿ ಹೆಚ್ಚಿನ ಮಾಹಿತಿ ಇಲ್ಲ. ಹಣ ಉಳಿಸಿದರೆ ತೆರಿಗೆ ಕೊಡಬೇಕಾಗತ್ತದೆ ಎನ್ನುತ್ತಾರೆ ನಮ್ಮ ಸ್ನೇಹಿತರು. ನಮ್ಮ ಉದ್ಯೋಗ ಕೃಷಿ. ನಾಲ್ಕು ಎಕರೆ ಅಡಿಕೆ ಜಮೀನು ಇದೆ. ಮೆಣಸು, ಬಾಳೆ, ಏಲಕ್ಕಿ, ಉಪಬೆಳೆ. ಕನಿಷ್ಠ ₹ 10 ಲಕ್ಷ ವಾರ್ಷಿಕ ವರಮಾನ ಬರುತ್ತದೆ. ನಾನು, ಹೆಂಡತಿ, ಇಬ್ಬರು ಗಂಡು ಮಕ್ಕಳ ಕುಟುಂಬ ನಮ್ಮದು. ನನಗೆ 68 ವರ್ಷ ವಯಸ್ಸು. ನಮ್ಮ ಕುಟುಂಬಕ್ಕೆ ಉತ್ತಮ ಉಳಿತಾಯ ಯೋಜನೆ ತಿಳಿಸಿರಿ.

ಉತ್ತರ: ಹಣ ಉಳಿಸಿದರೆ ತೆರಿಗೆ ಕೊಡಬೇಕಾಗುತ್ತದೆ ಎನ್ನುವುದು ಉಳಿತಾಯ ಮಾಡದೇ ಇರುವವರ ಅರ್ಥರಹಿತ ವಾದ. ನಿಮ್ಮದು ಅವಿಭಕ್ತ ಕುಟುಂಬವಾದ್ದರಿಂದ ಹಾಗೂ ವರಮಾನ ಕೃಷಿ ಮೂಲದಿಂದ ಬರುವುದರಿಂದ ನೀವು ಆದಾಯ ತೆರಿಗೆಗೆ ಭಯ ಪಡಬಾರದು. ಉಳಿತಾಯ ಮಾಡುವುದನ್ನು ಎಂದಿಗೂ ಮರೆಯಬಾರದು. ನಿಮಗೆ ವಾರ್ಷಿಕವಾಗಿ ಬರುವ ₹ 10 ಲಕ್ಷ ವರಮಾನದಲ್ಲಿ ಕನಿಷ್ಠ ₹ 5 ಲಕ್ಷ ಉಳಿತಾಯ ಮಾಡಲೇಬೇಕು. ಇನ್ನುಳಿದ ₹ 5 ಲಕ್ಷವನ್ನು ಕೃಷಿ ಚಟುವಟಿಕೆ ಹಾಗೂ ಜೀವನೋಪಾಯಕ್ಕೆ ಬಳಸಿ. ಉಳಿತಾಯ ಮಾಡಲು ಸ್ವಲ್ಪ ಮಟ್ಟಿಗಿನ ತ್ಯಾಗ, ಕುಟುಂಬದ ಸದಸ್ಯರ ಸಹಮತ ಬೇಕಾಗುತ್ತದೆ. ನೀವು, ನಿಮ್ಮ ಹೆಂಡತಿ ಹಾಗೂ ಇಬ್ಬರು ಗಂಡುಮಕ್ಕಳ ಹೆಸರಿನಲ್ಲಿ ತಲಾ ₹ 1.25 ಲಕ್ಷವನ್ನು ಐದು ವರ್ಷಗಳ ಒಮ್ಮೆಲೇ ಬಡ್ಡಿ ಬರುವ ಕಾಮಧೇನು ಠೇವಣಿಯಲ್ಲಿ ಕೆನರಾ ಬ್ಯಾಂಕ್‌ನಲ್ಲಿ ಇಡಿ. ಈ ಪ್ರಕ್ರಿಯೆ ನಿರಂತರವಾಗಿ ಇರಲಿ. ಈ ರೀತಿ ನೀವು ಠೇವಣಿಯನ್ನು ಇನ್ನೂ 10–15 ವರ್ಷಗಳ ಕಾಲ ಮಾಡಿದರೂ ನಿಮ್ಮಲ್ಲಿ ಯಾರೂ ತೆರಿಗೆ ಪಾವತಿಸಬೇಕಾಗಿಲ್ಲ.

ADVERTISEMENT

ಶಶಿಧರ ನಾಯ್ಕ್‌, ಕಾರವಾರ

l ಪ್ರಶ್ನೆ: ಇಸಿಎಸ್‌–ಸ್ಟ್ಯಾಂಡಿಂಗ್ ಇನ್‌ಸ್ಟ್ರಕ್ಷನ್‌ ಇವುಗಳ ನಡುವೆ ವ್ಯತ್ಯಾಸ ಹಾಗೂ ಉಪಯೋಗವೇನು? ಇವುಗಳನ್ನು ಆನ್‌ಲೈನ್‌ನಲ್ಲಿ ಪಾವತಿ ಮಾಡುವುದು ಸುಲಭ ಇದೆ. ದಯಮಾಡಿ ಮಾಹಿತಿ ನೀಡಿ.

ಉತ್ತರ: ಕಾಲಕಾಲಕ್ಕೆ ಪಾವತಿ ಮಾಡಬೇಕಾದ, ನಿಶ್ಚಿತ ಮೊತ್ತದ ಆರ್‌.ಡಿ. ಕಂತುಗಳು, ಸಾಲದ ಕಂತುಗಳು, ವಿಮೆ ಪ್ರೀಮಿಯಂಗೆ ಸ್ಟ್ಯಾಂಡಿಂಗ್ ಇನ್‌ಸ್ಟ್ರಕ್ಷನ್‌ ಉಪಯುಕ್ತ. ವಿದ್ಯುತ್‌, ದೂರವಾಣಿ, ನೀರು, ಕ್ರೆಡಿಟ್‌ ಕಾರ್ಡ್‌ ಇಂತಹ ಬಿಲ್‌ಗಳು ಪ್ರತೀ ತಿಂಗಳೂ ಒಂದೇ ಇರಲಾರವು. ಇವುಗಳನ್ನೆಲ್ಲ ‘ಇಸಿಎಸ್’ ಮುಖಾಂತರ ಪಾವತಿ ಮಾಡುವುದು ಸುಲಭ. ನೀವು ಹೇಳಿದಂತೆ ಇವುಗಳನ್ನು ಆನ್‌ಲೈನ್‌ ಸೌಲಭ್ಯ ಬಳಸಿಯೂ ಪಾವತಿಸಬಹುದಾದರೂ ಕೆಲಸದ ಒತ್ತಡದಿಂದ ಅಥವಾ ಮರೆವೆಯಿಂದ ಸಕಾಲದಲ್ಲಿ ತುಂಬಲಾಗದಿರುವಲ್ಲಿ ಫೋನ್‌, ನೀರು, ವಿದ್ಯುತ್‌ ಸಂಪರ್ಕ ಕಡಿತ ಆಗಬಹುದು. ಎಲ್ಲಕ್ಕೂ ಮುಖ್ಯವಾಗಿ ಕ್ರೆಡಿಟ್‌ ಕಾರ್ಡ್‌ ಪಾವತಿ ಸಮಯಕ್ಕೆ ಆಗದೇ ಇದ್ದಲ್ಲಿ ಸಿಬಿಲ್ ರೇಟಿಂಗ್‌ ಕಡಿಮೆಯಾಗಿ ಮುಂದೆ ಸಾಲ ಅಥವಾ ಕ್ರೆಡಿಟ್‌ ಕಾರ್ಡ್‌ ಸವಲತ್ತು ದೊರೆಯದೇ ಹೋಗಬಹುದು.

ಶಾಂಭವಿ, ಕುಂದಾಪುರ

l ಪ್ರಶ್ನೆ: ನನ್ನ ವಯಸ್ಸು 58 ವರ್ಷ. ನಾನು ಗೃಹಿಣಿ. ನನ್ನ ಮಗ ಸಾಫ್ಟ್‌ವೇರ್‌ ಎಂಜಿನಿಯರ್‌. ಅವನ ತಿಂಗಳ ಸಂಬಳ ₹ 1.25 ಲಕ್ಷ. ನನ್ನ ಮಗ ನನಗೆ ತಿಂಗಳಿಗೆ ₹ 25 ಸಾವಿರ ಕಳುಹಿಸುತ್ತಾನೆ. ಅವನ ಹೆಸರಿನಲ್ಲಿ ₹ 15 ಸಾವಿರ ಆರ್‌.ಡಿ ಮಾಡುತ್ತಿದ್ದಾನೆ. ನನ್ನ ಮಗ ನನಗೆ ಕೊಡುವ ₹ 25 ಸಾವಿರಕ್ಕೆ ನನಗಾಗಲಿ, ಅವನಿಗಾಗಲಿ ತೆರಿಗೆ ಬರುತ್ತದೆಯೇ? ಆರ್‌.ಡಿ. ಕಟ್ಟುವುದರಿಂದ ತೆರಿಗೆ ಉಳಿತಾಯ ಇದೆಯೇ? ತೆರಿಗೆ ಉಳಿಸಲು ಹಾಗೂ ಉತ್ತಮ ಉಳಿತಾಯ ಮಾಡಲು ನನ್ನ ಮಗನಿಗೆ ಮಾರ್ಗದರ್ಶನ ಮಾಡಿ.

ಉತ್ತರ: ನಿಮ್ಮ ಮಗ ನಿಮಗೆ ಕಳುಹಿಸುವ ಹಣಕ್ಕೆ ಅವರಿಗಾಗಲಿ, ನಿಮಗಾಗಲಿ ತೆರಿಗೆ ಬರುವುದಿಲ್ಲ. ಆರ್‌.ಡಿ. ಠೇವಣಿ ಮಾಡುವುದರಿಂದ ತೆರಿಗೆ ವಿನಾಯಿತಿ ಪಡೆಯುವಂತಿಲ್ಲ. ಇದೇ ವೇಳೆ ಅವರು, ₹ 1.5 ಲಕ್ಷವನ್ನು 5 ವರ್ಷಗಳ ಠೇವಣಿ ಮಾಡಿದಲ್ಲಿ ₹ 1.50 ಲಕ್ಷವನ್ನು ಒಟ್ಟು ಆದಾಯದಿಂದ ಕಳೆದು ತೆರಿಗೆ ಸಲ್ಲಿಸಬಹುದು (ಸೆಕ್ಷನ್‌ 80ಸಿ). ಇದರ ಹೊರತಾಗಿ ಸೆಕ್ಷನ್‌ 80ಸಿಸಿಡಿ (1ಬಿ) ಆಧಾರದ ಮೇಲೆ ಗರಿಷ್ಠ ₹ 50 ಸಾವಿರ ತುಂಬಿ, ಒಟ್ಟು ಆದಾಯದಿಂದ ಕಳೆದು ತೆರಿಗೆ ಸಲ್ಲಿಸಬಹುದು. ಉಳಿತಾಯಕ್ಕೆ ಪಿಪಿಎಫ್‌ ಖಾತೆ ತೆರೆಯಲು ಕೂಡ ತಿಳಿಸಿ. ಅವರ ವರಮಾನ ಪರಿಗಣಿಸಿ ಕನಿಷ್ಠ ₹ 25 ಲಕ್ಷ ಜೀವ ವಿಮೆ ಮಾಡಲು ಹೇಳಿ. ಮುಂದೆ ನಿವೇಶನ ಕೊಂಡು ಮನೆ ಕಟ್ಟಿಸುವ ಉದ್ದೇಶ ಇಟ್ಟುಕೊಂಡು ₹ 25 ಸಾವಿರದ ಆರ್‌.ಡಿ.ಯನ್ನು ಐದು ವರ್ಷಗಳ ಅವಧಿಗೆ ಮಾಡಿದರೆ, ಅವಧಿ ಮುಗಿಯುತ್ತಲೇ ₹ 17,28,650 ಪಡೆಯಬಹುದು. ಅವಶ್ಯವಿದ್ದಲ್ಲಿ ನನಗೆ ಕರೆ ಮಾಡಲು ತಿಳಿಸಿ.

ಯು.ಪಿ. ಪುರಾಣಿಕ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.