ADVERTISEMENT

ಕ್ರೆಡಿಟ್ ಕಾರ್ಡ್ ಒಳ್ಳೆಯದಾ, ಕೆಟ್ಟದ್ದಾ?

ಪ್ರಮೋದ್
Published 27 ಸೆಪ್ಟೆಂಬರ್ 2020, 20:30 IST
Last Updated 27 ಸೆಪ್ಟೆಂಬರ್ 2020, 20:30 IST
   
""

ಕ್ರೆಡಿಟ್ ಕಾರ್ಡ್ ಅಂದಾಕ್ಷಣ ‘ಅಯ್ಯೋ, ಅದರ ಸಹವಾಸವೇ ಬೇಡ’ ಎನ್ನುವ ಮಂದಿ ಒಂದು ಕಡೆಯಾದರೆ, ‘ನಾನು ಕ್ರೆಡಿಟ್ ಕಾರ್ಡ್ ಬಳಸಿಯೇ ಜೀವನ ಮಾಡುತ್ತಿದ್ದೇನೆ’ ಎನ್ನುವ ಮಂದಿ ಇನ್ನೊಂದು ಕಡೆ. ಈ ಎರಡೂ ರೀತಿಯ ಆಲೋಚನೆಗಳು ಕ್ರೆಡಿಟ್ ಕಾರ್ಡ್ ವಿಚಾರದಲ್ಲಿ ಸಮಂಜಸವಲ್ಲ. ಅರಿತು ಬಳಸಿದರೆ ಕ್ರೆಡಿಟ್ ಕಾರ್ಡ್ ನಿಮ್ಮ ಪಾಲಿನ ಆಪತ್ಪಾಂಧವ. ಆದರೆ, ಹಣಕಾಸು ನಿರ್ವಹಣೆಯಲ್ಲಿ ಶಿಸ್ತು ಇಲ್ಲದಿದ್ದರೆ ಕ್ರೆಡಿಟ್ ಕಾರ್ಡ್ ನಿಮ್ಮನ್ನು ಶೂಲವಾಗಿ ಕಾಡುತ್ತದೆ.

ಕ್ರೆಡಿಟ್ ಕಾರ್ಡ್ ಪಡೆಯಲು ಅರ್ಹತೆ:ನಿರ್ದಿಷ್ಟ ಅವಧಿಗೆ, ನಿರ್ದಿಷ್ಟ ಮೊತ್ತವನ್ನು ಸಾಲದ ರೂಪದಲ್ಲಿ ಪಡೆಯಲು ಬ್ಯಾಂಕ್ ನೀಡುವ ಕಾರ್ಡ್ ಈ ಕ್ರೆಡಿಟ್ ಕಾರ್ಡ್. ಆದರೆ ಎಲ್ಲರಿಗೂ ಕ್ರೆಡಿಟ್ ಕಾರ್ಡ್ ಸಿಗುವುದಿಲ್ಲ. ಕ್ರೆಡಿಟ್ ಕಾರ್ಡ್ ಪಡೆಯಲು ಕೆಲವು ಅರ್ಹತೆಗಳನ್ನು ಪೂರೈಸಬೇಕಾಗುತ್ತದೆ. ಅರ್ಹತೆಗಳ ವಿಚಾರದಲ್ಲಿ ಒಂದು ಬ್ಯಾಂಕ್‌ನಿಂದ ಇನ್ನೊಂದು ಬ್ಯಾಂಕ್‌ಗೆ ಬದಲಾವಣೆಗಳು ಇದ್ದರೂ, ವ್ಯಾಪಕವಾಗಿ ಚಾಲ್ತಿಯಲ್ಲಿರುವ ನೀತಿ–ನಿಯಮಗಳನ್ನು ಇಲ್ಲಿ ತಿಳಿಸಲಾಗಿದೆ.

ಪ್ರಮೋದ್

1. ಕ್ರೆಡಿಟ್ ಕಾರ್ಡ್ ಅರ್ಜಿದಾರನ ವಯಸ್ಸು ಕನಿಷ್ಠ 21 ಆಗಿರಬೇಕು.

ADVERTISEMENT

2. ಕನಿಷ್ಠ ಮಾಸಿಕ ಆದಾಯ ₹ 20 ಸಾವಿರ ಇರಬೇಕು.

3. ಐಟಿ ರಿಟರ್ನ್ಸ್ (ಆದಾಯ ತೆರಿಗೆ ವಿವರ) ಸಲ್ಲಿಸಿರಬೇಕು.

4. ಕ್ರೆಡಿಟ್ ಸ್ಕೋರ್ (ಸಾಲ ಮರುಪಾವತಿ ಅಂಕ) ಉತ್ತಮವಾಗಿರಬೇಕು.

ಕ್ರೆಡಿಟ್ ಕಾರ್ಡ್ ಬಳಕೆಯ ಅನುಕೂಲಗಳು:

* ಹಣದ ತುರ್ತು ಅವಶ್ಯಕತೆ ಇದ್ದಾಗ ಕ್ರೆಡಿಟ್ ಕಾರ್ಡ್ ನಿಮಗೆ ಆಪತ್ಪಾಂಧವ.

* ಕ್ರೆಡಿಟ್ ಕಾರ್ಡ್ ಬಳಸಿದ್ದಕ್ಕೆ ಸಿಗುವ ರಿವಾರ್ಡ್ ಪಾಯಿಂಟ್ಸ್‌ನಿಂದ ಲಾಭ

* ಹಲವು ವಸ್ತುಗಳ ಖರೀದಿ ದರದಲ್ಲಿ ರಿಯಾಯ್ತಿ, ಉಚಿತ ಚಲನಚಿತ್ರ ಟಿಕೆಟ್ಸ್ ಸೇರಿದಂತೆ ಅನೇಕ ಅನುಕೂಲಗಳು.

* ವಿಮಾನ ಟಿಕೆಟ್ ದರದಲ್ಲಿ ರಿಯಾಯಿತಿ, ವಿಮಾನ ನಿಲ್ದಾಣಗಳಲ್ಲಿ ಉಚಿತವಾಗಿ ಲಾಂಜ್ ಆ್ಯಕ್ಸೆಸ್ (ಹಲವು ಸೌಲಭ್ಯಗಳಿರುವ ಹವಾನಿಯಂತ್ರಿತ ಕಾಯುವಿಕೆ ಕೊಠಡಿ)

ಜಾಣ್ಮೆಯಿಂದ ಕ್ರೆಡಿಟ್ ಕಾರ್ಡ್ ಬಳಕೆ ಹೇಗೆ?

* ಕ್ರೆಡಿಟ್ ಕಾರ್ಡ್‌ನಿಂದ ಸುಮಾರು 45 ದಿನಗಳವರೆಗೆ ಬಡ್ಡಿ ರಹಿತ ಸಾಲ ಸಿಗುತ್ತದೆ

* ಸರಿಯಾಗಿ ಕ್ರೆಡಿಟ್ ಕಾರ್ಡ್ ಬಳಸಿದರೆ ಕ್ರೆಡಿಟ್ ಸ್ಕೋರ್ ಉತ್ತಮಪಡಿಸಿಕೊಳ್ಳಲು ಸಾಧ್ಯ

* ಕ್ರೆಡಿಟ್ ಕಾರ್ಡ್‌ನ ಕ್ರೆಡಿಟ್ ಲಿಮಿಟ್ (ಸಾಲದ ಮಿತಿ) ಸಂಪೂರ್ಣವಾಗಿ ಬಳಸಬೇಡಿ

* ಕ್ರೆಡಿಟ್ ಕಾರ್ಡ್ ಬಳಸಿದ ನಂತರ ಸಮಯಕ್ಕೆ ಸರಿಯಾಗಿ ಬಾಕಿ ಪಾವತಿ ಮಾಡಿ

* ಕ್ರೆಡಿಟ್ ಕಾರ್ಡ್ ಸಾಲದ ಪಾವತಿಗೆ ಆಟೊ ಡೆಬಿಟ್ ವ್ಯವಸ್ಥೆ ಬಳಸಿಕೊಳ್ಳಿ

* ಕ್ರೆಡಿಟ್ ಕಾರ್ಡ್‌ನಲ್ಲಿ ಮಿನಿಮಂ ಅಮೌಂಟ್ ಡ್ಯೂ ಪಾವತಿಸಿ ಬಡ್ಡಿಯ ಶೂಲಕ್ಕೆ ಸಿಲುಕಬೇಡಿ

ಯಾರಿಗೆ ಕ್ರೆಡಿಟ್ ಕಾರ್ಡ್ ಸೂಕ್ತವಲ್ಲ?

ಖರ್ಚಿನಲ್ಲಿ ನಿಯಂತ್ರಣ ಇಲ್ಲದವರು ಕ್ರೆಡಿಟ್ ಕಾರ್ಡ್ ಬಳಸದಿರುವುದೇ ಸೂಕ್ತ. ಕ್ರೆಡಿಟ್ ಕಾರ್ಡ್‌ನಅತಿಯಾದ ಬಳಕೆಯಿಂದ ಸಾಲದ ಶೂಲಕ್ಕೆ ಸಿಲುಕುವ ಸಾಧ್ಯತೆ ಇರುತ್ತದೆ. ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ತಡ ಮಾಡಿದರೆ ಬ್ಯಾಂಕುಗಳು ಶುಲ್ಕ ವಿಧಿಸುತ್ತವೆ.ಇನ್ನು, ಕ್ರೆಡಿಟ್ ಕಾರ್ಡ್‌ ಬಿಲ್ಲಿನ ಮಿನಿಮಮ್ ಅಮೌಂಟ್ ಡ್ಯೂ ಮತ್ತು ಒಟ್ಟು ಸಾಲದ ಬಾಕಿ ಬಗ್ಗೆ ಗಮನಿವಿರಲಿ.ನೀವು ₹ 1 ಲಕ್ಷ ಬಿಲ್ ಬಂದಿದ್ದಾಗ ₹ 5 ಸಾವಿರ ಮಿನಿಮಮ್ ಡ್ಯೂ ಪಾವತಿಸಿದರೆ ಇನ್ನುಳಿದ ₹ 95 ಸಾವಿರದ ಮೇಲೆ ಬಡ್ಡಿ ಬೆಳೆಯುತ್ತಿರುತ್ತದೆ.

ಕ್ರೆಡಿಟ್ ಕಾರ್ಡ್‌ನಿಂದ ಬ್ಯಾಂಕ್‌ಗೆ ಲಾಭವೇನು?

ನೀವು ಕ್ರೆಡಿಟ್ ಕಾರ್ಡ್‌ ಬಳಸಿ ₹ 1 ಲಕ್ಷ ಪಾವತಿಸಿದರೆ ಅಂಗಡಿಯ ವ್ಯಾಪಾರಿಗೆ ಸಿಗುವುದು ₹ 97,500 ಅಥವಾ ₹ 98,000. ಕ್ರೆಡಿಟ್ ಕಾರ್ಡ್ ನೀಡಿರುವ ಬ್ಯಾಂಕ್ ಇನ್ನುಳಿದ ₹ 2 ಸಾವಿರವನ್ನು ಕಮಿಷನ್ ರೂಪದಲ್ಲಿ ಪಡೆಯುತ್ತದೆ.ಕ್ರೆಡಿಟ್ ಕಾರ್ಡ್ಟ್ರಾನ್ಸಾಕ್ಷನ್ (ಚಲಾವಣೆ) ಮೂಲಕ ಬ್ಯಾಂಕ್‌ಗಳು ಹಣ ಗಳಿಸುತ್ತವೆ.ಇದಲ್ಲದೆ, ವಿಳಂಬ ಪಾವತಿ ಶುಲ್ಕ ಮತ್ತು ಬಡ್ಡಿ ಮೂಲಕವೂ ಬ್ಯಾಂಕ್‌ಗಳು ಹಣ ಗಳಿಸುತ್ತವೆ.

ಜಾಗತಿಕ ಕುಸಿತಕ್ಕೆ ಮಂಕಾದ ಷೇರುಪೇಟೆ

ಜಾಗತಿಕ ಮಾರುಕಟ್ಟೆಗಳಲ್ಲಿ ಕಂಡುಬಂದ ಹಿಂಜರಿಕೆಯ ಪರಿಣಾಮವಾಗಿ ದೇಶಿ ಮಾರುಕಟ್ಟೆ ಸೂಚ್ಯಂಕಗಳು ಕೂಡ ಮುಗ್ಗರಿಸಿವೆ. 37,388 ಅಂಶಗಳಲ್ಲಿ ವಹಿವಾಟು ಮುಗಿಸಿರುವ ಸೆನ್ಸೆಕ್ಸ್, ವಾರದ ಅವಧಿಯಲ್ಲಿ ಶೇಕಡ 3.8ರಷ್ಟು ಕುಸಿತ ಕಂಡಿದೆ. 11,050 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ನಿಫ್ಚಿ ಶೇ 4ರಷ್ಟು ಕುಸಿತ ಕಂಡಿದೆ. ವಾರದ ಐದು ದಿನಗಳ ವಹಿವಾಟಿನಲ್ಲಿ ಒಂದೇ ಒಂದು ದಿನ ಮಾತ್ರ ಷೇರುಪೇಟೆ ಸೂಚ್ಯಂಕಗಳು ಸಕಾರಾತ್ಮಕವಾಗಿ ಕಂಡುಬಂದಿವೆ.

ಜಾಗತಿಕ ಮಾರುಕಟ್ಟೆಯಲ್ಲಿನ ನಕಾರಾತ್ಮಕತೆ ಜತೆಗೆ, ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ, ಯುರೋಪ್‌ನಲ್ಲಿ ಕೋವಿಡ್–19 ಕಾರಣದಿಂದ ಮತ್ತೆ ಲಾಕ್‌ಡೌನ್ ಜಾರಿ ಸೇರಿದಂತೆ ಅನೇಕ ಅಂಶಗಳು ಸೂಚ್ಯಂಕಗಳ ಕುಸಿತಕ್ಕೆ ಕಾರಣವಾಗಿವೆ. ಷೇರುಪೇಟೆಯು ಮಾರಾಟದ ಒತ್ತಡಕ್ಕೆ ಸಿಲುಕಿದ್ದು ವಿದೇಶಿ ಸಾಂಸ್ಥಿಕ ಹೂಡಿಕೆದಾರರು ನಾಲ್ಕು ದಿನಗಳ ವಹಿವಾಟಿನಲ್ಲಿ ಸುಮಾರು ₹ 7,921 ಕೋಟಿ ಮೌಲ್ಯದ ಹೂಡಿಕೆ ಹಿಂಪಡೆದಿದ್ದಾರೆ. ವಲಯವಾರು ಪ್ರಗತಿ ನೋಡಿದಾಗ ನಿಫ್ಟಿ ಮಾಧ್ಯಮ ವಲಯ ಶೇ 9ರಷ್ಟು, ಲೋಹ ಶೇ 8ರಷ್ಟು, ರಿಯಲ್ ಎಸ್ಟೇಟ್ ಶೇ 7.6ರಷ್ಟು ಮತ್ತು ಆಟೊವಲಯ ಶೇ 6ರಷ್ಟು ಕುಸಿದಿವೆ.

ಗಳಿಕೆ–ಇಳಿಕೆ: ನಿಫ್ಟಿಯಲ್ಲಿ ಎಚ್‌ಸಿಎಲ್ ಟೆಕ್ ಶೇ 2ರಷ್ಟು, ಇನ್ಫೊಸಿಸ್ ಶೇ 1ರಷ್ಟು ಗಳಿಸಿವೆ. ಇಂಡಸ್ ಇಂಡ್ ಬ್ಯಾಂಕ್ ಶೇ 16ರಷ್ಟು, ಟಾಟಾ ಮೋಟರ್ಸ್ ಶೇ 14ರಷ್ಟು, ಏರ್‌ಟೆಲ್ ಶೇ 11ರಷ್ಟು, ಟಾಟಾ ಸ್ಟೀಲ್ ಶೇ 11ರಷ್ಟು, ಹಿಂಡಾಲ್ಕೋ ಶೇ 10ರಷ್ಟು, ಬಜಾಜ್ ಫೈನಾನ್ಸ್ ಶೇ 10ರಷ್ಟು ಕುಸಿತ ಕಂಡಿವೆ.

ಮುನ್ನೋಟ: ಸದ್ಯದ ಸ್ಥಿತಿಯಲ್ಲಿ ಮಾರುಕಟ್ಟೆಯ ಅನಿಶ್ಚಿತತೆ ಹೀಗೇ ಮುಂದುವರಿಯಲಿದೆ. ಹಾಗಾಗಿ ದೀರ್ಘಾವಧಿಗೆ ಷೇರುಗಳನ್ನು ಖರೀದಿಸುವುದು ಸೂಕ್ತ. ಇನ್ನೇನು ಸರಿಸುಮಾರು ಒಂದು ತಿಂಗಳಲ್ಲಿ ಅಮೆರಿಕದಲ್ಲಿ ಚುನಾವಣೆ ನಡೆಯಲಿದೆ. ಅಮೆರಿಕ ಚುನಾವಣೆ ವಿಚಾರವಾಗಿ ಆಗುವ ರಾಜಕೀಯ ಬೆಳವಣಿಗೆಗಳು ಜಾಗತಿಕ ಮಾರುಕಟ್ಟೆಗಳ ಮೇಲೆ ಪರಿಣಾಮ ಬೀರಲಿವೆ. ಪರಿಣಾಮವಾಗಿ ಷೇರು ಮಾರುಕಟ್ಟೆಯಲ್ಲಿ ಅನಿಶ್ಚಿತತೆ ಹೆಚ್ಚಾಗಲಿದೆ. ಕೋವಿಡ್–19 ನಿಯಂತ್ರಣಕ್ಕೆ ವಿಶ್ವದ ವಿವಿಧ ರಾಷ್ಟ್ರಗಳು ಮತ್ತೆ ಲಾಕ್‌ಡೌನ್ ತಂತ್ರದ ಮೊರೆ ಹೋದರೆ, ಅದು ಕೂಡ ಮಾರುಕಟ್ಟೆ ಮುಗ್ಗರಿಸಲು ಕಾರಣವಾಗಲಿದೆ. ಅನಿಶ್ಚಿತ ಪರಿಸ್ಥಿತಿಯಲ್ಲಿ ಹೂಡಿಕೆದಾರರು ಮಾಹಿತಿ ತಂತ್ರಜ್ಞಾನ ಮತ್ತು ಫಾರ್ಮಾ ವಲಯದ ಷೇರುಗಳನ್ನು ಖರೀದಿಸುವುದು ಸೂಕ್ತ ಎಂಬ ಅಭಿಪ್ರಾಯದಲ್ಲಿದ್ದಾರೆ.

(ಲೇಖಕ ಸುವಿಷನ್ ಹೋಲ್ಡಿಂಗ್ಸ್ ಪ್ರೈ. ಲಿ.ನ ಸಂಶೋಧನಾ ವಿಭಾಗದ ಮುಖ್ಯಸ್ಥ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.