ADVERTISEMENT

₹50 ಸಾವಿರ ಕೋಟಿ ಅಗ್ಗದ ಸಾಲ: ಮ್ಯೂಚುವಲ್‌ ಫಂಡ್‌ಗೆ ಆರ್‌ಬಿಐನಿಂದ ವಿಶೇಷ ಸೌಲಭ್ಯ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2020, 7:04 IST
Last Updated 27 ಏಪ್ರಿಲ್ 2020, 7:04 IST
   

ನವದೆಹಲಿ: ಹೂಡಿಕೆ ನಗದೀಕರಿಸುವಂತೆಮ್ಯೂಚುವಲ್‌ ಫಂಡ್‌ಗಳಿಗೆ‌ ಹೂಡಿಕೆದಾರರಿಂದ ಹೆಚ್ಚಿದ ಒತ್ತಡ, ಇದರಿಂದಾಗಿಹಣದ ದ್ರವ್ಯತೆ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ ಮ್ಯೂಚುವಲ್‌ ಸಂಸ್ಥೆಗಳಿಗೆಸಹಾಯ ಹಸ್ತ ಚಾಚಲು ಆರ್‌ಬಿಐ ಮುಂದಾಗಿದೆ.

ಕಳೆದ ವಾರ ಅಮೆರಿಕ ಮೂಲದ ಫ್ರ್ಯಾಂಕ್ಲಿನ್‌ ಟೆಂಪಲ್‌ಟನ್‌ಕಂಪನಿಯು ತನ್ನ ಆರು ಮ್ಯೂಚುವಲ್‌ ಫಂಡ್‌ಗಳನ್ನು ರದ್ದು ಗೊಳಿಸಿದ್ದರಪರಿಣಾಮ ತಲ್ಲಣ ಸೃಷ್ಟಿಯಾಗಿತ್ತು. ಇದಲ್ಲದೇ, ಕೋವಿಡ್‌-19 ಹಿನ್ನೆಲೆಯಲ್ಲಿ ಆರಂಭವಾದ ಲಾಕ್‌ಡೌನ್‌ನಿಂದ ಮ್ಯೂಚುವಲ್‌ ಫಂಡ್‌ ವಲಯದಲ್ಲಿ ಹೂಡಿಕೆ ಹಿಂಪಡೆಯುವಒತ್ತಡ ಹೆಚ್ಚಾಗಿತ್ತು.

ಈ ಕಾರಣಗಳಿಂದ ಆತಂಕದಲ್ಲಿದ್ದ ಹೂಡಿಕೆದಾರರ ವಿಶ್ವಾಸ ಹೆಚ್ಚಿಸಲು ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಕ್ರಮಕೈಗೊಂಡಿದೆ. ಸೋಮವಾರ ಮ್ಯೂಚುವಲ್‌ ಫಂಡ್‌ಗಾಗಿ ₹50,000 ಕೋಟಿ ವಿಶೇಷ ಹಣದ ದ್ರವ್ಯತೆಯ ಸೌಲಭ್ಯ ಘೋಷಿಸಿದೆ.

ADVERTISEMENT

ಆರ್‌ಬಿಐ ಘೋಷಣೆ ಪ್ರಕಾರ, 90 ದಿನಗಳ ರೆಪೊ ಕಾರ್ಯಾಚರಣೆಯನ್ನು ನಿಗದಿತ ರೆಪೊ ದರದಲ್ಲಿ (ಹಣಕಾಸು ಸಂಸ್ಥೆಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿ ದರ) ನಡೆಸಲಾಗುತ್ತದೆ. ಈ ಯೋಜನೆಯು ಮೇ 11 ರವರೆಗೆ ಅಥವಾ ನಿಗದಿತ ಮೊತ್ತ ಸಂಪೂರ್ಣ ಬಳಕೆಯಾಗುವವರೆಗೂ ಲಭ್ಯವಿರುತ್ತದೆ ಎಂದು ಆರ್‌ಬಿಐ ಹೇಳಿದೆ.

ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ತೀವ್ರ ಬಿಕ್ಕಟ್ಟನ್ನು ಎದುರಿಸುತ್ತಿರುವ ಆರ್ಥಿಕತೆಗೆ ಚೇತರಿಕೆ ನೀಡುವುದುಇದರ ಹಿಂದಿನ ಉದ್ದೇಶವಾಗಿದೆ. ಹೂಡಿಕೆದಾರರ ಆತಂಕ ಕಡಿಮೆ ಮಾಡಲು ಶೀಘ್ರ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮ್ಯೂಚುವಲ್‌ ಫಂಡ್ ಸಂಸ್ಥೆಗಳಿಗೆ‌ಅಗತ್ಯ ಹಣದ ದ್ರವ್ಯತೆಗಾಗಿ₹50,000 ಸಾವಿರ ಕೋಟಿಯಷ್ಟು ಹಣವನ್ನು ಅಗ್ಗದ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತಿದೆ ಎಂದು ಆರ್‌ಬಿಐ ತಿಳಿಸಿದೆ.

ಆರ್‌ಬಿಐ ತೆಗೆದುಕೊಂಡಿರುವ ಈ ನಿರ್ಧಾರವನ್ನು ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಸೇರಿದಂತೆ ಹಲವು ಆರ್ಥಿಕ ತಜ್ಞರು ಶ್ಲಾಘಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.