ADVERTISEMENT

10 ಕೋಟಿಗೆ ಹೂಡಿಕೆದಾರರನ್ನು ಹೆಚ್ಚಿಸುವುದು ‘ಪೇಟಿಎಂ ಮನಿ’ ಗುರಿ

ವಿಜಯ್ ಜೋಷಿ
Published 5 ಮಾರ್ಚ್ 2021, 12:13 IST
Last Updated 5 ಮಾರ್ಚ್ 2021, 12:13 IST
ವರುಣ್ ಶ್ರೀಧರ್ (ಚಿತ್ರ: ಪೇಟಿಎಂ ಬ್ಲಾಗ್)
ವರುಣ್ ಶ್ರೀಧರ್ (ಚಿತ್ರ: ಪೇಟಿಎಂ ಬ್ಲಾಗ್)   

ಬೆಂಗಳೂರು: ದೇಶದಲ್ಲಿ ಸಕ್ರಿಯ ಹೂಡಿಕೆದಾರರ ಸಂಖ್ಯೆ ಈಗ ಸರಿಸುಮಾರು 2.5 ಕೋಟಿ ಇದ್ದು, ಈ ಸಂಖ್ಯೆಯನ್ನು 10 ಕೋಟಿಗೆ ಹೆಚ್ಚಿಸಲು ನೆರವಾಗುವ ಉದ್ದೇಶ ‘ಪೇಟಿಎಂ ಮನಿ’ ಕಂಪನಿಗೆ ಇದೆ. ‘ಪೇಟಿಎಂ ಮನಿ’ ಕಂಪನಿಯ ಮಾಲೀಕತ್ವವನ್ನು ಹೊಂದಿರುವ ‘ಪೇಟಿಎಂ’ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ವಿಜಯ್ ಶೇಖರ್ ಶರ್ಮ ಅವರು ಈ ವಿಷಯ ತಿಳಿಸಿದ್ದಾರೆ.

‘ಜನ ತಮ್ಮ ಸ್ಮಾರ್ಟ್‌ಫೋನ್‌ ಬಳಸಿ ಹಣ ಪಾವತಿ ಮಾಡುವ ವ್ಯವಸ್ಥೆಗೆ ಈಗಾಗಲೇ ಒಗ್ಗಿಕೊಂಡಿದ್ದಾರೆ. ಪಾವತಿ ವ್ಯವಸ್ಥೆಯಲ್ಲಿ ಆದಂತಹ ಕ್ರಾಂತಿಯು ಇನ್ನು ಮುಂದೆ ಹಣಕಾಸು ಉತ್ಪನ್ನಗಳನ್ನು ಖರೀದಿಸುವಲ್ಲಿ, ಅವುಗಳನ್ನು ಬಳಸುವಲ್ಲಿ ಆಗಲಿದೆ. ನಾವು ಸಣ್ಣ ನಗರ, ಪಟ್ಟಣಗಳ ಜನರನ್ನೂ ಗಮನದಲ್ಲಿ ಇರಿಸಿಕೊಂಡು ಕಡಿಮೆ ವೆಚ್ಚದ ಹಣಕಾಸು ಉತ್ಪನ್ನಗಳನ್ನು ನೀಡಲು ಆರಂಭಿಸಿದ್ದೇವೆ’ ಎಂದು ಶರ್ಮ ಅವರು ತಿಳಿಸಿದರು.

ಹಣಕಾಸು ಸೇವೆಗಳ ವ್ಯಾಪ್ತಿಗೆ ಹೆಚ್ಚಿನವರನ್ನು ತರಬೇಕು ಎಂಬ ಉದ್ದೇಶದಿಂದ ‘ಪೇಟಿಎಂ ಮನಿ’ ಬಳಕೆಯನ್ನು ಸಾಧ್ಯವಾದಷ್ಟು ಮಟ್ಟಿಗೆ ಸರಳವಾಗಿ ಇರಿಸಲಾಗಿದೆ ಎಂದು ಅವರು ಪೇಟಿಎಂ ಮನಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಹೇಳಿದರು. ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆ, ವ್ಯವಸ್ಥಿತ ಹೂಡಿಕೆ ಯೋಜನೆ (ಎಸ್‌ಐಪಿ), ಷೇರುಗಳಲ್ಲಿ ಹೂಡಿಕೆ, ರಾಷ್ಟ್ರೀಯ ಪಿಂಚಣಿ ಯೋಜನೆಯ (ಎನ್‌ಪಿಎಸ್‌) ಬಳಕೆ, ಡಿಜಿಟಲ್ ಚಿನ್ನದಂತಹ ಹಣಕಾಸು ಸೇವೆಗಳನ್ನು ಪೇಟಿಎಂ ಮನಿ ಈಗಾಗಲೇ ಒದಗಿಸುತ್ತಿದೆ.

ADVERTISEMENT

ತನ್ನ ವೇದಿಕೆಯ ಮೂಲಕ ಲಭ್ಯವಿರುವ ಹಣಕಾಸು ಸೇವೆಗಳನ್ನು ಇನ್ನಷ್ಟು ಹೆಚ್ಚು ಜನ ಬಳಸುವಂತೆ ಆಗಬೇಕು ಎಂಬ ಉದ್ದೇಶದಿಂದ ಕನ್ನಡ ಸೇರಿದಂತೆ ಹಲವು ಪ್ರಾದೇಶಿಕ ಭಾಷೆಗಳಲ್ಲಿ ಹೂಡಿಕೆದಾರರಿಗೆ ಮಾರ್ಗದರ್ಶನ ನೀಡುವ ಕಾರ್ಯಕ್ರಮವನ್ನು ರೂಪಿಸುವುದಾಗಿಯೂ ಪೇಟಿಎಂ ಮನಿ ಈಗಾಗಲೇ ಹೇಳಿದೆ. ಈ ಕಾರ್ಯಕ್ರಮಗಳು ಹೂಡಿಕೆದಾರರ ಎದುರು ಇನ್ನಷ್ಟೇ ಬರಬೇಕಿವೆ.

‘70 ಲಕ್ಷಕ್ಕಿಂತ ಹೆಚ್ಚಿನ ಬಳಕೆದಾರರನ್ನು ಪೇಟಿಎಂ ಮನಿ ಈಗಾಗಲೇ ಹೊಂದಿದೆ. ದೇಶದ ಶೇಕಡ 98ರಷ್ಟು ಪಿನ್‌ ಕೋಡ್‌ಗಳಿಂದ ಬಳಕೆದಾರರು ನಮ್ಮ ವೇದಿಕೆಯಲ್ಲಿ ನೋಂದಣಿ ಮಾಡಿಸಿಕೊಂಡಿದ್ದಾರೆ. ನಮ್ಮ ಮೂಲಕ ಮ್ಯೂಚುವಲ್‌ ಫಂಡ್‌ಗಳಲ್ಲಿ ಹಾಗೂ ಷೇರುಗಳಲ್ಲಿ ಹೂಡಿಕೆ ಮಾಡಿರುವ ಸರಿಸುಮಾರು ಶೇಕಡ 50ರಷ್ಟು ಜನ ಮಾರುಕಟ್ಟೆ ಹೂಡಿಕೆಗಳ ಜಗತ್ತಿಗೆ ಹೊಸಬರು. ಅಷ್ಟೇ ಅಲ್ಲ, ನಮ್ಮ ಬಳಕೆದಾರರಲ್ಲಿ ಶೇಕಡ 60ರಷ್ಟಕ್ಕಿಂತ ಹೆಚ್ಚಿನವರು ಎರಡನೆಯ ಹಾಗೂ ಮೂರನೆಯ ಹಂತದ ನಗರಗಳಿಗೆ ಸೇರಿದವರು’ ಎಂದು ಪೇಟಿಎಂ ಮನಿ ಕಂಪನಿಯ ಸಿಇಒ ವರುಣ್ ಶ್ರೀಧರ್ ಹೇಳಿದರು.

ಪೇಟಿಎಂ ಮನಿ ಆ್ಯಪ್ ಮೂಲಕ ‘ಫ್ಯೂಚರ್ ಆ್ಯಂಡ್ ಆಪ್ಷನ್ಸ್‌’ ವಹಿವಾಟು ನಡೆಸುವ ಅವಕಾಶಕ್ಕೆ ಶರ್ಮ ಅವರು ಚಾಲನೆ ನೀಡಿದರು. ಇಲ್ಲಿ ಪ್ರತಿ ವಹಿವಾಟಿಗೆ ₹ 10 ಶುಲ್ಕ ವಿಧಿಸಲಾಗುತ್ತಿದೆ. ‘ಕಡಿಮೆ ಮೊತ್ತದ ಈ ಶುಲ್ಕವು ಈ ಬಗೆಯ ವಹಿವಾಟುಗಳಲ್ಲಿ ಮಹತ್ವದ ಬದಲಾವಣೆಯನ್ನು ತರಲಿದೆ’ ಎಂದು ಶರ್ಮ ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.