ADVERTISEMENT

ಸಂಪತ್ತಿನ ಸಂರಕ್ಷಣೆ ಹೇಗೆ?

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2020, 19:45 IST
Last Updated 28 ಏಪ್ರಿಲ್ 2020, 19:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಅಜ್ಞಾನಕ್ಕಿಂತ ಅಲ್ಪಜ್ಞಾನ ಹೆಚ್ಚು ಅಪಾಯಕಾರಿ ಎಂಬ ಮಾತೊಂದಿದೆ. ‘ಕೋವಿಡ್‌– 19’ ಪಿಡುಗು ಮತ್ತು ಷೇರು ಮಾರುಕಟ್ಟೆಯ ಕುಸಿತದ ಎರಡು ಆಘಾತಗಳಿಂದ ತಪ್ಪಿಸಿಕೊಳ್ಳಲು ನಾವು ಉತ್ತಮ ಸಲಹೆಗಾಗಿ ಹುಡುಕಾಟದಲ್ಲಿರುವಾಗ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳೇ ಎಲ್ಲೆಡೆ ಕಾಣುತ್ತಿವೆ. ಸಲಹೆಯು ಉತ್ತಮವಾಗಿದ್ದರೂ ಇದು ಅರ್ಧ ಸತ್ಯ ಎಂದು ಅನುಮಾನಿಸುವಂತಾಗಿದೆ. ಇದು ಸಂಪೂರ್ಣ ತಪ್ಪಾಗಿರಬಹುದು ಎಂಬ ಭಾವನೆಯೂ ಉಂಟಾಗುತ್ತಿದೆ.

ಮಾರುಕಟ್ಟೆಯ ಸದ್ಯದ ಪರಿಸ್ಥಿತಿ ಗಮನಿಸಿದಾಗ, ಮಾರುಕಟ್ಟೆ ಅಲ್ಲೋಲ ಕಲ್ಲೋಲವಾಗಲು ಹೂಡಿಕೆದಾರರ ಚಂಚಲ ಮನಸ್ಥಿತಿಯೂ ಕಾರಣವಾಗಿದೆ ಎಂದು ಹೇಳಬಹುದು. ಮಾರುಕಟ್ಟೆಯ ಏರಿಳಿತಗಳನ್ನು ನಾವು ಅವಕಾಶವೆಂದೇ ಪರಿಗಣಿಸಿದ್ದರೆ ಈಗ ಆಗಿರುವ ಹೆಚ್ಚು ಹಾನಿಯನ್ನು ತಪ್ಪಿಸಬಹುದಿತ್ತು. ಆದರೂ, ಮ್ಯೂಚುವಲ್‌ ಫಂಡ್‌ಗಳಲ್ಲಿ ಷೇರು ಮತ್ತು ಷೇರು ಸಂಬಂಧಿತ ಯೋಜನೆಗಳಲ್ಲಿ ₹ 11,700 ಕೋಟಿ ಹೂಡಿಕೆ ಹರಿದು ಬಂದಿದೆ.ಮಲ್ಟಿ ಕ್ಯಾಪ್‌, ಲಾರ್ಜ್‌ ಕ್ಯಾಪ್‌‌ ಮತ್ತು ಮೀಡಿಯಂ ಕ್ಯಾಪ್‌ ನಿಧಿಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಹೂಡಿಕೆಯಾಗಿದೆ. ‘ಎಸ್‌ಐಪಿ’ ಹೂಡಿಕೆ ಮಾರ್ಚ್‌ 31, 2020ಕ್ಕೆ ₹ 8,641ಕ್ಕೆ ತಲುಪಿದೆ.

ಚಿಲ್ಲರೆ ಹೂಡಿಕೆದಾರರು ಜಾಣರಾಗಿರುವುದನ್ನು ಈ ಬೆಳವಣಿಗೆ ಸೂಚಿಸುತ್ತದೆ. ಮಾರುಕಟ್ಟೆಯ ಏರಿಳಿತದ ಕಾರಣಗಳು ಮತ್ತು ಈ ಸಮಯದಲ್ಲಿ ಏನು ಮಾಡಬೇಕು ಮತ್ತು ಮಾಡಬಾರದು ಎಂಬುದರ ಬಗ್ಗೆ ಅವರು ಹೆಚ್ಚು ಜಾಗೃತರಾಗಿದ್ದಾರೆ. ಈ ಸಂಕಷ್ಟ ಸಮಯದಲ್ಲಿ ಅವರ ಆತಂಕಗಳು ಇನ್ನೂ ಹೆಚ್ಚುತ್ತಿವೆ. ಸುತ್ತಲಿನ ಭಯಭೀತ ವಾತಾವರಣ ಅವರನ್ನು ಹೆಚ್ಚು ಚಿಂತೆಗೆ ದೂಡಿದೆ. ಹೀಗಾಗಿ ಯೋಜಿತ ರೀತಿಯಲ್ಲಿ ಹೂಡಿಕೆಗಳು ಆಗುತ್ತಿಲ್ಲ.

ADVERTISEMENT

ಹೂಡಿಕೆ ಹೆಚ್ಚಿಸಿರಿ: ಮಾರುಕಟ್ಟೆ ಚಲನಶೀಲವಾದುದು. ಏರಿಳಿತ ಸಾಮಾನ್ಯ. ಸಂಪತ್ತು ಕರಗುವ ಗಳಿಗೆಯಲ್ಲಿವ್ಯವಸ್ಥಿತ ಹೂಡಿಕೆ ಯೋಜನೆಯಿಂದ (ಎಸ್‌ಐಪಿ) ಹಿಂದೇಟು ಹಾಕಬಾರದು. ‘ಎಸ್‌ಐಪಿ’ಯು ನಮ್ಮ ಹೂಡಿಕೆಯು ಬೆಳಕಿಂಡಿ ಆಗಿದೆ.

ಹೂಡಿಕೆದಾರರ ‘ಎಸ್‌ಐಪಿ’ ಸದ್ಯದಲ್ಲೇ ಮುಕ್ತಾಯಗೊಳ್ಳುತ್ತಿದ್ದರೆ ಅದನ್ನು ಮುಂದುವರೆಸಬೇಕು. ಈಗ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಇಳಿಯುತ್ತಿದ್ದರೂ ಹೂಡಿಕೆ ಮುಂದುವರಿಸಬೇಕು. ಈಗಾಗಲೇ ಇರುವ ಹೂಡಿಕೆ ಯೋಜನೆಗಳಿಗೆ ಹೊಸದನ್ನೂ ಸೇರಿಸಬೇಕು. ಕೈಯಲ್ಲೊಂದಿಷ್ಟು ನಗದು ಇದ್ದರೆ ಅದನ್ನೂ ಹೂಡಿಕೆಯಲ್ಲಿ ತೊಡಗಿಸಬೇಕು.

ಹೊಸ ಹೂಡಿಕೆದಾರರು ಮಾರುಕಟ್ಟೆಯಲ್ಲಿ ಹಣ ತೊಡಗಿಸಲು ಸರಿಯಾದ ಸಮಯಕ್ಕಾಗಿ ಕಾಯುತ್ತಾ ಕೂರಬಾರದು. ಹೂಡಿಕೆ ಆರಂಭಿಸಲು ಸರಿಯಾದ ಸಮಯ ಇದಾಗಿದೆ ಎಂದೇ ಮುಂದುವರೆಯಬೇಕು. ಹೂಡಿಕೆದಾರರ ಪಾಲಿಗೆ ಮ್ಯೂಚುವಲ್‌ ಫಂಡ್‌ ಉದ್ದೇಶಿತ ಗುರಿಯನ್ನು ಈಡೇರಿಸಲು ನೆರವಾಗುತ್ತದೆ. ಷೇರು ಬೆಲೆ ಕಡಿಮೆಯಾಗುವ ದಿನಮಾನಗಳು ಈಗಿನವು. ಇಂತಹ ಸಂದರ್ಭದಲ್ಲಿ ಸೂಕ್ತವಾದ ಹೂಡಿಕೆಯನ್ನು ಕಂಡು ಹಿಡಿಯುವುದು ಕಷ್ಟಸಾಧ್ಯ. ಹೂಡಿಕೆ ಮಾಡಬೇಕೊ, ಯಾವುದಕ್ಕೆ ಮಾಡಬೇಕು ಎಂಬುದರ ಬಗ್ಗೆ ಗೊಂದಲಕ್ಕೆ ಬೀಳುವುದೂ ಸಹಜ. ಇಂತಹ ಸಮಯದಲ್ಲಿ ಸೂಕ್ತ ಹೂಡಿಕೆಯ ನಿರ್ಧಾರ ತೆಗೆದುಕೊಳ್ಳಲು ಮ್ಯೂಚುವಲ್‌ ಫಂಡ್‌ಗಳಲ್ಲಿರುವ ತಜ್ಞರ ಸಲಹೆಯನ್ನು ಪರಿಗಣಿಸಬೇಕು. ಅವರೂ ನಿಮಗೆ ಒಳಿತಾಗುವ ರೀತಿಯಲ್ಲಿಯೇ ಸಹಕರಿಸುತ್ತಾರೆ.

ಇದೀಗ ಮಾರುಕಟ್ಟೆಯಲ್ಲಿರುವ ಏರಿಳಿತವು ಸಣ್ಣ ಬಿಕ್ಕಟ್ಟಿನಂತೆ ಕಾಣಿಸುತ್ತಿದೆ. ನಾವು‍ಪಲಾಯನ ಮಾಡುವ ಬದಲು ಹೂಡಿಕೆ ಮಾಡಿ ಮಾರುಕಟ್ಟೆಯಲ್ಲಿ ಗೂಳಿ ಮೇಲೆ ಸವಾರಿ ಮಾಡಬೇಕು. ಮುಂಬರುವ ದಿನಗಳಲ್ಲಿ ನಮ್ಮ ಹೂಡಿಕೆಗೆ ಒಳ್ಳೆಯ ಫಲಿತಾಂಶ ಸಿಕ್ಕೇ ಸಿಗುತ್ತದೆ. ನಮ್ಮ ಈಗಿನ ತಾಳ್ಮೆ ಮತ್ತು ಪರಿಸ್ಥಿತಿಗೆ ಹೊಂದಿಕೊಳ್ಳುವ ಗುಣಗಳು ಮುಂಬರುವ ದಿನದಲ್ಲಿ ಲಾಭಕರವಾಗಿರಲಿವೆ. ಹೀಗಾಗಿ, ನಾವು ‘ಯೂ ಟರ್ನ್‌’ ತೆಗೆದುಕೊಳ್ಳದೇ ಹೂಡಿಕೆಯನ್ನು ಮುಂದುವರಿಸಬೇಕು. ಈ ಸಮಯದಲ್ಲಿ ನಾವೂ ಹೂಡಿಕೆದಾರರಾಗಿಯೇ ಉಳಿಯಬೇಕೆ ಹೊರತು ಪಲಾಯನವಾದಿಗಳಾಗಿ ಅಲ್ಲ.

ಭಯ ಬೇಡ: ತಜ್ಞರ ಅಭಯ

ಹೈದರಾಬಾದ್‌ನ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ನಡೆಸಿದ ಮ್ಯೂಚುವಲ್‌ ಫಂಡ್‌ ಕುರಿತ ಅಧ್ಯಯನವು, ತಮ್ಮ ಹೂಡಿಕೆಯ ನಿವ್ವಳ ಆಸ್ತಿ ಮೌಲ್ಯ (ಎನ್‌ಎವಿ) ತೀವ್ರವಾಗಿ ಕುಸಿಯುವವರೆಗೆ ಭಯಪಡುವ ಅಗತ್ಯವಿಲ್ಲ ಎಂದು ಹೂಡಿಕೆದಾರರಿಗೆ ಭರವಸೆ ನೀಡಿದೆ. ಕೋವಿಡ್‌–19‍ಪಿಡುಗಿನ ಅವಧಿಯಲ್ಲಿ ಮ್ಯೂಚುವಲ್‌ ಫಂಡ್ ಉದ್ಯಮದ ಕಾರ್ಯಕ್ಷಮತೆಯನ್ನು ಪ್ರೊ. ಬದ್ರಿ ನಾರಾಯಣ್‌ ಆರ್‌ ಅವರು ವಿಶ್ಲೇಷಿಸಿದ್ದಾರೆ.

ಲೆಕ್ಕಾಚಾರಗಳೇನೇ ಇದ್ದರೂ, 2020–21ರ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿಮ್ಯೂಚುವಲ್‌ ಫಂಡ್‌ ಹೂಡಿಕೆದಾರರ ಹೂಡಿಕೆಯ ನಿವ್ವಳ ಆಸ್ತಿ ಮೌಲ್ಯ (ಎನ್‌ಎವಿ) ಕರಗುವುದಿಲ್ಲ. ಆದ್ದರಿಂದ ಭಯಪಡುವ ಅಗತ್ಯವಿಲ್ಲ ಎಂದು ಅಧ್ಯಯನ ಹೇಳಿದೆ.

(ಲೇಖಕ: ಎಸ್‌ಬಿಐ ಮ್ಯೂಚುವಲ್‌ ಫಂಡ್‌ನ ಸಿಎಂಒ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.