ADVERTISEMENT

ಪ್ರಶ್ನೋತ್ತರ: ಸ್ಥಿರ ಆಸ್ತಿ ಮೇಲಿನ ಹೂಡಿಕೆಗಿಂತ ಮಿಗಿಲಾದ ಹೂಡಿಕೆ ಬೇರೊಂದಿಲ್ಲ

ಯು.ಪಿ.ಪುರಾಣಿಕ್
Published 5 ಮಾರ್ಚ್ 2021, 12:15 IST
Last Updated 5 ಮಾರ್ಚ್ 2021, 12:15 IST
ಪುರಾಣಿಕ್
ಪುರಾಣಿಕ್   

ರಾಜೇಂದ್ರ, ಬೆಂಗಳೂರು

ಪ್ರಶ್ನೆ: ನನ್ನ ವಯಸ್ಸು 28 ವರ್ಷ. ತಿಂಗಳ ಸಂಬಳ ₹ 85,000. ನಾನು ಬಾಡಿಗೆ ₹ 30 ಸಾವಿರ ಬರುವ ಒಂದು ಸ್ಥಿರ ಆಸ್ತಿ ಕೊಳ್ಳಬೇಕೆಂದಿದ್ದೇನೆ. ನನ್ನೊಡನೆ ₹ 50 ಲಕ್ಷ ನಗದು ಹಣವಿದೆ. ನನಗೆ ಬ್ಯಾಂಕ್‌ನಿಂದ ₹ 25 ಲಕ್ಷ ಸಾಲ ಬೇಕಾದೀತು. ಸಾಲ ತೀರಿಸಲು 10–15 ವರ್ಷ ಅವಧಿ ಬೇಕು. ನನಗೆ ಸರಿಯಾದ ಮಾರ್ಗದರ್ಶನ ಮಾಡಿರಿ.

ಉತ್ತರ: ನೀವು ತಿಂಗಳಿಗೆ ₹ 30 ಸಾವಿರ ಬಾಡಿಗೆ ಬರುವ ಸ್ಥಿರ ಆಸ್ತಿ ಕೊಂಡುಕೊಳ್ಳುವ ವಿಚಾರ ನನಗೆ ಖುಷಿ ಕೊಟ್ಟಿದೆ. ನಿಮ್ಮೊಡನೆ ₹ 50 ಲಕ್ಷ ಇದ್ದಲ್ಲಿ ಬ್ಯಾಂಕ್‌ನಿಂದ ₹ 25 ಲಕ್ಷ ಸಾಲ ಬೇಕಾದೀತು. ನೀವು ತಿಂಗಳಿಗೆ ₹ 85 ಸಾವಿರ ಸಂಬಳ ಪ‍ಡೆಯುವುದರಿಂದ ಹಾಗೂ ಕೊಂಡುಕೊಳ್ಳುವ ಆಸ್ತಿ ಅಡಮಾನ ಮಾಡಲು ಸಾಧ್ಯತೆ ಇರುವುದರಿಂದ ನಿಮಗೆ ₹ 25 ಲಕ್ಷ ಸಾಲ ಬ್ಯಾಂಕ್‌ನಲ್ಲಿ ದೊರೆಯುತ್ತದೆ. ನೀವು ಯಾವ ಬ್ಯಾಂಕ್‌ ಮುಖಾಂತರ ಸಂಬಳ ಪಡೆಯುವಿರೋ ಅದೇ ಬ್ಯಾಂಕ್‌ನಲ್ಲಿ ವಿಚಾರಿಸಿರಿ. ಅವಧಿ 10 ವರ್ಷ ಹಾಗೂ ಮಾಸಿಕ ಸಮಾನ ಕಂತುಗಳಿಂದ ಸಾಲ ತೀರಿಸಬಹುದು. ಇದೊಂದು ಉತ್ತಮ ಹೂಡಿಕೆ. ಜೊತೆಗೆ ಉತ್ತಮ ಬಾಡಿಗೆ ಕೂಡ ಬರುವುದರಿಂದ ಮುಂದೆ ಅನುಕೂಲವಾಗುತ್ತದೆ. ಹಣದುಬ್ಬರದ ಪರಿಣಾಮ ನಿಭಾಯಿಸಲು ಸ್ಥಿರ ಆಸ್ತಿ ಮೇಲಿನ ಹೂಡಿಕೆಗಿಂತ ಮಿಗಿಲಾದ ಹೂಡಿಕೆ ಬೇರೊಂದಿಲ್ಲ. ನಿಮ್ಮ ಸಾಹಸಕ್ಕೆ ನನ್ನ ಮೆಚ್ಚುಗೆ. ಆದಷ್ಟೂ ಬೇಗ ಈ ವ್ಯವಹಾರ ಮಾಡಿಕೊಳ್ಳಿ.

ADVERTISEMENT

***

ರವಿಕುಮಾರ್‌, ಮೈಸೂರು

*ಪ್ರಶ್ನೆ: ನನ್ನ ಮಗನಿಗೆ 7 ವರ್ಷ ವಯಸ್ಸು. ಪಿಪಿಎಫ್‌–ಆರ್‌ಡಿ ವಿಚಾರದಲ್ಲಿ ಸಂಪೂರ್ಣ ಮಾಹಿತಿ ನೀಡಿ. ನನ್ನ ಮಗನಿಗೆ ಮುಂದಿನ ಅನುಕೂಲಕ್ಕೆ ತಿಂಗಳಿಗೆ ₹ 4 ಸಾವಿರ ತುಂಬಲು ತಿಳಿಸಿ ಹೇಳಿರಿ.

ಉತ್ತರ: ಪಿಪಿಎಫ್‌ 15 ವರ್ಷಗಳ ಯೋಜನೆ. ಈ ಖಾತೆ ಮುಂದುವರಿಸಲು ವಾರ್ಷಿಕ ಕನಿಷ್ಠ ₹ 500–ಗರಿಷ್ಠ ₹ 1.50 ಲಕ್ಷ ಹಣ ತುಂಬಬಹುದು. ಆದಾಯ ತೆರಿಗೆಗೆ ಒಳಗಾಗುವವರು, ಸೆಕ್ಷನ್ 80ಸಿ ಆಧಾರದ ಮೇಲೆ ಇಲ್ಲಿ ಹೂಡಿದ ಗರಿಷ್ಠ ₹ 1.50 ಲಕ್ಷ ಮಿತಿಯಲ್ಲಿ ಒಟ್ಟು ಆದಾಯದಿಂದ (Gross Income) ಕಳೆದು ತೆರಿಗೆ ಕೊಡಬಹುದು. ಜೊತೆಗೆ ಸೆಕ್ಷನ್‌ 10(II) ಆಧಾರದ ಮೇಲೆ ಇಲ್ಲಿ ಬರುವ ಬಡ್ಡಿ ಆದಾಯ ತೆರಿಗೆಯಿಂದ ಸಂಪೂರ್ಣ ವಿನಾಯಿತಿ ಹೊಂದಿದೆ. ಖಾತೆ ಪ್ರಾರಂಭಿಸಿದ 7 ವರ್ಷಗಳ ನಂತರ ಭಾಗಶಃ ಹಣ ವಾಪಾಸು ಪಡೆಯಬಹುದು. ಇಂದಿನ ಬಡ್ಡಿದರ ಶೇ 7.1ರಷ್ಟಿದೆ. ಆರ್‌.ಡಿ ಖಾತೆ 1ರಿಂದ 10 ವರ್ಷಗಳ ಯೋಜನೆ. ಪ್ರತಿ ತಿಂಗಳೂ ಒಂದೇ ಮೊತ್ತ ಕಟ್ಟುತ್ತಾ ಬರಬೇಕು. ಇದೊಂದು ಅವಧಿ ಠೇವಣಿಯಾದರೂ ಅವಧಿಗೆ ಮುನ್ನ ಠೇವಣಿದಾರ ಯಾವಾಗ ಬೇಕಾದರೂ ಕಟ್ಟಿದ ಹಣವನ್ನು ಯಾವ ಕಡಿತವಿಲ್ಲದೆ ವಾಪಾಸು ಪಡೆಯಬಹುದು. ಒಮ್ಮೆ ಪ್ರಾರಂಭದಲ್ಲಿ ನಿರ್ಧರಿಸಿದ ಬಡ್ಡಿದರ ಅವಧಿ ಮುಗಿಯುವ ತನಕ ಬದಲಾಯಿಸುವಂತಿಲ್ಲ.

***

ಶರತ್‌ಚಂದ್ರ, ಊರುಬೇಡ.

*ಪ್ರಶ್ನೆ: ನಾನು ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌ನಲ್ಲಿ ಕೆಲಸ ಮಾಡುತ್ತಿದ್ದೇನೆ. ನನಗೆ ತಿಂಗಳಿಗೆ ₹ 50 ಸಾವಿರ ವಿದ್ಯಾರ್ಥಿವೇತನ ಬರುತ್ತದೆ. ಈ ಆದಾಯಕ್ಕೆ ಆದಾಯ ತೆರಿಗೆ ವಿನಾಯಿತಿ ಇದೆಯೇ ತಿಳಿಸಿರಿ.

ಉತ್ತರ: ಸೆಕ್ಷನ್‌ 10 (16) ಪ್ರಕಾರ, ಯಾವುದೇ ಸ್ಕಾಲರ್‌ಶಿಪ್‌ ಇದ್ದರೂ ಓರ್ವ ವಿದ್ಯಾರ್ಥಿ ತನ್ನ ಓದುವಿಕೆಗೆ (ಅದು ಸಂಶೋಧನಾ ಕಾಯಕ ಇರಬಹುದು) ಪಡೆಯುವ ಸಹಾಯಧನವಾದಲ್ಲಿ ಅಂತಹ ಸಂಭಾವನೆಗೆ ಆದಾಯ ತೆರಿಗೆ ಇರುವುದಿಲ್ಲ. ಹೀಗೆ ಬರುವ ಹಣ ಓದುವಿಕೆಗೆಂದೇ ಸ್ಪಷ್ಟವಾಗಿ ಕೊಟ್ಟಿರಬೇಕು ಹಾಗೂ ಅದೇ ಉದ್ದೇಶಕ್ಕೆ ಸೀಮಿತವಾಗಿರಬೇಕು. ಸೆಕ್ಷನ್‌ 10(16)ನಲ್ಲಿ ಈ ಕೆಳಗಿನಂತೆ ವಿವರಣೆ ನೀಡಿರುತ್ತಾರೆ ‘Scholarship granted to meet the cost of Education’ (ಶಿಕ್ಷಣದ ವೆಚ್ಚಗಳಿಗೆ ನೀಡಿದ ವಿದ್ಯಾರ್ಥಿವೇತನ). ಈ ಸೆಕ್ಷನ್‌ ಆಧಾರದ ಮೇಲೆ ನೀವು ಪ‍ಡೆಯುವ ವಿದ್ಯಾರ್ಥಿವೇತನ ಆದಾಯ ತೆರಿಗೆಯಿಂದ ಮುಕ್ತವಾಗಿದೆ. ಇದೇ ವೇಳೆ ಸೆಕ್ಷನ್‌ 10 (21) ಆಧಾರದ ಮೆಲೆ ಕೂಡ ಸಂಶೋಧನಾ ಕಾರ್ಯಕ್ಕೆ ಬರುವ ಸ್ಕಾಲರ್‌ಶಿಪ್‌ ಆದಾಯ ತೆರಿಗೆಯಿಂದ ಮುಕ್ತವಾಗಿದೆ. ಸರ್ಕಾರ ನಿಮಗೆ ಕೊಟ್ಟಿರುವ ಸದವಕಾಶವನ್ನು ಚೆನ್ನಾಗಿ ಬಳಸಿಕೊಂಡು ಉತ್ತಮ ರಿಸರ್ಚ್‌ ಸ್ಕಾಲರ್‌ ಆಗಿ ದೇಶಕ್ಕೆ ಒಳ್ಳೆ ಹೆಸರು ಬರುವಂತಾಗಲಿ ಎಂದು ಹಾರೈಸುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.